ADVERTISEMENT

ಕಾಡಿನ ನಡುವೆ ನೆಮ್ಮದಿಯ ಅನ್ವೇಷಣೆ

ಫಾರೆಸ್ಟ್ ಬಾತ್‌

ಸುಧಾ ಹೆಗಡೆ
Published 18 ಸೆಪ್ಟೆಂಬರ್ 2020, 19:30 IST
Last Updated 18 ಸೆಪ್ಟೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸದ್ಯದ ಪರಿಸ್ಥಿತಿಯಲ್ಲಿ ಮಾನಸಿಕ ಒತ್ತಡದ ಪರಿಹಾರಕ್ಕೆ ಬೇರೆ ಬೇರೆ ಪದ್ಧತಿಗಳ ಮೊರೆ ಹೋಗುವುದು ಸಹಜ. ಈ ಸಂದರ್ಭದಲ್ಲಿ ಜಪಾನ್‌ನ ‘ಫಾರೆಸ್ಟ್‌ ಬಾತ್‌’, ಅಂದರೆ ಮರಗಳ ನಡುವೆ ಕೆಲವು ಕಾಲ ಕಳೆದು ಒತ್ತಡ ನಿವಾರಿಸಿಕೊಳ್ಳುವ ತಂತ್ರ ಜನಪ್ರಿಯವಾಗುತ್ತಿದೆ.

ಆಧುನಿಕ ಜೀವನಶೈಲಿ ಎಂಬುದು ಒತ್ತಡದ ಮೂಟೆಯಿದ್ದಂತೆ. ಈ ಒತ್ತಡವನ್ನು ಕಡಿಮೆ ಮಾಡಲು ಸಾಕಷ್ಟು ಅನ್ವೇಷಣೆಗಳು ನಡೆಯುತ್ತಲೇ ಇವೆ. ಈಗಂತೂ ಇದರ ಜರೂರು ಎಂದಿಗಿಂತ ಜಾಸ್ತಿಯೇ ಇದೆ ಎನ್ನಬಹುದು. ಕೊರೊನಾದಿಂದಾಗಿ ಯೋಗ, ಪ್ರಾಣಾಯಾಮ, ಧ್ಯಾನ.. ಎಂದೆಲ್ಲಾ ಪ್ರಾಚೀನ ಪದ್ಧತಿಗಳು ಮುಂಚೂಣಿಗೆ ಬಂದಿವೆ. ಈ ಸಾಲಿನಲ್ಲಿ ಜಪಾನ್‌ ಮೂಲದ ‘ಫಾರೆಸ್ಟ್‌ ಬಾತ್‌’ ಅಥವಾ ಸರಳವಾಗಿ ಅರಣ್ಯ ಜಳಕ ಎನ್ನುವ ಪದ್ಧತಿ ಸೇರಿಕೊಂಡಿದ್ದು, ಒತ್ತಡಕ್ಕೆ ಪರಿಹಾರ ಕಂಡುಕೊಳ್ಳುವವರಲ್ಲಿ ಜನಪ್ರಿಯವಾಗಿದೆ.

ಕಾಡೆಂದರೆ ಹಸಿರು. ಹಸಿರೆಂದರೆ ಮನಸ್ಸಿಗೆ ನೆಮ್ಮದಿ ನೀಡುವ ರಂಗು. ಸದಾ ತಾಜಾ ವಾತಾವರಣವಿರುವ ಕಾಡಿನಲ್ಲಿ ಓಡಾಡಬೇಕೆಂದೇನೂ ಇಲ್ಲ, ಹಾಗೆಯೇ ಸುಮ್ಮನೆ ಕುಳಿತುಕೊಂಡು ಅಲ್ಲಿಯ ಸೌಂದರ್ಯ, ಹಕ್ಕಿಗಳ ಇಂಚರ, ಬೀಸುವ ತಂಗಾಳಿಯನ್ನು ಅನುಭವಿಸುತ್ತ ಕೂತರೆ ಮನಸ್ಸಿನೊಳಗಿನ ಒತ್ತಡವನ್ನು ಹೊರಹಾಕಬಹುದು. ದೇಹಕ್ಕೂ ವಿಶ್ರಾಂತಿ ಸಿಗುತ್ತದೆ. ಹೊರಗಿನ ಗಜಿಬಿಜಿಯಿಲ್ಲದೇ ಪ್ರಕೃತಿಯ ಜೊತೆ ಒಂದಾಗಿ ತಾದ್ಯಾತ್ಮ ಹೊಂದಬಹುದು. ಹೀಗಾಗಿ ಅರಣ್ಯ ಜಳಕವೆಂದರೆ ದೈಹಿಕವಾಗಿ ಸ್ನಾನವಲ್ಲ, ಇದು ಒಂದು ರೀತಿಯ ಆಧ್ಯಾತ್ಮಿಕ ಸ್ನಾನ. ಕಾಡಿನ ಸೌಂದರ್ಯವನ್ನು ನೋಡಿದಾಗ, ಅನುಭವಿಸಿದಾಗ, ಸ್ಪರ್ಶಿಸಿದಾಗ ಸಿಗುವ ಅನುಭೂತಿ. ಈ ಅನುಭೂತಿಯಲ್ಲಿ ಒತ್ತಡ, ಭಯವೆಲ್ಲ ಕೊಚ್ಚಿಕೊಂಡು ಹೋಗಿಬಿಡುತ್ತದೆ. ದೈಹಿಕ, ಮಾನಸಿಕ, ಭಾವನಾತ್ಮಕ ತಳಮಳಗಳೆಲ್ಲ ಕಡಿಮೆಯಾಗುತ್ತವೆ.

