ಬದುಕಿನ ಸವಾಲುಗಳಿಗೆ ಉತ್ಸಾಹದಿಂದ ಎದೆಯೊಡ್ಡಿ ನಿಲ್ಲದಾದರೆ ಅದೊಂದು ಬದುಕೇ?. ಉತ್ಸಾಹವೆಂಬುದು ನೆನೆದ ಅವಲಕ್ಕಿಯಂತಾಗದೆ ಚಟಪಟನೆ ಸಿಡಿಯುವ ಸಾಸಿವೆಯ ಒಗ್ಗರಣೆಯಾದಾಗ ಬದುಕಿನ ಘಮಲು, ಗಮ್ಮತ್ತುಗಳು ಹೆಚ್ಚುತ್ತವೆ.
ನಮ್ಮ ಸುತ್ತಲಿನವರ ಜೀವನವನ್ನು ಅವಲೋಕಿಸಿ ನೋಡಿ, ಎಲ್ಲರೂ ಯಾವುದಾದರೂ ಒಂದು ತುಡಿತಕ್ಕೆ ಒಳಗಾಗಿ ನಡೆಯುತ್ತಿರುವುದು ಕಂಡುಬರುತ್ತದೆ. ಆದರೆ ಆ ನಡಿಗೆಯಲ್ಲಿ ಎಲ್ಲರದೂ ಒಂದೇ ವೇಗವಲ್ಲ. ಏಕೆಂದರೆ ಅವರವರೊಳಗಿನ ಉತ್ಸಾಹದ ಮಟ್ಟಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುತ್ತಾರೆ. ನನ್ನ ವಿದ್ಯಾರ್ಥಿಗಳು ತಮ್ಮ ಇಷ್ಟದ ತರಗತಿಗಳಿಗೆ ಬರುವಾಗ ಹಾಕುವ ಹೆಜ್ಜೆಗೂ, ತಮಗಿಷ್ಟವಿಲ್ಲದೆ ಕೇವಲ ಹಾಜರಾತಿಗಾಗಿ ಬರುವ ತರಗತಿಗಳಿಗೆ ಹಾಕುವ ಹೆಜ್ಜೆಗೂ ವ್ಯತ್ಯಾಸ ಕಂಡಿದ್ದೇನೆ. ಅಷ್ಟೇ ಅಲ್ಲ, ಮಗುವೊಂದು ಮನೆಯಿಂದ ಶಾಲೆಗೆ ಬರುವಾಗ, ಶಾಲೆಯಿಂದ ಮನೆಗೆ ಹೋಗುವಾಗ ಅದರ ನಡಿಗೆಯ ವೇಗವನ್ನು ಗಮನಿಸಿದಾಗ ಉತ್ಸಾಹ ಎಂಬುದು ಹೇಗೆ ನಮ್ಮ ಜೀವನದಲ್ಲಿ ವ್ಯಕ್ತವಾಗುತ್ತದೆ ಎಂಬುದು ವಿದಿತವಾಗುತ್ತದೆ. ಇದು ಜೀವನದ ಎಲ್ಲ ಕ್ರಿಯೆಗಳಿಗೂ ಅನ್ವಯವಾಗುತ್ತದೆ.
