ADVERTISEMENT

ಕೋವಿಡ್‌: ಗರ್ಭಿಣಿಯರು, ಹಾಲುಣಿಸುವ ತಾಯಿಯರಿಗೆ ಇಲ್ಲಿದೆ ಉಪಯುಕ್ತ ಸಲಹೆ...

ಕೊರೊನಾ ಸೋಂಕು: ಗರ್ಭಿಣಿಯರು, ಹಾಲುಣಿಸುವವರಿಗೆ ಅಪಾಯ ಕಡಿಮೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 8:13 IST
Last Updated 12 ಜುಲೈ 2020, 8:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
""

ಗರ್ಭಿಣಿಯರಿಗೆ ಕೋವಿಡ್‌– 19 ವೈರಸ್‌ ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಿದೆಯೇ?ಈ ವೈರಸ್‌ ಬಗ್ಗೆ ಇನ್ನೂ ಅಧ್ಯಯನ, ಸಂಶೋಧನೆಗಳು ನಡೆಯುತ್ತಿರುವುದರಿಂದ, ಈ ಪ್ರಶ್ನೆಗಳಿಗೆ ಇನ್ನೂ ನಿಖರ ಉತ್ತರ ಸಿಕ್ಕಿಲ್ಲ.

ಆದರೆ ಗರ್ಭ ಧರಿಸುವ ಸಮಯದಲ್ಲಿ ಶರೀರ ಬದಲಾವಣೆಗೆ ಒಳಗಾಗುವುದರಿಂದ ಹಾಗೂ ಸೂಕ್ಷ್ಮ ಸ್ಥಿತಿಯಲ್ಲಿರುವುದರಿಂದ ಗರ್ಭಿಣಿಯರು ಹೆಚ್ಚು ಜಾಗ್ರತೆ ವಹಿಸಬೇಕು. ಉಸಿರಾಟದ ಸಮಸ್ಯೆಯಂತಹ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ವೈದ್ಯರನ್ನು ತಕ್ಷಣ ಕಾಣಬೇಕು ಎಂಬುದು ಪ್ರಸೂತಿ ತಜ್ಞರ ಸಲಹೆ.

ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ
ಪ್ರತಿಮಾ ರೆಡ್ಡಿ

ವಿಶ್ವದಾದ್ಯಂತ ದಾಖಲಾಗಿರುವ ಒಟ್ಟು ಕೊರೊನಾ ಸೋಂಕಿನ ಪ್ರಕರಣಗಳನ್ನು ಅವಲೋಕಿಸಿದರೆಗರ್ಭಿಣಿಯರಿಗೆ ಈ ಸೋಂಕು ಹೆಚ್ಚು ಅಪಾಯ ಉಂಟು ಮಾಡಿಲ್ಲ. ಇನ್‌ಫ್ಲುಯೆಂಜಾ, ಸಾರ್ಸ್‌ ಸೋಂಕಿಗೆ ಹೋಲಿಸಿದರೆ, ಕೊರೊನಾದಿಂದ ಉಂಟಾಗಿರುವ ಅಪಾಯ ತೀರ ಕಡಿಮೆ ಎಂಬುದು ವೈದ್ಯರ ಅಭಿಪ್ರಾಯ. ಆದರೂ, ಕೊರೊನಾ ಸೋಂಕಿನ ಬಗ್ಗೆ ಕೆಲವು ಗರ್ಭಿಣಿಯರಲ್ಲಿ ಅನೇಕ ಸಂದೇಹಗಳಿವೆ. ಅಂಥ ಕೆಲವು ಸಂದೇಹಗಳಿಗೆ ಬೆಂಗಳೂರಿನ ರಿಚ್‌ಮಂಡ್‌ ರಸ್ತೆಯ ಫೋರ್ಟಿಸ್‌ ಲಾ ಫೆಮ್ಮೆ ಆಸ್ಪತ್ರೆಯ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಪ್ರತಿಮಾ ರೆಡ್ಡಿ ಇಲ್ಲಿ ಉತ್ತರ ನೀಡಿದ್ದಾರೆ.

