ADVERTISEMENT

ಕ್ಯಾನ್ಸರ್ ಬರದಂತೆ ತಡೆಗಟ್ಟಲು ಆಹಾರವೇ ಔಷಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2025, 9:55 IST
Last Updated 18 ಡಿಸೆಂಬರ್ 2025, 9:55 IST
   

ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಮ್ಮ ದೈನಂದಿನ ಜೀವನ ಶೈಲಿ ಜೊತೆಗೆ ಆಹಾರ ಕ್ರಮ ಪ್ರಮುಖ ಪಾತ್ರವಹಿಸುತ್ತದೆ. ರೋಗ ರುಜಿನಗಳು ಬಾರದಂತೆ ನೋಡಿಕೊಳ್ಳಲು ಉತ್ತಮ ಆಹಾರ ಸೇವನೆಯನ್ನು ಹೊಂದಿರಬೇಕು. ಅದೇ ರೀತಿಯಾಗಿ ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸುವ ಮೂಲಕ ಕ್ಯಾನ್ಸರ್‌ ರೋಗ ಬರದಂತೆ ತಡೆಗಟ್ಟಲು ಸಾಧ್ಯವಿದೆ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಹಾರ ತಜ್ಞರಾದ ಡಾ. ಸುನಿತಾ ಹೇಳುತ್ತಾರೆ.

ನಾವು ತಿನ್ನುವ ಆಹಾರದಲ್ಲಿರುವ ಉತ್ತಮ ಪೋಷಕಾಂಶಗಳು ಕ್ಯಾನ್ಸರ್‌ ವಿರುದ್ಧ ಹೋರಾಡಲು ಇರುವ ಅತ್ಯಂತ ಶಕ್ತಿಶಾಲಿ ಆಯುಧ. ನಾವು ಏನನ್ನು ತಿನ್ನುತ್ತೇವೆ ಎನ್ನುವುದರ ಮೇಲೆ ಆರೋಗ್ಯದ ಸ್ಥಿತಿ ನಿರ್ಧರಿತವಾಗಿರುತ್ತದೆ. ಆಹಾರವು ಅನಾರೋಗ್ಯವನ್ನು ಹೆಚ್ಚಿಸಬಹುದು ಅಥವಾ ಕ್ಯಾನ್ಸರ್‌ ಬರದಂತೆ ತಡೆಗಟ್ಟಲು ಬಹುದು. ಸರಿಯಾದ ಪ್ರಮಾಣದಲ್ಲಿರುವ ಆಕ್ಸಿಡೇಟಿವ್ ಒತ್ತಡ (oxidative stress) ಮತ್ತು ಉರಿಯೂತ (inflammation) ಮಿಶ್ರಿತವಾದ ಆಹಾರವು ಕ್ಯಾನ್ಸರ್‌ ತಡೆಗಟ್ಟುವಲ್ಲಿ ಮುಖ್ಯವಾದ ಪಾತ್ರವಹಿಸುತ್ತದೆ. ಪ್ರತಿ ಊಟದ ನಂತರ ಜೀರ್ಣಕ್ರಿಯೆ ಪೂರ್ಣಗೊಂಡಾಗ ದೇಹದಲ್ಲಿ ಫ್ರೀ ರಾಡಿಕಲ್ಸ್ ಬಿಡುಗಡೆಯಾಗುತ್ತವೆ. ಇವು ಮೈನಸ್ ಅಯಾನ್ ಅಣುಗಳಾಗಿದ್ದು, ಇವು ಡಿಎನ್‌ಎಗೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ತಾಜಾ ಹಣ್ಣುಗಳು, ತರಕಾರಿಗಳು, ಅರಿಶಿನ ಮತ್ತು ಬೆಳ್ಳುಳ್ಳಿಯಲ್ಲಿ ಕಂಡುಬರುವ ಆ್ಯಂಟಿಆಕ್ಸಿಡೆಂಟ್‌ಗಳು ಈ ಹಾನಿಕಾರಕ ಫ್ರೀ ರಾಡಿಕಲ್ಸ್‌ಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಮತ್ತು ಈ ರೀತಿಯಾಗಿ ದೇಹವನ್ನು ರಕ್ಷಿಸುತ್ತವೆ. ಈ ಆಹಾರಗಳನ್ನು ಸೂಪರ್‌ಫುಡ್‌ಗಳೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅವು ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಇತರ ಅಂಶಗಳಿಂದ ಕೂಡಿದ್ದು ದೇಹದಲ್ಲಿನ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ ಎಂದು ಆಹಾರ ತಜ್ಞರು ಮಾಹಿತಿ ನೀಡಿದ್ದಾರೆ.

