
ಚಿತ್ರ: ಗೆಟ್ಟಿ
ವಾತಾವರಣದಲ್ಲಿ ಚಳಿಯಿದ್ದಾಗ ದೇಹವನ್ನು ಬಿಸಿಯಾಗಿಡುವುದು ಅಗತ್ಯ. ಇದಕ್ಕಾಗಿ ನಮ್ಮ ದೇಹ ಹೆಚ್ಚು ಕ್ಯಾಲೊರಿಗಳನ್ನು ಬಳಸಿ, ಹೆಚ್ಚು ಶಕ್ತಿಯನ್ನು ಖರ್ಚು ಮಾಡುತ್ತದೆ. ಇದನ್ನೆಲ್ಲ ನಿಭಾಯಿಸಲು ದೇಹಕ್ಕೆ ಪೌಷ್ಟಿಕ ಆಹಾರ ಬೇಕಾಗುತ್ತದೆ. ಚಳಿಗಾಲದಲ್ಲಿ ಸೇವಿಸಲೇಬೇಕಾದ ಆಹಾರಗಳು ಹಾಗೂ ಸೇವನೆಯಿಂದ ದೇಹಕ್ಕಾಗುವ ಲಾಭ ಬಗ್ಗೆ ತಿಳಿಯೋಣ.
ತುಪ್ಪ ಮತ್ತು ಕೊಬ್ಬು: ತುಪ್ಪ ಚಳಿಗಾಲದ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ. ಇದು ನಿಧಾನವಾಗಿ ಮತ್ತು ನಿರಂತರವಾಗಿ ದೇಹಕ್ಕೆ ಶಕ್ತಿ ನೀಡುತ್ತದೆ. ದೇಹವನ್ನು ಒಳಗಿನಿಂದ ಬಿಸಿಯಾಗಿಡುತ್ತದೆ. ಚಳಿಯಲ್ಲಿ ಜೀರ್ಣಕ್ರಿಯೆ ನಿಧಾನವಾದರೂ ಅದಕ್ಕೆ ತುಪ್ಪ ಸಹಕಾರಿಯಾಗಲಿದೆ. ತುಪ್ಪ ಹಾಗೂ ಕೊಬ್ಬುಗಳ ಸೇವನೆ ಚಳಿಗಾಲದಲ್ಲಿ ಒಣಗುವ ಚರ್ಮಕ್ಕೂ ಉಪಯೋಗವಾಗಿದೆ.
ಸಿರಿಧಾನ್ಯಗಳು: ರಾಗಿ, ಜೋಳ, ಸಜ್ಜೆ ಮತ್ತು ಗೋಧಿ, ಇವು ಚಳಿಗಾಲಕ್ಕೆ ಅತ್ಯುತ್ತಮ ಧಾನ್ಯಗಳಾಗಿವೆ. ಇವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಇವು ಶಕ್ತಿಯನ್ನು ನಿಧಾನವಾಗಿ ಬಿಡುಗಡೆ ಮಾಡುತ್ತವೆ. ದೇಹವನ್ನು ಗಂಟೆಗಳ ಕಾಲ ಬಿಸಿಯಾಗಿಡುತ್ತವೆ. ರಾಗಿ ಕ್ಯಾಲ್ಸಿಯಂ ಮತ್ತು ಕಬ್ಬಿಣದಲ್ಲಿ ಸಮೃದ್ಧ, ಸಜ್ಜೆ ಸ್ವಾಭಾವಿಕವಾಗಿ ದೇಹವನ್ನು ಬಿಸಿಯಾಗಿಡುತ್ತದೆ. ರಕ್ತ ಸಂಚಾರವನ್ನು ಸುಧಾರಿಸುತ್ತದೆ.
