ADVERTISEMENT

ಮಕ್ಕಳಲ್ಲಿ ಅಲರ್ಜಿ, ಅಸ್ತಮಾ: ಹಬ್ಬದ ಸಮಯದಲ್ಲಿ ಆರೈಕೆ ಹೇಗೆ?

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 11:30 IST
Last Updated 30 ಆಗಸ್ಟ್ 2025, 11:30 IST
   

ಅಸ್ತಮಾ ಮತ್ತು ಅಲರ್ಜಿ ಸಮಸ್ಯೆ ಬಹಳ ಹಳೆಯ ಸಮಸ್ಯೆಗಳು. ಸುಮಾರು 50 ವರ್ಷಗಳ ಹಿಂದೆ ಅಲರ್ಜಿ ಸಮಸ್ಯೆಗೆ ಸೂಕ್ತವಾದ ವಿವರಣೆ ಇರಲಿಲ್ಲ. ಆ ಬಳಿಕ ಪೊಲನ್‌ ಹೇ ಫೀವರ್ (ಜ್ವರ), ಆಟೋಪಿ, ಅಸ್ತಮಾ, ಸೀರಮ್ ಐಜಿಇ ಹೀಗೆ ಅನೇಕ ಸಮಸ್ಯೆಗಳ ಕುರಿತು ಸಂಶೋಧಿತ ಮಾಹಿತಿ ಲಭ್ಯವಾಯಿತು. ಈ ಮೂಲಕ ಅಲರ್ಜಿ ಒಂದು ರೋಗನಿರೋಧಕ (ಇಮ್ಯುನೊಲಾಜಿಕಲ್) ಪ್ರಕ್ರಿಯೆ ಎಂಬುದನ್ನು ಅನ್ವೇಷಿಸಲಾಯಿತು. ಹಾಗೆಯೇ ಈ ಅಲರ್ಜಿಯೇ ಅಸ್ತಮಾ ಸಮಸ್ಯೆಗೆ ಕಾರಣವಾಗುತ್ತದೆ. ಆದರೆ ಅಸ್ತಮಾಗೆ ಅಲರ್ಜಿ ಮಾತ್ರ ಕಾರಣವಲ್ಲ, ಅಲರ್ಜಿ ಅಲ್ಲದ ಕಾರಣಗಳು ಕೂಡ ಇವೆ ಎಂಬುದು ದೃಢಪಟ್ಟಿದೆ. ಬೊಜ್ಜಿನಿಂದ ಕೂಡ ಅಸ್ತಮಾ ಬರಲು ಸಾಧ್ಯವಿದ್ದು, ಇದನ್ನು ನಾನ್‌ ಅಲರ್ಜಿಕ್ (ಅಲರ್ಜಿ ಅಲ್ಲದ) ಕಾರಣಕ್ಕೆ ಬರುವ ಅಸ್ತಮಾ ಎನ್ನಲಾಗುತ್ತದೆ. ಈ ಸಮಸ್ಯೆ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.

ಮಕ್ಕಳಲ್ಲಿ ಅಸ್ತಮಾ ಸಮಸ್ಯೆಗೆ ಕಾರಣಗಳು?
ಬಾಲ್ಯದಲ್ಲಿ ಅಸ್ತಮಾ ಕಾಣಿಸಿಕೊಳ್ಳಲು ಕಾರಣವಾಗುವ ಅನುವಂಶಿಕ ಮತ್ತು ಪರಿಸರದಲ್ಲಿನ ಅಂಶಗಳನ್ನು ಮುಖ್ಯವಾಗಿ ಈ ಕೆಳಗಿನಂತೆ ಪಟ್ಟಿ ಮಾಡಬಹುದು.

