ADVERTISEMENT

ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದರಿಂದ ಸಿಗುವ ಲಾಭಗಳೇನು? ಇಲ್ಲಿದೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 7:11 IST
Last Updated 22 ನವೆಂಬರ್ 2025, 7:11 IST
<div class="paragraphs"><p>ಚಿತ್ರ: ಗೆಟ್ಟಿ</p></div>
   

ಚಿತ್ರ: ಗೆಟ್ಟಿ

ಹಾಲು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದೆ. ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದರಿಂದ ನಮ್ಮ ದೇಹಕ್ಕೆ ಹಲವು ಆರೋಗ್ಯ ಲಾಭಗಳು ದೊರೆಯುತ್ತವೆ. ಹಾಲಿನಲ್ಲಿ ದೇಹಕ್ಕೆ ಅಗತ್ಯ  ಪೋಷಕಾಂಶಗಳಿದ್ದು, ದೇಹವನ್ನು ಸದೃಢವಾಗಿಡಲು ಸಹಕಾರಿಯಾಗಿದೆ. ಹಾಗಾದರೆ ಪ್ರತಿ ದಿನ ಒಂದು ಲೋಟ ಹಾಲು ಕುಡಿಯುವುದರಿಂದ ದೊರೆಯುವ ಲಾಭಗಳೇನು ಎಂಬುದನ್ನು ತಿಳಿಯೋಣ.

  • ಎಲುಬು ಮತ್ತು ಹಲ್ಲುಗಳ ಬಲವರ್ಧನೆ: ಹಾಲು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯ ಅತ್ಯುತ್ತಮ ಮೂಲವಾಗಿದೆ. ಈ ಪೋಷಕಾಂಶಗಳು ನಮ್ಮ ಎಲುಬುಗಳನ್ನು ಗಟ್ಟಿಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಮಕ್ಕಳಲ್ಲಿ ಎಲುಬುಗಳ ಬೆಳವಣಿಗೆಗೆ ಮತ್ತು ವಯಸ್ಸಾದವರಲ್ಲಿ ಆಸ್ಟಿಯೋಪೊರೋಸಿಸ್ ಎಂಬ ಎಲುಬಿನ ದುರ್ಬಲತೆ ತಡೆಗಟ್ಟಲು ಹಾಲು ಕುಡಿಯುವುದು ಅವಶ್ಯಕವಾಗಿದೆ. ಹಾಲಿನಲ್ಲಿರುವ ಫಾಸ್ಫರಸ್‌ ಹಲ್ಲುಗಳ ಆರೋಗ್ಯ ಹಾಗೂ ಹಲ್ಲಿನ ವಸಡನ್ನು ಬಲಪಡಿಸಲು ಸಹಾಯಕವಾಗಿದೆ.

    ADVERTISEMENT
  • ಸ್ನಾಯುಗಳ ಬೆಳವಣಿಗೆ ಮತ್ತು ದುರಸ್ತಿ: ಹಾಲಿನಲ್ಲಿ ಪ್ರೋಟೀನ್ ಹೇರಳವಾಗಿರುತ್ತದೆ. ಇದರಲ್ಲಿರುವ ಪ್ರೋಟೀನ್‌ಗಳು ಸ್ನಾಯುಗಳನ್ನು ಬಲಗೊಳಿಸಲು ಮತ್ತು ಬೆಳವಣಿಗೆಗೆ ಅಗತ್ಯವಾಗಿವೆ. ವ್ಯಾಯಾಮ ಮತ್ತು ಕ್ರೀಡಾಪಟುಗಳಿಗೆ ಹಾಲು ಅತ್ಯುತ್ತಮ ಪೋಷಣೆಯನ್ನು ನೀಡುತ್ತದೆ. 

  • ಹೃದಯ ಆರೋಗ್ಯ: ಹಾಲಿನಲ್ಲಿರುವ ಪೊಟ್ಯಾಸಿಯಂ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಡಿಮೆ ಕೊಬ್ಬಿನ ಅಥವಾ ಕೊಬ್ಬು ರಹಿತ ಹಾಲು ಕುಡಿಯುವುದರಿಂದ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಹಾಲಿನಲ್ಲಿನರುವ ಮೆಗ್ನೀಸಿಯಂ ಮತ್ತು ಕ್ಯಾಲ್ಸಿಯಂ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿವೆ. 