ಯಾರೂ ಸೋಲಬೇಕೆಂದು ಹುಟ್ಟಿಲ್ಲ; ಸೋಲಬೇಕೆಂದು ಜೀವಿಸುವುದೂ ಇಲ್ಲ. ಭೂಮಿಯ ಗುರುತ್ವಾಕರ್ಷದಂತೆ ವಿಷಾದವು ಮನಸ್ಸನ್ನು ಕೆಳಗೆಳೆಯಲು ಸದಾ ಸಿದ್ಧವಿರುತ್ತದೆ. ಆದರೆ ಉತ್ಸಾಹವು ರಾಕೆಟ್ಟಿನ ಇಂಧನದಂತೆ ವ್ಯಕ್ತಿಯನ್ನು ಮೇಲೆತ್ತಲು ಆಂತರ್ಯದಲ್ಲಿ ಇದ್ದೇ ಇರುತ್ತದೆ. ಪ್ರೋತ್ಸಾಹದ ಕಿಡಿ ತಗುಲಿಸಿಬಿಟ್ಟರೆ ಬದುಕು ಸರ್‍ರನೆ ಮೇಲೇರುತ್ತದೆ. ಉತ್ಸಾಹವಿಲ್ಲದ ಬದುಕು ಬಹಳ ಹಿಂಜರಿಕೆಗಳಿಂದ ಕೂಡಿರುತ್ತದೆ. ‘ಉತ್ಸಾಹವೆಂಬ ಅಗ್ನಿಪರ್ವತದ ಶಿಖರದಲ್ಲಿ ಹಿಂಜರಿಕೆಯ ಹುಲ್ಲುಗರಿಕೆ ಬೆಳೆಯುವುದಿಲ್ಲ’ ಎನ್ನುತ್ತಾನೆ, ಖಲೀಲ್ ಗಿಬ್ರಾನ್. ‘ನಿಮ್ಮ ಮೊಗದಲ್ಲಿ ನಿರುತ್ಸಾಹದ ಮೋಡ ಕವಿದಿದ್ದರೆ, ಆ ದಿನ ನೀವು ಕೋಣೆಯೊಳಗೇ ಇದ್ದುಬಿಡಿ. ನಿಮ್ಮ ದುಗುಡದ ಕಾಯಿಲೆಯನ್ನು ಜಗತ್ತಿಗೆ ಹಂಚಲು ನಿಮಗಾವ ಅಧಿಕಾರವಿದೆ?’ ಎನ್ನುತ್ತಾರೆ, ಸ್ವಾಮಿ ವಿವೇಕಾನಂದರು. ವಿಷಾದದ ಸ್ಥಾಯಿಭಾವವನ್ನು ಬದುಕಿನ ಕೇಂದ್ರವಾಗಿಸಿಕೊಂಡು ತನ್ನ ಬಗ್ಗೆಯೇ ಮರುಕಪಡುತ್ತಾ ಅಥವಾ ಜಗತ್ತಿನ ಅಂಕುಡೊಂಕುಗಳ ಬಗ್ಗೆ ಬೇಸರಿಸಿಕೊಳ್ಳುತ್ತ ಜೀವ ಸವೆಸುವುದನ್ನು ನಿವಾರಿಸಿಕೊಳ್ಳಬೇಕೆಂಬುದೇ ಈ ಲೇಖನದ ಆಶಯ.
ಬದುಕಿನಲ್ಲಿ ಗುರಿಯ ಜೊತೆಗೆ ಅದನ್ನು ಸಾಧಿಸಲು ಉತ್ಸಾಹವನ್ನು ಮೈಗೂಡಿಸಿಕೊಳ್ಳಬೇಕು. ಇದು ಕೇವಲ ಸಕಾರಾತ್ಮಕ ಚಿಂತನೆಯಾಗಿ ಉಳಿಯದೆ ಜೀವನದ ದೈನಂದಿನ ಕಾರ್ಯಗಳಲ್ಲಿ ಪುಟಿಯುವ ಕ್ಷಮತೆಯಾಗಿ ತೋರಿಕೊಳ್ಳಬೇಕು. ಉತ್ಸಾಹವನ್ನು ಹೊರಗಿನಿಂದ ತುಂಬುವದಾಗದು, ಅದು ಒಳಗಿನಿಂದಲೇ ಚಿಮ್ಮುವಂತಹದ್ದು. ಮಕ್ಕಳಲ್ಲಿ ಸಹಜವಾಗಿಯೇ ಉತ್ಸಾಹ ಕಂಡುಬರುತ್ತದೆ. ಅವರ ಅಬ್ಬರ, ಅರಚಾಟ, ಕಿರಿಚಾಟ – ಇವೆಲ್ಲ ಉತ್ಸಾಹದ ದ್ಯೋತಕವೇ. ಆದರೆ ಕ್ರಮೇಣ ಸುತ್ತಲಿನ ಒತ್ತಡವು ಪದೇ ಪದೇ ಅದನ್ನು ಮೊಟಕುಗೊಳಿಸುವ ಕಾರಣದಿಂದ ಈ ಉತ್ಸಾಹದ ಬತ್ತಿ ಹೋಗಿ ಬದುಕು ಯಾಂತ್ರಿಕ ಕ್ರಿಯೆಯಾಗಿ ಪರಿವರ್ತಿತವಾಗಿಬಿಡುತ್ತದೆ. ಮಕ್ಕಳ ಈ ಉತ್ಸಾಹವನ್ನು ರಚನಾತ್ಮಕ ಕ್ರಿಯೆಗಳತ್ತ ತಿರುಗಿಸಬೇಕಾದ್ದು ಶಿಕ್ಷಣದ ಉದ್ದೇಶ. ಅದನ್ನು ಹೊರತುಪಡಿಸಿ ಶಿಸ್ತಿನ ಹೆಸರಿನಲ್ಲಿ ಉತ್ಸಾಹವನ್ನು ಹತ್ತಿಕ್ಕಿ ಅವರನ್ನು ಮೆತ್ತಗಾಗಿಸುವುದು ಆ ಜೀವವನ್ನು ಕೊಂದಂತೆಯೇ.