1. ಅಲರ್ಜಿಗಳು

ಸಾಮಾನ್ಯವಾಗಿ ಡಸ್ಟ್‌ ಮೈಟ್ಸ್‌ (ಚಿಕ್ಕ ಕೀಟಗಳು), ಪೋಲನ್ಸ್‌ (ಹೂವುಗಳ ಪರಾಗ), ಆರ್ದ್ರ ವಾತಾವರಣದಲ್ಲಿನ ಮೋಲ್ಡ್‌ (ಪಾಚಿ), ಸಾಕುಪ್ರಾಣಿಗಳು, ವಿಶೇಷವಾಗಿ ಬೆಕ್ಕುಗಳ ಕೂದಲು, ಬೀಜಗಳು, ಹಣ್ಣುಗಳು, ಸೀಫುಡ್‌ನಂತಹ ಆಹಾರಗಳು. ಬಹುಮುಖ್ಯವಾಗಿ ಅತಿಯಾದ 'ನೈರ್ಮಲ್ಯ ಕಲ್ಪನೆ' ಎಂದರೆ ಬಾಲ್ಯದಲ್ಲಿ ಸೂಕ್ಷ್ಮಜೀವಿಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವುದು ಸಾಮಾನ್ಯ ರೋಗನಿರೋಧಕತೆಯ ಬೆಳವಣಿಗೆಯನ್ನೇ ಅಡ್ಡಿಪಡಿಸುತ್ತದೆ. ಇದರಿಂದ ಅಸ್ತಮಾ ಮತ್ತು ಅಲರ್ಜಿಕ್ ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅತಿಯಾದ ನೈರ್ಮಲ್ಯೀಕರಣ, ಸಣ್ಣ ಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳು ಸೂಕ್ಷ್ಮಜೀವಿಗಳಿಗೆ ತೆರೆದುಕೊಳ್ಳುವ ಸಾಧ್ಯತೆ ತೀರಾ ವಿರಳ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಬೆಳೆಯುವ ಮಕ್ಕಳಲ್ಲಿ ಅಲರ್ಜಿ ಸಾಧ್ಯತೆ ಕಡಿಮೆ ಇರುತ್ತದೆ.

2. ಅನುವಂಶಿಕ ಆಟೋಪಿ ಸಮಸ್ಯೆ

ಪೋಷಕರು ಅಥವಾ ಒಡಹುಟ್ಟಿದವರಲ್ಲಿ ಅಸ್ತಮಾ ಅಥವಾ ಅಲರ್ಜಿಯಿಂದ ಸಮಸ್ಯೆ ಇದ್ದಲ್ಲಿ ಆನುವಂಶಿಕವಾಗಿ ಮುಂದಿನ ಪೀಳಿಗೆಗೂ ಕಾಡುತ್ತದೆ.

ADVERTISEMENT

3. ಉಸಿರಾಟ ವ್ಯವಸ್ಥೆಯ ಸೋಂಕುಗಳು

ಸಾಮಾನ್ಯ ಶೀತ ವೈರಸ್‌ ಗಳಾದ ರೈನೋವೈರಸ್ ಮತ್ತು ರೆಸ್ಪಿರೇಟರಿ ಸಿನ್ಸಿಟೈಯಲ್ ವೈರಸ್‌ ಉಸಿರಾಟದ ನಾಳವನ್ನು ಹಾನಿಗೊಳಿಸುವುದಲ್ಲದೇ ಉರಿಯೂತ, ಮ್ಯೂಕಸ್‌ (ಲೋಳೆ) ರಚನೆಗೂ ಕಾರಣವಾಗುತ್ತದೆ. ಸೂಕ್ತವಾದ ಚಿಕಿತ್ಸೆ ನೀಡದೇ ಇದ್ದಲ್ಲಿ ಅಸ್ತಮಾ ಸಮಸ್ಯೆಗೆ ಕಾರಣವಾಗುತ್ತದೆ.

4. ಮನೆಯ ಒಳಗಿನ ಮತ್ತು ಹೊರಗಿನ ಮಾಲಿನ್ಯ

ಮಕ್ಕಳ ಶ್ವಾಸಕೋಶಗಳು ಬೆಳವಣಿಗೆಯ ಹಂತದಲ್ಲಿ ಹೆಚ್ಚು ಸೂಕ್ಷ್ಮವಾಗಿರುತ್ತವೆ. ಹೊಗೆ, ಮಾಲಿನ್ಯ, ರಾಸಾಯನಿಕ ಹೊಗೆ, ಗಾಢವಾದ ವಾಸನೆ, ಧೂಳು ಶ್ವಾಸನಾಳವನ್ನು ಹಾನಿಗೊಳಿಸುತ್ತವೆ ಹಾಗೂ ಬ್ರಾಂಕೊಸ್ಪಾಸಮ್‌ಗೆ ಕಾರಣವಾಗುತ್ತದೆ. ತಾಯಿ ಗರ್ಭಾವಸ್ಥೆಯಲ್ಲಿ ಧೂಮಪಾನ ಮಾಡಿದಾಗಲೂ ಮಕ್ಕಳ ಮೇಲೆ ಇದೇ ರೀತಿ ಪರಿಣಾಮ ಕಂಡುಬರುತ್ತದೆ.

