
ಚಿತ್ರ: ಗೆಟ್ಟಿ
ಮೂತ್ರಕೋಶದ ಕ್ಯಾನ್ಸರ್ ಮೂತ್ರಕೋಶದ ಒಳಪದರದ ಕೋಶಗಳಲ್ಲಿ ಪ್ರಾರಂಭವಾಗುತ್ತದೆ. ಇದು ಅತ್ಯಂತ ಸಾಮಾನ್ಯ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರನ್ನೂ ಇದು ಬಾಧಿಸುತ್ತದೆ. ವಯಸ್ಸಾದ ವ್ಯಕ್ತಿಗಳಲ್ಲಿ ಹೆಚ್ಚಿನ ಅಪಾಯ ಉಂಟು ಮಾಡಬಹುದು. ವಿಶೇಷವಾಗಿ ನಗರ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಮೂತ್ರಕೋಶ ಕ್ಯಾನ್ಸರ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದೆ.
ಮೂತ್ರಕೋಶ ಕ್ಯಾನ್ಸರ್, ವಿಶ್ವದ 9ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ. ಭಾರತದಲ್ಲಿ ಇದು ಸಂಭವಿಸುವಿಕೆಯಲ್ಲಿ 17ನೇ ಸ್ಥಾನದಲ್ಲಿದೆ. ಮರಣ ದರದಲ್ಲಿ 19ನೇ ಸ್ಥಾನದಲ್ಲಿದೆ. ಮೂತ್ರಕೋಶ ಕ್ಯಾನ್ಸರ್ ಹೊಂದಿರುವ ಶೇ 75ರಷ್ಟು ರೋಗಿಗಳು ‘ನಾನ್ ಮಸಲ್ ಇನ್ವೇಸಿವ್’ ಮೂತ್ರಕೋಶ ಕ್ಯಾನ್ಸರ್ ಎಂದು ಕರೆಯಲ್ಪಡುವ ಪ್ರಕಾರದ ರೋಗ ಹೊಂದಿರುತ್ತಾರೆ.
ಮೂತ್ರಕೋಶ ಕ್ಯಾನ್ಸರ್‌ಗೆ ಕಾರಣಗಳು:
ಮೂತ್ರಕೋಶ ಕ್ಯಾನ್ಸರ್ ದೀರ್ಘಕಾಲದ ಹಾನಿಕಾರಕ ವಸ್ತುಗಳ ಸಂಪರ್ಕದಿಂದ ಪ್ರಾರಂಭವಾಗುತ್ತದೆ. ನಗರ ಅಥವಾ ಕೈಗಾರಿಕಾ ಪ್ರದೇಶಗಳಲ್ಲಿ ವಾಸಿಸುವ ಜನರು ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ. ಏಕೆಂದರೆ ಮಾಲಿನ್ಯಕಾರಕಗಳು ಮತ್ತು ಕೈಗಾರಿಕಾ ರಾಸಾಯನಿಕಗಳು ಈ ಪರಿಸರಗಳಲ್ಲಿ ಹೆಚ್ಚಾಗಿರುತ್ತವೆ. ಬಣ್ಣ, ರಬ್ಬರ್ ಮತ್ತು ಇತರೆ ಕೈಗಾರಿಕೆಗಳಲ್ಲಿ ಬಳಸುವ ರಾಸಾಯನಿಕಗಳು ನಿಧಾನವಾಗಿ ಮೂತ್ರಕೋಶದ ಒಳಪದರವನ್ನು ಸೇರಿ ಹಾನಿಯುಂಟು ಮಾಡುತ್ತವೆ. ಕುಡಿಯುವ ನೀರಿನಲ್ಲಿರುವ ಆರ್ಸೆನಿಕ್‌ನಂತಹ ಮಾಲಿನ್ಯಕಾರಕಗಳು ಸಹ ಮೌನವಾಗಿ ದೇಹದಲ್ಲಿ ಸಂಗ್ರಹಗೊಂಡು ಮೂತ್ರಕೋಶದ ಬದಲಾವಣೆಗಳಿಗೆ ಕಾರಣವಾಗಬಹುದು.
ಜೀವನಶೈಲಿಯ ಆಯ್ಕೆಗಳು ಸಹ ಅಪಾಯ ಉಂಟು ಮಾಡಬಹುದು. ಉದಾಹರಣೆಗೆ, ಆಹಾರ ಅಥವಾ ಕೂದಲಿನ ಉತ್ಪನ್ನಗಳಲ್ಲಿ ಕೃತಕ ಬಣ್ಣಗಳ ಬಳಕೆ ಮೂತ್ರಕೋಶದ ಕಿರಿಕಿರಿಗೆ ಕಾರಣವಾಗಬಹುದು. ಕೆಲವರಲ್ಲಿ ದೀರ್ಘಕಾಲದ ಮೂತ್ರಕೋಶ ಸಮಸ್ಯೆಗಳಿಗೆ ಕಾರಣವಾಗಬಹುದು. ನಿರಂತರ ಸೋಂಕು, ದೀರ್ಘಕಾಲದ ಉರಿಯೂತ ಮೂತ್ರಕೋಶದ ಒಳಪದರವನ್ನು ಗಾಯಗೊಳಿಸಿ ಹೆಚ್ಚುವರಿ ಕೋಶ ಬೆಳವಣಿಗೆಗೆ ಕಾರಣವಾಗಬಹುದು. ಧೂಮಪಾನವು ಅತ್ಯಂತ ಅಪಾಯಕಾರಿ ಅಂಶವಾಗಿದೆ. ಏಕೆಂದರೆ ಹಾನಿಕಾರಕ ರಾಸಾಯನಿಕಗಳು ಮೂತ್ರದ ಮೂಲಕ ಹೊರಹಾಕಲ್ಪಟ್ಟು ಕಾಲಾನಂತರದಲ್ಲಿ ಮೂತ್ರಕೋಶದ ಒಳಪದರವನ್ನು ಹಾನಿಗೊಳಿಸುತ್ತವೆ.
