
ಚಿತ್ರ: ಗೆಟ್ಟಿ
ಎದೆಹಾಲು ಶಿಶುವಿನ ಪೋಷಣೆಯ ಅತ್ಯುತ್ತಮ ಆಹಾರ. ಆದರೆ, ಕೆಲವು ಸಂದರ್ಭಗಳಲ್ಲಿ ತಾಯಿಯ ಎದೆಹಾಲು ಕೂಡ ವಿಷಯುಕ್ತವಾಗಬಹುದು. ಇದು ಶಿಶುವಿಗೆ ಹಾನಿಕಾರಕವಾಗಬಹುದು. ಈ ಬಗ್ಗೆ ಸಂಪೂರ್ಣ ತಿಳುವಳಿಕೆ ಪಡೆಯುವುದು ತಾಯಂದಿರಿಗೆ ಅತ್ಯಂತ ಅವಶ್ಯಕವಾಗಿದೆ. ತಾಯಿ ಎದೆಹಾಲು ಯಾವಾಗ ವಿಷಯುಕ್ತವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ
ಕಳೆದ ಒಂದು ವಾರದ ಹಿಂದೆಯಷ್ಟೇ ಬಿಹಾರದ ಹಲವು ಜಿಲ್ಲೆಗಳಲ್ಲಿನ ಬಾಣಂತಿಯರ ಎದೆಹಾಲಿನಲ್ಲಿ ಯುರೇನಿಯಂ (U238) ಪತ್ತೆಯಾಗಿತ್ತು. ಈ ರಾಸಾಯನಿಕ ಶಿಶುಗಳ ಆರೋಗ್ಯ ಮೇಲೆ ಪ್ರಭಾವ ಬೀರುವುದಾಗಿ ಅಧ್ಯಯನವೊಂದು ತೀವ್ರ ಕಳವಳ ವ್ಯಕ್ತಪಡಿಸಿದೆ.
ಭಾರತದಲ್ಲಿ 18 ರಾಜ್ಯಗಳ ಜಲಮೂಲಗಳಲ್ಲಿ ಯುರೇನಿಯಂ:
ಭಾರತದಲ್ಲಿ 18 ರಾಜ್ಯಗಳ 151 ಜಿಲ್ಲೆಗಳಲ್ಲಿ ಯುರೇನಿಯಂ ಮಾಲಿನ್ಯ ಪ್ರಮಾಣ ಪತ್ತೆಯಾಗಿದೆ. ಇದರಲ್ಲಿ ಬಿಹಾರದ ವಿವಿಧ ಪ್ರದೇಶಗಳಲ್ಲಿನ ಅಂತರ್ಜಲದಲ್ಲಿ ಶೇ 1.7ರಷ್ಟು ಕಂಡುಬಂದಿರುವುದು ಈವರೆಗಿನ ಅಧ್ಯಯನದಿಂದ ತಿಳಿದುಬಂದಿದೆ.
ಎದೆಹಾಲು ವಿಷಯುಕ್ತವಾಗಲು ಕಾರಣಗಳು:
ಔಷಧಿಗಳ ಸೇವನೆ: ತಾಯಿ ಕೆಲವು ಔಷಧಿಗಳನ್ನು ಸೇವಿಸಿದಾಗ, ಅವು ಹಾಲಿನಲ್ಲಿ ಬೆರೆತು ಶಿಶುವಿಗೆ ಹಾನಿ ಮಾಡಬಹುದು. ಕ್ಯಾನ್ಸರ್ ಚಿಕಿತ್ಸೆಯ ಔಷಧಿಗಳು, ಪ್ರತಿ ಜೀವಕಗಳು, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಔಷಧಿಗಳು ವಿಶೇಷವಾಗಿ ಅಪಾಯಕಾರಿಯಾಗಿವೆ.
ಮದ್ಯಪಾನ ಮತ್ತು ಧೂಮಪಾನ: ಮದ್ಯ ಸೇವನೆಯು ನೇರವಾಗಿ ಹಾಲಿಗೆ ವರ್ಗಾವಣೆಯಾಗುತ್ತದೆ. ಧೂಮಪಾನದಿಂದ ನಿಕೋಟಿನ್ ಮತ್ತು ಇತರೆ ರಾಸಾಯನಿಕಗಳು ಹಾಲಿನಲ್ಲಿ ಸೇರಿ ಶಿಶುವಿಗೆ ತೀವ್ರ ಹಾನಿ ಮಾಡುತ್ತವೆ.
ಪರಿಸರದ ವಿಷಗಳು: ಕೀಟನಾಶಕ, ಕೈಗಾರಿಕಾ ರಾಸಾಯನಿಕ, ಲೋಹಗಳಾದ ಸೀಸ, ಪಾದರಸ ಹಾಗೂ ಯುರೇನಿಯಂ, ಇವು ತಾಯಿಯ ದೇಹದಲ್ಲಿ ಸಂಗ್ರಹವಾಗಿ ಹಾಲಿನ ಮೂಲಕ ಶಿಶುವನ್ನು ತಲುಪಬಹುದು.
ಸೋಂಕು ಮತ್ತು ರೋಗಗಳು: ತಾಯಿಗೆ ಎಚ್‌ಐವಿ, ಎಚ್‌ಟಿಎಲ್‌ವಿ, ಸಕ್ರಿಯ ಕ್ಷಯರೋಗ, ಚಿಕನ್ ಪಾಕ್ಸ್ ಇತ್ಯಾದಿ ಸೋಂಕುಗಳಿದ್ದರೆ, ರೋಗಕಾರಕಗಳು ಹಾಲಿನ ಮೂಲಕ ಶಿಶುವಿಗೆ ವರ್ಗಾಯಿಸಬಹುದು.
