
ಗೆಟ್ಟಿ ಚಿತ್ರ
‘ಡೌನ್ ಸಿಂಡ್ರೋಮ್’ ಎಂಬುದು ಅನುವಂಶಿಕ ಸ್ಥಿತಿಯಾಗಿದೆ. ಇದು ಮಗುವಿನ ಕ್ರೋಮೋಸೋಮ್‌ಗಳಲ್ಲಿ ಬದಲಾವಣೆಯಾಗುವುದರಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಪ್ರತಿ ವ್ಯಕ್ತಿಯೂ 46 ಕ್ರೋಮೋಸೋಮ್‌ಗಳನ್ನು ಹೊಂದಿರುತ್ತಾರೆ. ಆದರೆ ‘ಡೌನ್ ಸಿಂಡ್ರೋಮ್’ ಹೊಂದಿರುವ ಮಕ್ಕಳಲ್ಲಿ 21ನೇ ಕ್ರೋಮೋಸೋಮ್ ಹೆಚ್ಚುವರಿಯಾಗಿರುತ್ತದೆ. ಇದನ್ನು ‘ಟ್ರೈಸೊಮಿ’ 21 ಎಂದು ಕರೆಯಲಾಗುತ್ತದೆ. ಈ ಹೆಚ್ಚುವರಿ ಅನುವಂಶಿಕ ವಸ್ತುವು ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಮಕ್ಕಳ ನರವಿಜ್ಞಾನ ವಿಭಾಗದ ವೈದ್ಯರಾದ ಡಾ. ಸಿ.ಪಿ ರವಿ ಕುಮಾರ್ ಅವರು ಹೇಳುತ್ತಾರೆ.
‘ಡೌನ್ ಸಿಂಡ್ರೋಮ್’ನ ಪ್ರಮುಖ ಲಕ್ಷಣಗಳು:
‘ಡೌನ್ ಸಿಂಡ್ರೋಮ್’ ಹೊಂದಿರುವ ಮಕ್ಕಳಲ್ಲಿ ಕೆಲವು ವಿಶಿಷ್ಟ ಲಕ್ಷಣಗಳು ಕಂಡುಬರುತ್ತವೆ. ಅವುಗಳೆಂದರೆ,
ಚಪ್ಪಟೆಯಾದ ಮುಖ ಹೊಂದಿರುವುದು.
ಸಣ್ಣ ಕಿವಿ, ಚಿಕ್ಕ ಕುತ್ತಿಗೆ ಹಾಗೂ ಚಿಕ್ಕ ಬೆರಳುಗಳಿರುವುದು.
ಸ್ನಾಯುಗಳ ದುರ್ಬಲತೆ ಹಾಗೂ ದೈಹಿಕ ಬೆಳವಣಿಗೆ ವಿಳಂಬವಾಗುವುದು.
‘ಡೌನ್ ಸಿಂಡ್ರೋಮ್’ಗೆ ಕಾರಣಗಳು:
‘ಡೌನ್ ಸಿಂಡ್ರೋಮ್’ಗೆ ಈ ವರೆಗೆ ನಿಖರವಾದ ಕಾರಣಗಳು ತಿಳಿದಿಲ್ಲವೆಂದು ವೈದ್ಯರಾದ ಡಾ. ರವಿ ಕುಮಾರ್ ಸಿ.ಪಿ ಅವರು ಹೇಳುತ್ತಾರೆ. ಆದರೆ ಕೆಲವು ಅಂಶಗಳು ಕಾರಣವಾಗತ್ತವೆ. ಅವುಗಳೆಂದರೆ,
35 ವರ್ಷ ಮೇಲ್ಪಟ್ಟು ತಾಯಿಯಾದರೆ, ಮಗು ‘ಡೌನ್ ಸಿಂಡ್ರೋಮ್’ ಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಿರಿಯ ವಯಸ್ಸಿನ ತಾಯಂದಿರಲ್ಲಿಯೂ ಇದು ಸಂಭವಿಸಬಹುದು.
