ADVERTISEMENT

ಸಿಗರೇಟ್‌ನಿಂದ ಒಲೆಯವರೆಗೆ: ಭಾರತದಲ್ಲಿ ಸಿಒಪಿಡಿಗೆ ಇವೆ ಹಲವು ಮುಖಗಳು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 12:27 IST
Last Updated 24 ನವೆಂಬರ್ 2025, 12:27 IST
<div class="paragraphs"><p>ಚಿತ್ರ: ಗಿಟ್ಟಿ</p></div>
   

ಚಿತ್ರ: ಗಿಟ್ಟಿ

ಜನರು ಸಿಒಪಿಡಿ (Chronic Obstructive Pulmonary Disease - ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ) ಎಂಬ ಪದವನ್ನು ಕೇಳಿದಾಕ್ಷಣ ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ ಸಿಗರೇಟ್‌ ಅಥವಾ ಧೂಮಪಾನ. ಧೂಮಪಾನ ಇದಕ್ಕೆ ಒಂದು ಪ್ರಮುಖ ಕಾರಣವಾಗಿದ್ದರೂ, ಭಾರತದಲ್ಲಿ ಈ ಸಮಸ್ಯೆ ಹೆಚ್ಚು ಸಂಕೀರ್ಣವಾಗಿದೆ. ಇಲ್ಲಿ ಸಿಒಪಿಡಿಗೆ ಅನೇಕ ಮುಖಗಳಿವೆ. ಅನೇಕ ಪ್ರಚೋದಕಗಳಿವೆ. ತಮ್ಮ ಜೀವನದಲ್ಲಿ ಯಾವತ್ತೂ ಸಿಗರೇಟ್ ಮುಟ್ಟದ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿದೆ. ನಿಜಾಂಶವೆಂದರೆ, ಜಾಗತಿಕವಾಗಿ ಭಾರತಕ್ಕೆ ಸಿಒಪಿಡಿ ಒಂದು ಅತಿದೊಡ್ಡ ಹೊರೆಯಾಗಿದೆ. ತಂಬಾಕು ಮಾತ್ರವಲ್ಲದೆ, ಮನೆಯ ಹೊಗೆ, ಮಾಲಿನ್ಯ, ಔದ್ಯೋಗಿಕ ವಾತಾವರಣ ಮತ್ತು ದೀರ್ಘಕಾಲದ ಸೋಂಕುಗಳಿಂದಲೂ ಈ ಆರೋಗ್ಯದ ಸಮಸ್ಯೆ ಉದ್ಭವಿಸುತ್ತದೆ.

ಭಾರತದಲ್ಲಿ ಸಿಒಪಿಡಿ ಏಕೆ ಸಾಮಾನ್ಯ?

ADVERTISEMENT

ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಸಿಒಪಿಡಿ ಎಂದರೆ ಅದು ಬಹುತೇಕ ಧೂಮಪಾನಕ್ಕೆ ಸಮಾನಾರ್ಥಕ ಶಬ್ದ. ಇದಕ್ಕೆ ವಿಭಿನ್ನವಾಗಿ, ಭಾರತದಲ್ಲಿ ಆ ಸನ್ನಿವೇಶ ಇಲ್ಲ. ತಂಬಾಕು, ಧೂಮಪಾನ ಮತ್ತು ಹೊಗೆ ಸಿಒಪಿಡಿಗೆ ದೊಡ್ಡ ಕಾರಣಗಳಾದರೂ, ಅವು ಸಮಸ್ಯೆಯ ಒಂದು ಭಾಗ ಮಾತ್ರ. ದೇಶದ ಗ್ರಾಮೀಣ ಮತ್ತು ಅರೆ-ನಗರ ಭಾಗಗಳಲ್ಲಿ, ಕಟ್ಟಿಗೆ, ಹಸುವಿನ ಸಗಣಿ ಅಥವಾ ಇದ್ದಿಲನ್ನು ಬಳಸಿ ಒಲೆಗಳಲ್ಲಿ ಅಡುಗೆ ಮಾಡುವುದರಿಂದ ಅಪಾರ ಪ್ರಮಾಣದ ಹೊಗೆ ಉತ್ಪತ್ತಿಯಾಗುತ್ತದೆ. ಸೂಕ್ತವಾಗಿ ಗಾಳಿಯಾಡದ ಅಡುಗೆ ಮನೆಗಳಲ್ಲಿ ವರ್ಷಗಳ ಕಾಲ ಕಳೆಯುವ ಮಹಿಳೆಯರು, ಪ್ರತಿದಿನ ಈ ಹೊಗೆಯನ್ನೇ ಉಸಿರಾಡುತ್ತಾರೆ. ಇದು ಧೂಮಪಾನಿಗಳಂತೆ ಸಿಒಪಿಡಿ ಆರಂಭವಾಗುವ ಸಮಾನ ಅಪಾಯವನ್ನು ಉಂಟುಮಾಡುತ್ತದೆ.