  • ಶಕ್ತಿ ಮತ್ತು ಚೈತನ್ಯ: ಹಾಲಿನಲ್ಲಿ ಕಾರ್ಬೋಹೈಡ್ರೇಟ್‌, ಪ್ರೋಟೀನ್‌ ಮತ್ತು ಆರೋಗ್ಯಕರ ಕೊಬ್ಬುಗಳು ಸಮ ಪ್ರಮಾಣದಲ್ಲಿರುತ್ತವೆ. ಇದು ದೇಹಕ್ಕೆ ತ್ವರಿತ ಮತ್ತು ದೀರ್ಘಕಾಲೀನ ಶಕ್ತಿಯನ್ನು ಒದಗಿಸುತ್ತದೆ. ಪ್ರತಿದಿನ ಬೆಳಿಗ್ಗೆ ಹಾಲು ಕುಡಿಯುವುದರಿಂದ ಇಡೀ ದಿನ ಚುರುಕಾಗಿರಲು ಸಹಕಾರಿಯಾಗಿದೆ. 

  • ತೂಕ ನಿಯಂತ್ರಣ: ಹಾಲಿನಲ್ಲಿರುವ ಪ್ರೋಟೀನ್ ಹಸಿವನ್ನು ನಿಯಂತ್ರಿಸುತ್ತದೆ. ಇದರಿಂದಾಗಿ ಅತಿಯಾಗಿ ತಿನ್ನುವ ಅಭ್ಯಾಸವನ್ನು ತಡೆಯಬಹುದು. ಅಧ್ಯಯನಗಳ ಪ್ರಕಾರ, ಸಮತೋಲಿನ ಆಹಾರದೊಂದಿಗೆ ಹಾಲು ಕುಡಿಯುವುದರಿಂದ ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

  • ತ್ವಚೆಯ ಆರೋಗ್ಯ ಮತ್ತು ಸೌಂದರ್ಯ: ಹಾಲಿನಲ್ಲಿರುವ ವಿಟಮಿನ್ ಎ, ಬಿ12 ಮತ್ತು ಲ್ಯಾಕ್ಟಿಕ್ ಆಮ್ಲಗಳು ತ್ವಚೆಯ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿವೆ. ಇವು ತ್ವಚೆಯ ತೇವಾಂಶವನ್ನು ಕಾಪಾಡಿ, ಹೊಳಪನ್ನು ಹೆಚ್ಚಿಸುತ್ತವೆ. 

  • ಮಾನಸಿಕ ಆರೋಗ್ಯ: ಹಾಲು ಮಿದುಳಿನ ಆರೋಗ್ಯಕ್ಕೆ ಅವಶ್ಯಕವಾದ ವಿಟಮಿನ್ ಬಿ12 ಮತ್ತು ಮೆಗ್ನೀಸಿಯಂ ಅನ್ನು ಒಳಗೊಂಡಿದೆ. ರಾತ್ರಿ ಹಾಲು ಕುಡಿಯುವುದರಿಂದ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

ಹಾಲು ಎಲ್ಲಾ ವಯಸ್ಸಿನ ಜನರಿಗೆ ಅತ್ಯಗತ್ಯವಾದ ಪೌಷ್ಟಿಕಾಂಶಗಳ ಖಜಾನೆಯಾಗಿದೆ. ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದು ಸರಳವಾದರೂ ಅತ್ಯಂತ ಪರಿಣಾಮಕಾರಿಯುಳ್ಳ ಆರೋಗ್ಯ ಅಭ್ಯಾಸವಾಗಿದೆ.

(ಡಾ. ಬೃಂದಾ ಎಂ.ಎಸ್, ಹಿರಿಯ ಸಲಹೆಗಾರರು, ಆಂತರಿಕ ವೈದ್ಯಕೀಯ ವಿಭಾಗ, ಅಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.