ADVERTISEMENT

ಚಳಿಗಾಲದಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚು: ಡಾ. ಸಂದೇಶ್ ಸಲಹೆ

ಉತ್ತಮ ಆಹಾರ ಕ್ರಮ, ಅಭ್ಯಾಸದಿಂದ ರೋಗ ದೂರ: ಡಾ. ಸಂದೇಶ್ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 11:13 IST
Last Updated 12 ಡಿಸೆಂಬರ್ 2020, 11:13 IST
ಶನಿವಾರ ಮಾಧ್ಯಮ ಸಂವಾದದಲ್ಲಿ ಮಣಿಪಾಲ್‌ ಆಸ್ಪತ್ರೆಯ ಹೃದಯ ತಜ್ಞ ಡಾ. ಸಂದೇಶ್‌ ಪ್ರಭು ಮಾತನಾಡಿದರು
ಶನಿವಾರ ಮಾಧ್ಯಮ ಸಂವಾದದಲ್ಲಿ ಮಣಿಪಾಲ್‌ ಆಸ್ಪತ್ರೆಯ ಹೃದಯ ತಜ್ಞ ಡಾ. ಸಂದೇಶ್‌ ಪ್ರಭು ಮಾತನಾಡಿದರು   

ರಾಮನಗರ: ಚಳಿಗಾಲದಲ್ಲಿ ಹೃದಯಾಘಾತದ ಪ್ರಕರಣಗಳು ಉಳಿದ ದಿನಗಳಿಗಿಂತ ಶೇ 30 ರಷ್ಟು ಹೆಚ್ಚು ವರದಿಯಾಗುತ್ತಿವೆ. ಹೀಗಾಗಿ ಜನರು ತಮ್ಮ ಹೃದಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯ ಹೃದಯ ತಜ್ಞ ಡಾ. ಸಂದೇಶ್‌ ಪ್ರಭು ಸಲಹೆ ನೀಡಿದರು.

ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ಕಳೆದ 16 ವರ್ಷ ಕಾಲ ಒಟ್ಟು 2.80 ಲಕ್ಷ ರೋಗಿಗಳ ಕುರಿತು ನಡೆಸಿದ ಅಧ್ಯಯನದಿಂದ , ಚಳಿಗಾಲದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚು ಎಂಬುದು ದೃಢವಾಗಿದೆ. ತಾಪಮಾನ ಕಡಿಮೆಯಾದಂತೆಲ್ಲ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಗಂಭೀರ ಹೃದಯಾಘಾತಕ್ಕೆ ಒಳಗಾಗದ 30 ದಿನಗಳ ಒಳಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಉಳಿದ ಋತುಮಾನಗಳಿಗಿಂದ ಚಳಿಗಾಲದಲ್ಲಿ ಶೇ 50 ಹೆಚ್ಚಿದೆ. ಪ್ರತಿ ಒಂದು ಡಿಗ್ರಿ ಉಷ್ಣಾಂಶ ಇಳಿಕೆಯ ಪರಿಣಾಮ ಶೇ.0.7 ರಷ್ಟು ಹೃದಯ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರಿಂದ ಚಳಿಗಾಲದಲ್ಲಿ ಹೃದಯಾಘಾತವನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ವಾತಾವರಣ ತಣ್ಣಗಿರುವುದರಿಂದ ನೇರವಾಗಿ ಅದು ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಹೃದಯ ಸಂಬಂಧಿ ತೊಂದರೆ ಹೆಚ್ಚುವುದಕ್ಕೆ ಹಲವು ಕಾರಣಗಳಿವೆ. ದೇಹವನ್ನು ಬೆಚ್ಚಗೆ ಇಡಲು ನಮ್ಮಲಾಗುವ ಹಲವು ಮಾನಸಿಕ ಬದಲಾವಣೆಗಳು ಚಳಿಗಾಲದಲ್ಲಿ ಹೃದಯ ಸಂಬಂಧಿ ತೊಂದರೆಯನ್ನು ಉಂಟುಮಾಡಲಿವೆ. ದೇಹವನ್ನು ಬೆಚ್ಚಗಿರಿಸಲು ನಮ್ಮ ಹೃದಯ ಹೆಚ್ಚು ಶ್ರಮ ವಹಿಸಬೇಕಿದೆ. ಇದು ರಕ್ತದೊತ್ತಡ, ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಸರಾಗ ಕಾರ್ಯಕ್ಕೆ ಆಮ್ಲಜನಕದ ಬೇಡಿಕೆ ಪ್ರಮಾಣ ಹೆಚ್ಚಿಸುತ್ತದೆ. ಆರೋಗ್ಯವಂತ ಮನುಷ್ಯ ಈ ಬದಲಾವಣೆಗೆಗಳಿಗೆ ಒಗ್ಗಿಕೊಳ್ಳಬಹುದು, ಆದರೆ, ಹೃದ್ರೋಗಿ, ಹೃದಯಕ್ಕೆ ಒತ್ತಡ ಹೆಚ್ಚಿದಾಗ ಒಗ್ಗಿಕೊಳ್ಳುವುದು ಸುಲಭವಲ್ಲ. ಚಳಿಗಾಲದಲ್ಲಿ ರಕ್ತದ ಹರಿವು ಜಡವಾಗಿರುವುದು, ರಕ್ತ ಹೆಪ್ಪುಗಟ್ಟುವುದು ಸಾಬೀತಾಗಿದ್ದು, ಅದರಿಂದ ಹೃದಯಕ್ಕೆ ಹೆಚ್ಚಿನ ಕಂಟಕಪ್ರಾಯವಾಗಿದೆ. ಚಳಿಗಾಲದಲ್ಲಿ ದೇಹವು ಹೆಚ್ಚಿನ ಒತ್ತಡದ ಹಾರ್ಮೋನ್‍ಗಳು ಬಿಡುಗಡೆ ಮಾಡುತ್ತದೆ. ಇದು ಹೃದಯದ ಸಮಸ್ಯೆಯನ್ನು ವೃದ್ಧಿಸುತ್ತದೆ. ಚಳಿಗಾಲದಲ್ಲಿ ಸೋಂಕು ಮತ್ತು ಶೀತ ಹೆಚ್ಚಲಿದ್ದು, ಇದೂ ಸಹ ಹೃದಯಕ್ಕೆ ತೊಂದರೆ ಉಂಟುಮಾಡುತ್ತದೆ ಎಂದರು.

