ADVERTISEMENT

ಬಟ್ಟೆ ಮಾಸ್ಕ್ ಪ್ರತಿದಿನ ತೊಳೆದರೆ ಮಾತ್ರ ರಕ್ಷಣೆ: ಅಧ್ಯಯನ

ಪಿಟಿಐ
Published 12 ಅಕ್ಟೋಬರ್ 2020, 12:40 IST
Last Updated 12 ಅಕ್ಟೋಬರ್ 2020, 12:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮೆಲ್ಬರ್ನ್: ಕೋವಿಡ್‌–19ಗೆ ಕಾರಣವಾಗಬಲ್ಲ ವೈರಸ್‌ಗಳ ಹರಡುವಿಕೆಯನ್ನು ಕಡಿಮೆಗೊಳಿಸಬಲ್ಲ ಬಟ್ಟೆಯ ಮಾಸ್ಕ್‌ಗಳನ್ನು ನಿತ್ಯವೂ ಬಿಸಿನೀರಿನಲ್ಲಿ ಒಗೆದು ಸ್ವಚ್ಛಗೊಳಿಸಿದರೆ ಮಾತ್ರ ಅವು ವೈರಸ್‌ನಿಂದ ರಕ್ಷಣೆ ನೀಡಬಲ್ಲವು ಎಂದು ಅಧ್ಯಯನವೊಂದು ತಿಳಿಸಿದೆ.

‘ಬಟ್ಟೆ ಮಾಸ್ಕ್ ಹಾಗೂ ಸರ್ಜಿಕಲ್ ಮಾಸ್ಕ್ ಎರಡನ್ನೂ ಬಳಸಿದ ಬಳಿಕ ಕಲುಷಿತ ಎಂದೇ ಪರಿಗಣಿಸಬೇಕು’ ಎಂದು ಆಸ್ಟೇಲಿಯಾದ ನ್ಯೂಸೌತ್ ವೇಲ್ಸ್ ವಿಶ್ವವಿದ್ಯಾಲಯದ ಪ್ರೊ. ರೈನಾ ಮ್ಯಾಕ್‌ಇಂಟೈರ್ ಹೇಳಿದ್ದಾರೆ.

‘ಸರ್ಜಿಕಲ್ ಮಾಸ್ಕ್ ಅನ್ನು ಒಮ್ಮೆ ಬಳಸಿದ ಬಳಿಕ ಬಿಸಾಡಲಾಗುತ್ತದೆ. ಆದರೆ, ಬಟ್ಟೆಯ ಮಾಸ್ಕ್ ಅನ್ನು ಮಾತ್ರ ಮತ್ತೆ ಬಳಸಲಾಗುತ್ತದೆ. ಬಟ್ಟೆಯ ಮಾಸ್ಕ್‌ ಅನ್ನು ತ್ವರಿತವಾಗಿ ಕೈಯಲ್ಲೇ ತೊಳೆದು ಮತ್ತೆ ಮತ್ತೆ ಅದನ್ನೇ ಬಳಸಲಾಗುತ್ತದೆ. ಆದರೆ, ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ’ ಎಂದು ಪ್ರೊ.ರೈನಾ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.

ADVERTISEMENT

ವೈರಸ್ ಸೋಂಕನ್ನು ತಡೆಗಟ್ಟುವಲ್ಲಿ ಮಾಸ್ಕ್‌ಗಳ ಪಾತ್ರದ ಕುರಿತು 2011 ಮತ್ತು 2015ರಲ್ಲಿ ಪ್ರಕಟವಾಗಿದ್ದ ಸಂಶೋಧನೆಯ ದತ್ತಾಂಶಗಳನ್ನು ಸಂಶೋಧಕರ ತಂಡ ಬಳಸಿಕೊಂಡಿತ್ತು. ಈ ಹಿಂದಿನ ಅಧ್ಯಯನದಲ್ಲಿ ಸಾರ್ಸ್ ಮತ್ತು ಕೊವೊ–2 ವೈರಸ್‌ಗಳ ಬಗ್ಗೆ ಸಂಶೋಧನೆ ನಡೆಸಿರಲಿಲ್ಲ. ಆದರೆ, ಈ ಬಾರಿಯ ಅಧ್ಯಯನದಲ್ಲಿ ಈ ಎರಡೂ ವೈರಸ್‌ಗಳ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿತ್ತು. ಆರೋಗ್ಯ ಕಾರ್ಯಕರ್ತರು ಮಾಸ್ಕ್ ಒಗೆಯುವ ಕುರಿತೂ ಅಧ್ಯಯನದಲ್ಲಿ ಗಮನಿಸಲಾಗಿತ್ತು.

‘ಆರೋಗ್ಯ ಕಾರ್ಯಕರ್ತರು ತಮ್ಮ ಕೈಯಾರೆ ಒಗೆಯುವ ಬಟ್ಟೆಯ ಮಾಸ್ಕ್‌ಗಳು ವೈರಸ್‌ನಿಂದ ಹೆಚ್ಚಿನ ರಕ್ಷಣೆ ನೀಡಲಾರವು. ಇದು ಜನಸಾಮಾನ್ಯರಿಗೂ ಅನ್ವಯವಾಗುತ್ತದೆ. ಆದರೆ, ಆಸ್ಪತ್ರೆಯ ಲಾಂಡ್ರಿಯಲ್ಲಿ ಸ್ವಚ್ಛವಾಗುವ ಬಟ್ಟೆಯ ಮಾಸ್ಕ್‌ಗಳು ಸರ್ಜಿಕಲ್ ಮಾಸ್ಕ್‌ಗಳಷ್ಟೇ ಪರಿಣಾಮಕಾರಿಯಾಗಿರುತ್ತವೆ’ ಎಂದು ಸಂಶೋಧಕರು ಹೇಳಿದ್ದಾರೆ.

‘ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 60 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿ ನೀರಿನಲ್ಲಿ ಬಟ್ಟೆಯ ಮಾಸ್ಕ್‌ಗಳನ್ನು ನೆನೆಸಿ, ಸೋಪಿನ ಪುಡಿ ಹಾಕಿ ವಾಷಿಂಗ್‌ ಮಷೀನ್‌ನಲ್ಲಿ ತೊಳೆಯಬೇಕು. ಇದನ್ನು ನಮ್ಮ ತಂಡದ ವಿಶ್ಲೇಷಣೆ ಬೆಂಬಲಿಸುತ್ತದೆ’ ಎಂದು ಪ್ರೊ.ರೈನಾ ಹೇಳಿದ್ದಾರೆ.

‘ಬಟ್ಟೆಯ ಮಾಸ್ಕ್‌ಗಳು ವೈರಸ್ ಹರಡುವಿಕೆಯನ್ನು ತಡೆಗಟ್ಟಬಲ್ಲವು. ಆದರೆ, ಒಮ್ಮೆ ಬಳಸಿದ ನಂತರ ಅವುಗಳ ಕಾರ್ಯಕ್ಷಮತೆ ಕ್ಷೀಣವಾಗಿರುತ್ತದೆ. ಹಾಗಾಗಿ, ಪ್ರತಿಬಾರಿಯೂ ಧರಿಸುವ ಮುನ್ನ ಬಟ್ಟೆಯ ಮಾಸ್ಕ್‌ಗಳನ್ನು ಚೆನ್ನಾಗಿ ತೊಳೆದೇ ಬಳಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.