ನಾವು ಪ್ರತಿನಿತ್ಯ ಯಾವೆಲ್ಲಾ ಆಹಾರ ತಿನ್ನಬೇಕು ಎಂದು ಸರಿಯಾದ ಯೋಜನೆಗಳನ್ನು ಹಾಕಿಕೊಳ್ಳಬೇಕು. ಉದಾಹರಣೆಗೆ ಸಸ್ಯಹಾರಿ ಆಹಾರವು ಹೆಚ್ಚು ಪ್ರಯೋಜನಕಾರಿಯಾಗಿದ್ದು, ಫೈಬರ್‌, ಆ್ಯಂಟಿಆಕ್ಸಿಡೆಂಟ್‌ ಗಳಿಂದ ಕೂಡಿರುತ್ತದೆ. ಮಾಂಸಹಾರಿ ಆಹಾರ ಅದರಲ್ಲೂ ಸಾಸೇಜ್‌ನಂತಹ ಸಂಸ್ಕರಿಸಿದ ಮಾಂಸದಲ್ಲಿ ನೈಟ್ರೋಸೊ ಸಂಯುಕ್ತಗಳು ಲೆಡ್‌ ನಂತಹ ಹಾನಿಕಾರಕ ಅಂಶದಿಂದ ಕೂಡಿರುತ್ತದೆ. ನಾವು ಪ್ರತಿನಿತ್ಯ ತಿನ್ನುವ ಇಡ್ಲಿ, ದೋಸೆ ಮತ್ತು ಸಾಂಬಾರ್ ರೈಸ್‌ನಂತಹ ಸರಳ ಊಟವನ್ನು ಸೇವಿಸಿದ ಬಳಿಕ ಜೀರ್ಣಕ್ರಿಯೆಯಾದಾಗ ಫ್ರೀ ರಾಡಿಕಲ್ಸ್‌ಗಳು ಬಿಡುಗಡೆಯಾಗಲಿವೆ. ಹಾಗಾಗಿ ಪ್ರತಿನಿತ್ಯ ಆ್ಯಂಟಿಆಕ್ಸಿಡೆಂಟ್ ಗಳಿಂದ ಕೂಡಿದ ಸಮೃದ್ಧ ತರಕಾರಿ ಸೇವಿಸುವ ಮೂಲಕ ಆಹಾರ ಕ್ರಮವನ್ನು ಸಮತೋಲನಗೊಳಿಸುವುದು ಮುಖ್ಯವಾಗಿರುತ್ತದೆ.

ನಾವು ಏನು ತಿನ್ನುತ್ತೇವೆ ಎಂಬುದರ ಮೇಲೆ ದೇಹದ ಆರೋಗ್ಯ ನಿರ್ಧರಿತವಾಗಿರುತ್ತದೆ ಹಾಗಾಗಿ ಆಹಾರದ ಆಯ್ಕೆ ಬಹಳ ಮುಖ್ಯ. ಆಹಾರ ಸೇವನೆಯಲ್ಲಿ ಸಮಯ ಪಾಲನೆಯೂ ಅಷ್ಟೇ ಮುಖ್ಯ. ಪ್ರತಿ ಬಾರಿಯೂ ಉಪಾಹಾರ ಸ್ಕಿಪ್‌ ಮಾಡಿ ಮಧ್ಯಾಹ್ನ ಊಟ ಸೇವಿಸಿದಾಗ ಆಸಿಡಿಟಿ ಉಂಟಾಗಬಹುದು. ದೇಹ ನಿಷ್ಕ್ರಿಯಗೊಂಡಾಗ ಮತ್ತು ಉತ್ತಮ ಆಹಾರ ಸೇವಿಸದೇ ಇದ್ದಾಗ ಪ್ರಾಸ್ಟೇಟ್ ಅಥವಾ ಅಂಡಾಶಯದ ಕ್ಯಾನ್ಸರ್‌ನಂತಹ ವಯಸ್ಸಿಗೆ ಸಂಬಂಧಿಸಿದ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಹಿರಿಯ ನಾಗರಿಕರು ಪ್ರತಿನಿತ್ಯ ಅರ್ಧ ಗಂಟೆಗಳ ಕಾಲ ಲಘು ವ್ಯಾಯಾಮ ಅಥವಾ ಪ್ರಾಣಾಯಾಮದಂತಹ ಉಸಿರಾಟಕ್ಕೆ ಸಂಬಂಧಿಸಿದ ಸರಳವಾದ ವ್ಯಾಯಾಮಗಳನ್ನು ಮಾಡುವುದು ಅತ್ಯಗತ್ಯ. ಹೀಗೆ ಮಾಡುವುದರಿಂದ ದೇಹ ಮತ್ತು ಮನಸ್ಸನ್ನು ಸಕ್ರಿಯವಾಗಿರಿಸಲು ಮತ್ತು ಚಯಾಪಚಯವನ್ನು(metabolism) ಹೆಚ್ಚಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ.