ADVERTISEMENT

ಸಾಂತ್ವನದ ಮಡಿಲು
ಸಹಜವಾಗಿಯೇ ಪ್ರಕೃತಿಯಲ್ಲಿ ಸಾಂತ್ವನಗೊಳಿಸುವ ಗುಣವಿದೆ; ಕಾಡಿನ ಮೌನಕ್ಕೆ ನಮ್ಮ ಮನವನ್ನು ಶಾಂತಗೊಳಿಸುವ ಶಕ್ತಿಯಿದೆ ಎನ್ನುತ್ತದೆ ಜಪಾನ್‌ನ ಈ ಪದ್ಧತಿ. ಗಿಜಿಗುಡುವ ನಗರದಲ್ಲಿ ನೀವು ಇದನ್ನೆಲ್ಲ ಅನುಭವಿಸಲು ಸಾಧ್ಯವಿಲ್ಲ. ಮನಸ್ಸಿನ ಏಕಾಗ್ರತೆ ಕಷ್ಟ. ಕಣ್ಮುಚ್ಚಿ ಕುಳಿತರೂ ಮನಸ್ಸು ಗಿರಗಟ್ಟಲೆಯಾಡುತ್ತಿರುತ್ತದೆ. ಆದರೆ ಪ್ರಕೃತಿಯ ಮಡಿಲಲ್ಲಿ ಸುಮ್ಮನೆ ಕೂತರೂ ಸಾಕು, ಅದು ನಿಮ್ಮ ಮನಸ್ಸನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ತಲೆ ನೇವರಿಸುತ್ತದೆ; ಮನದೊಳಗೆ ದಿವ್ಯ ಶಾಂತಿ ಲಭಿಸುತ್ತದೆ.

ಇದರ ಹಿಂದಿರುವುದು ಅತ್ಯಂತ ಸರಳವಾದ ಸೂತ್ರ. ನಾವೂ ಕೂಡ ಈ ವಿಶ್ವದ ಒಂದು ಭಾಗ. ವಿಶ್ವದಲ್ಲಿ ಪ್ರವಹಿಸುತ್ತಿರುವ ಶಕ್ತಿಯ ಜೊತೆ ನಮ್ಮಲ್ಲಿರುವ ಶಕ್ತಿಯೂ ಜೊತೆ ಜೊತೆಯಾಗಿ ಸಾಗುತ್ತದೆ ಎನ್ನುತ್ತದೆ ಜಪಾನ್‌ನ ಈ ರಿಲ್ಯಾಕ್ಸಿಂಗ್ ಪದ್ಧತಿ. ಆದರೆ ನೆಗೆಟಿವ್‌ ಶಕ್ತಿ ಅಂದರೆ ಗದ್ದಲ, ಒತ್ತಡದಿಂದಾಗಿ ನಮ್ಮಲ್ಲಿರುವ ಉತ್ಸಾಹ, ಶಕ್ತಿ ಕಡಿಮೆಯಾಗುತ್ತ ಹೋಗುತ್ತದೆ.

