ADVERTISEMENT

ಕಣ್ಣಿನ ರಕ್ಷಣೆಯತ್ತ ದೃಷ್ಟಿ: ಕಣ್ಣುಗಳನ್ನು ಹೇಗೆ ಜೋಪಾನ ಮಾಡಬೇಕು?

ಡಾ.ಪಲ್ಲವಿ ಹೆಗಡೆ
Published 2 ನವೆಂಬರ್ 2021, 4:33 IST
Last Updated 2 ನವೆಂಬರ್ 2021, 4:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಗತ್ತನ್ನು ನೋಡಲು ಕಣ್ಣುಗಳು ಬೇಕು. ದೃಷ್ಟಿಯಿಲ್ಲದಿದ್ದರೆ ಜೀವನದ ಪ್ರಯಾಣ ಸುಲಭವಲ್ಲ. ಹೀಗೆ ನಮ್ಮ ಬದುಕಿಗೆ ಬೆಳಕಾಗಿರುವ ಕಣ್ಣುಗಳನ್ನು ಹೇಗೆ ಜೋಪಾನ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಇಲ್ಲಿ ಕೆಲವೊಂದು ಸಲಹೆ–ಸೂಚನೆಗಳಿವೆ:

ಕಣ್ಣನ್ನು ತೊಳೆಯುವುದು: ಮುಂಜಾನೆ ಶುದ್ಧತಣ್ಣೀರಿನಲ್ಲಿ ಕಣ್ಣನ್ನು ತೊಳೆಯುವುದು, ಜೇನುತುಪ್ಪ ಮತ್ತು ತಣ್ಣೀರನ್ನು ಸಮಪ್ರಮಾಣದಲ್ಲಿ ಬೆರೆಸಿ ಕಣ್ಣನ್ನು ತೊಳೆಯುವುದು ಅಕ್ಷಿಶುದ್ಧಿಕರ.

ಕಾಡಿಗೆ ಹಚ್ಚುವುದು: ತುಪ್ಪದಲ್ಲಿ ಶುದ್ಧ ಬಿಳಿಹತ್ತಿಯ ಬತ್ತಿಯನ್ನು ಉರಿಸಬೇಕು. ದೀಪ ಉರಿಯುವಾಗ ಮಣ್ಣು/ ಬೆಳ್ಳಿ/ ಬಂಗಾರ/ ತಾಮ್ರದ ಬಟ್ಟಲಿನ ಪಾತ್ರೆಯ ತಳವನ್ನು ದೀಪದ ಮೇಲೆ ಅಡ್ಡವಾಗಿ ಹಿಡಿಯಬೇಕು. ಪೂರ್ತಿ ಉರಿದ ಮೇಲೆ ಮಸಿಯ ದಪ್ಪಪದರ ಅಂಟಿರುತ್ತದೆ. ಅದನ್ನು ಮೃದುವಾಗಿ ತೆಗೆದು ಸಂಗ್ರಹಿಸಿಡಬೇಕು. ನಿತ್ಯವೂ ಬೆಳಗ್ಗೆ ಹಲ್ಲುಜ್ಜಿದ ನಂತರ ಬೆಣ್ಣೆ/ ತುಪ್ಪದೊಂದಿಗೆ ಕಲಸಿ ಕಿರುಬೆರಳಿನಲ್ಲಿ ಕಣ್ಣಿಗೆ ಕಾಡಿಗೆಯಂತೆ ಬಳಸಬೇಕು. ಈ ಮೃದುಕಾಡಿಗೆ ದೃಷ್ಟಿವರ್ಧಕ.

ADVERTISEMENT

ತುಪ್ಪದ ಕವಲಗ್ರಹ: ದಿವಸವೂ ಬೆಳಗ್ಗೆ ಹಲ್ಲುಜ್ಜಿದ ತಕ್ಷಣ ತುಪ್ಪದ ಮೇಲಿನ ತಿಳಿಯನ್ನು ಬೆಚ್ಚಗೆ ಮಾಡಿ ಬಾಯೊಳಗೆ ಇಟ್ಟುಕೊಳ್ಳುವುದು, ಎಂಜಲು ತುಂಬಿ ಬಂದಾಗ ಉಗಿಯುವುದು ಕೂಡ ನೇತ್ರಗಳಿಗೆ ಹಿತಕರ.