ಆರಂಭಿಕ ಲಕ್ಷಣಗಳು:
ನಿಮ್ಮ ಮೂತ್ರದಲ್ಲಿ ರಕ್ತ ಬರುವುದು ಮೂತ್ರಕೋಶ ಕ್ಯಾನ್ಸರ್‌ನ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ಆದರೆ ನಿಮ್ಮ ಮೂತ್ರದಲ್ಲಿ ರಕ್ತವಿರುವುದು ಮೂತ್ರಕೋಶ ಕ್ಯಾನ್ಸರ್‌ನ ಖಚಿತ ಸಂಕೇತವಲ್ಲ. ಇತರ ಸ್ಥಿತಿಗಳೂ ಈ ಸಮಸ್ಯೆಗೆ ಕಾರಣವಾಗುತ್ತವೆ. ಆದರೆ ನಿಮ್ಮ ಮೂತ್ರದಲ್ಲಿ ರಕ್ತವನ್ನು ಗಮನಿಸಿದಾಗಲೆಲ್ಲ ವೈದ್ಯರ ಸಂಪರ್ಕ ಉತ್ತಮ.
ಮೂತ್ರಕೋಶ ಕ್ಯಾನ್ಸರ್‌ನ ಇತರ ಲಕ್ಷಣಗಳು:
ಮೂತ್ರದಲ್ಲಿ ರಕ್ತ ಅಥವಾ ರಕ್ತ ಹೆಪ್ಪುಗಟ್ಟುವಿಕೆ
ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಅಥವಾ ಸುಡುವ ಸಂವೇದನೆ
ಸಾಮಾನ್ಯಕ್ಕಿಂತ ಹೆಚ್ಚು, ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದು.
ರಾತ್ರಿ ಸಮಯದಲ್ಲಿ ಆಗಾಗ್ಗೆ ಮೂತ್ರ ವಿಸರ್ಜಿಸುವುದು.
ಮೂತ್ರ ವಿಸರ್ಜಿಸುವುದು ಅಗತ್ಯ ಅನಿಸಿದಾಗ, ಮೂತ್ರ ವಿಸರ್ಜಿಸಲು ಆಗಾದ ಪರಿಸ್ಥಿತಿ.
ಈ ಹೆಚ್ಚಿನ ಲಕ್ಷಣಗಳನ್ನು ಆಗಾಗ್ಗೆ ವಯಸ್ಸಿಗೆ ಸಂಬಂಧಿತ ಬದಲಾವಣೆಗಳು ಅಥವಾ ಮೂತ್ರನಾಳದ ಸೋಂಕು ಎಂದು ತಪ್ಪಾಗಿ ರೋಗ ನಿರ್ಣಯ ಮಾಡಲಾಗುತ್ತದೆ. ಆರಂಭಿಕ ಹಂತದಲ್ಲಿ (ನಾನ್-ಇನ್ವೇಸಿವ್) ಪತ್ತೆಯಾದಾಗ, ಮೂತ್ರಕೋಶ ಕ್ಯಾನ್ಸರ್ ಸಾಮಾನ್ಯವಾಗಿ ಟ್ರಾನ್ಸ್‌ಯುರೆಥ್ರಲ್ ರಿಸೆಕ್ಷನ್ ಮತ್ತು ಇಂಟ್ರಾವೆಸಿಕಲ್ ಥೆರಪಿಯಂತಹ ಕನಿಷ್ಠ ಆಕ್ರಮಣಕಾರಿ ವಿಧಾನಗಳೊಂದಿಗೆ ಚಿಕಿತ್ಸೆ ನೀಡಬಹುದಾಗಿದೆ.
ಮೂತ್ರಕೋಶದ ಕ್ಯಾನ್ಸರ್ ಸಂಕೀರ್ಣವಾಗಿರಬಹುದು. ಆದರೆ ಅದನ್ನು ಆರಾಮವಾಗಿ ಗುಣಪಡಿಸಬಹುದು. ಆರಂಭಿಕ ಪತ್ತೆ ಮತ್ತು ತಜ್ಞರ ಸಲಹೆಯಿಂದ ತ್ವರಿತವಾಗಿ ಪರಿಹಾರ ಸಾಧ್ಯವಿದೆ.
(ಡಾ. ಸ್ನೇಹಾ ಕೊಮ್ಮಿನೇನಿ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಸಲಹೆಗಾರರು, ಆಸ್ಟರ್ ಆರ್‌ವಿ ಆಸ್ಪತ್ರೆ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.