‘ಪ್ರೀ ತಿಯಿಲ್ಲದೆ ಜೀವಿಸಲಾರೆ’ ಎನ್ನುವುದು ಕೇವಲ ಕವಿಚಾತುರ್ಯದ ಮಾತು. ಬದುಕಿನ ಅಸಲಿ ಆವಶ್ಯಕತೆಗಳು ನೀರು ಮತ್ತು ಆಹಾರ. ಪ್ರಾಣಿ-ಪಕ್ಷಿಗಳು ಮಲಿನ ನೀರು–ಆಹಾರಗಳನ್ನು ಸೇವಿಸಿಯೂ ಬದುಕುತ್ತವಾದರೂ, ನಾಗರಿಕತೆಗೆ ಹೊಂದಿಕೊಂಡಿರುವ ಮನುಷ್ಯರಿಗೆ ರೋಗದಿಂದ ಕಾಪಾಡಿಕೊಳ್ಳಲು ಆಹಾರ-ಪಾನೀಯಗಳು ಶುಚಿಯಾಗಿರುವುದು ಅತ್ಯಗತ್ಯ. ನಮ್ಮನ್ನು ಕಾಡುವ ಬಹುತೇಕ ಸಾಂಕ್ರಾಮಿಕ ರೋಗಗಳು ಮಲಿನವಾದ ನೀರು ಅಥವಾ ಆಹಾರಗಳಿಂದಲೇ ಸಂಭವಿಸುತ್ತವೆ.
ಮಲಿನ ಆಹಾರ-ಪಾನೀಯಗಳು ಎರಡು ರೀತಿಗಳಿಂದ ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಮೊದಲನೆಯದು - ಅವುಗಳಲ್ಲಿ ಇರಬಹುದಾದ ಸೋಂಕುಕಾರಕ ಪರೋಪಜೀವಿಗಳು ಸಾಂಕ್ರಾಮಿಕ ಕಾಯಿಲೆಗಳನ್ನು ಹರಡುವ ಪ್ರಬಲ ಮಾಧ್ಯಮ. ಎರಡನೆಯದು - ಅದರೊಳಗಿನ ಹಾನಿಕಾರಕ ರಾಸಾಯನಿಕಗಳು ಬಾಯಿ ಮತ್ತು ಗಂಟಲಿನ ಸೂಕ್ಷ್ಮವಾದ ಲೋಳೆಪದರಕ್ಕೆ ಹಾನಿ ಮಾಡುತ್ತವೆ. ಲೋಳೆಪದರ ಸ್ರವಿಸುವ ಲೋಳೆಯು ಕಾಯಿಲೆಯನ್ನು ಉಂಟುಮಾಡುವ ಕ್ರಿಮಿಗಳನ್ನು ನಿಯಂತ್ರಿಸಿ, ನಮ್ಮ ಶರೀರವನ್ನು ರೋಗಗಳಿಂದ ಕಾಪಾಡುತ್ತವೆ. ಆದರೆ, ಬಿರುಕುಬಿಟ್ಟ ಲೋಳೆಪದರದ ಮೂಲಕ ಸೋಂಕುಕಾರಕ ಪರೋಪಜೀವಿಗಳು ಸುಲಭವಾಗಿ ಶರೀರದ ಒಳಗೆ ನುಗ್ಗಿ, ಕಾಯಿಲೆಗೆ ಕಾರಣವಾಗುತ್ತವೆ. ಶರೀರದ ಸಹಜ ರಕ್ಷಕವ್ಯವಸ್ಥೆ ಚೆನ್ನಾಗಿರುವವರಲ್ಲಿ ಇಂತಹ ಸೋಂಕು ಹೆಚ್ಚು ತೊಂದರೆ ನೀಡದೆ, ತಾನಾಗಿಯೇ ನಿಗ್ರಹವಾಗುತ್ತದೆ. ಆದರೆ ರಕ್ಷಕವ್ಯವಸ್ಥೆ ಕ್ಷೀಣವಾಗಿರುವ ಮಧುಮೇಹಿಗಳು, ಚಿಕ್ಕ ಮಕ್ಕಳು, ವೃದ್ಧರು, ನಿಯಮಿತವಾಗಿ ಸ್ಟಿರಾಯ್ಡ್ ಔಷಧಗಳನ್ನು ಸೇವಿಸುತ್ತಿರುವ ರೋಗಿಗಳು, ಮೊದಲಾದವರಲ್ಲಿ ಈ ಸೋಂಕುಗಳು ಅಪಾಯಕಾರಿಯಾಗಬಲ್ಲವು.