ನಗರ ಪರಿಸರದ ಸವಾಲುಗಳೇ ವಿಭಿನ್ನ. ಹೆಚ್ಚುತ್ತಿರುವ ವಾಯುಮಾಲಿನ್ಯ, ಕಟ್ಟಡ ನಿರ್ಮಾಣ ಪರಿಸರದ ಧೂಳು, ಸಂಚಾರ ದಟ್ಟಣೆಯಿಂದ ಉತ್ಪತ್ತಿಯಾಗುವ ಹೊಗೆ ಮತ್ತು ದೂಳಿನ ಕಣಗಳು ಶ್ವಾಸಕೋಶಗಳನ್ನು ನಿಧಾನವಾಗಿ ಮತ್ತು ನಿರಂತರವಾಗಿ ಹಾನಿಗೊಳಪಡಿಸುತ್ತವೆ. ಕಲುಷಿತ ಗಾಳಿಗೆಯಿಂದ ಕಿರಿಯ ವಯಸ್ಸಿನ ವ್ಯಕ್ತಿಗಳೂ, ಈಗ ಆರಂಭಿಕ ಉಸಿರಾಟದ ತೊಂದರೆ, ದೀರ್ಘಕಾಲದ ಕೆಮ್ಮು ಮತ್ತು ಉಬ್ಬಸವನ್ನು ಅನುಭವಿಸುತ್ತಾರೆ.

ಸಿಒಪಿಡಿ ಹೇಗೆ ಬೆಳೆಯುತ್ತದೆ?

ಸಿಒಪಿಡಿ ದೀರ್ಘಕಾಲದಲ್ಲಿ ಗಂಭೀರವಾಗುವ ಕಾಯಿಲೆಯಾಗಿದ್ದು, ಇದು ವಾಯು ಮಾರ್ಗಗಳು ಮತ್ತು ಶ್ವಾಸಕೋಶದ ಅಂಗಾಂಶಗಳ ಮೇಲೆ ಪರಿಣಾಮ ಬೀರುತ್ತದೆ. ಕಾಲಾನಂತರದಲ್ಲಿ, ಹೊಗೆ ಅಥವಾ ಮಾಲಿನ್ಯಕಾರಕಗಳಂತಹ ಉದ್ರೇಕಕಾರಿ ಕಣಗಳು ಶ್ವಾಸಕೋಶದೊಳಗೆ ಉರಿಯೂತ ಉಂಟುಮಾಡುತ್ತವೆ. ಇದು ವಾಯುಮಾರ್ಗಗಳ ಕಿರಿದಾಗುವಿಕೆ ಮತ್ತು ಗಾಳಿಯ ಚೀಲಗಳ ನಾಶಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಈ ಕೆಳಗಿನ ಲಕ್ಷಣಗಳು ಕಂಡುಬರುತ್ತವೆ. ಅವುಗಳೆಂದರೆ,

