ADVERTISEMENT

ಲಿಂಫೋಮಾ ಕಡೆಗಣನೆ ಬೇಡ: ಡಾ.ಎಂ.ಜಿ.ಗಿರಿಯಪ್ಪಗೌಡರ್

ಕಿಮ್ಸ್‌ನ ಕ್ಯಾನ್ಸರ್‌ ಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ.ಎಂ.ಜಿ.ಗಿರಿಯಪ್ಪಗೌಡರ್

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 4:25 IST
Last Updated 17 ಸೆಪ್ಟೆಂಬರ್ 2022, 4:25 IST
ಡಾ.ಎಂ.ಜಿ. ಗಿರಿಯಪ್ಪ ಗೌಡರ್‌
ಡಾ.ಎಂ.ಜಿ. ಗಿರಿಯಪ್ಪ ಗೌಡರ್‌   

ಹುಬ್ಬಳ್ಳಿ: ‘ಲಿಂಫೋಮಾ ದೇಹದ ದುಗ್ಧರಸ ಗ್ರಂಥಿ ವ್ಯವಸ್ಥೆಯಲ್ಲಿ ತಲೆದೋರುವ ಗಂಟುಗಳು. ಇವು ಒಂದು ಬಗೆಯ ಕ್ಯಾನ್ಸರ್‌ ಗಂಟುಗಳೇ ಆಗಿವೆ. ಕುತ್ತಿಗೆ, ಕಂಕುಳ ಭಾಗದಲ್ಲಿ ಗಂಟುಗಳು ಕಂಡುಬಂದರೆ ನಿರ್ಲಕ್ಷಿಸದೇ ವೈದ್ಯರನ್ನು ಕಂಡು ತಪಾಸಣೆಗೊಳಪಡುವುದು ಅಗತ್ಯ’ ಎಂದು ಕಿಮ್ಸ್‌ನ ಕ್ಯಾನ್ಸರ್‌ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಎಂ.ಜಿ.ಗಿರಿಯಪ್ಪ ಗೌಡರ್‌ ಸಲಹೆ ನೀಡಿದರು.

ಲಿಂಫೋಮಾ ಜಾಗೃತಿ ದಿನದ ಅಂಗವಾಗಿ,‌ಪ್ರಜಾವಾಣಿ ಕಚೇರಿಯಲ್ಲಿ ಶುಕ್ರವಾರ ನಡೆದ ಫೇಸ್‌ಬುಕ್ ಸಂವಾದದಲ್ಲಿ ಅವರು ಲಿಂಫೋಮಾ ಬಾಧೆ ಕುರಿತು ವಿವರವಾದ ಮಾಹಿತಿ ನೀಡಿದರು.

‘ಕುತ್ತಿಗೆ, ಕಂಕುಳ ಭಾಗದಲ್ಲಿ ಗಂಟುಗಳಲ್ಲದೆ, ಅತಿಯಾಗಿ ಬೆವರುವುದು, ತುರಿಕೆ, ಹಸಿವಾಗದಿರುವುದು, ದೈಹಿಕವಾಗಿ ಕ್ಷಯಿಸುವುದು, ಮೂಳೆಗಳಲ್ಲಿ ನೋವುಂಟಾಗುವುದು ಹಾಗೂ ಜ್ವರ ಕೂಡ ಲಿಂಫೋಮಾ ಲಕ್ಷಣಗಳು. ಈ ಲಕ್ಷಣಗಳು ಗಮನಕ್ಕೆ ಬರುತ್ತಲೇ ವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಂಡರೆ ಸೂಕ್ತ ಚಿಕಿತ್ಸೆ ಪಡೆದು ಆ ಬಾಧೆಯಿಂದ ಬಹುಬೇಗ ಮುಕ್ತರಾಗಬಹುದು. ಎಕ್ಸರೇ, ಸ್ಕ್ಯಾನಿಂಗ್‌, ಪೆಟ್‌ ಸ್ಕ್ಯಾನ್‌, ಬಯಾಪ್ಸಿ ಮೂಲಕಲಿಂಫೋಮಾ ಪತ್ತೆ ಮಾಡಿ, ಯಾವ ಹಂತದಲ್ಲಿದೆ ಎಂಬದು ನಿರ್ಧರಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಲಿಂಫೋಮಾ ಕಾಯಿಲೆಗೂ ಕ್ಯಾನ್ಸರ್‌ನಲ್ಲಿ ಅನುಸರಿಸುವ ಚಿಕಿತ್ಸಾ ಕ್ರಮಗಳನ್ನೇ ನೀಡಲಾಗುವುದು. ಕಿಮೋಥೆರಪಿ, ರೆಡಿಯೇಷನ್‌ ಚಿಕಿತ್ಸೆಗಳ ಮೂಲಕವೇ ಗುಣಪಡಿಸಲಾಗುವುದು. 12 ವರ್ಷದ ಮೇಲ್ಪಟ್ಟು, 60 ವರ್ಷದವರನ್ನೂ ಲಿಂಫೋಮಾ ಬಾಧಿಸಬಹುದು. ಇಳಿವಯಸ್ಸಿನವರಲ್ಲೂ ಕಂಡುಬರುತ್ತಿದೆ. ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳಲ್ಲೇ ಈ ಬಾಧೆ ಹೆಚ್ಚು ಕಂಡುಬರುತ್ತಿದೆ’ ಎಂದು ಗಮನ ಸೆಳೆದರು.

‘ಕಾಯಿಲೆಯ ಅರಿವಿನ ಕೊರತೆ ಕಾರಣದಿಂದ ಹಾಗೂ ಲಕ್ಷಣಗಳು ಗಮನಕ್ಕೆ ಬಂದರೂ ವೈದ್ಯರಲ್ಲಿಗೆ ಹೋಗಿ ತಪಾಸಣೆಗೊಳಗಾಗುವಲ್ಲಿ ನಿರ್ಲಕ್ಷ್ಯ ತೋರಿ ಕಾಯಿಲೆಯ ಹಂತವನ್ನು ಹೆಚ್ಚಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚಿದೆ. ಇದರಿಂದ ಪ್ರಾಣಕ್ಕೂ ಕಂಟಕವಾಗಲಿದೆ. ಕಾಯಿಲೆಯ ಲಕ್ಷಣಗಳು ಗಮನಕ್ಕೆ ಬರುತ್ತಲೇ ಮೊದಲು ವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಂಡು, ರೋಗ ಮುಕ್ತರಾಗಬೇಕು’ ಎಂದರು.

ಫೇಸ್‌ಬುಕ್‌ ಸಂವಾದ ವೀಕ್ಷಿಸಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.