ಮಲಿನ ಆಹಾರ ಮತ್ತು ನೀರಿನ ಮೂಲಕ ಹರಡುವ ಗಂಟಲಿನ, ಜೀರ್ಣಾಂಗದ ರೋಗಗಳು ಬೇಸಿಗೆಯಲ್ಲಿ ಅಧಿಕ. ಮಕ್ಕಳಿಗೆ ರಜೆ ಇರುವುದರಿಂದ ಪ್ರವಾಸಗಳಿಗೆ ಹೋಗುವವರು ಹೆಚ್ಚು. ಪ್ರವಾಸದಲ್ಲಿ ತಿನಿಸು-ಪಾನೀಯಗಳ ಮೇಲೆ ಸಂಪೂರ್ಣ ನಿಯಂತ್ರಣ ಇರುವುದಿಲ್ಲ. ಅಂತಹ ವೇಳೆ ಸಾಧ್ಯವಾದಷ್ಟೂ ಬಿಸಿಯಾಗಿ ತಯಾರಿಸಿದ ತಾಜಾ ಆಹಾರಸೇವನೆ ಸೂಕ್ತ. ಸ್ವಚ್ಛವಾದ ನೀರು, ಭದ್ರಪಡಿಸಿದ ಪಾನೀಯಗಳ ಬಳಕೆ ಒಳ್ಳೆಯದು.
ಮಲಿನ ಆಹಾರ-ಪಾನೀಯಗಳ ಸೇವನೆಯಿಂದ ಆಗುವ ಬಹುತೇಕ ಸಣ್ಣ-ಪುಟ್ಟ ಸೋಂಕುಗಳನ್ನು ಶರೀರದ ರಕ್ಷಕವ್ಯವಸ್ಥೆಯೇ ಸರಿಪಡಿಸುತ್ತದೆ. ಅದರ ಸಾಮರ್ಥ್ಯವನ್ನು ಮೀರಿದ ಬೇನೆಗಳಿಗೆ ಮಾತ್ರ ವೈದ್ಯಕೀಯ ಸಲಹೆ ಬೇಕಾಗುತ್ತದೆ. ನಲವತ್ತೆಂಟು ಗಂಟೆಗಳಿಗಿಂತಲೂ ಹೆಚ್ಚಿನ ಕಾಲ ಅಸೌಖ್ಯ ಎನಿಸಿದರೆ ವೈದ್ಯರನ್ನು ಕಾಣುವುದು ಸೂಕ್ತ. ಸೋಂಕು ಹೆಚ್ಚುತ್ತಿರುವ ಸೂಚನೆಗಳು ಕಂಡುಬಂದರೆ ಯಾವುದೇ ಕಾರಣಕ್ಕೂ ಸ್ವಯಂ-ವೈದ್ಯ ಮಾಡಿಕೊಂಡು ಪರಿಸ್ಥಿತಿಯನ್ನು ಹದಗೆಡಿಸಬಾರದು.