ಮನುಷ್ಯನೊಳಗಣ ಮಾಧವ ಸುಮ್ಮನಿರುವುದಿಲ್ಲ; ಅದನ್ನು ಎಷ್ಟೇ ಎಷ್ಟೇ ಅದುಮಿದರೂ ಉತ್ಸಾಹವನ್ನು ಕಂಡುಕೊಳ್ಳುವ ಮನುಷ್ಯನ ಆಂತರ್ಯದ ಬಯಕೆ ಮುಂದುವರೆಯುತ್ತದೆ. ಉತ್ಸಾಹವು ಸಹಜವಾಗಿ ನಮ್ಮೊಳಗೆ ಇರುವಂತಹದ್ದು. ಅದನ್ನು ಬತ್ತಿಹೋಗದಂತೆ ಸರಿಯಾಗಿ ಪೋಷಿಸಿಕೊಂಡು ಬೆಳೆಸಬೇಕು. ಅದನ್ನೇ ಬಂಡವಾಳವಾಗಿಸಿಕೊಂಡು ಜೀವನವನ್ನು ಕಟ್ಟಿಕೊಳ್ಳಬೇಕು, ಕ್ರೀಡಾಪಟುಗಳು ಮತ್ತು ಜಗತ್ತಿನ ಎಲ್ಲಾ ಯಶಸ್ವೀ ವ್ಯಕ್ತಿಗಳು ತಪ್ಪದೆ ಹೊಂದಿರುವ ಒಂದು ಗುಣವೆಂದರೆ ಈ ಉತ್ಸಾಹಶೀಲತೆ. ಬಾಗದ ಬೇಡದ ಬಾಡದ ಉತ್ಸಾಹದ ಪುಷ್ಪವೊಂದು ಎದೆಯೊಳಗೆ ಸತತವಾಗಿ ಸ್ಥಾಪಿತವಾಗಿರಬೇಕು. ಹಿರಿಯರ ವ್ಯಕ್ತಿ ಚಿತ್ರಗಳು ಸುಗಂಧಭರಿತ ಮಂದಾನಿಲದಂತೆ ನಮ್ಮ ಉತ್ಸಾಹವನ್ನು ಉರುಬಿ ಹೆಚ್ಚಿಸಬಲ್ಲದು. ಡಿವಿಜಿಯವರ ‘ಜ್ಞಾಪಕ ಚಿತ್ರಶಾಲೆ’, ಎಂ. ಆರ್. ಶ್ರೀನಿವಾಸಮೂರ್ತಿ ಅವರ ‘ರಂಗಣ್ಣನ ಕನಸಿನ ದಿನಗಳು’, ಟಿ. ವಿ. ವೆಂಕಟಾಚಲಶಾಸ್ತ್ರಿಯವರ ‘ಮೆಲುಗಾಳಿಯ ಮಾತುಗಳು ಮತ್ತು ‘ಉದಾರ ಚರಿತರು ಉದಾತ್ತ ಪ್ರಸಂಗಗಳು’ ಮೊದಲಾದ ವ್ಯಕ್ತಿಚಿತ್ರ ಕೃತಿಗಳಲ್ಲಿನ ವ್ಯಕ್ತಿತ್ವಗಳನ್ನು ಗಮನಿಸಿದಾಗ ಇದರ ಮಹತ್ವ ಅರಿವಾಗುತ್ತದೆ.