ADVERTISEMENT

ಕೊರೊನಾ ಸೋಂಕು ಗರ್ಭಿಣಿಯರಿಗೆ ಅಪಾಯವೇ?

ಕೋವಿಡ್‌ 19 ಗುಣಲಕ್ಷಣ, ಅದರ ಬಗ್ಗೆ ಇನ್ನೂ ಸಂಶೋಧನೆ, ಅಧ್ಯಯನ ನಡೆಯುತ್ತಿರುವುದರಿಂದ ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ಆದರೆ, ಬೇರೆ ಬೇರೆ ಕಾಯಿಲೆಗಳಿಂದ, ವೈರಸ್‌ ಸೋಂಕಿನಿಂದ ಗರ್ಭಿಣಿಯರಲ್ಲಿಗರ್ಭಪಾತ, ಅವಧಿಪೂರ್ವ ಹೆರಿಗೆ ಮೊದಲಾದ ಸಮಸ್ಯೆಗಳು ಕಂಡುಬಂದಿವೆ. ಆದರೆ ಕೋವಿಡ್‌ –19 ವೈರಸ್ ‌ಅಷ್ಟು ಪ್ರಮಾಣದಲ್ಲಿ ಗರ್ಭಿಣಿಯರಿಗೆ ಅಪಾಯ ಮಾಡಿಲ್ಲ.

ಗರ್ಭದಲ್ಲಿರುವಾಗಲೇ ತಾಯಿಯಿಂದ ಮಗುವಿಗೆ ಕೋವಿಡ್‌ –19 ಸೋಂಕು ವರ್ಗಾವಣೆಯಾಗುತ್ತದೆಯೇ ?

ಹುಟ್ಟುವಾಗಲೇ ಗರ್ಭದಲ್ಲಿಯೇ ಮಗುವಿಗೂ ಸೋಂಕು ಹರಡಿದ ಬಗ್ಗೆ ಇಲ್ಲಿಯವರೆಗೂ ಯಾವ ಅಧ್ಯಯನಗಳೂ ಸ್ಪಷ್ಟಪಡಿಸಿಲ್ಲ. ಚೀನಾ ಹಾಗೂ ಭಾರತದಲ್ಲಿ ಈ ಸೋಂಕು ಹರಡುತ್ತಿದ್ದ ಅವಧಿಯಲ್ಲಿ ಸಾವಿರಾರು ಹೆರಿಗೆಗಳಾಗಿವೆ. ಯಾವ ಪ್ರಕರಣದಲ್ಲೂ ಗರ್ಭಾವಸ್ಥೆಯಲ್ಲಿಯೇ ತಾಯಿಯಿಂದ ಮಗುವಿಗೆ ಸೋಂಕು ದೃಢಪಟ್ಟ ಪ್ರಕರಣಗಳಿಲ್ಲ. ಆದಾಗ್ಯೂ ಮಗುವಿಗೆ ಹುಟ್ಟುವಾಗಲೇ ಸೋಂಕು ಇರುತ್ತದೆಯೇ ಅಥವಾ ಹುಟ್ಟಿದ ನಂತರ ಸೋಂಕು ಬರುತ್ತದೆಯೇ ಎಂಬ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.

ಸ್ತನ್ಯಪಾನದ ಮೂಲಕ ಕೊರೊನಾ ವೈರಸ್‌ ಮಗುವಿಗೆ ಹರಡಬಹುದೇ?