ಆಹಾರ ಮಾಲಿನ್ಯ: ಕೀಟನಾಶಕಯುಕ್ತ ತರಕಾರಿ, ಮಾಲಿನ್ಯಗೊಂಡ ಮೀನು, ಅತಿಯಾದ ಕೆಫೀನ್ ಸೇವನೆ ಹಾಲಿನ ಗುಣಮಟ್ಟವನ್ನು ಕುಂದಿಸುತ್ತದೆ.
ಮೊಲೆ ತೊಟ್ಟಿನ ಸೋಂಕು: ಮಾಸ್ಟೈಟಿಸ್ ಅಥವಾ ಸ್ತನದ ಸೋಂಕು ಇದ್ದಾಗ, ಬ್ಯಾಕ್ಟೀರಿಯಾ ಹಾಲಿನಲ್ಲಿ ಬೆರೆತು ವಿಷಯುಕ್ತವಾಗಬಹುದು.
ಶಿಶುವಿನ ಮೇಲಿನ ಪರಿಣಾಮ:
ತಕ್ಷಣದ ಪರಿಣಾಮಗಳು: ವಾಂತಿ, ಅತಿಸಾರ, ತೀವ್ರ ಅಶಾಂತಿ, ಹೊಟ್ಟೆ ನೋವು, ಅತಿಯಾದ ನಿದ್ದೆ ಅಥವಾ ನಿದ್ದೆಯಲ್ಲಿ ತೊಂದರೆ, ಮಗುವಿನ ಮುಂಗಾಲು ನೀಲಿ ಬಣ್ಣಕ್ಕೆ ತಿರುಗುವುದು ಹಾಗೂ ಉಸಿರಾಟದ ತೊಂದರೆಗಳು ಕಂಡುಬರುತ್ತವೆ.
ನರವ್ಯೂಹದ ಸಮಸ್ಯೆಗಳು: ವಿಷಯುಕ್ತ ಹಾಲು ಶಿಶುವಿನ ಮೆದುಳಿನ ಬೆಳವಣಿಗೆಯನ್ನು ತಡೆಯಬಹುದು. ಕಲಿಕೆಯಲ್ಲಿ ತೊಂದರೆ, ನಡವಳಿಕೆಯ ಸಮಸ್ಯೆ ಹಾಗೂ ಬೌದ್ಧಿಕ ಬೆಳವಣಿಗೆಯ ಕುಂಠಿತದಂತಹ ಸಮಸ್ಯೆಗಳು ಉಂಟಾಗಬಹುದು.
ದೈಹಿಕ ಬೆಳವಣಿಗೆಯ ಅಡ್ಡಿ: ತೂಕ ಹೆಚ್ಚಳದಲ್ಲಿ ನಿಧಾನಗತಿ, ಎತ್ತರ ಬೆಳವಣಿಗೆ ಕುಂಠಿತ, ದುರ್ಬಲ ರೋಗನಿರೋಧಕ ಶಕ್ತಿ ಹಾಗೂ ಮೂಳೆ ಬೆಳವಣಿಗೆಯಲ್ಲಿ ಸಮಸ್ಯೆಗಳು ಎದುರಾಗುತ್ತವೆ.
ಯಕೃತ್ತು ಮತ್ತು ಮೂತ್ರಪಿಂಡಗಳ ಸಮಸ್ಯೆಗಳು: ಕೆಲವು ವಿಷಗಳು ಅಂಗಗಳಿಗೆ ಹಾನಿ ಮಾಡಿ ಜೀವನ ಪರ್ಯಂತ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಬಹುದು.
ಸೋಂಕು ಮತ್ತು ರೋಗಗಳ ವರ್ಗಾವಣೆ: ಎಚ್‌ಐವಿ ಸೇರಿದಂತೆ ಮುಂತಾದ ಗಂಭೀರ ರೋಗಗಳು ತಾಯಿಯಿಂದ ಶಿಶುವಿಗೆ ಹಾಲಿನ ಮೂಲಕ ಹರಡಿ ಶಿಶುವಿನ ಭವಿಷ್ಯವನ್ನು ಬದಲಾಯಿಸಬಹುದು.
ತಡೆಗಟ್ಟುವ ಕ್ರಮಗಳು:
ಔಷಧಿಗಳನ್ನು ವೈದ್ಯರ ಸಲಹೆಯಿಲ್ಲದೆ ಸೇವಿಸಬಾರದು.
ಮದ್ಯಪಾನ ಮತ್ತು ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು.
ಸಾವಯವ ಹಾಗೂ ತಾಜಾ ಆಹಾರವನ್ನು ಸೇವಿಸಬೇಕು.
ನಿಯಮಿತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು.
ಸ್ತನದ ನೈರ್ಮಲ್ಯವನ್ನು ಕಾಪಾಡಬೇಕು.
ತಾಯಿಯು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿ, ವೈದ್ಯರ ಸಲಹೆಯನ್ನು ಪಡೆದು, ಜಾಗರೂಕರಾಗಿದ್ದರೆ ಎದೆಹಾಲು ಶಿಶುವಿಗೆ ಅಮೂಲ್ಯ ಪೋಷಕಾಂಶಗಳ ಸುರಕ್ಷಿತ ಮೂಲವಾಗಿ ಉಳಿಯುತ್ತದೆ. ಇಲ್ಲವಾದರೆ ಅದು ವಿಷವಾಗುತ್ತದೆ.
(ಡಾ. ಎನ್. ಸಪ್ನಾ ಲುಲ್ಲಾ, ಲೀಡ್ ಕನ್ಸಲ್ಟಂಟ್ – ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಅಸ್ಟರ್ CMI ಆಸ್ಪತ್ರೆ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.