ಹೈದರಾಬಾದ್: ಸ್ಟಾರ್ಟ್‌ಅಪ್‌ಗಳ ಸಂಸ್ಥಾಪಕರು ಮತ್ತು ವ್ಯವಹಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವವರ ನಿದ್ರಾ ಸಮಯ ಹೇಗಿದೆ ಎಂಬುದರ ಸಮೀಕ್ಷೆಯನ್ನು ಖಾಸಗಿ ಸಂಸ್ಥೆಗಳು ನಡೆಸಿದ್ದು, ಶೇ 55ರಷ್ಟು ಮಂದಿಗೆ ನಿದ್ರೆ ಎಂಬುದೇ ಮರೀಚಿಕೆಯಾಗಿದೆ ಎಂದು ನೊಂದು ಹೇಳಿರುವುದಾಗಿ ವರದಿಯಾಗಿದೆ.
ಹೈದರಾಬಾದ್ ಮೂಲದ ಶ್ರೀರಾಮ್ ಚಂದ್ರ ಮಿಷನ್ ಹಾಗೂ ಟಿಐಇ ಗ್ಲೋಬಲ್ ಎಂಬ ಸಂಸ್ಥೆಗಳು ಜತೆಗೂಡಿ ನಡೆಸಿದ ಸಮೀಕ್ಷೆಯಲ್ಲಿ ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಹಾಗೂ ಪುಣೆಯ 260 ಜನ ತಮ್ಮ ಅನಿಸಿಕೆಯನ್ನು ದಾಖಲಿಸಿದ್ದಾರೆ. ಇವರಲ್ಲಿ ಉದ್ಯಮ ಹಾಗೂ ಸ್ಟಾರ್ಟ್‌ಅಪ್ ಕ್ಷೇತ್ರದಿಂದ 200 ಜನ ಮತ್ತು 50 ತಂತ್ರಜ್ಞರು ಪಾಲ್ಗೊಂಡಿದ್ದರು.
ದಿನದಲ್ಲಿ ಹೆಚ್ಚು ಅವಧಿಯ ದುಡಿಮೆ, ಅಧಿಕ ಒತ್ತಡ, ನಿರ್ಣಯ ತೆಗೆದುಕೊಳ್ಳುವ ಸವಾಲು ಮತ್ತು ಆರ್ಥಿಕ ಅಸ್ಥಿರತೆಯು ವೃತ್ತಿ ಜೀವನ ಮಾತ್ರವಲ್ಲ, ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರುತ್ತಿದೆ ಎಂದಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 80ರಷ್ಟು ಜನರಿಗೆ ನಿದ್ರಾಹೀನತೆ ಸಮಸ್ಯೆಯು ಕಾರ್ಯಕ್ಷಮತೆ ಮೇಲೂ ಪರಿಣಾಮ ಬೀರುತ್ತಿದೆಯಂತೆ. ಇದರಲ್ಲಿ ಏಕಾಗ್ರತೆ ಕೊರತೆ ಹಾಗೂ ವೃತ್ತಿ ಸ್ಥಳದಲ್ಲಿನ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತಿದೆ ಎಂದಿದ್ದಾರೆ.
ಉದ್ಯಮಿಗಳ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ನಿದ್ರಾ ಹೀನತೆಯಿಂದ ನಿರ್ಣಯ ತೆಗೆದುಕೊಳ್ಳುವುದು, ಕ್ರಿಯಾಶೀಲತೆ ಮತ್ತು ಸ್ಥಿತಿಸ್ಥಾಪಕತ್ವ ಲಕ್ಷಣಗಳೇ ಮಾಯವಾಗಿವೆ. ಇವೆಲ್ಲವೂ ವ್ಯವಹಾರದಲ್ಲಿ ಯಶಸ್ಸು ಸಾಧಿಸಲು ಅಗತ್ಯವಾಗಿದ್ದು, ಅವುಗಳೇ ಮರೀಚಿಕೆಯಾಗಿವೆ ಎಂದಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.
ನಿದ್ರೆಯ ನಡುವೆ ಎಚ್ಚರವಾಗುವ ಸಮಸ್ಯೆಯಿಂದ ಶೇ 19ರಷ್ಟು ಜನರ ವಿಶ್ರಾಂತಿಯ ಗುಣಮಟ್ಟ ತೀರಾ ಕಳಪೆಯಾಗಿದೆ. ಶೇ 26ರಷ್ಟು ಜನರ ನಿದ್ರೆಯ ಅವಧಿ 6 ಗಂಟೆಗಿಂತಲೂ ಕಡಿಮೆ ಇದ್ದು, ಉದ್ಯಮಿಗಳಿಗೆ ಇದು ಬಹುದೊಡ್ಡ ಸಮಸ್ಯೆಯಾಗಿದೆ.