ಸೂಪರ್‌ ಫುಡ್‌ಗಳಲ್ಲಿ ಒಂದಾದ ಹೂಕೋಸು ಸಲ್ಫರ್ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ಫ್ರೀ ರಾಡಿಕಲ್ಸ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಟೊಮೆಟೊ ತರಕಾರಿಯು ಪ್ರಬಲವಾದ ಆ್ಯಂಟಿಆಕ್ಸಿಡೆಂಟ್ ಲೈಕೋಪೀನ್‌ನಿಂದ ಸಮೃದ್ಧವಾಗಿದೆ. ಹಸಿ ಟೊಮೆಟೊಗಿಂತ ಬೇಯಿಸಿದ ಟೊಮೆಟೊ ಹೆಚ್ಚು ಲೈಕೋಪೀನ್ ಅನ್ನು ಬಿಡುಗಡೆ ಮಾಡುತ್ತದೆ. ಆದರೆ ಟೊಮೆಟೊ ಬೀಜವನ್ನು ಪಾಲಕ್ ಎಲೆಗಳೊಂದಿಗೆ ಬೆರೆಸಿ ಆಗಾಗ್ಗೆ ಸೇವಿಸುತ್ತಿದ್ದರೆ ಅದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಅದನ್ನು ತಪ್ಪಿಸಬೇಕು.

ಬೆಳ್ಳುಳ್ಳಿಯು ಅಲಿಸಿನ್‌ನಿಂದ ಸಮೃದ್ಧವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಒಂದು ಸಣ್ಣ ಹಸಿ ಬೆಳ್ಳುಳ್ಳಿ ಎಸಳನ್ನು ನೀರಿನೊಂದಿಗೆ ಸೇವಿಸುವುದು ಉತ್ತಮ. ದ್ವಿದಳ ಧಾನ್ಯಗಳು ಫೈಟೊಕೆಮಿಕಲ್ಸ್‌ನಿಂದ ತುಂಬಿದ್ದು, ಕರುಳಿನ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ. ಹಾಗೆಯೇ ನಿಂಬೆ ಮತ್ತು ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯಿಂದ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ಮತ್ತು ದೇಹದಲ್ಲಿ ಕಬ್ಬಿಣಾಂಶ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಳ್ಳು, ಆಲಿವ್ ಮತ್ತು ನೆಲಗಡಲೆಯಂತಹ ಆರೋಗ್ಯಕರ ಎಣ್ಣೆಗಳನ್ನು ಸೇವಿಸಬಹುದು. ಹೃದಯಾಘಾತದಂತಹ ಅಪಾಯಕ್ಕೆ ಕಾರಣವಾಗುವ ಡಾಲ್ಡಾದಂತಹ ಹೈಡ್ರೋಜನೀಕರಿಸಿದ ಕೊಬ್ಬುಗಳ ಸೇವನೆ ಹಾನಿಕರ. ಉರಿಯೂತ ನಿರೋಧಕ ಮತ್ತು ಆ್ಯಂಟಿಆಕ್ಸಿಡೆಂಟ್ ಎಂದು ಹೇಳಲಾಗುವ ಅರಿಶಿನ ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಿದ್ದು, ಪ್ರತಿದಿನ 1/4 ಚಮಚ ಅರಿಶಿನವನ್ನು ಬೆಚ್ಚಗಿನ ಹಾಲು ಮತ್ತು ಎರಡು ಚಿಟಿಕೆ ಕರಿಮೆಣಸಿನ ಪುಡಿಯೊಂದಿಗೆ ಮಿಶ್ರಣ ಮಾಡಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