ಕೆಲ ವೇಳೆ ಪೋಷಕರಿಂದ ಮಗುವಿಗೆ ಅನುವಂಶಿಕವಾಗಿ ವರ್ಗಾವಣೆಯಾಗಬಹುದು.
ಈಗಾಗಲೇ ‘ಡೌನ್ ಸಿಂಡ್ರೋಮ್’ ಮಗುವಿರುವ ದಂಪತಿಗಳಲ್ಲಿ ಎರಡನೆಯ ಮಗು ಇದೇ ಸ್ಥಿತಿಯಲ್ಲಿ ಹುಟ್ಟುವ ಸಾಧ್ಯತೆ ಇರುತ್ತದೆ.
ಪತ್ತೆ ಹಚ್ಚುವುದು ಹೇಗೆ:
ಗರ್ಭಾವಸ್ಥೆಯಲ್ಲಿಯೇ ಕೆಲವು ಪರೀಕ್ಷೆಗಳ ಮೂಲಕ ‘ಡೌನ್ ಸಿಂಡ್ರೋಮ್’ ಅನ್ನು ಪತ್ತೆಹಚ್ಚಬಹುದು. ‘ಅಲ್ಟ್ರಾಸೌಂಡ್ ಸ್ಕ್ಯಾನ್’, ‘ರಕ್ತ ಪರೀಕ್ಷೆ’ ಮತ್ತು ‘ಆಮ್ನಿಯೋಸೆಂಟೆಸಿಸ್’ ನಂತಹ ಪರೀಕ್ಷೆಗಳು ಸಹಾಯಕವಾಗಿವೆ. ಮಗು ಹುಟ್ಟಿದ ನಂತರ ದೈಹಿಕ ಲಕ್ಷಣ ಹಾಗೂ ಕ್ರೋಮೋಸೋಮ್‌ಗಳ ವಿಶ್ಲೇಷಣೆ ಮೂಲಕವೂ ‘ಡೌನ್ ಸಿಂಡ್ರೋಮ್’ ಅನ್ನು ಗುರುತಿಸಲಾಗುತ್ತದೆ.
ಚಿಕಿತ್ಸೆ ಮತ್ತು ಆರೈಕೆ:
‘ಡೌನ್ ಸಿಂಡ್ರೋಮ್’ ಅನ್ನು ಸಂಪೂರ್ಣವಾಗಿ ಗುಣಪಡಿಸುವ ಚಿಕಿತ್ಸೆ ಇಲ್ಲವಾದರೂ, ಸರಿಯಾದ ಆರೈಕೆ ಹಾಗೂ ಮಗುವಿಗೆ ನೀಡುವ ಬೆಂಬಲದಿಂದ ಮಗು ಸಂತೋಷದ ಜೀವನ ನಡೆಸಲು ಸಹಕಾರಿಯಾಗಬಹುದು.
ವೈಯಕ್ತಿಕ ಕಲಿಕೆ ಮಗುವಿನ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸುವುದು
ಕುಟುಂಬ ಹಾಗೂ ಪೋಷಕರು ಮಗುವಿನೊಂದಿಗೆ ಸಮಯ ಕಳೆಯುವುದು.
ಸೂಕ್ತ ಆರೈಕೆ, ಪ್ರೀತಿ ಹಾಗೂ ಪೋಷಕರ ಬೆಂಬಲದೊಂದಿಗೆ ‘ಡೌನ್ ಸಿಂಡ್ರೋಮ್’ ಹೊಂದಿರುವ ಮಗು ಶಾಲೆಗೆ ಹೋಗಬಹುದು, ಕೆಲಸ ಮಾಡಬಹುದು ಹಾಗೂ ಸಮಾಜದಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು ಎಂದು ವೈದ್ಯರಾದ ಡಾ. ರವಿ ಕುಮಾರ್ ಸಿ.ಪಿ ಅವರು ಹೇಳುತ್ತಾರೆ.
(ಡಾ. ರವಿ ಕುಮಾರ್ ಸಿ ಪಿ, ಮಕ್ಕಳ ನರವಿಜ್ಞಾನ ವಿಭಾಗ, ಆಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು.)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.