ಬೇರು ತರಕಾರಿಗಳು: ನೆಲದಲ್ಲಿ ಬೆಳೆಯುವ ತರಕಾರಿಗಳು ಸಹಜವಾಗಿ ಬಿಸಿ ಗುಣ ಹೊಂದಿರುತ್ತವೆ. ವಿಶೇಷವಾಗಿ ಸಿಹಿಗೆಡ್ಡೆ ಸಂಕೀರ್ಣ ಕಾರ್ಬೊಹೈಡ್ರೇಟ್, ನಾರಿನಾಂಶ ಮತ್ತು ಆಂಟಿಆಕ್ಸಿಡೆಂಟ್ಸ್‌ಗಳಲ್ಲಿ ಸಮೃದ್ಧವಾಗಿರುತ್ತವೆ. ಕ್ಯಾರೆಟ್ ಮತ್ತು ಬೀಟ್ರೂಟ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ರಕ್ತ ಸಂಚಾರವನ್ನು ಸುಧಾರಿಸುತ್ತವೆ. ಪೊಟ್ಯಾಸಿಯಂ, ಫೋಲೇಟ್ ಮುಂತಾದ ಮುಖ್ಯ ಖನಿಜಗಳನ್ನು ದೇಹಕ್ಕೆ ಒದಗಿಸುತ್ತವೆ.
ಹಣ್ಣುಗಳು: ಚಳಿಯಲ್ಲಿ ಸೋಂಕುಗಳು ಹೆಚ್ಚಾಗುವುದರಿಂದ, ವಿಟಮಿನ್ ಸಿಯಲ್ಲಿ ಸಮೃದ್ಧವಾದ ಹಣ್ಣುಗಳ ಸೇವನೆ ಮುಖ್ಯ. ಕಿತ್ತಳೆ ಮತ್ತು ಸೀತಾಫಲ ಶ್ವಾಸಕೋಶದ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಸೇಬು ದೇಹಕ್ಕೆ ನೈಸರ್ಗಿಕ ಶಕ್ತಿಯನ್ನು ನೀಡಿ ಜೀರ್ಣಕ್ರಿಯೆಯನ್ನು ಸಮತೋಲನವಾಗಿರಿಸುತ್ತದೆ. ಇವುಗಳಲ್ಲಿರುವ ನೀರಿನಾಂಶ ದೇಹದ ತೇವಾಂಶ ಕಾಪಾಡುತ್ತದೆ.
ಬೀಜಗಳು: ಬಾದಾಮಿ, ಅಕ್ಕಿ ರೊಟ್ಟಿ, ಗೋಡಂಬಿ, ಕುಂಬಳಕಾಯಿ ಬೀಜ ಹಾಗೂ ಎಳ್ಳು ಚಳಿಗಾಲದ ಶಕ್ತಿ ಕೇಂದ್ರಗಳಾಗಿವೆ. ಇವು ಆರೋಗ್ಯಕರ ಕೊಬ್ಬು, ಪ್ರೋಟೀನ್, ಮ್ಯಾಗ್ನೀಸಿಯಂ ಮತ್ತು ವಿಟಮಿನ್–ಇ ಸಮೃದ್ಧವಾಗಿವೆ. ಎಳ್ಳು ದೇಹವನ್ನು ಬಿಸಿಯಾಗಿಡುವುದರ ಜೊತೆಗೆ ಎಲುಬುಗಳನ್ನು ಬಲಪಡಿಸುತ್ತದೆ. ಚಳಿಯಲ್ಲಿ ದೇಹದ ಶಕ್ತಿ ಬೇಗ ವ್ಯಯವಾಗುವ ಕಾರಣ ರಕ್ತದಲ್ಲಿ ಶರ್ಕರ ಮಟ್ಟವನ್ನು ಸ್ಥಿರವಾಗಿಟ್ಟುಕೊಳ್ಳಲು ಇವು ಸಹಕಾರಿ.
ಹರ್ಬಲ್ ಟೀಗಳು ಮತ್ತು ಮಸಾಲೆಗಳು: ಶುಂಠಿ ಚಹಾ, ತುಳಸಿ ಚಹಾ, ದಾಲ್ಚಿನ್ನಿ ಕಷಾಯ ಹಾಗೂ ಮೆಣಸಿನ ಕಷಾಯವು ಚಳಿಗೆ ಅದ್ಭುತ ಪಾನೀಯಗಳಾಗಿವೆ. ಇವು ದೇಹವನ್ನು ತಕ್ಷಣ ಬಿಸಿಯಾಗಿಡುತ್ತವೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಶುಂಠಿ ಉರಿಯೂತವನ್ನು ಕಡಿಮೆಮಾಡಿ ಗಂಟಲನ್ನು ಶುದ್ಧವಾಗಿಡುತ್ತದೆ. ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ.
