
ಚಿತ್ರ: ಎಐ
ಡೆಲಿರಿಯಮ್ ಎನ್ನುವುದು ಮಾನಸಿಕ ಸ್ಥಿತಿಯಲ್ಲಿ ಉಂಟಾಗುವ ಗೊಂದಲ, ದಿಗ್ಭ್ರಮೆ ಅಥವಾ ಮಿದುಳಿನ ಕಾರ್ಯದಲ್ಲಿ ಹಠಾತ್ ಬದಲಾವಣೆಯಾಗಿದೆ. ಇದು ಕೆಲವು ಗಂಟೆಗಳಿಂದ ದಿನಗಳವರೆಗೆ ಭಾದಿಸಬಹುದು. ಸಮಯಕ್ಕೆ ತಕ್ಕಂತೆ ಏರುಪೇರಾಗುತ್ತದೆ. ವಯಸ್ಸಾದವರು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಲ್ಲಿ ಡೆಲಿರಿಯಮ್ ಹೆಚ್ಚಾಗಿ ಕಂಡುಬರುತ್ತದೆ.
ಡೆಲಿರಿಯಮ್‌ಗೆ ಕಾರಣಗಳು:
ವೈದ್ಯಕೀಯ ಕಾರಣಗಳು: ಸೋಂಕು, ನಿರ್ಜಲೀಕರಣ, ರಕ್ತದಲ್ಲಿನ ಎಲೆಕ್ಟ್ರೋಲೈಟ್ ಅಸಮತೋಲನ, ಮೂತ್ರಪಿಂಡ ಅಥವಾ ಯಕೃತ್ತಿನ ವೈಫಲ್ಯ, ಹೃದಯಾಘಾತ, ಪಾರ್ಶ್ವವಾಯು ಅಥವಾ ತೀವ್ರ ತಲೆ ನೋವು ಡೆಲಿರಿಯಮ್‌ಗೆ ಕಾರಣವಾಗಬಹುದು. ಶಸ್ತ್ರಚಿಕಿತ್ಸೆಯ ನಂತರ ವಯಸ್ಸಾದವರಲ್ಲಿ ಇದು ಸಾಮಾನ್ಯವಾಗಿದೆ ಕಂಡುಬರುತ್ತದೆ.
ಔಷಧಿಗಳು: ನೋವು ನಿವಾರಕಗಳು, ನಿದ್ದೆ ಮಾತ್ರೆಗಳು, ಅರವಳಿಕೆ ಔಷಧಿಗಳು ಆಲ್ಕೋಹಾಲ್ ಅಥವಾ ಮಾದಕ ದ್ರವ್ಯಗಳ ಸೇವನೆ ಡೆಲಿರಿಯಮ್ ಅನ್ನು ಪ್ರಚೋದಿಸಬಹುದು.
ಪರಿಸರ ಮತ್ತು ಮಾನಸಿಕ ಅಂಶಗಳು: ತೀವ್ರ ಒತ್ತಡ ಹಾಗೂ ನಿದ್ರಾಹೀನತೆ ಕಾರಣವಾಗಬಹುದು.
ಡೆಲಿರಿಯಮ್‌ನ ಲಕ್ಷಣಗಳು:
ಅರಿವಿನ ಬದಲಾವಣೆಗಳು: ವ್ಯಕ್ತಿಯು ಗೊಂದಲಕ್ಕೊಳಗಾಗುತ್ತಾನೆ. ತನ್ನ ಸುತ್ತಮುತ್ತಲಿನ ಪರಿಸರವನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುತ್ತಾನೆ. ಗಮನ ಕೇಂದ್ರೀಕರಿಸಲು ಅಸಮರ್ಥನಾಗುತ್ತಾನೆ. ಸಮಯ ಮತ್ತು ಸ್ಥಳದ ಬಗ್ಗೆ ದಿಗ್ಭ್ರಮೆ, ಮತ್ತು ಸ್ಮರಣೆ ಸಮಸ್ಯೆಗಳು ಕಂಡುಬರುತ್ತವೆ.
ಗ್ರಹಿಕೆಯ ಅಸ್ವಸ್ಥತೆ: ಭ್ರಮೆಗಳು (ಅಸ್ತಿತ್ವದಲ್ಲಿಲ್ಲದ ವಸ್ತುಗಳನ್ನು ನೋಡುವುದು ಅಥವಾ ಕೇಳುವುದು) ತಪ್ಪು ಗ್ರಹಿಕೆಗಳು ಸಾಮಾನ್ಯವಾಗಿರುತ್ತದೆ. ವ್ಯಕ್ತಿ ವಾಸ್ತವ ಮತ್ತು ಕಲ್ಪನೆಯ ನಡುವೆ ವ್ಯತ್ಯಾಸ ಗುರುತಿಸಲು ಸಾಧ್ಯವಾಗುವುದಿಲ್ಲ.
