ADVERTISEMENT

ಫಿಟ್‌ನೆಸ್‌ ಚಾಂಪಿಯನ್‌ ಮುಕುಂದ್‌

ನಾಗರತ್ನ ಜಿ.
Published 23 ಜೂನ್ 2019, 20:00 IST
Last Updated 23 ಜೂನ್ 2019, 20:00 IST
ಮುಕುಂದ್‌
ಮುಕುಂದ್‌   

ಆಸ್ಟ್ರೇಲಿಯಾದಲ್ಲಿ ನಡೆದ 2019ರ ವಿಶ್ವ ಫಿಟ್‌ನೆಸ್‌ ಫೆಡರೇಶನ್‌ ಮೆಲ್ಬರ್ನ್‌ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ಮೂಲದ ಮನೋಜ್‌ ಮುಕುಂದ ಈ ಬಾರಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಅವರು ಈ ಗೌರವಕ್ಕೆ ಪಾತ್ರರಾದ ಕರ್ನಾಟಕದ ಏಕೈಕ ಪ್ರತಿಭೆ. ಇವರು ಬೆಂಗಳೂರು ಮೂಲದ ಚಿಕ್ಕ ಆಡುಗೋಡಿ ನಿವಾಸಿಯಾಗಿದ್ದು, ಪೌಷ್ಟಿಕತಜ್ಞನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಸಿವಿನ ಕೊರತೆಯಿಂದ (ಅನೆರೆಕ್ಸಿಯಾ ನರ್ವೊಸಾ) ಬಳಲುತ್ತಿದ್ದ ಅವರು ಈಗ ಸದೃಢ ಕಾಯವನ್ನು ಹುರಿಗಟ್ಟಿಸುವ ಮೂಲಕ ಫಿಟ್‌ನೆಸ್‌ ಮಂತ್ರವನ್ನು ಜಪಿಸುತ್ತಿದ್ದಾರೆ.

ಬುದ್ಧಿ ಚುರುಕಾಗಲು ಸಮತೋಲಿತ ಆಹಾರವೇ ಕಾರಣ ಎನ್ನುವ 31ರ ಹರೆಯದ ಮನೋಜ್‌ ತಮ್ಮ ಅನುಭವಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದು ಹೀಗೆ...

* ಫಿಟ್‌ನೆಸ್‌ಗಾಗಿ ಹಂಬಲಿಸಿದ್ದು ಯಾವಾಗಿಂದ?

ADVERTISEMENT

13 ವರ್ಷವಿದ್ದಾಗ ದೇಹವನ್ನು ಹುರಿಗಟ್ಟಿಸಲು ಆರಂಭಿಸಿದೆ. ಹಸಿವಿನ ಕೊರತೆ(ಅನೆರೆಕ್ಸಿಯಾ), ಕ್ಷಯ ರೋಗದಿಂದ ಬಳಲುತ್ತಿದ್ದೆ. 15 ವರ್ಷ ಆಗುವವರೆಗೂ ಯಾವುದೇ ರೀತಿಯ ಮಾಂಸ, ಮೊಟ್ಟೆಯನ್ನು ತಿನ್ನುವಂತಿರಲಿಲ್ಲ. ಪರಿಸ್ಥಿತಿ ಹೀಗಿದ್ದರೂ ನನಗೆ ದೇಹದಾರ್ಢ್ಯದ ಸ್ಪರ್ಧೆಯ ಬಗ್ಗೆ ಆಸಕ್ತಿ ಮೂಡಿತು. ಹಾಗಾಗಿ ಸ್ಥಳೀಯ ಜಿಮ್‌ಗಳಲ್ಲಿ ತರಬೇತಿ ಪಡೆದುಕೊಂಡೆ. ಈ ಮಧ್ಯೆ ಕ್ಷಯ ರೋಗಕ್ಕೂ ಮದ್ದು ಪಡೆದೆ. ನನಗೆ ಸಿಕ್ಕ ತರಬೇತುದಾರರೂ ಹುರಿದುಂಬಿಸಿದರು. ಏನಾದರೂ ಸಾಧಿಸಬೇಕು ಎಂಬ ಛಲದಿಂದ ಈ ವೃತ್ತಿ ಆಯ್ಕೆ ಮಾಡಿಕೊಂಡಿದ್ದೇನೆ. ನನ್ನ ಮೊದಲ ಸ್ಪರ್ಧೆಗೆ (2017ರಲ್ಲಿ) ಶ್ರೀಲಂಕಾದ ಗಯಾನ್‌ ಪೆರೆರಾ ಅವರು ತರಬೇತುದಾರರಾಗಿದ್ದರು.

