ADVERTISEMENT

ಮತ್ತೆ ಮತ್ತೆ ಅದೇ ಪ್ರಶ್ನೆಗಳು; ಲೈಂಗಿಕತೆಯ ಬಗೆಗಿನ ಭಯ, ಆತಂಕ, ಅಜ್ಞಾನಗಳ ಸೂಚನೆ

ನಡಹಳ್ಳಿ ವಂಸತ್‌
Published 15 ಏಪ್ರಿಲ್ 2022, 19:30 IST
Last Updated 15 ಏಪ್ರಿಲ್ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

20ರ ಯುವಕ. ಹಸ್ತಮೈಥುನ ಅಭ್ಯಾಸವಿದೆ. ನನ್ನ ಎತ್ತರವನ್ನು ಜಾಸ್ತಿ ಮಾಡಬಹುದೇ?
ಹೆಸರು ಊರು ತಿಳಿಸಿಲ್ಲ.

21ರ ಯುವಕ. 12 ವರ್ಷದವನಾಗಿದ್ದಾಗಿನಿಂದ ಹಸ್ತಮೈಥುನ ಮಾಡುತ್ತಿದ್ದೇನೆ. ಶಿಶ್ನದ ಗಾತ್ರ ಚಿಕ್ಕದಾಗಿದ್ದು ಮುದುಡಿದಂತೆ ಇರುತ್ತದೆ. ವಿವಾಹವಾದ ನಂತರ ಏನಾಗಬಹುದು ಎಂದು ಯೋಚನೆಯಾಗಿದೆ. ಪರಿಹಾರವೇನು?
ಹೆಸರು ಊರು ತಿಳಿಸಿಲ್ಲ.

23ರ ಯುವಕ. ಕೆಲವರ್ಷಗಳಿಂದ ಹಸ್ತಮೈಥುನ ಮಾಡುತ್ತಿದ್ದೇನೆ. ಈಗ ಭಯ ಕಾಡುತ್ತಿದೆ. ಇದನ್ನು ಬಿಡುವುದು ಹೇಗೆ?
–ಹೆಸರು ಊರು ತಿಳಿಸಿಲ್ಲ.

ADVERTISEMENT

ಪದವಿ ವಿದ್ಯಾರ್ಥಿ. ಹಸ್ತಮೈಥುನ ಅಭ್ಯಾಸವಿದೆ. ವಾರಕ್ಕೆ ಎಷ್ಟು ಸಾರಿ ಮಾಡಬಹುದು?
–ಹೆಸರು ಊರು ತಿಳಿಸಿಲ್ಲ.

10ವರ್ಷದಿಂದ ಹಸ್ತಮೈಥುನ ಮಾಡುತ್ತಿದ್ದೇನೆ. ಶಿಶ್ನದ ತುದಿಯಲ್ಲಿ ಕಪ್ಪು ಬಣ್ಣವಾಗಿದೆ. ಕೆಲವೊಮ್ಮೆ ತುರಿಕೆಯಾಗುತ್ತದೆ. ಪರಿಹಾರವೇನು?
ಹೆಸರು ಊರು ತಿಳಿಸಿಲ್ಲ.

ಹದಿಹರೆಯದ ಲೈಂಗಿಕ ಬೆಳವಣಿಗೆ ಮತ್ತು ಆಸಕ್ತಿಗಳ ಕುರಿತಾಗಿ ಈ ಅಂಕಣದಲ್ಲಿ ಹಲವಾರು ಬಾರಿ ಬರೆಯಲಾಗಿದೆ. ಹಾಗಿದ್ದರೂ ನಮ್ಮ ಯುವಜನತೆಯಿಂದ ಮತ್ತೆ ಮತ್ತೆ ಅದೇ ಪ್ರಶ್ನೆಗಳು ಬರುತ್ತಿವೆ. ಇದು ಯುವಜನತೆಯಲ್ಲಿ ಮತ್ತು ಒಟ್ಟಾರೆ ಸಮಾಜದಲ್ಲಿ ಲೈಂಗಿಕತೆಯ ಕುರಿತಾಗಿ ಇರುವ ಭಯ ಆತಂಕ ಅಜ್ಞಾನಗಳ ಸೂಚನೆಯಾಗಿದೆ. ಹಾಗೆಯೇ ಸಮಾಜವಿಜ್ಞಾನಿಗಳು ಮತ್ತು ಸರ್ಕಾರಗಳು ಸೇರಿ ಮಕ್ಕಳಿಗೆ ಅವರ ವಯಸ್ಸಿಗೆ ಅನುಗುಣವಾಗಿ ಸೂಕ್ತ ವೈಜ್ಞಾನಿಕ ಮಾಹಿತಿ ಒದಗಿಸುವ ವ್ಯವಸ್ಥೆಯನ್ನು ತುರ್ತಾಗಿ ರೂಪಿಸುವ ಅಗತ್ಯವನ್ನು ಒತ್ತಿ ಹೇಳುತ್ತದೆ.

ಹಸ್ತಮೈಥುನ ಆರೋಗ್ಯಕರ ಲೈಂಗಿಕ ಪ್ರವೃತ್ತಿ ಎಂದು (ದಿನಾಂಕ 30 ಜನವರಿ 2021ರ ಸಂಚಿಕೆ) ಇದೇ ಅಂಕಣದಲ್ಲಿ ವಿವರವಾಗಿ ಬರೆಯಲಾಗಿದೆ. ಇದನ್ನು ಓದಿದರೆ ಸಹಾಯವಾಗುತ್ತದೆ. ನಿಮ್ಮೊಳಗೆ ಮನೆಮಾಡಿರುವ ಭಯ ಆತಂಕಗಳೇ ಎಲ್ಲಾ ಸಮಸ್ಯೆಗೆ ಮೂಲ ಕಾರಣ.