ನಡವಳಿಕೆಯ ಬದಲಾವಣೆಗಳು: ಅಶಾಂತಿ, ಆತಂಕ, ಭಯ, ಅಥವಾ ಆಳವಾದ ನಿದ್ದೆ ಕಂಡುಬರಬಹುದು. ಮಾತಿನಲ್ಲಿ ಅಸಂಗತತೆ, ಬೆರಗು ಮತ್ತು ಭಾವನಾತ್ಮಕ ಏರು ಪೇರುಗಳ ಸಾಧ್ಯತೆ ಇರುತ್ತದೆ.
ನಿದ್ದೆಯ ಚಕ್ರಕ್ಕೆ ಅಡಚಣೆ: ಹಗಲು ಹೆಚ್ಚು ನಿದ್ದೆ, ರಾತ್ರಿ ಅಶಾಂತಿ, ಆಗಾಗ ಎಚ್ಚರವಾಗುವುದು.
ಡೆಲಿರಿಯಮ್‌ನ ಚಿಕಿತ್ಸೆ:
ಮೂಲ ಕಾರಣದ ನಿವಾರಣೆ: ಚಿಕಿತ್ಸೆಯ ಪ್ರಾಥಮಿಕ ಗುರಿ ಡೆಲಿರಿಯಮ್‌ಗೆ ಕಾರಣವಾದ ಮೂಲ ಸಮಸ್ಯೆಯನ್ನು ಗುರುತಿಸಿ ಚಿಕಿತ್ಸೆ ನೀಡುವುದು. ಸೋಂಕುಗಳಿಗೆ ಪ್ರತಿ ಜೀವಕಗಳು, ನಿರ್ಜಲೀಕರಣಕ್ಕೆ ದ್ರವಗಳು, ಎಲೆಕ್ಟ್ರೋಲೈಟ್ ಸಮತೋಲನ, ಮತ್ತು ಸಮಸ್ಯಾತ್ಮಕ ಔಷಧಿಗಳನ್ನು ನಿಲ್ಲಿಸುವುದು ಅಗತ್ಯವಾಗಿದೆ.
ಪೋಷಕ ಆರೈಕೆ: ಶಾಂತ ಮತ್ತು ಪರಿಚಿತ ಪರಿಸರದಲ್ಲಿ ಕಾಲ ಕಳೆಯುವುದು. ಕುಟುಂಬ ಸದಸ್ಯರ ಉಪಸ್ಥಿತಿ, ಸೂಕ್ತ ಬೆಳಕು ಮತ್ತು ಶಾಂತವಾದ ವಾತಾವರಣ ಡೆಲಿರಿಯಮ್‌ನಿಂದ ಹೊರ ಬರಲು ಸಹಾಯಕವಾಗುತ್ತದೆ.
ಔಷಧೀಯ ಚಿಕಿತ್ಸೆ
ಔಷಧಿಗಳು ಸಾಮಾನ್ಯವಾಗಿ ಕೊನೆಯ ಆಯ್ಕೆಯಾಗಿದೆ, ವಿಶೇಷವಾಗಿ ವ್ಯಕ್ತಿಯು ತನಗೆ ಅಥವಾ ಇತರರಿಗೆ ಅಪಾಯವಾಗಿದ್ದಾಗ ಮಾತ್ರ. ಕಡಿಮೆ ಪ್ರಮಾಣದ ಆಂಟಿಸೈಕೋಟಿಕ್ ಔಷಧಿಗಳನ್ನು ಅಗತ್ಯವಿದ್ದಾಗ ಬಳಸಬಹುದು.
ಮುನ್ನೆಚ್ಚರಿಕೆ ಕ್ರಮಗಳು
ವಯಸ್ಸಾದವರು, ಶಸ್ತ್ರಚಿಕಿತ್ಸೆಯಾದ ರೋಗಿಗಳು ಡೆಲಿರಿಯಮ್ ತಡೆಗಟ್ಟಲು ಮುಂಚಿತವಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಾಕಷ್ಟು ನಿದ್ದೆ, ಸರಿಯಾದ ಪೋಷಣೆ, ಉತ್ತಮ ಆಹಾರ ಚಲನಶೀಲತೆಯಿಂದ ಇರಬೇಕು. ಇದು ಡೆಲಿರಿಯಮ್ ಅನ್ನು ತೊಂದರೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ.
ಡೆಲಿರಿಯಮ್ ಗಂಭೀರ ಸ್ಥಿತಿಯಾದರೂ, ಸೂಕ್ತ ಚಿಕಿತ್ಸೆಯಿಂದ ರೋಗಿಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಆದರೆ ತ್ವರಿತ ರೋಗನಿರ್ಣಯ ಮತ್ತು ಚಿಕಿತ್ಸೆ ಅತ್ಯಗತ್ಯ.
(ಡಾ. ದಿವ್ಯಾ ಶ್ರೀ ಕೆ ಆರ್, ಸಲಹೆಗಾರ, ಮನೋ ವೈದ್ಯಕೀಯ ವಿಭಾಗ, ಆಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.