ADVERTISEMENT

ಎಲ್ಲ ನೆಗಡಿ, ಕೆಮ್ಮೂ ಕೊರೊನಾ ಅಲ್ಲ...!

ಡಾ.ಲಕ್ಷ್ಮಣ ವಿ.ಎ.
Published 21 ಮಾರ್ಚ್ 2020, 2:16 IST
Last Updated 21 ಮಾರ್ಚ್ 2020, 2:16 IST
ಎಲ್ಲಾ  ನೆಗಡಿ ಕೆಮ್ಮು ಕೊರೊನಾ ಅಲ್ಲ
ಎಲ್ಲಾ ನೆಗಡಿ ಕೆಮ್ಮು ಕೊರೊನಾ ಅಲ್ಲ   

ನ್ಯಾಷನಲ್ ಜಿಯಾಗ್ರಾಫಿಕ್ ಚಾನೆಲ್‌ನಲ್ಲಿ ಆಫ್ರಿಕಾದ ಮಸಾಯ್ ಮಾರಾ ಕಾಡಿನಲ್ಲಿ ಹಸಿದ ಹುಲಿಗಳು ಬೇಟೆಯಾಡುವುದನ್ನು ನೀವು ನೋಡಿರಬಹುದು. ಹುಲಿ ತನ್ನ ಬೇಟೆಯನ್ನು ಬಲು ಜಾಣ್ಮೆಯಿಂದ ಅಷ್ಟೇ ಎಚ್ಚರಿಕೆಯಿಂದ ಗುಂಪಿನಲ್ಲಿರುವ ಅತಿ ದುರ್ಬಲವಾದ ಪ್ರಾಣಿಯನ್ನೇ ಆಯ್ದುಕೊಂಡಿರುತ್ತದೆ. ಕಾರಣವಿಷ್ಟೇ ಹುಲಿಗೆ ಸುಲಭವಾಗಿ ಯಾವುದೇ ಪ್ರತಿರೋಧವಿಲ್ಲದೆ ತನ್ನ ಆಹಾರ ಸಂಪಾದಿಸಬೇಕೆನ್ನುವ ಇರಾದೆಯಷ್ಟೇ. ಈಗ ಇಡೀ ಜಗತ್ತನ್ನು ಅಕ್ಷರಶಃ ನಡುಗಿಸುತ್ತಿರುವ ಕೊರೊನಾ ವೈರಸ್ ಕೂಡ ಇಂಥದ್ದೇ ನರಹಂತಕ. ಈ ನರಹಂತಕ ರೋಗ ಪ್ರತಿನಿರೋಧಕ ದುರ್ಬಲವಿರುವ ಮನುಷ್ಯನ ದೇಹ ಪ್ರವೇಶಿಸಿ ತನ್ನ ರಕ್ಕಸ ಸಾಮ್ರಾಜ್ಯ ವಿಸ್ತರಿಸಿ ಗೆಲುವಿನ ಅಟ್ಟಹಾಸ ಮೆರೆಯುತ್ತದೆ.

ಕೊರೊನಾ ಭಾರತದಲ್ಲಿ ಸಮುದಾಯದ ಮೇಲೆ ದಾಳಿಮಾಡಲು ಸಂಚು ಮಾಡುತ್ತಿದೆ. ಈ ಮೂರನೇ ಹಂತ ಎದುರಿಸಿ ನಿಲ್ಲುವುದು ಬಹಳ ಮಹತ್ವದ್ದಾಗಿದೆ. ಚೀನಾ, ಇಟಲಿ, ಸ್ಪೇನ್, ಇರಾನ್‌ನಂತಹ ದೇಶಗಳು ಇಲ್ಲಿ ಸೋತಿವೆ. ಅವರ ಸೋಲು ನಮಗೆ ಗೆಲುವಿನ ಪಾಠವಾಗಬೇಕು. ನಾವು ಗೆಲ್ಲಬೇಕೆಂದರೆ ನಮ್ಮ ನಮ್ಮ ಜವಾಬ್ದಾರಿಗಳನ್ನು ಗಂಭೀರವಾಗಿ ನಿಭಾಯಿಸಬೇಕು. ದೇಶದ ಮೇಲೆ ಯುದ್ಧ ಸಾರಿರುವ ಈ ವೈರಾಣುವಿನ ವಿರುದ್ಧ ಪ್ರತಿಯೊಬ್ಬ ಪ್ರಜೆಯೂ ಯೋಧನಾಗಿ ಹೋರಾಡಬೇಕು. ಈ ಯುದ್ಧದಲ್ಲಿ ಮದ್ದು ಗುಂಡುಗಳಿಂದ ಸೆಣಸಬೇಕಿಲ್ಲ. ಕೇವಲ ನಮ್ಮ ಮನೋಬಲದಿಂದ, ವೈಯುಕ್ತಿಕ ಶುಚಿತ್ವದಿಂದ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರಿಂದ ಗೆಲ್ಲಬೇಕಿದೆ.

ಸೀನಿದವರಿಗೆಲ್ಲ ತಪಾಸಣೆ ಬೇಕಿಲ್ಲ..