ಮಗುವಿಗೆ ಸ್ತನ್ಯಪಾನ ಮಾಡಿಸುವುದರಿಂದ ಎದೆಹಾಲಿನ ಮೂಲಕ ಮಗುವಿಗೆ ಕೊರೊನಾ ಸೋಂಕು ಹರಡುವುದು ವೈದ್ಯಕೀಯ ಅಧ್ಯಯನದಿಂದ ಖಚಿತವಾಗಿಲ್ಲ. ಆದರೆ ತಾಯಿ ಕೊರೊನಾ ಪಾಸಿಟಿವ್‌ ಆಗಿದ್ದಾಗ ಉಸಿರು, ಎಂಜಲು ಅಥವಾ ಎದೆಹಾಲು ಕುಡಿಸುವಾಗ ಕೆಮ್ಮಿದಾಗ, ಸೀನಿದಾಗ ವೈರಸ್‌ ಮಗುವಿಗೂ ಹರಡಬಹುದು. ಹಾಗಾಗಿ ಕೊರೊನಾ ಪಾಸಿಟೀವ್‌ ದೃಢಪಟ್ಟಾಗ ಅಥವಾ ಅಂತಹ ಲಕ್ಷಣಗಳು ಕಾಣಿಸಿದಾಗ ಎಲ್ಲಾ ಬಗೆಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸೋಂಕಿತರು ಮಗು ಮುಟ್ಟುವ ಮೊದಲು ಕೈಗಳನ್ನುಚೆನ್ನಾಗಿ ತೊಳೆದುಕೊಳ್ಳಬೇಕು.

ಸೋಂಕಿತ ತಾಯಂದಿರು ಮಗುವಿಗೆ ಹಾಲು ಕುಡಿಸಬಹುದೇ?

ಅಮ್ಮನಿಗೆ ಕೊರೊನಾ ಪಾಸಿಟಿವ್‌ ಇದ್ದರೆ ಫೇಸ್‌ ಮಾಸ್ಕ್‌, ಗ್ಲೌಸ್‌ ತೊಟ್ಟು, ಸ್ತನವನ್ನು ಚೆನ್ನಾಗಿ ಸ್ವಚ್ಛ ಮಾಡಿಕೊಂಡು ಮಗುವಿಗೆ ಹಾಲು ಕುಡಿಸಬಹುದು. ಎದೆಹಾಲು ತೆಗೆದು ಬಾಟಲಿಗಳಲ್ಲಿ ತುಂಬಿಸಿ ಮಗುವಿಗೆ ಕುಡಿಸುವುದು ಉತ್ತಮ. ಮಾನ್ಯುವಲ್‌ ಅಥವಾ ಎಲೆಕ್ಟ್ರಿಕ್‌ ಪಂಪ್‌ ಮೂಲಕ ಎದೆಹಾಲನ್ನು ತೆಗೆಯುವಾಗ ಅಮ್ಮ ಮೊದಲು ಕೈಗಳನ್ನು ತೊಳೆದುಕೊಂಡು ಎಲ್ಲಾ ಸುರಕ್ಷತಾ ಕ್ರಮಗಳನ್ನೂ ಅನುಸರಿಸಬೇಕು. ಪಂಪ್‌ ಬಳಸಿದ ನಂತರ ಬಿಸಿನೀರು ಹಾಕಿ ತೊಳೆದು ಸ್ವಚ್ಛ ಮಾಡಬೇಕು. ಈ ಹಾಲನ್ನು ಸೋಂಕು ಇಲ್ಲದ ವ್ಯಕ್ತಿಯೇ ಮಗುವಿಗೆ ಕುಡಿಸಬೇಕು.

ಹೆರಿಗೆ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಏನು?

