ಚಳಿದಿನಗಳಲ್ಲಿ ಚಳಿಯ ಸಂಗಡ ಮೋಡಗಳೂ ಬಳಲಿಸುತ್ತಿವೆ. ಇಂತಹ ಹವಾಮಾನ ವೈಪರೀತ್ಯದಿಂದ ಎಳೆಯ ಶಿಶುಗಳಿಂದ ಹಿರಿಯರವರೆಗೆ ಕಾಡುವ ಏಕೈಕ ಸಮಸ್ಯೆಯೆಂದರೆ ಗಂಟಲಿನ ಕಿರಿಕಿರಿ. ನಂತರ ತಲೆದೋರುವುದೇ ನಿಲ್ಲದ ಕೆಮ್ಮು, ಉಸಿರಾಟದ ಸಮಸ್ಯೆ. ಇದೀಗ ದಿನೇ ದಿನೇ ಉಲ್ಬಣಿಸುವ ಈ ಸಮಸ್ಯೆಗಿದೆ ತಡೆ ಮತ್ತು ಪರಿಹಾರರೂಪೀ ಮನೆ ಮದ್ದು. ಕೆಲವು ಮಾದರಿಗಳು ಮನೆಯ ಮಟ್ಟದಲ್ಲಿ ಕೈಗೊಳ್ಳುವುದು ಸುಲಭ ಸಾಧ್ಯ.
l ಒಣದ್ರಾಕ್ಷಿಯನ್ನು ಪದೇ ಪದೇ ಚೆನ್ನಾಗಿ ಜಗಿದು ತಿನ್ನಬಹುದು. ಬಹುತೇಕರಿಗೆ ರಾತ್ರಿಯ ಸಮಯದಲ್ಲಿ ಉಂಟಾಗುವ ಗಂಟಲಿನ ಕಿರಿ ಕಿರಿ, ಉಸಿರಾಟ ತೊಂದರೆ ಮತ್ತು ಕೆಮ್ಮು ಉಲ್ಬಣಕ್ಕೆ ಈ ಉಪಚಾರದಿಂದ ಕೊಂಚ ಬಿಡುಗಡೆ ದೊರೆಯಲಿದೆ.
l ಕೆಂಪು ಕಲ್ಲುಸಕ್ಕರೆಯನ್ನು ಬಾಯಲ್ಲಿ ಇರಿಸಿಕೊಂಡು ಚೀಪಿರಿ. ಕಫವನ್ನು ಕರಗಿಸುವ ಗುಣ ಕಲ್ಲುಸಕ್ಕರೆಗಿದೆ. ಗಂಟಲ ಉರಿ, ಕಿರಿಕಿರಿಗೆ ಅಲ್ಪ ವಿರಾಮ ಸಾಧ್ಯ.
l ‘ಮಧುಯಷ್ಟಿ’ ಎಂದರೆ ಜ್ಯೇಷ್ಠಮಧು. ಗಿಡದ ಬೇರು ಇದು. ಅದರ ಪುಡಿ ಗ್ರಂಧಿಗೆ ಅಂಗಡಿಯಲ್ಲಿ ಲಭ್ಯ. ಜೇನಿನ ಸಂಗಡ ಪುಡಿ ಕಲಸಿ ನೆಕ್ಕಿದರೆ ಒಣಕೆಮ್ಮು, ಗಂಟಲ ಉರಿಯೂತಕ್ಕೆ ಪೂರ್ಣ ವಿರಾಮ.
l ಎಲ್ಲರಿಗೂ ಸುಲಭ ಸಂಜೀವಿನಿ ವೀಳ್ಯದೆಲೆ. ಚಿಗುರು ಎಲೆಯ ರಸವನ್ನು ಜೇನಿನ ಸಂಗಡ ಎಳೆಯ ಕಂದನಿಂದ ಹಿರಿಹರೆಯದ ಮಂದಿಗೆ ನೆಕ್ಕಿಸಲು ಸುಲಭ. ನಿತ್ಯ ಮುಂಜಾನೆ ಕಫಕಾಲದಲ್ಲಿ ಆರೇಳು ಚಿಗುರೆಲೆಗೆ ಒಂದು ಕಪ್ ನೀರು ಹಾಕಿ ಕುದಿಸಿರಿ. ಐದಾರು ನಿಮಿಷ ಕುದಿದ ಮೇಲೆ ಕಷಾಯ ಬಿಸಿ ಇದ್ದಾಗಲೆ ಗಂಟಲಿಗಿಳಿಸಿರಿ. ವೀಳ್ಯದೆಲೆಯನ್ನು ಮೀರಿಸುವ ಕಫಪರಿಹಾರಿ ಮೂಲಿಕೆ ಮತ್ತೊಂದಿಲ್ಲ.