ಸರ್ವಾಂಗಗಳಿಗೂ ಅಭ್ಯಂಗ: ನಿತ್ಯವೂ ತಲೆ, ಮೈ, ಕಾಲುಗಳಿಗೆ ಎಣ್ಣೆ ಸವರಿಕೊಂಡು ಸ್ನಾನಮಾಡುವ ಉಪಾಯವನ್ನು ಆಯುರ್ವೇದವು ಹೇಳಿದೆ. ಮುಪ್ಪನ್ನು ಮುಂದೂಡುವ, ದೃಷ್ಟಿಪ್ರಸಾದನ ಮಾಡುವ ಉತ್ತಮೋತ್ತಮ ದಿನಚರಿಯಿದು.

ನಸ್ಯ: ಸ್ನಾನಕ್ಕೂ ಮುನ್ನ ಮೂಗಿಗೆ ನಾಲ್ಕಾರು ಹನಿಗಳಷ್ಟು ಕರಗಿಸಿದ ತುಪ್ಪವನ್ನು ಹಾಕುವುದು ಕಣ್ಣಿಗೆ ಹಿತ.

ಸ್ನಾನ: ತಲೆಗೆ ತಣ್ಣಗಿನ ಎಣ್ಣೆ ಮತ್ತು ತಲೆಗೆ ತಣ್ಣೀರು ಸ್ನಾನ ಮಾಡುವುದು ದೃಷ್ಟಿರಕ್ಷಕ. ತಲೆಗೆ ಬಿಸಿಬಿಸಿ ನೀರಿನಿಂದ ಸ್ನಾನ ಮಾಡುವುದು ದೃಷ್ಟಿಶಕ್ತಿಯನ್ನು ಕುಗ್ಗಿಸುತ್ತದೆ. ತಣ್ಣೀರು, ಅಥವಾ ಚಳಿಗಾಲ/ ಶೀತಪ್ರದೇಶದಲ್ಲಿ ಮೈಬಿಸಿ/ ಹೂಬಿಸಿ ನೀರಿನ ಸ್ನಾನ ಕಣ್ಣಿಗೆ ಉತ್ತಮ.

ಕಣ್ಣಿಗೆ ಬಿಂದುಗಳು: ತಾಯಿಯ ಎದೆಹಾಲನ್ನು ಹಿಂಡಿ ನಾಲ್ಕಾರು ಹನಿಗಳನ್ನು, ಹಾಲಿನ ಬಿಸಿ ಆರುವ ಮುನ್ನವೇ ಕಣ್ಣಿಗೆ ಹಾಕಿಕೊಳ್ಳುವುದು ನೇತ್ರಗಳಿಗೆ ಪುಷ್ಟಿಕರ. ಸ್ತನ್ಯ ಲಭ್ಯವಿರದಿದ್ದರೆ, ಕಾಯಿಸಿ ಆರಿಸಿದ ಹಾಲನ್ನು ಉಪಯೋಗಿಸಬಹುದು. ಕಣ್ಣಿನ ಉರಿ, ಒಣಗಿದ ತೇವವನ್ನು ಸರಿಪಡಿಸುತ್ತದೆ.

ಆಹಾರದಲ್ಲಿ ತುಪ್ಪ-ಬೆಣ್ಣೆ: ನಿತ್ಯವೂ ಬಿಸಿ ಬಿಸಿ ಆಹಾರದೊಂದಿಗೆ ಹಾಲಿನಿಂದ ತೆಗೆದ ಬೆಣ್ಣೆಯನ್ನು, ತುಪ್ಪವನ್ನು ಸೇವಿಸುವುದು ಕಣ್ಣುಗಳಿಗೆ ಹಿತಕರ.

