ಅಪಸ್ಥಾನೀಯ ಗರ್ಭಧಾರಣೆ ಬಗ್ಗೆ ಬೇಡ ಆತಂಕ: ಡಾ. ಗಣೇಶ್ ಗಂಗೊಳ್ಳಿ ಅವರ ಲೇಖನ
ರಾತ್ರಿ ಪಾಳಿಯ ಕೆಲಸ ಎಂದರೆ ವೈದ್ಯರ ಪರಮಶತ್ರು ಎಂದರೂ ತಪ್ಪಾಗಲಾರದು. ಏಕೆಂದರೆ ಒಬ್ಬಂಟಿಯಾಗಿ ನಿದ್ದೆಗೆಟ್ಟು ಹೋರಾಡಬೇಕಾಗುವ ಸನ್ನಿವೇಶಗಳು ಬರುತ್ತವೆ ಮತ್ತು ಕೆಲವೊಮ್ಮೆ ಗುಂಪುಘರ್ಷಣೆಗಳನ್ನು ಎದುರಿಸಬೇಕು. ಅವತ್ತು ನಾನು ಕರ್ತವ್ಯದಲ್ಲಿ ಇದ್ದಾಗ, ಅಂಥ ಒಂದು ಸನ್ನಿವೇಶವನ್ನು ಎದುರಿಸಬೇಕಾಯಿತು.
ಗರ್ಭಧಾರಣೆಯ ಸಮಯದಲ್ಲಿ ಅಂಡಾಶಯದಿಂದ ಬಿಡುಗಡೆಗೊಂಡ ಮೊಟ್ಟೆಗಳು ಡಿಂಬನಾಳಗಳಲ್ಲಿ ವೀರ್ಯದೊಂದಿಗೆ ಬೆರೆತು ಭ್ರೂಣ ಸೃಷ್ಟಿಯಾಗುತ್ತದೆ ಹಾಗೂ ಅದು ಗರ್ಭಕೋಶದಲ್ಲಿ ಬೆಳವಣಿಗೆ ಹೊಂದುತ್ತವೆ. ಇದರ ಬದಲಾಗಿ ಡಿಂಬನಾಳ (fallopian tube) ಅಥವಾ ಹೊಟ್ಟೆಯ ಯಾವುದೇ ಭಾಗದಲ್ಲಿ ಈ ಭ್ರೂಣವು ಅಂಟಿಕೊಂಡರೆ ಅದನ್ನು ‘ಅಪಸ್ಥಾನೀಯ ಗರ್ಭಧಾರಣೆ’ ಎನ್ನಲಾಗುವುದು. ಸಾಮಾನ್ಯವಾಗಿ ಇಂಥ ಗರ್ಭಧಾರಣೆಯು ಮುಂದುವರಿಯಲು ಸಾಧ್ಯವಿಲ್ಲ. ಭ್ರೂಣವು ಅಂಟಿರುವ ಸ್ಥಳಕ್ಕೆ ಅನುಗುಣವಾಗಿ ‘ಟ್ಯೂಬಲ್’, ‘ಒವೆರಿಯನ್’, ’ಅಬ್ಡಾಮಿನಲ್' ‘ಸೆರ್‌ವಿಕಲ್ ಪ್ರೆಗ್ನೆನ್ಸಿ’ ಎಂಬ ಅನೇಕ ವಿಧಗಳಿವೆ.
ಇಂದು ನಾನು ಇಂತಹ ಅಪರೂಪದ ‘ಟ್ಯೂಬಲ್ ಪ್ರೆಗ್ನೆನ್ಸಿ’ ಅದರಲ್ಲೂ ‘ಕಾರ್ನ್ಯುಯಲ್ ಎಕ್ಟೋಪಿಕ್’ ಕೇಸ್ ಅನ್ನು ಚಿಕಿತ್ಸೆ ಮಾಡಬೇಕಾಗಿ ಬಂತು. ಎರಡು ತಿಂಗಳು ಮುಟ್ಟಾಗದೆ ಹೊಟ್ಟೆನೋವು ಮತ್ತು ಯೋನಿರಕ್ತಸ್ರಾವದಿಂದ ಬಂದಿರುವ ಈ ಮಹಿಳೆ ಎರಡು ಮಕ್ಕಳ ತಾಯಿ. ಈ ಮೂರು ರೋಗಲಕ್ಷಣಗಳನ್ನು (ಅಂದರೆ ಹೊಟ್ಟೆನೋವು, ರಕ್ತಸ್ರಾವ, ಮುಟ್ಟು ನಿಲ್ಲುವುದು) ಒಟ್ಟಾಗಿ ‘ಎಕ್ಟೋಪಿಕ್ ಟ್ರಯಾಡ್’ ಎಂದು ಕರೆಯಲಾಗುತ್ತದೆ. ಇದನ್ನು ಹೊರತು ಪಡಿಸಿದರೆ ನೋವಿನಿಂದಾಗಿ ಅತಿವಾಂತಿ ಮತ್ತು ರಕ್ತಹೀನತೆಯಿಂದ ತಲೆಸುತ್ತು ಬರಬಹುದು. ರಕ್ತದೊತ್ತಡ ಕಡಿಮೆ ಆಗಬಹುದು.