5. ಬೊಜ್ಜು

ಸ್ಥೂಲಕಾಯವು ಶ್ವಾಸಕೋಶ ಸೇರಿದಂತೆ ದೇಹದಲ್ಲಿ ಉರಿಯೂತದ ಸ್ಥಿತಿಯನ್ನು ಉಂಟು ಮಾಡುತ್ತದೆ. ದೇಹದಲ್ಲಿ ಹೆಚ್ಚಾದ ಕೊಬ್ಬು ಶ್ವಾಸಕೋಶದ ಕ್ರಿಯೆಯ ಮೇಲೆ ಒತ್ತಡ ಹೇರುತ್ತದೆ. ಇದು ಶ್ವಾಸಕೋಶದ ಸಾಮರ್ಥ್ಯ ಕಡಿಮೆಯಾಗಲು ಕಾರಣವಾಗುತ್ತದೆ. ಇದಲ್ಲದೆ, ಅಸ್ತಮಾ ಇರುವ ಅಧಿಕ ತೂಕದ ಮಕ್ಕಳು ವ್ಯಾಯಾಮ ಹಾಗೂ ಆಟ ಆಡುವಾಗ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಅಧಿಕ ತೂಕ ಅಸ್ತಮಾ ಮತ್ತು ಸಂಬಂಧಿಸಿದ ಸಮಸ್ಯೆಗೆ ಗುರಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

6. ಪರಿಸರ ಅಂಶಗಳು

ಶೀತ, ಒಣ ಗಾಳಿ ಮತ್ತು ತಾಪಮಾನದಲ್ಲಿನ ಹಠಾತ್ ಬದಲಾವಣೆಗಳು ಬ್ರಾಂಕೋಸ್ಪಾಸ್ಮ್ (ಶ್ವಾಸನಾಳ ಸಂಕುಚಿತಗೊಳ್ಳುವುದು) ಅನ್ನು ಪ್ರಚೋದಿಸಬಹುದು. ಅದೇ ರೀತಿ, ತೇವ, ಗೋಡೆಗಳ ಮೇಲಿನ ಪಾಚಿ (ಮೌಲ್ಡ್‌) ವಾತಾವರಣವು ಅಸ್ತಮಾದ ಪ್ರಚೋದಕವಾಗಿ ಕಾರ್ಯನಿರ್ವಹಿಸುತ್ತದೆ.

ಅಸ್ತಮಾ ಇರುವ ಮಕ್ಕಳಿಗೆ ದೈನಂದಿನ ಆರೈಕೆ ಹೇಗೆ?
  1. ಉಸಿರಾಟದ ಸಮಸ್ಯೆ ಉಂಟಾದಾಗ ನಿಮ್ಮ ಮಗುವಿಗೆ ಯಾವ ನಿರ್ದಿಷ್ಟ ಅಲರ್ಜಿ ಅಥವಾ ಯಾವ ವಸ್ತುವಿನಿಂದ ಅಲರ್ಜಿ ಉಂಟಾಗುತ್ತಿದೆ ಎಂಬುದನ್ನು ಗಮನಿಸಿ. ಮಾರಣಾಂತಿಕ ಅನಾಫಿಲ್ಯಾಕ್ಟಿಕ್ ಸಮಸ್ಯೆ ಉಂಟುಮಾಡುವ ನಿರ್ದಿಷ್ಟ ಪ್ರಚೋದಕಗಳು ಇದ್ದರೆ (ಉದಾ: ಕೆಲವು ಆಹಾರ, ಕೀಟಗಳು, ಮೆಡಿಸಿನ್ ಇತ್ಯಾದಿ) ಯಾವಾಗಲೂ ಮಗುವಿನ ಬ್ಯಾಗ್ ಅಥವಾ ಐಡಿ ಕಾರ್ಡ್‌ನಲ್ಲಿ ಮಾಹಿತಿ ನಮೂದಿಸಿ ಲ್ಯಾಮಿನೇಟ್‌ ಮಾಡಿ ಹಾಗೂ ಶಿಕ್ಷಕರಿಗೆ ಮಾಹಿತಿ ನೀಡಿ.