ದೈಹಿಕ ಆರೋಗ್ಯಕ್ಕೆ ಸಮತೋಲಿತ ಆಹಾರದ ಜೊತೆಗೆ ಉತ್ತಮ ಜೀರ್ಣಕ್ರಿಯೆಗಾಗಿ ನಾರಿನಾಂಶ (ಫೈಬರ್) ಹೆಚ್ಚಿರುವ ಆಹಾರ, ಮೊಸರು ಅಥವಾ ಮಜ್ಜಿಗೆಯನ್ನು ಸೇವಿಸಬೇಕು. ಕೇವಲ ಕಾರ್ಬೋಹೈಡ್ರೇಟ್ಗಳ ಮೇಲೆ ಅವಲಂಬಿತರಾಗಬೇಡಿ, ವಿಟಮಿನ್ ಮತ್ತು ನಾರಿನಾಂಶ ಹೆಚ್ಚಿರುವ ಪಪ್ಪಾಯ ಹಾಗೂ ಸೇಬು ಹಣ್ಣುಗಳನ್ನು ಸೇವಿಸಿ. ಸಮತೋಲಿತ ದೇಹದ ತೂಕವನ್ನು ಕಾಪಾಡಿಕೊಳ್ಳಬೇಕು, ಏಕೆಂದರೆ ಬೊಜ್ಜು (ಸ್ಥೂಲಕಾಯ) ದೇಹದ ವಿವಿಧ ಅಂಗಗಳ ಮೇಲೆ ಒತ್ತಡವನ್ನು ಬೀರುವುದರಿಂದ ವಿವಿಧ ಕ್ಯಾನ್ಸರ್ಗಳಿಗೆ ಆಹ್ವಾನ ನೀಡಬಹುದು. ಮಲಬದ್ಧತೆ ಸಮಸ್ಯೆ ಇದ್ದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ, ಅದು ಕರುಳಿನ ಕ್ಯಾನ್ಸರ್ (colon cancer) ಗೆ ಕಾರಣವಾಗಬಹುದು. ಯಾವುದೇ ಆರೋಗ್ಯ ಸಮಸ್ಯೆ ಇರಲಿ ಆರಂಭದಲ್ಲೇ ನಿಗಾ ವಹಿಸಬೇಕು, ರೋಗಲಕ್ಷಣಗಳಿದ್ದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ. ನಮ್ಮ ಬದುಕಿನ ಸುಂದರ ಸರಳ ಸೂತ್ರ ಹೇಗಿರಬೇಕು ಎಂದರೆ ʼಆರೋಗ್ಯಕರ ಆಹಾರ ಪದ್ಧತಿಯಿಂದ ಆರಂಭಗೊಳ್ಳಬೇಕುʼ. ಮೂರು ವರ್ಷದ ಮಗು ಸಹ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಸರಿಯಾದ ಅಹಾರ ಕ್ರಮವನ್ನು ಪಾಲಿಸಲು ನಿಗದಿತ ವಯಸ್ಸಿನ ಮಿತಿ ಇರುವುದಿಲ್ಲ. ಬದಲಿಗೆ ನೀವು ಇಂದು ಆಯ್ಕೆ ಮಾಡುವ ಆಹಾರವು ನಿಮ್ಮ ನಾಳಿನ ಆರೋಗ್ಯವನ್ನು ನಿರ್ಧರಿಸುತ್ತದೆ ಎನ್ನುತ್ತಾರೆ ವಾಸವಿ ಆಸ್ಪತ್ರೆಯ ಆಹಾರ ತಜ್ಞೆ ಡಾ. ಸುನಿತಾ ಎನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.