ADVERTISEMENT

ಮಿದುಳಿಗೂ ಆಗಬಹುದು ಆಘಾತ...!

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 19:45 IST
Last Updated 22 ಅಕ್ಟೋಬರ್ 2019, 19:45 IST
ಮಿದುಳಿನ ಆಘಾತ
ಮಿದುಳಿನ ಆಘಾತ    

ಸ್ಟ್ರೋ ಕ್‌..ಇದು ಜಗತ್ತಿನ 2 ಕೋಟಿ ಜನರನ್ನು ಆಘಾತಕ್ಕೆ ದೂಡಿದೆ. ಮಿದುಳಿನ ಆಘಾತ ಎಂದು ಕರೆಯಬಹುದಾದ ಈ ಸಮಸ್ಯೆಯಿಂದ ಇದುವರೆಗೂ 50ಲಕ್ಷಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಜಾಗೃತಿಯ ಕೊರತೆಯೇ ಈ ಸಾವುಗಳಿಗೆ ಕಾರಣ ಎನ್ನುವುದು ವೈದ್ಯಲೋಕದ ನಂಬಿಕೆ. ಮಿದುಳಿಗೆ ಸಬರಾಜಾಗುವ ರಕ್ತದ ಪ್ರಮಾಣದಲ್ಲಿ ಕೊರತೆ ಆದಾಗ ಸ್ಟ್ರೋಕ್‌ ಆಗುತ್ತದೆ. ಮಿದುಳಿನಲ್ಲಿ ರಕ್ತ ಸರಬರಾಜು ಮಾಡುವ ಕೊಳವೆಗಳು ಛಿದ್ರವಾಗುವುದರಿಂದ ಇದು ಸಂಭವಿಸುತ್ತದೆ.

ಕಾಯಿಲೆಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳದ ಗ್ರಾಮೀಣ ಭಾಗದ ಜನರು ಇಂದಿಗೂ ಮನೆಯ ಔಷಧಿ ಬಳಸುವ ಮೂಲಕ ಸಾವನ್ನು ಹತ್ತಿರಕ್ಕೆ ಎಳೆದುಕೊಳ್ಳುತ್ತಿದ್ದಾರೆ.

ADVERTISEMENT

ಬೆಂಗಳೂರಿನಂತಹ ನಗರದಲ್ಲೂ ನಿರ್ಲಕ್ಷ್ಯದಿಂದಾದ ಸಾವಿನ ಪ್ರಕರಣಗಳು ಹೆಚ್ಚಿವೆ. ಯಾವುದೇ ಮುನ್ಸೂಚನೆ ನೀಡದೆ ಇದ್ದಕ್ಕಿಂತೆ ಸ್ಟ್ರೋಕ್‌ ಆಗುವುದು ಜನರನ್ನು ಆಘಾತಕ್ಕೀಡು ಮಾಡುತ್ತದೆ. ಹೆಚ್ಚಿನ ಜನರು ಆಸ್ಪತ್ರೆಗೆ ಬರಲು ಹೆದರುತ್ತಾರೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದಿದ್ದರೆ ರೋಗಿ ಸಾವನ್ನಪ್ಪುತ್ತಾನೆ ಎಂಬ ಪ್ರಜ್ಞೆ ಹೆಚ್ಚುವುದು ಮುಖ್ಯ.

ವಿಳಂಬ ಸರಿಯಲ್ಲ: ಸ್ಟ್ರೋಕ್‌ಗೆ ಒಳಗಾದ ವ್ಯಕ್ತಿಗೆ ಒಂದು ತಾಸಿನ ಒಳಗೆ ಚಿಕಿತ್ಸೆ ಸಿಗುವುದು ತುಂಬಾ ಮುಖ್ಯ. ಇಲ್ಲದಿದ್ದರೆ ಶಾಶ್ವತವಾಗಿ ಅಂಗವೈಕಲ್ಯಕ್ಕೆ ಒಳಗಾಗಬೇಕಾಗುತ್ತದೆ. ಮಧುಮೇಹ, ರಕ್ತದೊತ್ತಡ ಇರುವ ರೋಗಿಗಳು ಎಚ್ಚರಿಕೆಯಿಂದ ಇರಬೇಕು. ಸ್ಟ್ರೋಕ್‌ ಲಕ್ಷಣಗಳು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಹೋಗಬೇಕು.

ಎರಡು ವಿಧಗಳು: ಸ್ಟ್ರೋಕ್‌ನಲ್ಲಿ ಎರಡು ವಿಧಗಳಿವೆ. ಒಂದು ಇಸ್ಕೆಮಿಕ್‌, ಇನ್ನೊಂದು ಹೆಮರಾಜಿಕ್‌ ಆಘಾತ. ಮೊದಲನೆಯದರಲ್ಲಿ ರಕ್ತದ ಹರಿವು ಕಡಿಮೆಯಾಗುವುದರಿಂದ ಅಥವಾ ಬ್ಲಾಕ್‌ ಆಗುವುದರಿಂದ ಆಘಾತ ಸಂಭವಿಸುತ್ತದೆ. ಸುಮಾರು 80%ಜನರಿಗೆ ಈ ಸ್ಟ್ರೋಕ್‌ ಕಂಡುಬರುತ್ತದೆ. ಹೆಮರಾಜಿಕ್ ಆಘಾತ, ರಕ್ತನಾಳಗಳು ಒಡೆಯುವುದರಿಂದ ಆಗುತ್ತದೆ. ಇದು ವಿರಳ ಪ್ರಕರಣಗಳಲ್ಲಿ ಮಾತ್ರ ಕಂಡುಬರುತ್ತದೆ.