* ಈವರೆಗೆ ಭಾಗವಹಿಸಿದ ಸ್ಪರ್ಧೆಗಳು?

ನಾಲ್ಕು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ತಯಾರಿ ತೀವ್ರವಾಗಿ ಆರಂಭಗೊಂಡಿದ್ದು ಈ ವರ್ಷದ ಮಾರ್ಚ್‌ನಲ್ಲಿ. ಆಸ್ಟ್ರೇಲಿಯಾದಲ್ಲಿ ಮೂರು ಸ್ಪರ್ಧೆಗಳು ನಡೆಯುತ್ತಿದ್ದವು. ಆ ತಿಂಗಳ 18ರಂದುನ್ಯಾಚುರಲ್‌ ಫೆಡರೇಶನ್‌ (ICN) ಡ್ರಗ್‌ ಟೆಸ್ಟ್‌ ಸ್ಪರ್ಧೆಯಲ್ಲಿ ವಿವಿಧ ವಿಭಾಗದ ಪುರುಷರ ಮೈಕಟ್ಟು ಸ್ಪರ್ಧೆಯಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆದೆ. ಮೇ 12ರಂದು ಮತ್ತೊಂದು ಸ್ಪರ್ಧೆ ನಡೆಯಿತು. ವರ್ಲ್ಡ್ ಫಿಟ್‌ನೆಸ್‌ ಫೆಡರೇಷನ್‌ (NABBA) ನಡೆಸಿದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದೆ. ನಂತರ ಮೆಲ್ಬರ್ನ್‌ನಲ್ಲಿ ನಡೆದ ವರ್ಲ್ಡ್‌ ಫಿಟ್‌ನೆಸ್‌ ಫೆಡರೇಷನ್‌ (NABBA) ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದೇನೆ.

* ಫಿಟ್‌ನೆಸ್‌ ತಯಾರಿ ಹೇಗಿತ್ತು?

ಆಸ್ಟ್ರೇಲಿಯಾದಲ್ಲಿ ಫಿಟ್‌ನೆಸ್‌ ತರಗತಿಗಳಿಗೆ ಸೇರಿಕೊಂಡೆ. ಫಿಟ್‌ನೆಸ್‌ಗೆ ಸಂಬಂಧಿಸಿದ ಅನೇಕ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತೇನೆ. ವ್ಯಾಯಾಮ ಮತ್ತು ಪೌಷ್ಟಿಕ ಆಹಾರದ ಬಗ್ಗೆ ಹೆಚ್ಚು ಮಾಹಿತಿ ಪಡೆದು ಅದರಂತೆ ಆಹಾರ ಪದ್ಧತಿಯನ್ನು ರೂಢಿಸಿಕೊಂಡಿದ್ದೇನೆ. ಆಗಾಗ ವೃತ್ತಿಪರ ಡಯಟ್‌ ತಜ್ಞರನ್ನು ಭೇಟಿಯಾಗಿ ತರಕಾರಿಗಳು ಮತ್ತು ಸಮತೋಲಿತ ಆಹಾರ ಪದ್ಧತಿ ಬಗ್ಗೆ ಮಾಹಿತಿ ಪಡೆದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ.

* ದೇಹದಾರ್ಢ್ಯ ಕಾಪಾಡಿಕೊಳ್ಳುವ ಮಾರ್ಗ ಹೇಗೆ?

