
ಚಿತ್ರ: ಗೆಟ್ಟಿ
ಎಳನೀರು ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ಪಾನೀಯವಾಗಿದೆ. ಎಳನೀರು ನೈಸರ್ಗಿಕ ಸಿಹಿ ಹಾಗೂ ಖನಿಜಗಳಿಂದ ಕೂಡಿರುತ್ತದೆ. ಇದನ್ನು ಆರೋಗ್ಯಕರ ಪಾನೀಯ ಎಂದು ಪರಿಗಣಿಸಿ ಪೋಷಕರು ತಮ್ಮ 1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ಕೊಡಬಹುದಾ? ಎಂದು ಯೋಚಿಸುತ್ತಾರೆ.
ಎಳನೀರು ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲಾ ವಯೋಮಾನದವರಿಗೂ ಆರೋಗ್ಯಕರವಾಗಿದ್ದರೂ, ಇದನ್ನು ಒಂದು ವರ್ಷದೊಳಗಿನ ಮಕ್ಕಳಿಗೆ ಕೊಡುವುದು ಉತ್ತಮವೇ? ಎಂಬುದನ್ನು ತಿಳಿಯೋಣ
ಒಂದು ವರ್ಷದೊಳಗಿನ ಮಕ್ಕಳಿಗೆ ಎಳನೀರು ಏಕೆ ಕೊಡಬಾರದು?
ಮೊದಲ ಒಂದು ವರ್ಷದೊಳಗೆ ಮಗುವಿನ ಹೊಟ್ಟೆ, ಮೂತ್ರಪಿಂಡ ಹಾಗೂ ರೋಗನಿರೋಧಕ ಶಕ್ತಿಯ ವ್ಯವಸ್ಥೆ ಸೂಕ್ಷ್ಮವಾಗಿರುತ್ತದೆ. ಇದರಿಂದಾಗಿ ಮೊದಲ 6 ತಿಂಗಳುಗಳವರೆಗೆ ತಾಯಿಯ ಹಾಲನ್ನು ಮಾತ್ರ ಮಗುವಿಗೆ ಶಿಫಾರಸ್ಸು ಮಾಡಲಾಗುತ್ತದೆ.
6 ತಿಂಗಳ ನಂತರ ಕ್ರಮೇಣವಾಗಿ ಘನ ಆಹಾರವನ್ನು ಮಗುವಿಗೆ ಕೊಡಲು ಪ್ರಾರಂಭಿಸಬೇಕು. ಒಂದು ವರ್ಷದ ವೇಳೆಗೆ ಘನ ಆಹಾರವೇ ಮಗುವಿನ ಪ್ರಧಾನ ಆಹಾರ ಮೂಲವಾಗುತ್ತದೆ. ಎಳನೀರು, ಹಣ್ಣಿನ ರಸ ಮುಂತಾದ ಇತರ ಪಾನೀಯಗಳನ್ನು ನೀಡುವುದರಿಂದ ಮಗುವಿನ ಆಹಾರ ಸೇವನೆಗೆ ಅಡ್ಡಿಯಾಗಬಹುದು.
ಇವುಗಳು ಮಗುವಿನ ಎಲೆಕ್ಟ್ರೋಲೈಟ್ ಸಮತೋಲನ ಅಥವಾ ಜೀರ್ಣಕ್ರಿಯೆಯನ್ನು ಹಾಳುಮಾಡಬಹುದು. ಆದ್ದರಿಂದ ಅನೇಕ ವೈದ್ಯರು ಮಗುವಿನ ಬೆಳವಣಿಗೆಯ ದೃಷ್ಟಿಯಿಂದ ಒಂದು ವರ್ಷ ತುಂಬುವವರೆಗೂ ಎಳೆನೀರು ಕೊಡಬಾರದು ಎಂದು ಹೇಳುತ್ತಾರೆ.
ಎಳನೀರಿನಲ್ಲಿ ಪೊಟ್ಯಾಸಿಯಮ್, ಸೋಡಿಯಂ ಮತ್ತು ಇತರೆ ಖನಿಜಗಳಿರುತ್ತವೆ. ಮಕ್ಕಳ ಮೂತ್ರಪಿಂಡ ಎಲೆಕ್ಟ್ರೋಲೈಟ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿಭಾಯಿಸುವಷ್ಟು ಬಲವಾಗಿರುವುದಿಲ್ಲ. ಎಳನೀರು ಕೊಡುವುದರಿಂದ ಮಗುವಿನ ಮೂತ್ರಪಿಂಡಗಳ ಮೇಲೆ ಅಧಿಕ ಹೊರೆ ಬೀಳಬಹುದಾಗಿದೆ.
ಒಂದು ವರ್ಷದೊಳಗಿನ ಮಕ್ಕಳಿಗೆ ಅಪಕ್ವವಾದ ಜೀರ್ಣಾಂಗ ವ್ಯವಸ್ಥೆ ಇರುತ್ತದೆ. ಎಳನೀರು ನೈಸರ್ಗಿಕ ಪಾನೀಯವಾದರೂ, ತಾಯಿಯ ಹಾಲಿಗೆ ಹೋಲಿಸಿದರೆ, ಮಗುವಿಗೆ ಜೀರ್ಣಿಸಲು ಕಷ್ಟವಾಗುತ್ತದೆ.