ಸಂಕ್ಷಿಪ್ತ ರೋಗವರದಿ ಮತ್ತು ‘ಶ್ರೋಣಿ ಪರೀಕ್ಷೆ’ (pelvic examination) ಆಲಿಸಿದ ನಾನು ಕೂಡಲೇ ರೋಗನಿರ್ಣಾಯಕ ಪರೀಕ್ಷೆಗಳಾದ ‘ಪ್ರೆಗ್ನೆನ್ಸಿ ಕಾರ್ಡ್ ಟೆಸ್ಟ್’ , ‘ಬೀಟಾ ಎಚ್‌ಸಿಜಿ’ ಪರೀಕ್ಷೆಯೊಂದಿಗೆ ಹೊಟ್ಟೆಯ ಸ್ಕ್ಯಾನ್ ಮಾಡಲು ರೆಸಿಡೆಂಟ್ ಡಾಕ್ಟರಿಗೆ ಹೇಳಿದೆ. ಆದರೆ ಯಾವ ಕಾರಣದಿಂದ ಈಕೆಯಲ್ಲಿ ‘ಎಕ್ಟೋಪಿಕ್ ಪ್ರೆಗ್ನೆನ್ಸಿ’ ಎನ್ನುವುದು ನನಗೆ ಗೊಂದಲಕ್ಕೀಡುಮಾಡಿತು. ಈ ಕಾಯಿಲೆಗೆ ಪೂರ್ವ ಇತಿಹಾಸ (ಪ್ರೀವಿಯಸ್ ಎಕ್ಟೋಪಿಕ್), ‘ಪೆಲ್ವಿಕ್ ಇನ್‌ಫ್ಲೇಮೆಟರಿ ಡಿಸೀಸ್’, ಲೈಂಗಿಕ ಗುಪ್ತರೋಗ, ‘ಫೇಲ್ಡ್ ಟ್ಯೂಬೆಕ್ಟಮಿ’, ಗರ್ಭನಿರೋಧಕ ಸಾಧನ(IUCD)ದೊಂದಿಗೆ ಗರ್ಭಧಾರಣೆ, ಟ್ಯೂಬೋಪ್ಲಾಸ್ಟಿ ಚಿಕಿತ್ಸೆ ನಂತರದ ಗರ್ಭಧಾರಣೆ, ಐವಿಎಫ್ ಪ್ರೆಗ್ನಿನ್ಸಿ ಮುಂತಾದ ಕಾರಣಗಳು ಯಾವುವೂ ಇರಲಿಲ್ಲ. ಯೋಚನಾ ಪ್ರಹರಗಳು ಒಂದು ಹಂತಕ್ಕೆ ನಿಲ್ಲುವ ವೇಳೆಗೆ ಸ್ಕ್ಯಾನಿಂಗ್ ವರದಿ ಬಂದಿತ್ತು.
ಅದರಲ್ಲಿ ‘ಎಕ್ಟೋಪಿಕ್ ಪ್ರೆಗ್ನೆನ್ಸಿ’ ಎಂಬುದಾಗಿ ಇತ್ತೇ ಹೊರತು ಅದು ಛಿದ್ರಗೊಂಡಿತ್ತೋ (ರಪ್ಚರ್ಡ್) ಇಲ್ಲವೋ ಎಂಬುದರ ಸ್ಪಷ್ಟ ಚಿತ್ರಣ ಇರಲಿಲ್ಲ. ಇಂತಹ ಸಂದಿಗ್ಧತೆ ಒದಗಿದಾಗ ರೋಗಿ ಹಾಗೂ ಅವರ ಆಪ್ತರೊಂದಿಗೆ ಸಮಾಲೋಚನೆ ಮುಖ್ಯವಾಗಿರುತ್ತದೆ. ಏಕೆಂದರೆ ಈ ಕಾಯಿಲೆಗೆ ಔಷಧ ಮತ್ತು ಶಸ್ತ್ರಚಿಕಿತ್ಸೆ ಎಂಬ ಎರಡು ವಿಧಾನಗಳಿವೆ. ಇದನ್ನು ಸರಿಯಾಗಿ ಮನದಟ್ಟು ಮಾಡಿಸಿ ಸೂಕ್ತ ಚಿಕಿತ್ಸೆಯ ಆಯ್ಕೆ ಮಾಡುವಲ್ಲಿ ಮಾರ್ಗದರ್ಶಿಯಾಗಿ ನಿಲ್ಲುವುದು ಒಬ್ಬ ವೈದ್ಯನ ಕರ್ತವ್ಯವಾಗಿರುತ್ತದೆ. ಶಸ್ತ್ರಚಿಕಿತ್ಸೆಯನ್ನು ನಿರ್ಧರಿಸುವಾಗ ನಾವು ಜೀವಧಾರಕ ಚಿಹ್ನೆಗಳಾದ (ವೈಟಲ್ ಸೈನ್ಸ್) ನಾಡಿಮಿಡಿತ, ರಕ್ತದೊತ್ತಡ, ಉಷ್ಣತೆ, ಉಸಿರಾಟದ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಈ ಮಹಿಳೆಯಲ್ಲಿ ಇದರ ಯಾವುದೇ ವ್ಯತ್ಯಾಸ ಇಲ್ಲದಿರುವುದು ಸಂಕಷ್ಟಕ್ಕೀಡುಮಾಡಿತು. ಇದನ್ನು ನನ್ನ ಹಿರಿಯ ವೈದ್ಯರೊಂದಿಗೆ ವಿಮರ್ಶಿಸಿ ಆರು ತಾಸುಗಳ ನಂತರ ಮರಳಿ ಹಿಮೊಗ್ಲೋಬಿನ್ ಪರಿಕ್ಷೆ ಮಾಡಿ ಚಿಕಿತ್ಸಾ ವಿಧಾನ ನಿರ್ಧರಿಸುವುದಾಗಿ ತಾಕೀತು ಮಾಡಲಾಯಿತು. ಹಾಗೆಯೇ ಆ ರಾತ್ರಿ ನಾನು ಬೇರೆಲ್ಲಾ ರೋಗಿಗಳ ಚಿಕಿತ್ಸೆಯಲ್ಲಿ ನಿರತನಾದರು ಈ ಕೇಸ್ ವಿಚಾರವಾಗಿ ಮನದ ಮೂಲೆಯಲ್ಲಿ ಆಲೋಚನಾ ಲಹರಿ ಜಾಗೃತವಾಗಿತ್ತು.
ಮರುದಿನ ಬೆಳಿಗ್ಗೆ ರಕ್ತದ ಮರುಪರೀಕ್ಷೆಯಲ್ಲಿ ಹಿಮೊಗ್ಲೋಬಿನ್ ಕ್ಷೀಣಿಸಿರುವುದರಿಂದ ‘ಇಂಟರ್ನಲ್ ಬ್ಲೀಡಿಂಗ್’ ಅನ್ನು ಶಂಕಿಸಿ, ಶಸ್ತ್ರಚಿಕಿತ್ಸೆ ನಿರ್ಧರಿಸಿ ಮುಂದುವರಿದೆ. ಡಿಂಬನಾಳ ಮತ್ತು ಗರ್ಭಕೋಶಗಳು ಸಂಧಿಸುವ ಜಾಗದಲ್ಲಿ (ಕಾರ್ನ್ಯುಯಲ್ ಎಕ್ಟೋಪಿಕ್) ಭ್ರೂಣವು ಅಂಟಿಕೊಂಡಿರುವುದರಿಂದ ಅದು ಛಿದ್ರವಾಗಿ ಒಂದು ರಂಧ್ರದಂತಾಗಿ ರಕ್ತಸ್ರಾವವಾಗಿ ಉದರದಲ್ಲೆಲ್ಲ ರಕ್ತ ಮಡುಗಟ್ಟಿತ್ತು. ಹಾಗಾಗಿ ಆ ರಂಧ್ರವನ್ನು ಹುಡುಕುವುದು ಕ್ಲಿಷ್ಟಕರವಾಗಿತ್ತು. ರಕ್ತಸ್ರಾವ ನಿಲ್ಲದ ಕಾರಣ ಡಿಂಬನಾಳಗಳನ್ನು ಛೇಧಿಸಬೇಕಾಯಿತು. ಆದರೂ ಇದು ಮರುಕಳಿಸುವ ಸಾಂದ್ರತೆ ಶೇ 10ರಷ್ಟು ಇರುವುದರಿಂದ, ಇನ್ನೊಂದು ‘ಫಲೋಪಿಯನ್ ಟ್ಯೂಬ್’ ಅನ್ನು ‘ಟ್ಯುಬೆಕ್ಟೊಮಿ’ ಮಾಡಿದೆ. ಚಿಕಿತ್ಸೆ ಫಲಕಾರಿಯಾಯಿತು. ರೋಗಿಯು ಸಂತೋಷವಾಗಿ ಮನೆಗೆ ಮರಳುವಾಗ ಮುಖದಲ್ಲಿ ಮೂಡಿದ ಮಂದಹಾಸವು ನನ್ನ ಮೂರು ದಿನದ ಹಿಂದಿನ ಯಾತನೆಯನ್ನು ಮರೆಮಾಚಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.