ದೈಹಿಕ ಆರೋಗ್ಯಕ್ಕೂ ಹಿತ
ಇದಕ್ಕೆ ಪರಿಹಾರವೆಂದರೆ ಸಕಾರಾತ್ಮಕ ಅಂದರೆ ಯಾವುದೇ ಕಲಬೆರಕೆಯಿಲ್ಲದ ಅಪ್ಪಟ ಪ್ರಕೃತಿಯ ಜೊತೆ ಒಂದಿಷ್ಟು ಸಮಯ ಕಳೆಯುವುದು. ಇದರಿಂದ ಮನಸ್ಸಿನಲ್ಲಿ ಅಡಗಿಕೊಂಡಿರುವ ಭಯ, ಖಿನ್ನತೆ, ಗಾಬರಿ, ದುಃಖ ಎಲ್ಲವೂ ಆಚೆ ಹೋಗಿ ಶಾಂತಿ ತುಂಬುತ್ತದೆ. ಅರಣ್ಯದಲ್ಲಿರುವ ಎಷ್ಟೋ ವೃಕ್ಷಗಳಲ್ಲಿ ಔಷಧೀಯ ಗುಣಗಳಿರುತ್ತವೆ. ಅದು ಅಲ್ಲಿಯ ಗಾಳಿಯಲ್ಲೂ ಸೇರಿಕೊಂಡಿರುತ್ತದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ ಎನ್ನುತ್ತದೆ ಅಧ್ಯಯನ. ಜೊತೆಗೆ ಕಲುಷಿತವಲ್ಲದ ತಾಜಾ ಗಾಳಿ ಶ್ವಾಸಕೋಶದ ಆರೋಗ್ಯಕ್ಕೂ ಸಹಕಾರಿ. ಅಧಿಕ ರಕ್ತದೊತ್ತಡ ಕಡಿಮೆಯಾಗುವುದಲ್ಲದೇ, ಒತ್ತಡಕ್ಕೆ ಕಾರಣವಾಗುವ ಹಾರ್ಮೋನ್‌ ಮಟ್ಟ ಕೂಡ ಕಡಿಮೆಯಾಗುತ್ತದೆ. ಹಾಗೆಯೇ ದುಗುಡವೆಲ್ಲ ಆಚೆ ಹೋದಾಗ ಮನಸ್ಸು ನಿರಾಳವಾಗಿ ಸಹಜವಾಗಿಯೇ ಏಕಾಗ್ರತೆ, ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ ಎನ್ನುತ್ತದೆ ಈ ಒತ್ತಡ ನಿವಾರಣಾ ಪದ್ಧತಿ.

ಸುವಾಸನೆ ಬೀರುವ ಹೂವುಗಳು ಮಾತ್ರವಲ್ಲ, ಕೆಲವು ಮರಗಳ ತೊಗಟೆ, ಎಲೆ ಕೂಡಾ ಸುಗಂಧಯುಕ್ತ. ಎಲೆಗಳು ಕೂಡಾ ನೋಡಲು ಆಕರ್ಷಕ. ಮರಗಳಲ್ಲಿರುವ ಹಕ್ಕಿಗಳ ಚಿಲಿಪಿಲಿ, ಎಲೆಗಳ ಮರ್ಮರ ಸದ್ದು ಮನಸ್ಸಿನಲ್ಲಿ ಶಾಂತಿ ತುಂಬಬಲ್ಲದು. ಇದಕ್ಕಾಗಿ ನೀವು ಕಾಡನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ, ಸಮೀಪದ ಪಾರ್ಕ್‌ಗೂ ಹೋಗಿ ಮರಗಳ ಸೌಂದರ್ಯ ಸವಿಯಬಹುದು. ಮನಸ್ಸಿನ ದುಗುಡ, ಒತ್ತಡ ಆಚೆ ಹಾಕಬಹುದು.

1982ರಲ್ಲಿ ಜಪಾನ್‌ನಲ್ಲಿ ಜನರಿಗೆ ಹೆಚ್ಚುವರಿ ಕೆಲಸ ಮಾಡುವುದರಿಂದ ವಿಪರೀತ ಒತ್ತಡ ತಲೆದೋರಲು ಆರಂಭವಾಯಿತು. ಆಗ ಹುಟ್ಟಿಕೊಂಡಿದ್ದು ಈ ಫಾರೆಸ್ಟ್‌ ಬಾತ್‌ ಅಥವಾ ಶಿನ್‌ರಿನ್‌– ಯೊಕು. ಅಂದರೆ ಮರಗಳ ನಡುವೆ ಹೆಚ್ಚು ಸಮಯ ಕಳೆಯುವುದರಿಂದ ಒತ್ತಡ ನಿವಾರಿಸಿಕೊಳ್ಳುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.