l ಊಟ ಮತ್ತು ತಿಂಡಿಯ ನಡು ನಡುವೆ ಬಿಸಿ ಬಿಸಿ ನೀರು ಗಂಟಲಿಗೆ ಇಳಿಸಿ ಆಹಾರವನ್ನು ಚೆನ್ನಾಗಿ ಜಗಿದು ತಿಂದರೆ ಕಫ ಉದ್ರೇಕಕ್ಕೆ ಕಡಿವಾಣ. ಕೆಮ್ಮನ್ನು ನೀಗಲು ಇದು ಸಹಕಾರ.
l ನೆಗಡಿ ಮತ್ತು ಪದೇ ಪದೇ ಕಾಡುವ ಕೆಮ್ಮಿನ ಪರಿಹಾರಕ್ಕೆ ಹುರುಳಿಬೀಜವನ್ನು ಬಳಸುವ ಸುಲಭ ಉಪಾಯ ಹಿಂದಿನ ತಲೆಮಾರಿನ ಅನುಭವ. ಹುರುಳಿಯ ಕಷಾಯಕ್ಕೆ ‘ಕುಲತ್ಥಯೂಷ’ ಎಂಬ ಗ್ರಂಥಸ್ಥ ಹೆಸರಿದೆ. ಮಲವೂ ಸರಾಗ. ಥಂಡಿಯೂ ಪರಿಹಾರ. ಕೆಮ್ಮು ನೆಗಡಿಗೆಗಳಿಗೆ ಕಡಿವಾಣ.
l ಏಲಕ್ಕಿ ಸುಗಂಧವಸ್ತು ಮಾತ್ರ ಅಲ್ಲ, ಗಂಟಲು ದನಿಯನ್ನು ಸುಧಾರಿಸಲು ಬಲು ಸಹಕಾರಿ. ‘ಏಲಾದಿ ವಟಿ’ ಎಂಬ ಮಾತ್ರೆ ಆಯುರ್ವೇದ ಅಂಗಡಿಗಳಲ್ಲಿ ದೊರಕುತ್ತದೆ. ಇದು ಆಗಾಗ ಚೀಪಬಹುದಾದ ನಿರಪಾಯಕಾರಿ ಚಿಕಿತ್ಸೆ.
l ಲವಂಗ ಮತ್ತು ಚಕ್ಕೆಗಳಿಗೆ ಕಫವನ್ನು ತೊಡೆದು ಹಾಕುವ ಗುಣವಿದೆ. ಅವುಗಳನ್ನು ಹಿತಮಿತವಾಗಿ ಪುಡಿಯ ರೂಪದಲ್ಲಿ ಬಳಸಬಹುದು. ದಾಲ್ಚೀನಿ ಎಲೆಗೂ ಕಫವನ್ನು ನೀರಾಗಿಸುವ ಗುಣ ಇದೆ. ಇಂತಹ ಸುಗಂಧ ವಸ್ತು ಬಳಸಿದ ಕಷಾಯ ಕುಡಿದರೆ ಕಫದ ಕಿರಿಕಿರಿಗಿದೆ ಸುಲಭ ಉಪಾಯ.
l ‘ಆಡುಸೋಗೆ’ ಎಂಬ ಬೇಲಿಗಿಡದ ಕಹಿಕಹಿ ಎಲೆಯ ಕಷಾಯ ನಿತ್ಯ ಕುಡಿಯಬಹುದು. ಇದರಿಂದ ಶ್ವಾಸಕೋಶಗಳಿಗೆ ತಾಕತ್ತು. ಕೆಮ್ಮು ನಿವಾರಕ ಎಲ್ಲ ಸಿರಪ್, ಕಷಾಯ, ಅರಿಷ್ಟಗಳಲ್ಲಿದೆ ಆಡುಸೋಗೆ. ಅದನ್ನು ಅಂಗಡಿಯಿಂದ ಖರೀದಿಸಿಟ್ಟುಕೊಳ್ಳಿರಿ. ದೇಹದ ರೋಗ ನಿರೋಧಕ ಕಸುವು ಹೆಚ್ಚಲು ಆಡುಸೋಗೆ ಬಹಳ ಪೂರಕ. ಇದನ್ನು ದಿನವೂ ಬಳಸಬಹುದು.
l ಶುಂಠಿ, ಕಾಳುಮೆಣಸು ಮತ್ತು ಹಿಪ್ಪಲಿ ಗೊತ್ತಿವೆ. ಮೆಣಸಿನಕಾಯಿ ನಮ್ಮ ದೇಶದ ಸರಕಲ್ಲ, ದಕ್ಷಿಣ ಅಮೆರಿಕದ್ದು.ಅದು ಆಮದಾಗುವ ಮುನ್ನ ನಮ್ಮ ಅಡಿಗೆಗೊದಗುತ್ತಿದ್ದ ಖಾರದ ಸಂಬಾರವಸ್ತು ಇವೇ ಆಗಿದ್ದವು. ಅಂತಹವು ಇಂದಿಗೂ ಸಲ್ಲುವವು; ಅಡುಗೆಗೆ ಮತ್ತು ಮದ್ದಿಗೆ ಒದಗುವವು. ಪನ್ಸಾರಿ ದುಕಾನಿನಲ್ಲಿ ಸಿಗುವ ಒಂದೊಂದು ಅಥವಾ ಮಿಶ್ರಣದ ಕಷಾಯ, ಚೂರ್ಣದ ಸೇವನೆಯಿಂದ ಉಸಿರಾಟದ ಅಂಗಗಳ ಒತ್ತಡ ಇಳಿಕೆ. ಕೆಮ್ಮು–ದಮ್ಮುಗಳ ನಿವಾರಣೆ.