  2. ನಿಯಮಿತವಾಗಿ ಮನೆಯನ್ನು ಸ್ವಚ್ಛಗೊಳಿಸಿ, ಕಾರ್ಪೆಟ್, ವೆಲ್ವೆಟ್‌ ವಸ್ತುಗಳನ್ನು ದೂರವಿಡಿ. ಮಲಗುವ ಕೋಣೆ, ಸೋಫಾಗಳನ್ನು ಸಾಕು ಪ್ರಾಣಿಗಳು ಬಳಸದಂತೆ ನೋಡಿಕೊಳ್ಳಿ. ಆಗಾಗ ಗಾಳಿ ಶುದ್ದೀಕರಣ (ಏರ್‍ ಪ್ಯೂರಿಫೈ) ಮಾಡಿ. ಮನೆಯೊಳಗೆ ಉತ್ತಮ ಗಾಳಿ ಬೆಳಕು ಇರಲಿ.

  3. ಔಷಧಿಗಳ ಅನುಸರಣೆ: ಪಲ್ಮೊನೊಲಾಜಿಸ್ಟ್‌/ ಮಕ್ಕಳ ತಜ್ಞರನ್ನು ಭೇಟಿ ಮಾಡಿ ಮಗುವಿನ ಆರೋಗ್ಯ ಲಕ್ಷಣ ಮತ್ತು ಸಮಸ್ಯೆಯ ತೀವ್ರತೆಯನ್ನು ಪರೀಕ್ಷಿಸಿ. ರೆಸ್ಕ್ಯೂ ಇನ್‌ಹೇಲರ್‍ ಜೊತೆಗೆ ಇನ್‌ಹೇಲ್ಡ್‌ ಕೊರ್ಟಿಕೊಸ್ಟೆರೊಯ್ಡ್‌ ಮತ್ತು ಬ್ರೊಂಕೊಡೈಲೇಟರ್ ನಂತಹ ನಿಯಂತ್ರಕ ಔಷಧಿಗಳ ಸಲಹೆ ಪಡೆಯಿರಿ. ಮಾರಣಾಂತಿಕ ಅನಾಫಿಲ್ಯಾಕ್ಸಿಸ್‌ ವರದಿಯಾದಲ್ಲಿ ಎಪಿನ್‌ಫ್ರೈನ್ ಇಂಜೆಕ್ಷನ್ ಪೆನ್‌ಗಳು ತುರ್ತು ಸಮಯದಲ್ಲಿ ಲಭ್ಯವಿರುವಂತೆ ಹಾಗೂ ಮಗುವಿನ ಜೊತೆಗಿರುವ ಆರೈಕೆದಾರರಿಗೆ ಈ ಬಗ್ಗೆ ಅರಿವು ಇರುವಂತೆ ನೋಡಿಕೊಳ್ಳಿ.

  4. ನೈರ್ಮಲ್ಯ ಅಭ್ಯಾಸಗಳು: ಮಾಸ್ಕ್‌ (ಮುಖಗವಸು) ಬಳಕೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಆಗಾಗ್ಗೆ ಕೈ ತೊಳೆಯುವುದು ಮತ್ತು ಜ್ವರದ ಚುಚ್ಚು ಮದ್ದಿನಂತಹ ಲಸಿಕೆಗಳನ್ನು ನಿಯಮಿತವಾಗಿ ಪಡೆದುಕೊಳ್ಳುವುದು. ತೀವ್ರವಾದ ಉಸಿರಾಟದ ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

  5. ದೈಹಿಕ ಚಟುವಟಿಕೆ: ವೈದ್ಯಕೀಯ ಮಾರ್ಗದರ್ಶನದಲ್ಲಿ ಕ್ರೀಡೆ ಮತ್ತು ಇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿರಲು ಸಾಧ್ಯವಿದೆ. ದೈಹಿಕ ಚಟುವಟಿಕೆಯಿಂದ ಸಂಪೂರ್ಣ ದೂರವಿಡುವುದು ತಪ್ಪು.

ಹಬ್ಬದ ಸಂದರ್ಭದಲ್ಲಿ ಮಕ್ಕಳ ಆರೈಕೆ ಹೇಗೆ?
ಭಾರತದಲ್ಲಿ ನಾವು ಆಚರಿಸುವ ಹಲವಾರು ಹಬ್ಬಗಳು ಅದ್ದೂರಿಯಾದರೂ ಅದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಅಸ್ತಮಾ ಹೊಂದಿರುವ ಮಕ್ಕಳ ಪೋಷಕರಿಗೆ ಕಷ್ಟಕರ ವಾತಾವರಣ ಸೃಷ್ಟಿಸುತ್ತದೆ.