ಮಲಿನ ಆಹಾರ-ಪಾನೀಯಗಳನ್ನು ಸೇವಿಸಿ ತಂದುಕೊಳ್ಳುವ ಸೋಂಕಿನ ಚಿಕಿತ್ಸೆಗಿಂತಲೂ, ಅವು ಬಾರದಂತೆ ನಿರ್ವಹಿಸುವುದು ಜಾಣತನ. ಮನೆಯಲ್ಲಿ ಕೈ ತೊಳೆಯದೇ ಏನನ್ನೂ ಸೇವಿಸದವರು, ವೈದ್ಯರು ಯಾವುದಾದರೂ ಔಷಧವನ್ನು ಸೂಚಿಸಿದಾಗ ಅದರ ಅಡ್ಡಪರಿಣಾಮಗಳ ಬಗ್ಗೆ ಪ್ರಶ್ನಿಸುವವರು, ಮಕ್ಕಳಿಗೆ ಶುಚಿತ್ವದ ಬಗ್ಗೆ ಪಾಠ ಹೇಳುವವರು ಕೂಡ ರಸ್ತೆಬದಿಯ ಅಶುಚಿಯಾದ ಆಹಾರವನ್ನು ಮುಲಾಜಿಲ್ಲದೆ ಬಾಯಿಗಿಳಿಸುವುದು ಸೋಜಿಗ. ಹತ್ತಾರು ಜನ ಅದನ್ನು ತಿನ್ನುತ್ತಿದ್ದಾರೆಂಬ ನಂಬಿಕೆಯೋ, ರುಚಿಯ ಚಪಲವೋ, ಜೊತೆಯಲ್ಲಿ ಇರುವವರ ಒತ್ತಾಯವೋ, ‘ಆಗಾಗ ಇಂತಹದ್ದನ್ನು ತಿನ್ನುತ್ತಿದ್ದರೆ ಇಮ್ಯುನಿಟಿ ಬೆಳೆಯುತ್ತದೆ’ ಎನ್ನುವ ಭ್ರಮೆಯೋ, ‘ಜಗತ್ತಿನಾದ್ಯಂತ ಸ್ಟ್ರೀಟ್-ಫುಡ್ ತಿನ್ನುವವರಿದ್ದಾರೆ’ ಎನ್ನುವ ಸಾಂಘಿಕ ಉಡಾಫೆಯ ಮನೋಭಾವವೋ - ಒಟ್ಟಿನಲ್ಲಿ ಏನೋ ಒಂದು ನೆಪದಲ್ಲಿ ಕಾಣದ ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ. ಪ್ರತಿಯೊಬ್ಬರೂ ಇಂತಹ ಪ್ರಲೋಭನೆಗಳನ್ನು ಹತ್ತಿಕ್ಕುವುದು ಬಹಳ ಮುಖ್ಯ.
ಮುಂದುವರಿದ ದೇಶಗಳ ಪ್ರವಾಸಿತಾಣಗಳಲ್ಲಿ ‘ಸ್ಟ್ರೀಟ್-ಫುಡ್’ ಎನ್ನುವುದು ದೊಡ್ಡ ಪಾತ್ರವನ್ನು ವಹಿಸುತ್ತದೆ ಎನ್ನುವ ಮಾತು ಸತ್ಯ. ಆದರೆ ಅಲ್ಲಿನ ವ್ಯವಸ್ಥೆ ಅದರ ಬಗ್ಗೆ ಬಹಳ ಕಠಿಣ ನಿರ್ಬಂಧಗಳನ್ನು ಹೇರಿ, ಸುರಕ್ಷತೆಯ ಬಗ್ಗೆ ಗಮನ ನೀಡಿರುತ್ತದೆ. ನಮ್ಮ ದೇಶದಲ್ಲಿ ಅಂತಹ ಕಟ್ಟುನಿಟ್ಟನ್ನು ಅಪೇಕ್ಷಿಸುವುದು ಕಷ್ಟ. ನಮ್ಮಲ್ಲಿ ರಸ್ತೆಬದಿಯ ಆಹಾರ ಮಾರಾಟ ಮಾಡುವ ಬಹುತೇಕರಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಹೀಗಾಗಿ, ಅವರ ಬಳಿ ಸುರಕ್ಷತೆಯ ಖಾತ್ರಿಯೂ ಇಲ್ಲ. ಅಲ್ಲಿ ಆಹಾರ ಸೇವಿಸುತ್ತಿರುವ ಹತ್ತಾರು ಅಪರಿಚಿತ ಮಂದಿಗೆ ಮುಂದಿನ ಕೆಲದಿನಗಳಲ್ಲಿ ಯಾವ ಯಾವ ಆರೋಗ್ಯಸಮಸ್ಯೆಗಳು ಬಂದವು ಎಂದು ತಿಳಿಯುವುದು ಅಸಾಧ್ಯ. ಹೊರಗೆ ತಿನ್ನುವ ಅನಿವಾರ್ಯ ಪ್ರಸಂಗಗಳಲ್ಲಿ ಶುಚಿಯಾದ ಹೋಟೆಲಿನಲ್ಲಿ ಬಿಸಿಬಿಸಿಯಾದ, ಚೆನ್ನಾಗಿ ಬೇಯಿಸಿದ, ಹಬೆಯಾಡುತ್ತಿರುವ ಆಹಾರ ಸೇವನೆ ಸೂಕ್ತ. ಆಹಾರ-ಪಾನೀಯಗಳ ಗುಣಮಟ್ಟದಲ್ಲಿ ರಾಜಿಯಾಗುವುದು ಆರೋಗ್ಯಕ್ಕೆ ಹಾನಿಕರ.