ಎಳನೀರು ಕುಡಿಯುವುದರಿಂದ ಈ ಸಮಸ್ಯೆಗಳು ಉಂಟಾಗಬಹುದು:
ಮಗುವಿಗೆ ಬೇಧಿ
ಹೊಟ್ಟೆ ನೋವು
ಹೊಟ್ಟೆ ಉಬ್ಬರ
ಅಪರೂಪದ ಸಂದರ್ಭಗಳಲ್ಲಿ ಅಲರ್ಜಿ
ಸೋಂಕಿನ ಅಪಾಯ
ಮಕ್ಕಳಿಗೆ ಎಳನೀರು ಯಾವಾಗ ಸುರಕ್ಷಿತವಾಗಿದೆ?
ಎಳನೀರನ್ನು 1 ವರ್ಷದ ನಂತರ ಮಗುವಿಗೆ ಕೊಡುವುದು ಸುರಕ್ಷಿತವಾಗಿದೆ. ಮೊದಲ ಹುಟ್ಟುಹಬ್ಬದ ನಂತರ, ಮಗುವಿನ ಮೂತ್ರಪಿಂಡ, ಹೊಟ್ಟೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚು ಬಲವಾಗಿರುತ್ತದೆ. ಆಗ ಸಣ್ಣ ಪ್ರಮಾಣದಲ್ಲಿ ಎಳನೀರನ್ನು ಮಗುವಿಗೆ ಕೊಡಬಹುದು.
1 ವರ್ಷದ ನಂತರವೂ ಎಳನೀರನ್ನು ಮಿತವಾಗಿ ಕೊಡಬೇಕು. ವಯಸ್ಸಿಗೆ ತಕ್ಕಂತೆ ದಿನಕ್ಕೆ ಅರ್ಧ ಕಪ್‌ನಿಂದ ಒಂದು ಕಪ್ ಮೀರುವಂತಿಲ್ಲ.
ಪೋಷಕರಲ್ಲಿನ ತಪ್ಪು ಕಲ್ಪನೆಗಳು:
ನೈಸರ್ಗಿಕವಾದದ್ದು ಸುರಕ್ಷಿತ: ನೈಸರ್ಗಿಕವಾದದ್ದು ಯಾವಾಗಲೂ ಶಿಶುಗಳಿಗೆ ಸೂಕ್ತವಾಗಿರುವುದಿಲ್ಲ. ದೊಡ್ಡವರು ಜೀರ್ಣಿಸಬಹುದಾದ ಆಹಾರ ಮಕ್ಕಳು ಜೀರ್ಣಿಸಲು ಸಾಧ್ಯವಿಲ್ಲ.
ಮಗುವಿನ ದೇಹವನ್ನು ತಂಪುಗೊಳಿಸುತ್ತದೆ: ಎಳನೀರು ಮಕ್ಕಳ ದೇಹವನ್ನು ತಂಪುಗೊಳಿಸುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ವಾಸ್ತವವಾಗಿ, ಇದು ಮಕ್ಕಳ ದ್ರವ ಮತ್ತು ಲವಣದ ಸಮತೋಲನವನ್ನು ಹಾಳುಮಾಡಬಹುದು.
ಮಲಬದ್ಧತೆಗೆ ಸಹಾಯ ಮಾಡುತ್ತದೆ: ಇಲ್ಲ. ಒಂದು ವರ್ಷದೊಳಗೆ ಎಳನೀರು ಕೊಡುವುದರಿಂದ ಅತಿಸಾರ ಅಥವಾ ಜೀರ್ಣಕ್ರಿಯೆ ಸಮಸ್ಯೆಗಳು ಹೆಚ್ಚಾಗಬಹುದು.
ಬದಲಾಗಿ ನೀವು ಏನು ಕೊಡಬಹುದು:
6 ತಿಂಗಳ ವರೆಗೆ: ಕೇವಲ ತಾಯಿಯ ಹಾಲು ಮಾತ್ರ ನೀಡುವುದು.
6 ರಿಂದ 12 ತಿಂಗಳು: ತಾಯಿಯ ಹಾಲು ಹಾಗೂ ವೈದ್ಯರ ಸಲಹೆಯ ಮೇರೆಗೆ ಮ್ಯಾಶ್ ಮಾಡಿದ ಹಣ್ಣು, ತರಕಾರಿ, ಗಂಜಿ, ಬೇಳೆ ಹಾಗೂ ಅನ್ನ ಮುಂತಾದ ಘನ ಆಹಾರಗಳನ್ನು ನೀಡುವುದು ಉತ್ತಮ.
(ಡಾ. ಮಂಜುನಾಥ್ ಜಿ, ಕನ್ಸಲ್ಟೆಂಟ್ – ನವಜಾತ ಶಿಶು ತಜ್ಞ ಮತ್ತು ಮಕ್ಕಳ ವೈದ್ಯರು, ರೇನ್‌ಬೋ ಮಕ್ಕಳ ಆಸ್ಪತ್ರೆ, ಸರಜಾಪುರ ರಸ್ತೆ)