ಹೊರಾಂಗಣ ಮಾಲಿನ್ಯ

ಪಟಾಕಿ ಸಿಡಿಸುವುದರಿಂದ ವಿಷಕಾರಿ ಸೂಕ್ಷ್ಮ ಕಣಗಳು ಬಿಡುಗಡೆಯಾಗುತ್ತವೆ. ಇದರಿಂದ ಗಾಳಿಯ ಗುಣಮಟ್ಟ ಹದಗೆಡುತ್ತದೆ. ಅಸ್ತಮಾ ರೋಗಿಗಳಲ್ಲಿ ಉಸಿರಾಟದ ತೊಂದರೆಗಳು ಹೆಚ್ಚುತ್ತದೆ. ವಿಶೇಷವಾಗಿ ದೀಪಾವಳಿ ಸಂದರ್ಭ ಪಟಾಕಿಗಳು, ಸುಡುಮದ್ದುಗಳು ಸೇರಿದಂತೆ ಹಬ್ಬಗಳ ಸಮಯ ವಿಶಿಷ್ಟ ಅಪಾಯಗಳು ಉಂಟುಮಾಡಬಹುದು.

ಜನದಟ್ಟಣೆ

ಮೆರವಣಿಗೆಗಳ ಸಂದರ್ಭ, ಹೆಚ್ಚು ಜನರು ಸಮಾವೇಶಗೊಳ್ಳುವ ಕೆಲವೊಂದು ಸ್ಥಳಗಳಿಗೆ, ಹಾಲ್, ಮೈದಾನ ಮುಂತಾದೆಡೆ ಭೇಟಿ ನೀಡುವುದರಿಂದ ರೋಗನಿರೋಧಕ ಶಕ್ತಿ ಕಡಿಮೆ ಇರುವ ಜನರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಜೊತೆಗೆ ಪೂಜೆ, ಹವನಗಳ ಗಾಢವಾದ ಹೊಗೆ, ವಾಸನೆ , ಸಸ್ಯಗಳ ಪೋಲನ್‌ ಹರಡುವಿಕೆ, ಅಲಂಕಾರಿಕ ವಸ್ತುಗಳ ಮೇಲಿನ ಧೂಳು, ಪಾಚಿಯಂತಹ ವಸ್ತು ಕೂಡ ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ.

ಹಬ್ಬಗಳ ಸಮಯದಲ್ಲಿ ಮುನ್ನೆಚ್ಚರಿಕೆಗಳು
  • ಪಟಾಕಿ ಸಿಡಿಸುವಾಗ ಅಥವಾ ಗಾಳಿಯ ಗುಣಮಟ್ಟ ಕಳಪೆಯಾದಾಗ ಮನೆಯ ಹೊರಗಡೆ ಹೋಗುವುದನ್ನು ತಪ್ಪಿಸಿ.

  • ಹೊರಗೆ ಹೋಗುವುದು ಅನಿವಾರ್ಯವಾದಾಗ ಮಾಸ್ಕ್‌ಗಳನ್ನು (ವಿಶೇಷವಾಗಿ N95) ಬಳಸಿ.

  • ಹೊಗೆ ಪ್ರವೇಶಿಸುವುದನ್ನು ತಪ್ಪಿಸಲು ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿಡಿ.

  • ಎಲ್ಲೇ ಹೋದರೂ ಅಸ್ತಮಾ ಔಷಧಿಗಳು ಮತ್ತು ಇನ್ಹೇಲರ್‌ಗಳು ಕೈಗೆ ಸಿಗುವಂತೆ ಇರಿಸಿಕೊಳ್ಳಿ.

  • ಹಬ್ಬದ ಅವಧಿಯಲ್ಲಿ ಆರೋಗ್ಯ ಹದಗೆಟ್ಟರೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ.

  • ಪರಿಸರ ಸ್ನೇಹಿ ಉತ್ಪನ್ನಗಳನ್ನೇ ಬಳಸಿ

ಮುನ್ನೆಚ್ಚರಿಕೆ ಕ್ರಮಗಳು ಮತ್ತು ಪ್ರಬುದ್ಧ ಯೋಚನೆಗಳ ಮೂಲಕ ಎಲ್ಲಾ ಮಕ್ಕಳು ಹಬ್ಬದ ಸಮಯವನ್ನು ಖುಷಿಯಿಂದ ಕಳೆಯುವಂತೆ ಮಾಡಲು ಸಾಧ್ಯವಿದೆ.

(ಲೇಖಕರು: ಡಾ.ಉದಯ ಎಸ್, ಕನ್ಸಲ್ಟೆಂಟ್ ಪಲ್ಮನೊಲಾಜಿಸ್ಟ್‌, ಕೆಎಂಸಿ ಆಸ್ಪತ್ರೆ ಮಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.