l ಕಸ್ತೂರಿ ಮತ್ತು ಗೋರೋಚನ ಎಂಬ ಎರಡು ವಸ್ತು ಪ್ರಾಣಿಜನ್ಯ ಸುಗಂಧದ್ರವ್ಯಗಳು. ಇವುಗಳಿಂದ ಮಾತ್ರೆಗಳನ್ನು ಸಿದ್ಧಪಡಿಸುತ್ತಾರೆ. ಅವು ಎಲ್ಲೆಡೆ ಸಿಗುತ್ತವೆ. ವೀಳ್ಯದೆಲೆ ಸಂಗಡ ಜೇನಿನಸಹಿತ ಬಳಸಿದರೆ ನಿರಪಾಯ. ಸುಲಭಶಃ ಶೀತ, ನೆಗಡಿ, ಕೆಮ್ಮಿಗೆ ಪರಿಹಾರ.
l ತೆಂಗಿನೆಣ್ಣೆ ಮತ್ತು ಸಾದಾ ಉಪ್ಪಿನ ಪುಡಿ ಸೇರಿಸಿರಿ. ಅದರ ಮಿಶ್ರಣವನ್ನು ಸೌಟಿನಲ್ಲಿ ಹಾಕಿರಿ. ಉರಿಗಿರಿಸಿ ಬಿಸಿ ಮಾಡಿರಿ. ಉಪ್ಪು ಕರಗದು ನಿಜ. ಆದರೆ ಈ ದ್ರಾವಣದ ಮಾಲೀಶನ್ನು ಎದೆಯ ಭಾಗ ಮತ್ತು ಬೆನ್ನಿಗೆ ಮಾಡಲು ಸಾಧ್ಯ. ಕೆಮ್ಮು ಮತ್ತು ಉಸಿರಾಟದ ತೊಂದರೆಗೆ ತಾತ್ಕಾಲಿಕ ಉಪಶಮನ ಖಂಡಿತ. ಕಾರ್ಬನ್ ಡೈ ಆಕ್ಸೈಡ್ ಮತ್ತು ಪ್ರಾಣವಾಯುವಿನ ವಿನಿಮಯಕ್ಕೆ ಬಲೂನಿಗೆ ತಾಕತ್ತು ಬೇಕೆ? ಅಂತಹ ವಾತಾವರಣ ನಿರ್ಮಾಣವಾಗಲು ಇಂತಹ ಸುಲಭ ಉಪಾಯ ಸಹಕಾರಿ.
ನಿದ್ರೆಯನ್ನು ಬರಿಸುವ ಕೆಮ್ಮುನಿವಾರಕ ‘ಸಿರಪ್’, ಪದೇ ಪದೇ ಆ್ಯಂಟಿಬಯಾಟಿಕ್‌ಗಳ ಗೊಡವೆಗೆ ಶರಣು ಹೋಗುವ ಮುನ್ನ ಇಂತಹ ಸರಳ ಉಪಾಯಕ್ಕೆ ಖಂಡಿತ ಪ್ರಯತ್ನಿಸಿರಿ. ಇವು ದೇಹದ ರೋಗನಿರೋಧಕ ಶಕ್ತಿಯು ಬೆಳೆಯಲು ಮುಖ್ಯವಾದ ಸಂಗತಿ ನೆನಪಿಡಿರಿ. ಮಹಾಭೈಷಜ್ಯ ಎಂಬುದೇನು ಗೊತ್ತೆ? ನಾವುಣ್ಣುವ ಆಹಾರ. ‘ಈಟ್ ದಿ ಕೋಲ್ಡ್ ಅ್ಯಂಡ್ ಡ್ರಿಂಕ್ ದಿ ಫೀವರ್’ ಎಂಬ ಆಂಗ್ಲನುಡಿಗಟ್ಟಿದೆ. ಎಂದರೆ ನೆಗಡಿಗೆ ತಿಂದುಣ್ಣುವ ಉಪಚಾರವಿರಲಿ. ಜ್ವರ ಬಂದಾಗ ಹೆಚ್ಚು ದ್ರವಾಂಶವನ್ನು ಸೇವಿಸಿರಿ. ನಿರಾಳವಾಗಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.