  • ನಿರಂತರ ಕೆಮ್ಮು ಮತ್ತು ಶೀತ

  • ಕೆಲಸದ ವೇಳೆ ಉಸಿರಾಟದ ತೊಂದರೆ

  • ಅಸ್ತಮಾ

  • ಪದೇ ಪದೇ ಉಸಿರಾಟದ ಸೋಂಕುಗಳು

  • ಆಯಾಸ ಅಥವಾ ನಿಶ್ಯಕ್ತಿ

ಧೂಮಪಾನ ನೇರ ರಾಸಾಯನಿಕಗಳ ಮೂಲಕ ಶ್ವಾಸಕೋಶವನ್ನು ದುರ್ಬಲಗೊಳಿಸುತ್ತದೆಯಾದರೂ, ಒಲೆಯ ಹೊಗೆ ಮತ್ತು ಮಾಲಿನ್ಯ, ಉಸಿರಾಟದ ವ್ಯವಸ್ಥೆಯೊಳಗೆ ಆಳವಾಗಿ ತಲುಪುವ ಸೂಕ್ಷ್ಮ ಕಣಗಳನ್ನು ಬಿಡುಗಡೆ ಮಾಡುವ ಮೂಲಕ, ಇದೇ ರೀತಿಯ ಪರಿಣಾಮವನ್ನು ಬೀರುತ್ತದೆ. ದೀರ್ಘಕಾಲದಲ್ಲಿಇದು ಅತ್ಯಂತ ಅಪಾಯಕಾರಿಯಾಗಬಹುದು. ಏಕೆಂದರೆ ರೋಗ ಲಕ್ಷಣಗಳು ಗಮನಕ್ಕೆ ಬರುವ ಮೊದಲು ವರ್ಷಗಳವರೆಗೆ ಶ್ವಾಸಕೋಶಕ್ಕೆ ಸಾಕಷ್ಟು ಹಾನಿಯಾಗಿದೆ.

ಸಿಒಪಿಡಿಯನ್ನು ಮೊದಲೇ ಏಕೆ ಗುರುತಿಸಲಾಗುವುದಿಲ್ಲ?

ಎಷ್ಟೋ ದಶಕಗಳಿಂದ, ವಿಶೇಷವಾಗಿ ಮಹಿಳೆಯರು ಮತ್ತು ಇಳಿ ವಯಸ್ಸಿನವರಲ್ಲಿ ಉಸಿರಾಟದ ತೊಂದರೆ ಸಾಮಾನ್ಯವಾಗಿದೆ. ಅನೇಕರು ಇದನ್ನು ಕೇವಲ ‘ವಯಸ್ಸು’, ‘ಸುಸ್ತು’ ಅಥವಾ ‘ಶಕ್ತಿ ಹೀನತೆ’ ಎಂದೆಲ್ಲಾ ಭಾವಿಸುತ್ತಾರೆ. ನಗರ ಪ್ರದೇಶಗಳಲ್ಲಿ ಜನರು ವಾತಾವರಣದಲ್ಲಾಗುವ ಬದಲಾವಣೆಗಳಿಂದ ಎಂದುಕೊಂಡು ಮಾಲಿನ್ಯದಿಂದ ಆರಂಭವಾಗುವ ಕೆಮ್ಮನ್ನು ನಿರ್ಲಕ್ಷಿಸಿ ಮುಂದುವರೆಯುತ್ತಾರೆ. ಧೂಮಪಾನಿಗಳಲ್ಲದವರಿಗೂ ಸಿಒಪಿಡಿ ಬರಬಹುದು ಎಂಬ ಅರಿವಿನ ಕೊರತೆಯೂ ಇದೆ. ಇದರಿಂದ ರೋಗ ಪತ್ತೆ ವಿಳಂಬವಾಗುತ್ತದೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.