ಯುವಕರು ದೇಹದಾರ್ಢ್ಯ ಪಟುಗಳನ್ನು ನೋಡಿ ಆಕರ್ಷಿತರಾಗುತ್ತಿದ್ದಾರೆ. ಸಿಕ್ಸ್ ಪ್ಯಾಕ್‌ ಬಗ್ಗೆ ತುಂಬಾ ಕ್ರೇಜ್‌ ಇದೆ. ಜಿಮ್‌ಗಳಿಗೆ ಹೋಗಿ ವರ್ಕ್ಔಟ್‌ ಮಾಡುವುದಷ್ಟೇ ಅಲ್ಲ, ನಾವು ತಿನ್ನುವ ಆಹಾರದ ಮೇಲೂ ಸಮತೋಲನ ಕಾಪಾಡಿಕೊಳ್ಳಬೇಕು. ಕೊಬ್ಬು ಹೆಚ್ಚಿಸುವ ಕರಿದ ಪದಾರ್ಥಗಳನ್ನು ಸೇವಿಸಬಾರದು. ಫ್ರಿಜ್‌ನಲ್ಲಿಟ್ಟ ಆಹಾರ ವರ್ಜಿಸಬೇಕು. ಮಧುಮೇಹ ನಿಯಂತ್ರಿಸುವ ಬಟರ್‌ಫ್ರೂಟ್‌ ಸೇವನೆ ಒಳ್ಳೆಯದು. ಸಮತೋಲಿತ ಆಹಾರದ ಮೂಲಕ ಫಿಟ್‌ನೆಸ್‌ ಕಾಯ್ದುಕೊಳ್ಳಬೇಕೇ ಹೊರತು, ಯಾವುದೇ ಔಷಧಿ ಬಳಸಿ ಅಲ್ಲ. ದಿನಕ್ಕೆನಾಲ್ಕು ಮೊಟ್ಟೆಗಳನ್ನು ತಿಂದರೆ 27 ಗ್ರಾಂ ಪೋಷಕಾಂಶ ದೊರೆಯುತ್ತದೆ. ಅದಕ್ಕಿಂತ ಹೆಚ್ಚು ತಿಂದರೆ ಉಪಯೋಗವಿಲ್ಲ.

* ಆಸ್ಟ್ರೇಲಿಯಾದಲ್ಲಿ ನಡೆದ ಫಿಟ್‌ನೆಸ್‌ ಸ್ಪರ್ಧೆ ಹೇಗಿತ್ತು?

ವಿವಿಧ ದೇಶಗಳ ಸ್ಪರ್ಧಿಗಳ ಮಧ್ಯೆ ಸ್ಪರ್ಧಿಸುವಾಗ ತುಸು ಆತಂಕವಿತ್ತು. ಭಾಗವಹಿಸಿದ ಮೂರು ಸ್ಪರ್ಧೆಗಳಲ್ಲೂ ಮೊದಲ ಸ್ಥಾನ ಪಡೆದೆ. ರಾಜ್ಯವನ್ನು ಪ್ರತಿನಿಧಿಸಿದ್ದಕ್ಕೆ ಹೆಮ್ಮೆ ಇದೆ.

* ಮುಂದೇನು?

ಮಿಸ್ಟರ್‌ ಯೂನಿವರ್ಸ್‌ನಲ್ಲಿ ಭಾಗವಹಿಸಲು ನಾನು ಉತ್ಸುಕನಾಗಿದ್ದೇನೆ. ಮುಂದಿನ ದಿನಗಳಲ್ಲಿ ಸಮತೋಲಿತ ಆಹಾರದ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುತ್ತೇನೆ. ಸಿನಿಮಾ ತಾರೆಯರು, ವೈದ್ಯರಿಗೆ ತರಬೇತಿ ನೀಡಿದ ಅನುಭವ ಇದೆ. ಈ ವಿಷಯದಲ್ಲಿ ವಿಶ್ವದಾದ್ಯಂತ 100ಕ್ಕೂ ಹೆಚ್ಚು ಗ್ರಾಹಕರಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.