ಈ ನಿದ್ರಾಹೀನತೆಯ ಸಮಸ್ಯೆಗೆ ಒತ್ತಡ ಮತ್ತು ಆತಂಕವೇ ಪ್ರಮುಖ ಕಾರಣ. ಜತೆಗೆ ಮಲಗುವ ಮೊದಲು ಮೊಬೈಲ್, ಲ್ಯಾಪ್‌ಟಾಪ್ ಅಥವಾ ಟಿವಿ ಪರದೆಯನ್ನು ನೋಡುವುದೂ ನಿದ್ರಾಹೀನತೆಗೆ ಕಾರಣಗಳು ಎಂದೆನ್ನಲಾಗಿದೆ.
‘ಮನಸ್ಸು, ದೇಹ ಮತ್ತು ಆತ್ಮ ಪುನರ್‌ಯವ್ವನಗೊಳಿಸಲು ಗಾಢ ನಿದ್ರೆ ಎಂಬುದು ಪ್ರಮುಖ ಔಷಧವಾಗಿದೆ. ನಿದ್ರೆಯಲ್ಲಿ ಅಹಂಕಾರದ ಹೊರೆ ತಗ್ಗುತ್ತದೆ. ಆಳವಾದ ಪ್ರಜ್ಞೆಯೊಂದಿಗೆ ದೇಹ ಹಾಗೂ ಮನಸ್ಸನ್ನು ಹೊಂದಿಸುವ ಯತ್ನ ನಡೆಯುತ್ತದೆ. ಯಾವ ಉದ್ಯಮಿಯು ಆರೋಗ್ಯವಂತ ನಿದ್ರೆ ಹೊಂದಿರುತ್ತಾರೋ ಅಂಥವರು ಅಪಾರ ಜ್ಞಾನ, ಕ್ರಿಯಾಶೀಲತೆ ಹೊಂದಿರುತ್ತಾರೆ. ನಿರ್ಧಾರದಲ್ಲಿ ಸ್ಪಷ್ಟತೆ ಇರಲಿದೆ. ಹೊಸ ಸಾಧ್ಯತೆಗಳಿಗೆ ಮನಸ್ಸು ಸದಾ ತೆರೆದಿರುತ್ತದೆ’ ಎಂದು ಶ್ರೀರಾಮ್ ಚಂದ್ರ ಮಿಷನ್ ಅಧ್ಯಕ್ಷ ದಾಜಿ ಹೇಳಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಂಡು ಅರ್ಧದಷ್ಟು ಜನರು ಒತ್ತಡ, ಆತಂಕ, ವ್ಯವಹಾರದ ಒತ್ತಡ, ಹೊಸ ಸವಾಲುಗಳನ್ನು ಎದುರಿಸುವ ಆತಂಕದೊಂದಿಗೆ ತಂಡದ ನಿರ್ವಹಣೆ, ಹೊಣೆಗಾರಿಕೆಯಿಂದ ಹೊರಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
‘ಉದ್ಯಮಿಗಳು ಮತ್ತು ಸ್ಟಾರ್ಟ್‌ಅಪ್‌ನ ಸ್ಥಾಪಕರು ತಮ್ಮ ಯಶಸ್ಸಿಗಾಗಿ ನಿದ್ರೆಯನ್ನು ಬಲಿ ಕೊಡುತ್ತಿದ್ದಾರೆ. ಇದು ಅವರ ಉತ್ಪಾದಕತೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತಿದೆ. ಪ್ರಮುಖ ನಿರ್ಣಯ ಕೈಗೊಳ್ಳುವುದು ಸೇರಿದಂತೆ ಸಮಗ್ರ ಬೆಳವಣಿಗೆಯ ಮೇಲೂ ಪರಿಣಾಮವನ್ನುಂಟು ಮಾಡುತ್ತಿದೆ’ ಎಂದು ಟಿಐಜಿ ಗ್ಲೋಬಲ್ ಸಂಸ್ಥೆಯ ಸದಸ್ಯ ಮುರುಳಿ ಬುಕ್ಕಾಪಟ್ಟಣಂ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.