ಕೊರೊನಾ ಪಾಸಿಟಿವ್‌ ಗರ್ಭಿಣಿಯರಿಗೆ ಬೇರೆ ಹೆರಿಗೆ ಕೋಣೆಯನ್ನು ವ್ಯವಸ್ಥೆ ಮಾಡಲಾಗಿರುತ್ತದೆ. ಅವರ ಕಾಳಜಿಗೆ ನರ್ಸ್‌, ವೈದ್ಯರು ಎಲ್ಲಾ ಇರುತ್ತಾರೆ. ಭಯಪಡಬೇಕಾಗಿಲ್ಲ.ಆಸ್ಪತ್ರೆಗಳಲ್ಲಿ ಹೆರಿಗೆ ಸಂದರ್ಭದಲ್ಲಿ ಸುರಕ್ಷತೆ ದೃಷ್ಟಿಯಿಂದ ಮಗು ಮತ್ತು ತಾಯಿಯನ್ನು ಕನಿಷ್ಠ ಆರು ಅಡಿ ಅಂತರದಲ್ಲಿ ಇಡಲಾಗುತ್ತದೆ. ತಾಯಿಯು ಉಸಿರಾಟ ಸಮಸ್ಯೆ ಮೊದಲಾದ ತೊಂದರೆಯಿಂದ ಬಳಲುತ್ತಿದ್ದರೆ ಎದೆಹಾಲು ಬ್ಯಾಂಕಿನಿಂದ ಹಾಲು ತಂದು ಮಗುವಿಗೆ ಕುಡಿಸಲಾಗುತ್ತಿದೆ. ಹುಟ್ಟಿದ ಮಕ್ಕಳಲ್ಲಿ ಕೋವಿಡ್‌ 19 ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಹೆಚ್ಚಿರುವುದು ತಿಳಿದುಬಂದಿದೆ.

ಸೋಂಕು‌ ದೃಢಪಟ್ಟಾಗ ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಎಚ್ಚರಿಗಳೇ ಏನು?

ಕಟ್ಟುನಿಟ್ಟಾಗಿ ಕ್ವಾರಂಟೈನ್‌ ಒಳಗಾಗಿ ವೈದ್ಯರ ಜೊತೆ ಸಂಪರ್ಕದಲ್ಲಿರಬೇಕು. ಕೊರೊನಾ ಲಕ್ಷಣಗಳಾದ ಶೀತ, ಕೆಮ್ಮು, ಜ್ವರ ಕಡಿಮೆಯಿದ್ದರೆ ಹೆಚ್ಚುಮಾತ್ರೆಗಳನ್ನು ತೆಗೆದುಕೊಳ್ಳುವುದು ಬೇಡ. ವೈದ್ಯರ ಸಲಹೆ ಪ್ರಕಾರ ಮಾತ್ರೆ ಸೇವಿಸಬೇಕು. ಸ್ವಯಂ ಔಷಧ ಬೇಡ. ವೈದ್ಯರು ಹೇಳಿದ ಆಹಾರ, ತರಕಾರಿ, ಹಣ್ಣುಗಳನ್ನು ಸೇವಿಸಬೇಕು. ಸಿ ಮತ್ತು ಡಿ ವಿಟಮಿನ್‌ ಹೆಚ್ಚಿರುವ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಬೇಕು.

ಗರ್ಭಿಣಿಯರಿಗೆ ಸಲಹೆಗಳು

  1. ಸುರಕ್ಷಿತವಾಗಿರಿ, ಸಕಾರಾತ್ಮಕವಾಗಿ ಯೋಚಿಸಿ.
  2. ಕಾರ್ಯಕ್ರಮ ಅಥವಾ ಜನಸಂದಣಿ ಇರುವ ಸ್ಥಳಗಳಿಗೆ ಹೋಗಲೇಬೇಡಿ
  3. ಶೇಕಡ 60 ಆಲ್ಕೋಹಾಲ್‌ ಮಿಶ್ರಿತ ಹ್ಯಾಂಡ್‌ ಸ್ಯಾನಿಟೈಸರ್‌ನಿಂದ ಆಗಾಗ 20 ಸೆಕೆಂಡುಗಳ ಕಾಲ ಕೈಗಳನ್ನು ತೊಳೆದುಕೊಳ್ಳಬೇಕು
  4. ಬಳಸಿದ ಟಿಶ್ಯೂಗಳನ್ನು ಪುನಃ ಬಳಸಬೇಡಿ
  5. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಸಿಡಿಸಿ (ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಷನ್‌) ಬಿಡುಗಡೆ ಮಾಡಿದ ಸಂದೇಶಗಳನ್ನು ತಿಳಿದುಕೊಳ್ಳಿ. ಮಾಹಿತಿಗಾಗಿ ಸಾಮಾಜಿಕ ಜಾಲತಾಣಗಳನ್ನು ಅವಲಂಬಿಸದೆ ಇರುವುದು ಒಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.