ADVERTISEMENT

ಅಕ್ಷರ ದಾಮ್ಲೆ ಅವರ ‘ಅಂತರಂಗ’ ಅಂಕಣ: ಚಟ ಬಿಡಿಸುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 23:30 IST
Last Updated 27 ಸೆಪ್ಟೆಂಬರ್ 2025, 23:30 IST
   

ಮಗನಿಗೆ 14 ವರ್ಷ. ಗಂಡ– ಹೆಂಡತಿ ಇಬ್ಬರೂ ಸಾಫ್ಟ್‌ವೇರ್‌ ಕೆಲಸದಲ್ಲಿದ್ದೇವೆ. ಈಗೀಗ ಮಗನ ನಡವಳಿಕೆಯ ಬಗ್ಗೆ ಚಿಂತೆ ಆಗಿದೆ. ಆತ ಬಾತ್‌ರೂಂಗೆ ಹೋದರೆ ಒಂದು ಗಂಟೆಯಾದರೂ ಹೊರಗೆ ಬರುವುದಿಲ್ಲ. ಶಾಲಾ ಚಟುವಟಿಕೆಗೆಂದು ಮೊಬೈಲ್ ಬಳಸುತ್ತಾನೆ. ಆದರೆ, ಎಲ್ಲದರಲ್ಲಿಯೂ ಗೂಗಲ್‌ ಹಿಸ್ಟರಿ, ಸರ್ಚ್‌ ಹಿಸ್ಟರಿಯನ್ನು ಡಿಲೀಟ್ ಮಾಡುತ್ತಾನೆ. ಆತ ಅಶ್ಲೀಲ ವಿಡಿಯೊಗಳನ್ನು ನೋಡುವ ಚಟ ಹತ್ತಿಸಿಕೊಂಡಿದ್ದಾನೆ ಎಂದು ಮನಸ್ಸು ಬಲವಾಗಿ ಹೇಳುತ್ತಿದೆ. ಒಂದೊಮ್ಮೆ ಅಪರೋಕ್ಷವಾಗಿ ಸಿಕ್ಕಿಬಿದ್ದಿದ್ದಾನೆ. ಗಲಾಟೆ ಮಾಡಿ, ಅವನ ಮನಸ್ಸನ್ನು ಗಾಸಿಗೊಳಿಸಲು ಇಷ್ಟವಿಲ್ಲ. ಈ ಬಗ್ಗೆ ಅವನಲ್ಲಿ ಮುಕ್ತವಾಗಿ ಮಾತನಾಡುವುದು ಹೇಗೆ ಎಂಬುದು ತೋಚುತ್ತಿಲ್ಲ. ಅವನನ್ನು ಆ ಚಟದಿಂದ ಹೊರತರುವುದು ಹೇಗೆ?

ಉ: ಹೆತ್ತವರು ಏನು ಮಾಡಬೇಕು ಎಂಬುದನ್ನು ಮೊದಲು ವಿವೇಚಿಸಬೇಕು. ಗಲಾಟೆ ಮಾಡಲೇ ಬೇಕಾಗಿಲ್ಲ. ಆದರೆ, ಈ ಕುರಿತು ಮುಕ್ತವಾಗಿ ಚರ್ಚೆ ಮಾಡುವ ಅಗತ್ಯವಂತೂ ಇದ್ದೇ ಇದೆ. ಅದು ಅಷ್ಟು ಸುಲಭವಲ್ಲದಿದ್ದರೂ ಸತ್ಯವನ್ನು ಎದುರಿಸುವ ಅನಿವಾರ್ಯ ಇದೆ. ನೀವು ಆತನನ್ನು ಕೂರಿಸಿಕೊಂಡು ಮಾತನಾಡುವುದು ಬಹಳ ಮುಖ್ಯ.