ADVERTISEMENT

ಯಾರಿಗೆ ಹೆಚ್ಚು ತೊಂದರೆ?

65 ವರ್ಷ ಮೇಲ್ಪಟ್ಟ ರೋಗಿಗಳು, ಧೂಮಪಾನ, ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೈಪರ್‍ಕೊಲೆಸ್ಟ್ರೋಲೆಮಿಯಾ ಸಮಸ್ಯೆ, ಅನಾರೋಗ್ಯಕರ ಜೀವನ ಶೈಲಿ ಅಳವಡಿಸಿಕೊಂಡಿರುವವರು ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ವೈದ್ಯರ ಸಲಹೆ ಸೂಚನೆಗಳನ್ನು ಸರಿಯಾಗಿ ಪಾಲಿಸುತ್ತ, ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆ ತಂದುಕೊಂಡರೆ, ಹೃದ್ರೋಗದಿಂದ ದೂರ ಉಳಿಯಬಹುದು. ವೈದ್ಯರ ಸಲಹೆ ಮೇರೆಗೆ ಔಷಧಿಯನ್ನು ಕಾಲಕಾಲಕ್ಕೆ ತೆಗೆದುಕೊಳ್ಳುವುದು ಇಂದಿನ ತುರ್ತು ಎಂದು ವೈದ್ಯರು ಸಲಹೆ ನೀಡಿದರು.

ಪರಿಹಾರ ಏನು?

ದೇಹವನ್ನು ಬೆಚ್ಚಗೆ ಇರಿಸಿಕೊಳ್ಳುವುದು ಒಳ್ಳೆಯದು. ಜೊತೆಗೆ ಉದ್ವೇಗಕ್ಕೆ ಒಳಗಾಗಬಾರದು. ಹೆಚ್ಚು ಆಯಾಸವಾಗುವ ವ್ಯಾಯಾಮ ಮಾಡಬಾರದು. ಅದರಿಂದ ರಕ್ತದೊತ್ತಡ ಹೆಚ್ಚಾಗಿ, ಹೃದಯ ಸ್ತಂಭನ ಉಂಟಾಗಬಹುದು. ಹಾಗಾಗಿ, ರೋಗಿಗಳು ಮನೆಯಲ್ಲಿಯೇ ಇರಬೇಕು, ವ್ಯಾಯಾಮ ಮಾಡಬೇಕು, ಹೆಚ್ಚು ಆಯಾಸವಾಗುವಂತಹ ವ್ಯಾಯಾಮಗಳನ್ನು ಮಾಡಬಾರದು, ಕೈಚೀಲ, ಕಾಲ್ಚೀಲ, ಟೋಪಿಗಳನ್ನು ಧರಿಸಿ ದೇಹವನ್ನು ಬೆಚ್ಚಗೆ ಇರಿಸಿಕೊಳ್ಳಬೇಕು. ಧೂಮಪಾನ, ಮಧ್ಯಪಾನವನ್ನು ತ್ಯಜಿಸಬೇಕು. ಎಣ್ಣೆಯಲ್ಲಿ ಖರಿದ ಪದಾರ್ಥಗಳನ್ನು ಹೆಚ್ಚು ಸೇವಿಸಬಾರದು ಎಂದರು.

ರೋಗದ ಲಕ್ಷಣಗಳೇನು?

ಎದೆ ನೋವು, ಎದೆ ಭಾರ, ಉಸಿರಾಟದಲ್ಲಿ ಸಮಸ್ಯೆ, ಅತಿಯಾದ ಸುಸ್ತು ಅಥವಾ ಎದೆಉರಿ ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆಯನ್ನು ಪಡೆಯುವುದು ಬಹಳ ಮುಖ್ಯ. ಈ ಲಕ್ಷಣಗಳು ಇದ್ದಲ್ಲಿ ಮೊದಲು ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಇಸಿಜಿ, ಇಕೋ ಮೊದಲಾದ ಪರೀಕ್ಷೆಗಳಿಗೆ ಒಳಗಾಗಬೇಕು. ವೈದ್ಯರ ಸಲಹೆಗಳನ್ನು ಪಾಲಿಸಬೇಕು ಎಂದು ಸಂದೇಶ್‌ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.