ಬಿಸಿ ಸೂಪ್‌ಗಳು: ತರಕಾರಿಗಳ ಸೂಪ್ ಹಾಗೂ ಬೇಳೆ ಸಾರು, ದೇಹವನ್ನು ಬಿಸಿಯಾಗಿಡುವುದರ ಜೊತೆಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ಮತ್ತು ತೇವಾಂಶ ನೀಡುತ್ತವೆ. ಚಳಿಯಲ್ಲಿ ದಾಹ ಕಡಿಮೆ ಆಗುವುದರಿಂದ ನೀರು ಕುಡಿಯುವುದನ್ನು ಮರೆತುಬಿಡುತ್ತೇವೆ. ಸೂಪ್‌ಗಳು ದೇಹವನ್ನು ಒಳಗಿನಿಂದ ತೇವವಾಗಿಡುತ್ತವೆ.
ಮೊಟ್ಟೆ: ಮೊಟ್ಟೆ ಸಂಪೂರ್ಣ ಪ್ರೋಟೀನ್ ಮೂಲ. ಚಳಿಯಲ್ಲಿ ಸೂರ್ಯರಶ್ಮಿ ಕಡಿಮೆ ಸಿಗುವುದರಿಂದ ವಿಟಮಿನ್ ಡಿ ಬಹಳ ಮುಖ್ಯ. ಲೀನ ಮೀಟ್ ಕಬ್ಬಿಣ ಮತ್ತು ವಿಟಮಿನ್ ಬಿ ನೀಡುತ್ತದೆ. ಈ ಆಹಾರಗಳು ಸ್ನಾಯು ಬಲವನ್ನು ಕಾಪಾಡುತ್ತವೆ.
ಬೆಲ್ಲ: ಬೆಲ್ಲ ಸ್ವಾಭಾವಿಕ ಬಿಸಿ ನೀಡುವ ಪದಾರ್ಥವಾಗಿದೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು. ರಕ್ತ ಸಂಚಾರ ಸುಧಾರಿಸುವುದರ ಜೊತೆಗೆ ಕಬ್ಬಿಣ, ಮ್ಯಾಗ್ನೀಸಿಯಂ ಮುಂತಾದ ಖನಿಜಗಳಲ್ಲಿ ಸಮೃದ್ಧವಾಗಿದೆ. ಚಳಿಯಲ್ಲಿ ಒಂದು ಚಿಕ್ಕ ತುಂಡು ಬೆಲ್ಲ ತಿನ್ನುವುದರಿಂದ ದೇಹದ ಆರಾಮಕ್ಕೆ ಸಹಾಯಕವೆಂದು ಪರಿಗಣಿಸಲಾಗಿದೆ.
ತೀವ್ರ ಚಳಿಯಲ್ಲಿ ದೇಹಕ್ಕೆ ಬಿಸಿ, ಶಕ್ತಿ, ತೇವಾಂಶ ಮತ್ತು ರೋಗನಿರೋಧಕ ಶಕ್ತಿ, ಇವೆಲ್ಲ ಒಂದೇ ಸಮಯದಲ್ಲಿ ಬೇಕಾಗುತ್ತದೆ. ಆರೋಗ್ಯಕರ ಕೊಬ್ಬು, ಸಂಕೀರ್ಣ ಕಾರ್ಬೊಹೈಡ್ರೇಟ್, ಪ್ರೋಟೀನ್ ಮತ್ತು ಅಗತ್ಯ ವಿಟಮಿನ್‌ಗಳಿರುವ ಆಹಾರಗಳನ್ನು ಆರಿಸಿದರೆ ದೇಹ ಚಳಿಯನ್ನು ಸುಲಭವಾಗಿ ಎದುರಿಸುತ್ತದೆ.
(ಡಾ. ಅದಿತಿ ಪ್ರಸಾದ್ ಆಪ್ಟೆ, ಹಿರಿಯ - ಕ್ಲಿನಿಕಲ್ ಪೌಷ್ಟಿಕತಜ್ಞ, ಆಸ್ಟರ್ ಆರ್‌ವಿ ಆಸ್ಪತ್ರೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.