ದೇಹದ ಎತ್ತರ ಮತ್ತು ಲೈಂಗಿಕ ಅಂಗಾಂಗಗಳ ಅಳತೆ ಆಕಾರಗಳು ಆನುವಂಶಿಕವಾದದ್ದು. ಇವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಪ್ರಚಾರ ಮಾಡುವ ಔಷಧಿಗಳಿಂದ ಪ್ರಯೋಜನವಾಗುವುದಿಲ್ಲ. ಲೈಂಗಿಕ ಸುಖಕ್ಕೂ ಅಂಗಾಗಗಳ ಆಕಾರಕ್ಕೂ ಸಂಬಂಧವಿರುವುದಿಲ್ಲ. ಸಂಗಾತಿಗಳ ನಡುವಿನ ಆತ್ಮೀಯತೆಯು ತೃಪ್ತಿ ಸಮಾಧಾನಕರ ಲೈಂಗಿಕ ಅನುಭವ ನೀಡುತ್ತದೆ. ಹಾಗಾಗಿ ಯುವಕರು ವಿದ್ಯೆ ಉದ್ಯೋಗಗಳ ಮೂಲಕ ಮೊದಲು ಸ್ವತಂತ್ರರಾಗುವುದರತ್ತ ಗಮನ ಹರಿಸಿದರೆ ತಮಗೆ ಒಪ್ಪುವ ಸಂಗಾತಿಯನ್ನು ಹುಡುಕಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲಿಯವರೆಗೆ ಕಾಮದ ಒತ್ತಡವನ್ನು ಹಸ್ತಮೈಥುನದಿಂದ ತಣಿಸಿಕೊಳ್ಳಬಹುದು.

ನೈರ್ಮಲ್ಯ ಮತ್ತು ಖಾಸಗೀತನವನ್ನು ಕಾಯ್ದುಕೊಳ್ಳುವುದರ ಕಡೆ ಯುವಜನತೆ ಎಚ್ಚರವಹಿಸಬೇಕು. ನಿಮ್ಮ ಖುಷಿಯ ಕ್ಷಣಗಳು ಇತರರಿಗೆ ಮುಜುಗರವುಂಟುಮಾಡಬಾರದು. ಒಳಉಡುಪು ಮತ್ತು ಲೈಂಗಿಕ ಅಂಗಾಂಗಳ ಮೇಲೆ ತೇವಾಂಶ ಸಂಗ್ರಹವಾದರೆ ತುರಿಕೆ ಉಂಟಾಗಬಹದು.

ಸಂಗಾತಿ ಇದ್ದಾಗ ಎಷ್ಟು ಸಾರಿ ಬೇಕಾದರೂ ಸೇರಬಹುದಲ್ಲವೇ? ಹಾಗೆಯೇ ಹಸ್ತಮೈಥುನವೂ ಕೂಡ. ದೇಹ ಮನಸ್ಸುಗಳಿಗೆ ಸಾಕೆನಿಸಿದಾಗ ಅವು ಸ್ಪಂದನೆಯನ್ನು ನಿಲ್ಲಿಸುತ್ತವೆ. ಆದರೆ ಹದಿಯರೆಯದವರು ಹಸ್ತಮೈಥುನವನ್ನು ಬೇಸರ ಕಳೆಯುವ ಸಾಧನವಾಗಿ ಬಳಸಿದಾಗ ಅದು ನಶೆಯ ರೀತಿಯಲ್ಲಿ ಅಂಟಿಕೊಳ್ಳುತ್ತದೆ. ಹಸ್ತಮೈಥುನ ತಮ್ಮೊಳಗಿರುವ ಹಿಂಜರಿಕೆ ಅಸಹಾಯಕತೆ ಬೇಸರ ಕೀಳರಿಮೆ ದುಖ ಮುಂತಾದವುಗಳನ್ನು ಮರೆಯುವ ಮಾರ್ಗವಾದಾಗ ಅದನ್ನು ಬಿಡಲಾಗದ ಸ್ಥಿತಿಗೆ ತಲುಪಬಹುದು. ಈ ರೀತಿಯ ಮಾನಸಿಕ ಹೋರಾಟಗಳನ್ನು ಅರ್ಥಮಾಡಿಕೊಂಡು ನಿಭಾಯಿಸುವುದನ್ನು ಕಲಿಯಬೇಕು.

ಅಗತ್ಯವಿದ್ದಲ್ಲಿ ಮನೋಚಿಕಿತ್ಸಕರು ಅಥವಾ ಲೈಂಗಿಕ ತಜ್ಞರನ್ನು ಭೇಟಿಯಾಗಬಹುದು. ವೈದ್ಯರ ಮೇಲ್ವಿಚಾರಣೆಯಿಲ್ಲದೆ ಯಾವುದೇ ಔಷಧಗಳನ್ನು ಬಳಸಬಾರದು. ಆಯುರ್ವೇದದ ಹೆಸರಿನಲ್ಲಿ ಪ್ರಚಾರದಲ್ಲಿರುವ ಔಷಧಗಳೂ ಕೂಡ ಕೆಲವೊಮ್ಮೆ ಹಾನಿಮಾಡಬಹುದು.

ನಡಹಳ್ಳಿ ವಸಂತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.