ಹಣ್ಣಿನ ಸೇವನೆ: ಹಸಿ/ಒಣದ್ರಾಕ್ಷಿಯನ್ನು ಆಹಾರದಲ್ಲಿ ನಿಯಮಿತವಾಗಿ ಸೇವಿಸುವುದು ಕಣ್ಣಿಗೆ ಹಿತಕರ.

ಉಪ್ಪು: ಆಹಾರದಲ್ಲಿ ಸೈಂಧವಉಪ್ಪು(ಅಥವಾ ಪಥ್ಯದ ಉಪ್ಪು/ಕಲ್ಲುಪ್ಪು/ರಾಕ್ ಸಾಲ್ಟ್) ಬಳಸುವುದು ಕಣ್ಣಿಗೆ ಹಿತ. ಬೇರೆಲ್ಲಾ ಉಪ್ಪು ದೃಷ್ಟಿನಾಶಕ. ನಿತ್ಯವೂ ಸಮುದ್ರದ ಉಪ್ಪು, ಟೇಬಲ್ ಸಾಲ್ಟ್, ಅಯೋಡಿನ್ ಉಪ್ಪಿನ ನಿತ್ಯಬಳಕೆಯಿಂದ ದೃಷ್ಟಿಶಕ್ತಿ ಕುಂದುವುದು.

ರಾತ್ರಿಯ ಆಹಾರ: ಎಂಟುಗಂಟೆಯೊಳಗೆ ರಾತ್ರಿ ಆಹಾರಸೇವನೆಯ ಅಭ್ಯಾಸ ಕಣ್ಣು ಮತ್ತು ಇತರ ಇಂದ್ರಿಯಗಳಿಗೆ ಹಿತಕರ. ಮೊಸರನ್ನು ರಾತ್ರಿಯ ಆಹಾರದಲ್ಲಿ ಸೇವಿಸಬಾರದು. ರಾತ್ರಿವೇಳೆಯಲ್ಲಿ ಮೊಸರಿನ ಸೇವನೆ ಕಣ್ಣಿನ ಹಲವು ತೊಂದರೆಗಳಿಗೆ ಕಾರಣ.

ನೆಲ್ಲಿಕಾಯಿಯ ನಿಯಮಿತ ಸೇವನೆ: ಆಹಾರದಲ್ಲಿ ನೆಲ್ಲಿಕಾಯಿಯನ್ನು ಬಳಸುವುದು ಉದಾಹರಣೆಗೆ ನೆಲ್ಲಿಕಾಯಿ ಚಟ್ನಿ, ಮಜ್ಜಿಗೆ ಹುಳಿ, ಸಾರು, ರಸಂ, ಹುಳಿಗಾಗಿ ನೆಲ್ಲಿಪುಡಿ, ನೆಲ್ಲಿ ಹಾಕಿ ಕುದಿಸಿದ ನೀರು ಇವುಗಳ ಸೇವನೆ ನೇತ್ರರಕ್ಷಕ. ನೆಲ್ಲಿಕಾಯಿ ಹೊರತುಪಡಿಸಿ ಬೇರೆ ಎಲ್ಲಾ ಹುಳಿರುಚಿಯ ಪದಾರ್ಥಗಳ ಅನಿಯಮಿತ ಸೇವನೆ ಕಣ್ಣಿಗೆ ಹಾನಿ.

ರಸಾಯನ ವಿಧಾನ: ತ್ರಿಫಲಾ ಚೂರ್ಣ ಸುಮಾರು ಕಾಲು ಚಮಚ, ತುಪ್ಪ ಒಂದು ಚಮಚ ಜೇನುತುಪ್ಪ ಎರಡು-ಮೂರು ಹನಿಗಳನ್ನು ಕಲಸಿ, ರಾತ್ರಿಮಲಗುವ ಮುನ್ನ ನೆಕ್ಕುವುದು ಕಣ್ಣಿಗೆ ಹಿತಕರ. ಈ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವುದು.