ಆಹಾರ-ಪಾನೀಯಗಳ ಸ್ವಚ್ಛತೆಯನ್ನು ಪ್ರಜ್ಞಾಪೂರ್ವಕವಾಗಿ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಪ್ರಸ್ತುತ ಸಂಕೀರ್ಣ ಸಮಾಜದಲ್ಲಿ ಜನರು ಹೊಸ ಬಗೆಯ ಜೀವನಶೈಲಿಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಹೀಗಾಗಿ, ನಮ್ಮ ವೈಯಕ್ತಿಕ ಮತ್ತು ಸಾಂಘಿಕ ಬದುಕಿನ ವಾತಾವರಣಗಳು ಸ್ವಚ್ಛವಾಗಿರುವುದು ಪ್ರಾಥಮಿಕ ಅಗತ್ಯ. ಈ ಮುನ್ನ ಮನೆಯಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದ ಅನೇಕರು ಈಗ ದಿನನಿತ್ಯದ ಊಟವನ್ನೂ ಹೊರಗಿನಿಂದ ತರಿಸಿಕೊಂಡು ಸೇವಿಸುತ್ತಿದ್ದಾರೆ. ಈ ರೀತಿಯ ಆಹಾರವನ್ನು ಸಿದ್ಧಪಡಿಸುವ ಸ್ಥಳಗಳು, ಅದನ್ನು ತಯಾರಿಸುವ ಬಾಣಸಿಗರು, ಅದನ್ನು ಪ್ಯಾಕ್ ಮಾಡುವ ಕೆಲಸಗಾರ, ಅದನ್ನು ಹೊತ್ತು ತಂದು ನಮ್ಮ ಮನೆಗೆ ತಲುಪಿಸುವ ವ್ಯಕ್ತಿ – ಇವರೆಲ್ಲರ ಸ್ವಚ್ಛತೆಯ ಮಟ್ಟ ಸಮಂಜಸವಾಗಿದ್ದರೆ ಮಾತ್ರ ಅಂತಹ ಆಹಾರ-ಪಾನೀಯಗಳು ನಮ್ಮ ಆರೋಗ್ಯವನ್ನು ಕಾಯಬಲ್ಲವು. ಇಲ್ಲವಾದರೆ, ಅವೇ ಅನಾರೋಗ್ಯದ ಕಾರಣವಾಗುತ್ತವೆ. ಈ ಪ್ರತಿಯೊಂದು ಹಂತವನ್ನೂ, ಪ್ರತಿದಿನವೂ ಪರೀಕ್ಷಿಸುವ ಸಾಧ್ಯತೆಗಳು ಇರುವುದಿಲ್ಲ. ಹೀಗಾಗಿ, ಇಡೀ ಸಮಾಜವೇ ತನ್ನ ನೈರ್ಮಲ್ಯದ ಮಟ್ಟವನ್ನು ಸಂದೇಹಕ್ಕೆ ಆಸ್ಪದವಿಲ್ಲದಂತೆ ಏರಿಸಿಕೊಳ್ಳಬೇಕು. ಆಹಾರ-ಪಾನೀಯಗಳಲ್ಲಿ ಶುಚಿಯನ್ನು ಸಾಧಿಸುವುದು ಈಗ ವೈಯಕ್ತಿಕ ಮಟ್ಟವನ್ನು ಮೀರಿ, ಸಾಮಾಜಿಕ ಬಾಧ್ಯತೆಯ ಭಾಗವಾಗಿದೆ. ಈ ಸ್ಥಿತ್ಯಂತರ ಸುಲಭವಲ್ಲ ಎನ್ನುವ ಎಚ್ಚರ ಎಲ್ಲರಿಗೂ ಇರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.