ನವದೆಹಲಿ: ಔಷಧ ತಯಾರಕ ಕಂಪನಿ ಜೈಡಸ್ ಕ್ಯಾಡಿಲಾ ಕೋವಿಡ್-19 ಚಿಕಿತ್ಸೆಗಾಗಿ ವೈರಾಣು ನಿರೋಧಕ 'ರೆಮ್‌ಡೆಸಿವಿರ್' ಔಷಧಿಯ ಜೆನರಿಕ್ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. 100 ಮಿಲ್ಲಿಗ್ರಾಂ ಇಂಜೆಕ್ಷನ್‌ಗೆ ₹2,800ಆಗಿದ್ದು, ರೆಮ್‌ಡಾಕ್ ದೇಶದಲ್ಲಿರುವ ಅತೀ ಅಗ್ಗದ ರೆಮ್‌ಡೆಸಿವಿರ್ ಬ್ರಾಂಡ್ ಆಗಿದೆ.
ಕೋವಿಡ್ -19 ಚಿಕಿತ್ಸೆಯಲ್ಲಿ ರೋಗಿಗಳಿಗೆ ನೀಡಬಹುದಾದ ಕೈಗೆಟುಕುವ ದರದಲ್ಲಿ ದೊರೆಯುವ ಅತ್ಯಂತ ಉತ್ತಮ ಔಷಧಿಯಾಗಿದೆ ರೆಮ್‌ಡಾಕ್ ಎಂದು ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಶಾರ್ವಿಲ್ ಪಟೇಲ್ ಹೇಳಿದ್ದಾರೆ.
ಭಾರತದಲ್ಲಿರುವ ಎಲ್ಲ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಈ ಔಷಧಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ.
ಈ ಸಾಂಕ್ರಾಮಿಕ ರೋಗ ಹರಡುತ್ತಿರುವ ಹೊತ್ತಲ್ಲಿಲಸಿಕೆಗಳನ್ನು ಅಭಿವೃದ್ಧಿಪಡಿಸುವುದು, ಉತ್ಪಾದನೆ ಹೆಚ್ಚಿಸುವುದು ಮತ್ತು ಚಿಕಿತ್ಸೆಗೆ ಬೇಕಾಗಿರುವ ಔಷಧಿಗಳ ವಿತರಣೆ, ರೋಗ ಪತ್ತೆ ಪರೀಕ್ಷೆ ಅಥವಾ ಹೊಸ ಚಿಕಿತ್ಸಾ ವಿಧಾನಗಳನ್ನು ಅನ್ವೇಷಿಸುವ ಮೂಲಕ ಆರೋಗ್ಯ ಬಿಕ್ಕಟ್ಟಿನಲ್ಲಿ ಜನರನ್ನು ಬೆಂಬಲಿಸುವ ಬಗ್ಗೆ ಕಂಪನಿ ಪ್ರಯತ್ನ ನಡೆಸುತ್ತಿದೆ ಎಂದು ಪಟೇಲ್ ಹೇಳಿದ್ದಾರೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ಜೈಡಸ್ ಕಂಪನಿಯು ರೆಮ್‌ಡೆಸಿವಿರ್ ಔಷಧಿಯನ್ನು ಉತ್ಪಾದನೆ ಮತ್ತು ಮಾರಾಟ ಮಾಡುವುದಕ್ಕಾಗಿ ಗಿಲಿಯಾಡ್ ಸೈನ್ಸಸ್ ಇಂಕ್ ಜತೆ ಒಪ್ಪಂದ ಮಾಡಿಕೊಂಡಿತ್ತು. ಕೋವಿಡ್ -19ರತೀವ್ರ ರೋಗಲಕ್ಷಣಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ನಿಂದ (ಯುಎಸ್ಎಫ್‌ಡಿಎ) ತುರ್ತು ಬಳಕೆಯ ಅಧಿಕಾರವನ್ನು ಇದು ಹೊಂದಿದೆ.
ಇದನ್ನೂ ಓದಿ:‘ರೆಮ್‌ಡೆಸಿವಿರ್’ ಪೂರೈಕೆ ಮಾಡಲು ಒಪ್ಪಿಗೆ
ಗುಜರಾತಿನಲ್ಲಿರುವ ಎಪಿಐ ಉತ್ಪಾದನಾ ಸಂಸ್ಥೆಯಿಂದ ಈ ಔಷಧಿಯ ಆಕ್ಟಿವ್ ಫಾರ್ಮಸ್ಯುಟಿಕಲ್ ಇಂಗ್ರಿಡಿಯಂಟ್ (ಎಪಿಐ) ಉತ್ಪಾದಿಸಿತ್ತು. ಜೈಡಸ್ ಕ್ಯಾಡಿಲಾ ಅಭಿವೃದ್ಧಿ ಪಡಿಸಿದ ZyCov-D ಲಸಿಕೆ ಈಗ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿದೆ.
ಇದನ್ನೂ ಓದಿ:‘ರೆಮ್‌ಡೆಸಿವಿರ್’ ಬಳಕೆ: ಪರಿಷ್ಕೃತ ಮಾರ್ಗಸೂಚಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.