ಆತನಿಗೆ ಈ ಚಟ ಎಲ್ಲಿಂದ ಬಂತು ಎನ್ನುವುದನ್ನು ತಿಳಿದುಕೊಳ್ಳುವುದು ಅಗತ್ಯ. ಆತನಿಗೆ ಆ ರೀತಿಯ ಚಟ ಯಾಕೆ ಒಳ್ಳೆಯದಲ್ಲ ಎಂಬುದನ್ನು ಮನಗಾಣಿಸಬೇಕು. ಜೊತೆಗೆ, ಅದನ್ನು ಸರಿಪಡಿಸುವುದಕ್ಕೆ ಮನಃಶಾಸ್ತ್ರಜ್ಞರಿಂದ ಚಿಕಿತ್ಸೆಯನ್ನೂ ಕೊಡಿಸಬೇಕು. ಚಟವನ್ನು ನಿವಾರಿಸುವುದು ಒಂದೆರಡು ದಿನಗಳಲ್ಲಿ ಆಗುವ ಕೆಲಸವಲ್ಲದಿದ್ದರೂ, ತಾಳ್ಮೆಯಿಂದ ನಿಧಾನವಾಗಿ ಆತನನ್ನು ಹೊರತರುವ ಕಡೆ ಗಮನ ಹರಿಸಬೇಕು.

ADVERTISEMENT

ಹೆತ್ತವರಿಗೆ ಒಂದಿಷ್ಟು ಸಲಹೆ:

ಮಕ್ಕಳಿಗೆ ಸಾಧ್ಯವಾದಷ್ಟೂ ಮೊಬೈಲ್ ಕೊಡದಿದ್ದರೆ ಒಳ್ಳೆಯದು. ಅನೇಕ ದೇಶಗಳಲ್ಲಿ ಸುಮಾರು 12 ವರ್ಷಗಳವರೆಗೆ ಮಕ್ಕಳಿಗೆ ಮೊಬೈಲ್ ಕೊಡುವುದನ್ನು ನಿಷೇಧಿಸಲಾಗಿದೆ.

ಒಂದು ವೇಳೆ ಕೊಡುವುದು ಅನಿವಾರ್ಯವೇ ಆದರೆ, ಸಾಧ್ಯವಾದಷ್ಟು ಕೀ-ಪ್ಯಾಡ್ ಇರುವಂತಹ ಸಣ್ಣ ಫೋನ್‌ ಕೊಡಿ.

ಸ್ಮಾರ್ಟ್‌ಫೋನ್ ಕೊಡುವುದು ಅನಿವಾರ್ಯವಾದರೆ, ‘ಪೇರೆಂಟಲ್‌ ಕಂಟ್ರೋಲ್‌’  ಆಯ್ಕೆಯನ್ನು ಹಾಕಿಡಿ. ಆಗ ಮಕ್ಕಳು ಏನೆಲ್ಲಾ ನೋಡುತ್ತಿದ್ದಾರೆ ಎಂಬುದು ನಿಮಗೆ ಆಗಿಂದಾಗ್ಗೆ ತಿಳಿಯುತ್ತಿರುತ್ತದೆ. ಈಗ ನಡೆಯುತ್ತಿರುವ ಸೈಬರ್ ಅಟ್ಯಾಕ್‌ನಂತಹ ವಿಚಾರಗಳ ಕುರಿತು ಅವರಿಗೆ ಅರಿವು ಮೂಡಿಸಿ.

ಮಕ್ಕಳ ಜೊತೆಗೆ ನೀವು ಕೂಡ ಸ್ಕ್ರೀನ್ ಟೈಮ್ ಕಡಿಮೆ ಮಾಡಿ. ಪ್ರಕೃತಿಯ ನಡುವೆ ಸಮಯ ಕಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇಂದಿನ ಎ.ಐ. ಯುಗದಲ್ಲಿ, ಮಕ್ಕಳ ಪಾಲನೆ- ಪೋಷಣೆಯ ವಿಷಯದಲ್ಲಿ ಬಹಳ ಜಾಗರೂಕರಾಗಿರುವ ಅಗತ್ಯವಿದೆ. ಈಗಿನ ಪೋಷಕರು ತಮ್ಮ ಬಾಲ್ಯದ ಅನುಸಾರ ಅಥವಾ ತಮ್ಮ ಹೆತ್ತವರ ವರ್ತನೆಗಳ ಅನುಸಾರ ನಡೆದುಕೊಂಡರೆ ಸರಿಯಾಗದು. ಹಾಗಾಗಿ, ಕಾಲಕ್ಕೆ ತಕ್ಕಂತೆ ನಮ್ಮ ವಿಧಾನಗಳನ್ನೂ ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.