ADVERTISEMENT

ಒತ್ತಡದಿಂದ ಹೆಚ್ಚಾದ ಇಸುಬು ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 19:30 IST
Last Updated 27 ಜನವರಿ 2021, 19:30 IST
   

ಕೋವಿಡ್‌ ಶುರುವಾದ ಮೇಲೆ ಇಸುಬು (ಎಕ್ಸೆಮಾ) ಸಮಸ್ಯೆ ಕೂಡ ಜಾಸ್ತಿಯಾಗಿದೆ. ಇದು ಕೋವಿಡ್‌–19ನಿಂದಾದ ನೇರ ಪರಿಣಾಮ ಅಲ್ಲದಿದ್ದರೂ ಪರೋಕ್ಷ ಪರಿಣಾಮ ಎನ್ನುತ್ತಾರೆ ಚರ್ಮತಜ್ಞರು.

ಪದೇ ಪದೇ ಸ್ಯಾನಿಟೈಸರ್‌ ಬಳಸಿ ಕೈ ತೊಳೆಯುವುದರಿಂದ ಮಾತ್ರವಲ್ಲ, ಒತ್ತಡದಿಂದಲೂ ಈ ಸಮಸ್ಯೆ ತೀವ್ರವಾಗಿದೆ. ‘ಇದು ಕೊರೊನಾ ವೈರಸ್‌ನಿಂದ ಉಂಟಾದ ಸಮಸ್ಯೆಯಲ್ಲ. ನಾವು ಸದ್ಯ ನಡೆಸುತ್ತಿರುವ ಬದುಕಿನ ವೈಖರಿಯಿಂದಾಗಿ ಇಂತಹ ಗಂಭಿರ ಸಮಸ್ಯೆ ಉಂಟಾಗಿದೆ’ ಎನ್ನುತ್ತಾರೆ ಬೆಂಗಳೂರಿನ ಚರ್ಮ ಮತ್ತು ಕೇಶ ತಜ್ಞ ಡಾ. ಶಿವಸ್ವಾಮಿ ಶ್ರೀನಿವಾಸ್‌.

ಈ ಸಂದರ್ಭದಲ್ಲಿ ಹೆಚ್ಚು ಕಡಿಮೆ ಪ್ರತಿಯೊಬ್ಬರಲ್ಲೂ ಮಾನಸಿಕ ಒತ್ತಡ ಹೆಚ್ಚಾಗಿದೆ. ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಒತ್ತಡವೇ ಮೂಲ ಕಾರಣ ಎಂಬುದು ಗೊತ್ತಿರುವ ಸಂಗತಿ. ಒತ್ತಡವಾದಾಗ ನಮ್ಮ ದೇಹದಲ್ಲಿ ಕಾರ್ಟಿಸಾಲ್‌ ಎಂಬ ಹಾರ್ಮೋನ್‌ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಕಳೆದ ಒಂದು ವರ್ಷದಿಂದ ಕೋವಿಡ್‌ನಿಂದಾಗಿ ಬಹುತೇಕರಲ್ಲಿ ಒತ್ತಡದ ಮಟ್ಟ ಜಾಸ್ತಿಯಾಗಿದೆ. ಹೀಗಾಗಿ ಈ ಕಾರ್ಟಿಸಾಲ್‌ ಬಿಡುಗಡೆಯೂ ಹೆಚ್ಚಾಗಿದ್ದು, ಇದು ದೇಹದಲ್ಲಿ ಉರಿಯೂತ ಜಾಸ್ತಿಯಾಗಲು ಕಾರಣ ಎಂದು ವಿಶ್ಲೇಷಿಸುತ್ತಾರೆ ತಜ್ಞರು.

ADVERTISEMENT

ಇದರಿಂದ ತುರಿಕೆಯುಳ್ಳ ಹಾಗೂ ಅನಿಯಂತ್ರಿತ ಇಸುಬು ತೊಂದರೆ ಕೂಡ ಹೆಚ್ಚಾಗುತ್ತದೆ. ಒತ್ತಡದ ಅವಧಿಯಲ್ಲಿ ತ್ವಚೆಗೆ ಉಂಟಾಗುವ ಯಾವುದೇ ಸಮಸ್ಯೆಯಿರಲಿ, ಅದು ಕೆರೆತ, ಇಸುಬು ಯಾವುದೇ ಆಗಿರಲಿ, ಗುಣಮುಖರಾಗಲು ಹೆಚ್ಚು ಸಮಯ ಬೇಕಾಗುತ್ತದೆ.

‘ಕೋವಿಡ್‌ ಸಂದರ್ಭದಲ್ಲಿ ತಲೆದೋರಿರುವ ಅನಿಶ್ಚಿತತೆ ದುಗುಡವನ್ನು ಹೆಚ್ಚಿಸಿದೆ. ಇದರಿಂದ ಮಾನಸಿಕವಾಗಿ ಒತ್ತಡ ಸೃಷ್ಟಿಯಾಗಿದೆ. ಇಸುಬು ಇದ್ದವ
ರಲ್ಲಿ ಒತ್ತಡ, ಭಯಮತ್ತು ಆತಂಕ ಸೇರಿಕೊಂಡು ದೇಹದೊಳಗೆ ಹಾಗೂ ಚರ್ಮದ ಮೇಲೆ ಪರಿಣಾಮ ಬೀರಿದೆ’ ಎನ್ನುವ ವೈದ್ಯರು, ‘ಇಸುಬು ಎಂಬುದು ಸಹಜವಾಗಿಯೇ ದುಗುಡ ಹೆಚ್ಚಿಸುವ ಕಾಯಿಲೆ. ಹೀಗಿರುವಾಗ ಕೋವಿಡ್‌
ನಿಂದಾದ ಒತ್ತಡವೂ ಸೇರಿಕೊಂಡು ಇನ್ನಷ್ಟು ಸಮಸ್ಯೆ ಸೃಷ್ಟಿಸಿದೆ’ ಎನ್ನುತ್ತಾರೆ.

ಇಸುಬನ್ನು ಮಾಯಿಶ್ಚರೈಸರ್‌, ತ್ವಚೆಗೆ ಲೇಪಿಸುವ ಕಾರ್ಟಿಕೊಸ್ಟೆರಾಯ್ಡ್‌ ಆಯಿಂಟ್‌ಮೆಂಟ್‌ನಿಂದ ನಿಯಂತ್ರಿಸಬಹುದು.

ಆದರೆ ಇಸುಬಿನಲ್ಲಿ ಬೇರೆ ಬೇರೆ ವಿಧಗಳಿದ್ದು, ಎಲ್ಲರಿಗೂ ಎಲ್ಲಾ ರೀತಿಯ ಔಷಧ ಹೊಂದುವುದಿಲ್ಲ. ಹೀಗಾಗಿ ವೈದ್ಯರ ಸಲಹೆ ಬೇಕು. ಈ ಸಂದರ್ಭದಲ್ಲಿ ಟೆಲೆಮೆಡಿಸಿನ್‌ ಮೊರೆ ಹೋಗಬಹುದು. ಹಾಗೆಯೇ ಸ್ಯಾನಿಟೈಸರ್‌ ಕುರಿತೂ ವೈದ್ಯರ ಸಲಹೆ ಪಡೆದು ಬಳಸುವುದು ಸೂಕ್ತ ಎನ್ನುತ್ತಾರೆ ವೈದ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.