ವಯೋಮಾನ: ಸ್ಟ್ರೋಕ್‌ ಸಾಮಾನ್ಯವಾಗಿ 55 ವರ್ಷದ ನಂತರದವರಿಗೆ ಹೆಚ್ಚು. ಆದರೆ ಜೀವನಶೈಲಿಯ ಕಾರಣದಿಂದ ಈ ವಯೋಮಾನದಲ್ಲಿ ಇಳಿಕೆಯಾಗಿದೆ. ಈಗ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೂ ಸ್ಟ್ರೋಕ್ ಆಗುತ್ತಿರುವುದು ಹೆಚ್ಚುತ್ತಿದೆ.

ಕಾರಣಗಳು: ಮಧುಮೇಹ, ರಕ್ತದೊತ್ತಡ ಇದ್ದವರಿಗೆ ಸ್ಟ್ರೋಕ್‌ ಸಾಧ್ಯತೆ ಹೆಚ್ಚು. ಧೂಮಪಾನ, ಅತಿಯಾದ ಮದ್ಯಸೇವನೆ, ಬೊಜ್ಜು, ಹೃದ್ರೋಗಿಗಳಿಗೆ ಹೆಚ್ಚಾಗಿ ಕಂಡುಬರುತ್ತದೆ. ಇತ್ತೀಚೆಗೆ ವೈದ್ಯಲೋಕ ಕಂಡಂತೆ, ಮಕ್ಕಳಾದ ಬಳಿಕ ಸರಿಯಾಗಿ ಆರೈಕೆ ಸಿಗದ ಬಾಣಂತಿಯರಲ್ಲೂ ಸ್ಟ್ರೋಕ್‌ ಕಂಡುಬಂದಿದೆ.

ಲಕ್ಷಣಗಳು: ಮಾತನಾಡಲು ತೊಂದರೆ, ದೇಹದ ಒಂದು ಭಾಗದ ದೌರ್ಬಲ್ಯ, ದೃಷ್ಟಿ ಕಳೆದುಕೊಳ್ಳುವುದು, ಸಮತೋಲನ ತಪ್ಪುವುದು, ತೀವ್ರ ಗೊಂದಲ, ಪ್ರಜ್ಞೆ ಕಳೆದುಕೊಳ್ಳುವುದು, ತೀವ್ರ ತಲೆನೋವು.

ಚಿಕಿತ್ಸೆ: ಆಘಾತದ ಲಕ್ಷಣ ಹೊಂದಿರುವ ರೋಗಿಗೆ ವೈದ್ಯರು ಕೆಲವು ರಕ್ತ ಪರೀಕ್ಷೆ ಮಾಡಿಸುತ್ತಾರೆ. ಮಿದುಳಿಗೆ ಸಿಟಿ ಸ್ಕ್ಯಾನ್‌, ಎಂ.ಆರ್‌.ಐ ಮಾಡಲಾಗುತ್ತದೆ. ‘ಹೆಪ್ಪುಗಟ್ಟುವಿಕೆ ಬಸ್ಟರ್‌’ ನೀಡಲಾಗುತ್ತದೆ. ಇದು ದೀರ್ಘಕಾಲದ ಅಂಗವೈಕಲ್ಯವನ್ನು ತಡೆಯುತ್ತದೆ. ಸ್ಟ್ರೋಕ್‌ಗೆ ಒಳಗಾದ ಒಂದು ತಾಸಿನ ಒಳಗೆ ಈ ಔಷಧ ಸಿಗುವುದು ಮುಖ್ಯ.

ಏನಿದು ಗೋಲ್ಡನ್‌ ಅವಧಿ: ಸ್ಟ್ರೋಕ್‌ ಆದ ಬಳಿಕ 1 ರಿಂದ 4 ತಾಸುಗಳ ಒಳಗಾಗಿ ಚಿಕಿತ್ಸೆ ಪಡೆಯಬೇಕು. ಇದನ್ನು ಗೋಲ್ಡನ್‌ ಅವಧಿ ಎಂದು ಕರೆಯಲಾಗುತ್ತದೆ. ಈ ಅವಧಿಯನ್ನು ಮೀರಿದರೆ ರೋಗ ಲಕ್ಷಣವನ್ನು ಕಡಿಮೆ ಮಾಡುವುದು ಕಷ್ಟ. ಮಿದುಳಿಗೆ ಪೂರ್ಣಪ್ರಮಾಣದಲ್ಲಿ ಹಾನಿಯಾದರೆ ತೊಂದರೆ ಕಟ್ಟಿಟ್ಟಬುತ್ತಿ.

-ಡಾ. ಶ್ರೀಕಂಠ ಸ್ವಾಮಿ, ನರರೋಗಶಾಸ್ತ್ರದ ಮುಖ್ಯ ಸಲಹಾ ವೈದ್ಯ, ಆಸ್ಟರ್‌ ಆರ್‌.ವಿ. ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.