ದೀರ್ಘಕಾಲದ ಕೆಮ್ಮು ಅಥವಾ ಉಸಿರಾಟದ ತೊಂದರೆಗೆ ಸಂಬಂಧಿಸಿದ ಕೆಲವೊಂದು ಮೂಢನಂಬಿಕೆಗಳೂ ಇದರ ಪತ್ತೆಗೆ ಮತ್ತೊಂದು ಅಡ್ಡಿಯಾಗಿವೆ. ತಮಗೆ ಧೂಮಪಾನಿಗಳು ಅಥವಾ ‘ರೋಗಿಗಳು’ ಎಂದು ಹಣೆಪಟ್ಟಿ ಕಟ್ಟಬಹುದೆಂಬ ಭಯದಿಂದ ಅನೇಕರು ವೈದ್ಯರ ಸಹಾಯ ಪಡೆಯಲು ಹಿಂಜರಿಯುತ್ತಾರೆ.

ಸಿಓಪಿಡಿಯನ್ನು ತಡೆಯಲು ಅಥವಾ ವಿಳಂಬಗೊಳಿಸಲು ಏನು ಮಾಡಬಹುದು?

ವಾತಾವರಣವನ್ನು ಸಂಪೂರ್ಣವಾಗಿ ಬದಲಿಸಲು ಕಷ್ಟವಾದರೂ, ಶ್ವಾಸಕೋಶದ ಆರೋಗ್ಯವನ್ನು ರಕ್ಷಿಸಲು ಹಲವಾರು ಕ್ರಮಗಳು ಸಹಾಯ ಮಾಡಬಲ್ಲವು. ಅವುಗಳೆಂದರೆ,

  • ಹೊಗೆಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಿ: ಎಲ್‌ಪಿಜಿಯಂತಹ ಸ್ವಚ್ಛ ಅಡುಗೆ ಇಂಧನಗಳನ್ನು ಬಳಸಿ, ಗಾಳಿಯಾಡುವಂತೆ ನೋಡಿಕೊಳ್ಳಿ ಅಥವಾ ಹೊಗೆ ರಹಿತ ಒಲೆಗಳನ್ನು ಆರಿಸಿಕೊಳ್ಳಿ.

  • ಧೂಮಪಾನವ ಮಾಡಬೇಡಿ: ಧೂಮಪಾನ ತ್ಯಜಿಸಿ ಮತ್ತು ಸಾಧ್ಯವಾದಷ್ಟು ಧೂಮಪಾನಿಗಳಿಂದ ದೂರವಿರಿ.

  • ಮಾಲಿನ್ಯದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ: ಹೆಚ್ಚು ಮಾಲಿನ್ಯವಾದ ಪ್ರದೇಶಗಳಲ್ಲಿ ಮಾಸ್ಕ್‌ಗಳನ್ನು ಬಳಸಿ ಮತ್ತು ಕೆಟ್ಟ ಗಾಳಿಯಿಂದ ದೂರವಿರಿ.

  • ನಿಮ್ಮ ಶ್ವಾಸಕೋಶವನ್ನು ಬಲಪಡಿಸುವುದು: ನಿಯಮಿತ ವಾಕಿಂಗ್, ಉಸಿರಾಟದ ವ್ಯಾಯಾಮಗಳು ಮತ್ತು ಯೋಗವು ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

  • ಆರಂಭಿಕ ಸ್ಕ್ರೀನಿಂಗ್: ದೀರ್ಘಕಾಲದ ಕೆಮ್ಮು, ಉಸಿರಾಟದ ತೊಂದರೆ ಅನುಭವಿಸುವ ಅಥವಾ ಹೊಗೆಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವ ಜನರು ಸ್ಪಿರೊಮೆಟ್ರಿಯಂತಹ ಶ್ವಾಸಕೋಶದ ಕಾರ್ಯನಿರ್ವಹಣೆಯನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು.