ADVERTISEMENT

ಕೆಮ್ಮಿದವರೆಲ್ಲ ಕೊರೊನಾ ರೋಗಿಗಳಲ್ಲ. ಸೀನಿದವರೆಲ್ಲ ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕಿಲ್ಲ. 130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ನೆಗಡಿ ಬಂದ ಮಾತ್ರಕ್ಕೆ ರಕ್ತತಪಾಸಣೆಗಾಗಿ ಪರೀಕ್ಷಾಕೇಂದ್ರಗಳಿಗೆ ಹೋದರೆ, ಆ ಕೇಂದ್ರದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಹೀಗಿದ್ದಾಗ ಅಲ್ಲಿಂದ ನಿಖರ ಫಲಿತಾಂಶಗಳನ್ನು ಹೇಗೆ ನಿರೀಕ್ಷಿಸುವುದು? ಈ ರೀತಿಯ ಅನವಶ್ಯಕ ಟೆನ್ಷನ್‌ಗಳು ಇನ್ನಷ್ಟು ಆಪತ್ತುಗಳನ್ನೇ ತಂದು ಕೊಡುತ್ತವೆ.

ಒಂದು ವೇಳೆ ನೀವು ಕೊರೊನಾ ವೈರಸ್ ಸೋಂಕಿತರೇ ಆಗಿದ್ದರೆ, ಸೋಂಕು ತಗುಲಿದ ಮೊದಲ ದಿನ ಕೊಂಚ ಆಯಾಸ ಮೈ ಕೈ ನೋವು ಕಾಣಿಸಿಕೊಳ್ಳುತ್ತದೆ. ಎರಡನೇ ದಿನ ಸ್ವಲ್ಪ ಮೈ ಬಿಸಿಯಾಗುತ್ತದೆ. ನಾಲ್ಕನೇ ದಿನ ತೀವ್ರ ತರಹದ ಜ್ವರ ಮತ್ತು ತಲೆ ನೋವು ಮತ್ತು ಶೀತ ಕಾಣಿಸಿಕೊಳ್ಳುತ್ತದೆ. ಐದನೇ ದಿನ ಹೊಟ್ಟೆ ಯಲ್ಲಿ ಸಂಕಟ,ನೋವು, ಭೇದಿಯೂ ಕಾಣಿಸಿಕೊಳ್ಳುತ್ತದೆ. ಆರನೇ ದಿನ ಜ್ವರ ಕಡಿಮೆಯಾಗುತ್ತದೆ. ಏಳು ಹಾಗೂ ಎಂಟನೇ ದಿನ ಜ್ವರ ಶೀತ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಎಂಟನೇ ದಿನದ ನಂತರ ನಿಮ್ಮ ದೇಹದ ಉಷ್ಣಾಂಶ ಹೆಚ್ಚಾಗಿದ್ದು ಶೀತ ಕಡಿಮೆಯಾಗದಿದ್ದರೆ ಅಥವಾ ನೀವೆಂದೂ ಈ ಹಿಂದೆ ಅನುಭವಕ್ಕೆ ಬಾರದ ಆಯಾಸ ಬಳಲಿಕೆ ಕಂಡುಬಂದರೆ.. ಸಹಾಯವಾಣಿಗೆ ಕರೆ ಮಾಡಿ, ವೈದ್ಯರನ್ನು ಸಂಪರ್ಕಿಸಿ.

ಬೈಪಾಸ್ ಆಗಬಹುದು..

ಈಗ ಸಾಮಾನ್ಯ ಶೀತ ವಾಸಿಯಾಗುವ ಸಮಯಕ್ಕಿಂತ ಹೆಚ್ಚಿನ ಸಮಯ ಅಂದರೆ ಎಂಟನೇ ದಿನದ ನಂತರವೂ ನಿಮಗೆ ಮೇಲಿನ ಲಕ್ಷಣಗಳು ಕಡಿಮೆಯಾಗದಿದ್ದರೆ, ನೀವು ವಿದೇಶದಿಂದ ವಾಪಸು ಬಂದವರಾಗಿದ್ದರೆ, ಹೆಚ್ಚಿನ ಸಾರ್ವಜನಿಕ ಸಂಪರ್ಕ ಹೊಂದಿದವರಾಗಿದ್ದರೆ, ನಿಮಗೆ ಅನುಮಾನವಿದ್ದಲ್ಲಿ ಮಾತ್ರ ಕೊರೊನಾ ಆರೋಗ್ಯ ಸಹಾಯವಾಣಿಗೆ ಕರೆ ಮಾಡಿ. ಬಹುತೇಕ ರೋಗಿಗಳಲ್ಲಿ ಈ ಕೊರೊನಾ ತನ್ನ ಯಾವುದೇ ಗುಣಲಕ್ಷಣಗಳನ್ನು ರೋಗದ ಚಿಹ್ನೆಗಳನ್ನು ತೋರಿಸದೇ ಮಾಯವಾಗಿರುತ್ತದೆ. ‌ಶೇ 85ರಷ್ಟು ರೋಗಿಗಳಿಗೆ ಈ ಕೊರೊನಾ ಬಂದಿದ್ದರೂ ಸ್ವತಃ ರೋಗಿಗಳಿಗೆ ಗೊತ್ತಾಗದಂತೆಯೇ ಬಂದು ಹೋಗಿರುತ್ತದೆ. ಇತ್ತೀಚೆಗೆ ನೀವು ಕೆಮ್ಮು ನೆಗಡಿಯಿಂದ ವಾಸಿಯಾಗಿದ್ದರೆ ಕೊರೊನಾ ನಿಮ್ಮ ದೇಹದಿಂದ ಬೈಪಾಸ್‌ ಆದರೂ ಆಗಿರಲೂಬಹುದು.

ಏನೇ ಆದರೂ ಚಿಂತಿಸದಿರಿ, ಗಾಬರಿಯಾಗಬೇಡಿ. ಮನೆಯಲ್ಲೇ ಇರಿ. ಸಾಮಾಜಿಕ ಅಂತರ ಕಾಪಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.