ಉತ್ಸಾಹವೆಂಬುದು ನೆನೆದ ಅವಲಕ್ಕಿಯಂತಾಗದೆ ಚಟಪಟನೆ ಸಿಡಿವ ಸಾಸಿವೆ ಒಗ್ಗರಣೆಯಾದಾಗ ಬದುಕಿನ ಗಮಲು, ಗಮ್ಮತ್ತು ಹೆಚ್ಚುತ್ತದೆ. ಎಲ್ಲ ಬದುಕಿಗೂ ಅಂತ್ಯವಿದೆ. ಹಾಗೆಂದು ನಿರಾಶರಾಗದೆ ಅಳಿಸದ ಛಾಪೊಂದನ್ನು ಮೂಡಿಸಲು ದೊರೆತ ಜೀವಿತಾವಧಿಯನ್ನು ಬಳಸಿಕೊಳ್ಳಬೇಕು. ಮಹಾಭಾರತದ ಯುದ್ಧದ ಸಂದರ್ಭವನ್ನೇ ಗಮನಿಸಿ. ಯುದ್ಧವೆಂದರೆ ಒಬ್ಬರಲ್ಲ ಒಬ್ಬರಿಗೆ ಸೋಲೋ ಸಾವೋ ಖಚಿತವೇ. ಆದರೆ ವೃದ್ಧನಾದ ಭೀಷ್ಮನೂ ಸೆಣೆಸಲು ಸಿದ್ಧ. ಏಕೆಂದರೆ ಅದು ಕ್ಷತ್ರಿಯಧರ್ಮ. ಹಾಗೆಯೇ ಯುವಕನಾದ ಅಭಿಮನ್ಯುವೂ ಚಕ್ರವ್ಯೂಹ ಭೇದಿಸಲು ಸಿದ್ಧ. ಇವರಾರೂ ಅರೆಮನಸ್ಕರಾಗಿ ಯುದ್ಧದಲ್ಲಿ ತೊಡಗಲಿಲ್ಲ. ಅದನ್ನು ತಪ್ಪಿಸಬೇಕೆಂದು ಪ್ರಯತ್ನಿಸಿದವರೂ ಅದು ಅನಿವಾರ್ಯವಾದಾಗ ಅಷ್ಟೇ ಉತ್ಸಾಹದಿಂದ ತೊಡೆತಟ್ಟಿ ನಿಂತರು. ಬದುಕಿನ ಸವಾಲುಗಳಿಗೆ ಉತ್ಸಾಹದಿಂದ ಎದೆಯೊಡ್ಡಿ ನಿಲ್ಲದಾದರೆ ಅದೊಂದು ಬದುಕೇ? ಯಾವ ಧರ್ಮದ ದೇವತೆಯನ್ನಾದರೂ ನೋಡಿ. ಆ ಮೊಗದಲ್ಲಿ ಮಂದಹಾಸ–ಉತ್ಸಾಹಗಳು ಕಾಣುತ್ತವೆ. ರೌದ್ರದೇವತೆಗಳ ಪಟವನ್ನೂ ಕಾಣಬಹುದು, ಕರುಣೆಯ ಮೂರ್ತಿಗಳನ್ನೂ ನೋಡಬಹುದು. ಆದರೆ ದಯನೀಯ ಮೊಗದ, ನಿರುತ್ಸಾಹಿಯಾದ ದೇವತೆಯನ್ನು ಎಲ್ಲಿಯೂ ಕಾಣೆವು. ಏಕೆಂದರೆ ಉತ್ಸಾಹವೇ ಬದುಕಿನ ಬಂಡವಾಳ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.