ರಾತ್ರಿ ನಿದ್ರೆ-ಹಗಲು ದುಡಿಮೆ: ಸಕಾಲದಲ್ಲಿ ಹಿತಮಿತ ಆಹಾರಸೇವನೆ-ನಿದ್ದೆ-ದೈನಂದಿನ ವ್ಯವಹಾರ ಕಣ್ಣಿನ ರೋಗಗಳನ್ನೂ ದೂರವಿಡುತ್ತದೆ. ಅಂದರೆ ಹಗಲು ದುಡಿಮೆ, ರಾತ್ರಿ ನಿದ್ರೆ. ತಡರಾತ್ರಿಯೂ ಕೃತಕಬೆಳಕಿನಲ್ಲಿ ಎಚ್ಚರವಿರುವ, ಟಿ.ವಿ., ಮೊಬೈಲ್, ಕಂಪ್ಯೂಟರ್ ವೀಕ್ಷಣೆ ಕಣ್ಣಿಗೆ ಹಾನಿಕರ. ಪ್ರಖರ ಬೆಳಕನ್ನು/ ಸೂರ್ಯರಶ್ಮಿಯನ್ನು ನೇರವಾಗಿ ದಿಟ್ಟಿಸುವ ಪ್ರಯತ್ನ ಮಾಡಬಾರದು. ಸಾಕಷ್ಟು ಬೆಳಕಿನಲ್ಲಿಯೇ ಓದುವ ಅಭ್ಯಾಸ, ಕಣ್ಣಿಗೆ ಹಿತವೆನಿಸುವ ನೋಟ, ಕಣ್ಣಿಗೆ ಸಾಕಷ್ಟು ವಿರಾಮ ದೃಷ್ಟಿಯ ರಕ್ಷಕ.

ಜೈವಿಕಕ್ರಿಯೆಗಳ ಕರೆಗಳನ್ನು ಆಲಿಸಿ: ಅಧೋವಾಯು, ಮಲ, ನಿದ್ರೆ, ಕಣ್ಣೀರು, ಅಜೀರ್ಣದಿಂದಾಗುವ ವಾಂತಿ - ಈ ಶಾರೀರಿಕ ಕರೆಗಳು ದೇಹದ ಅಗತ್ಯಗಳು. ಇವುಗಳಿಗೆ ಗಮನ ಕೊಡದಿದ್ದರೆ ದೃಷ್ಟಿಯೇ ನಷ್ಟವಾದೀತು. ಆದ್ದರಿಂದ, ಇವುಗಳು ಬಂದಾಗ ತಕ್ಷಣ ಅವಸರಿಸಬೇಕು, ವಿಸರ್ಜಿಸಬೇಕು.

ಇವು ದೃಷ್ಟಿಗೆ ಹಾನಿ: ಎಣ್ಣೆಯ ಅತಿಬಳಕೆ/ತಪ್ಪಾದ ಸೇವನೆ ಕಣ್ಣಿಗೆ ಹಾನಿಕರ. ಅದರಲ್ಲೂ ಅತಸೀ/ಅಗಸೆ, ಕುಸುಬೆ ಎಣ್ಣೆಗಳ ಬಳಕೆಯಲ್ಲಿ ಎಚ್ಚರವಿರಲಿ. ಎಣ್ಣೆಯನ್ನು ತೆಗೆದ ನಂತರ ಉಳಿಯುವ ಹಿಂಡಿ (ಉದಾಹರಣೆಗೆ ಸೋಯಾ ಹಿಂಡಿ/ ಸೋಯಾ ಚಂಕ್ಸ್) ಸೇವನೆ ಕಣ್ಣಿಗೆ ಹಿತವಲ್ಲ. ನಾಲ್ಕಾರು ದಿನಗಳಾದ/ಒಣಕಲು ತರಕಾರಿ, ಸೊಪ್ಪುಗಳು ಹಿತವಲ್ಲ.

(ಲೇಖಕಿ ಆಯುರ್ವೇದವೈದ್ಯೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.