  • ಸಕಾಲಿಕ ಚಿಕಿತ್ಸೆ: ಇನ್‌ಹೇಲರ್‌ಗಳು, ಔಷಧಿಗಳು ಮತ್ತು ಜೀವನಶೈಲಿಯ ಬದಲಾವಣೆಗಳು ರೋಗಲಕ್ಷಣಗಳನ್ನು ನಿಯಂತ್ರಿಸಬಹುದು ಮತ್ತು ಮೊದಲೇ ಅನುಸರಿಸಿದರೆ ಅಪಾಯದಿಂದ ತಪ್ಪಿಸಿಕೊಳ್ಳಬಹುದು.

ಜಾಗೃತಿ ಏಕೆ ಮುಖ್ಯ?

ಸಿಒಪಿಡಿ ಕೇವಲ ಧೂಮಪಾನಿಗಳ ಕಾಯಿಲೆಯಲ್ಲ. ಇದು ಭಾರತದ ಅಡುಗೆ ವಿಧಾನ, ಜೀವನ ಶೈಲಿ, ಪ್ರಯಾಣ ಮತ್ತು ಕೆಲಸ ಮಾಡುವ ರೀತಿಯಿಂದ ರೂಪುಗೊಂಡ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆ. ಸಿಒಪಿಡಿಯನ್ನು ಗುರುತಿಸುವುದರಿಂದ ಜನರು ಶೀಘ್ರವಾಗಿ ಸಹಾಯ ಪಡೆಯಲು ಮತ್ತು ರಕ್ಷಣಾ ಕ್ರಮಗಳನ್ನು ಅನುಸರಿಸಲು ಸಹಾಯವಾಗುತ್ತದೆ. ಶ್ವಾಸಕೋಶದ ಆರೋಗ್ಯ ನಮ್ಮ ದೈನಂದಿನ ಪರಿಸರದಿಂದ ಆಳವಾಗಿ ಪ್ರಭಾವಿತವಾಗಿದೆ ಎಂದು ನಾವು ಅರ್ಥಮಾಡಿಕೊಂಡಾಗ ಮಾತ್ರ ನಾವು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬಹುದು. ಈ ಕಾಯಿಲೆಗೆ ತುತ್ತಾಗುವ ಜನರನ್ನು ರಕ್ಷಿಸಬಹುದು ಮತ್ತು ಸ್ವಚ್ಛ, ಆರೋಗ್ಯಕರ ಪರಿಸರಕ್ಕಾಗಿ ಕೆಲಸ ಮಾಡಬಹುದು.

ಸಿಒಪಿಡಿ ದೀರ್ಘಕಾಲದ್ದಾಗಿರಬಹುದು. ಆದರೆ ಇದನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದೇನಲ್ಲ. ವಿಶೇಷವಾಗಿ ಮುಂಚಿತವಾಗಿ ಪತ್ತೆಯಾದಾಗ ಇದರ ನಿರ್ವಹಣೆ ಖಂಡಿತಾ ಸಾಧ್ಯವಿದೆ. ಜಾಗೃತಿ, ಆರಂಭಿಕ ಕ್ರಮ ಮತ್ತು ಸ್ವಚ್ಛ ಜೀವನದ ಅಭ್ಯಾಸಗಳೊಂದಿಗೆ ನಾವು ಸದ್ದಿಲ್ಲದೆ ಬೆಳೆಯುತ್ತಿರುವ ರೋಗದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು.

(ಡಾ.ಅನಿಕಾ ಪರಿಕ್ಕರ್, ಅಸೋಸಿಯೇಟ್ ಕನ್ಸಲ್ಟೆಂಟ್, ಇಂಟರ್ವೆನ್ಷನಲ್ ಪಲ್ಮನಾಲಜಿ ಮತ್ತು ಶ್ವಾಸಕೋಶ ಕಸಿ ವಿಭಾಗ, ಆಸ್ಟರ್ ಆಸ್ಪತ್ರೆ, ವೈಟ್‌ಫೀಲ್ಡ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.