ADVERTISEMENT

ಆರೋಗ್ಯಕರ ಪೇಯ ಹರ್ಬಲ್‌ ಕಷಾಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 19:30 IST
Last Updated 1 ಅಕ್ಟೋಬರ್ 2021, 19:30 IST
   

ಕಾಫಿ ಮತ್ತು ಟೀ ನಮ್ಮ ದೈನಂದಿನ ಅವಿಭಾಜ್ಯ ಭಾಗ. ಕೆಲವರಂತೂ ದಿನಕ್ಕೆ 4–5 ಸಲ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸವಿಟ್ಟುಕೊಂಡಿರುತ್ತಾರೆ. ಬೇಸರ ಆದಾಗ, ತಲೆಬಿಸಿ ಆದಾಗ, ಸುಮ್ಮನೆ ಕೂತಾಗ ಕಾಫಿ, ಟೀ ಹೀರುವ ಚಟ ಕೆಲವರದ್ದು.

ಕಾಫಿ ಮತ್ತು ಟೀಯಲ್ಲಿ ಇರುವ ಕೆಫಿನ್‌ ಕೇಂದ್ರ ನರಮಂಡಲ ವ್ಯವಸ್ಥೆಯನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಜೊತೆಗೆ, ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಹಾಗಂತ, ದಿನಕ್ಕೆ 5–6 ಬಾರಿ ಕಾಫಿ, ಟೀ ಸೇವಿಸಿ ದೇಹಕ್ಕೆ ಹೆಚ್ಚು ಕೆಫಿನ್‌ ಅಂಶ ಸೇರಿದರೆ ಅದು ಅಪಾಯಕಾರಿಯಾಗುತ್ತದೆ. ಆತಂಕ, ತಳಮಳ, ಚಡಪಡಿಕೆ, ನಿದ್ರಾಹೀನತೆ, ಅಧಿಕ ರಕ್ತದೊತ್ತಡ ಸೇರಿ ಅನೇಕ ತೊಂದರೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಹಾಗಿದ್ದರೆ, ಕಾಫಿ ಮತ್ತು ಟೀ ಬದಲಿಗೆ ಆರೋಗ್ಯಪೂರ್ಣವಾಗಿರುವ ಯಾವುದನ್ನು ಕುಡಿಯಬಹುದು ನೋಡೋಣ.

ಅರಿಶಿನದ ಹಾಲು
ಶುಂಠಿ, ಚಕ್ಕೆ, ಅರಿಶಿನ ಮತ್ತು ಕಾಳುಮೆಣಸು ಹಾಕಿ ತಯಾರಿಸಿದ ಅರಿಶಿನದ ಹಾಲು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಹಾಲಿನ ರುಚಿ ಹೆಚ್ಚಿಸಲು ವೆನಿಲ್ಲಾ ಮತ್ತು ಜೇನುತುಪ್ಪವನ್ನೂ ಬೆರೆಸಿಕೊಳ್ಳಬಹುದು. ಸಣ್ಣ ಪುಟ್ಟ ಕೆಮ್ಮು, ಜ್ವರ, ಶೀತದಂಥ ರೋಗಗಳಿಗೆ ಇದು ಮನೆಮದ್ದು. ಜತೆಗೆ, ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ADVERTISEMENT

ಪೆಪ್ಪರ್‌ಮಿಂಟ್‌ ಚಹಾ
ಇದು ತುಂಬಾ ರುಚಿಕರವಾಗಿರುತ್ತದೆ ಮತ್ತು ಆರೋಗ್ಯಕ್ಕೂ ಉತ್ತಮವಾದುದು. ದೇಹ ಚೈತನ್ಯಪೂರ್ಣವಾಗಿರುವುದಕ್ಕೆ ಇದು ಬಹಳ ಪ್ರಯೋಜನಕಾರಿ ಎಂದು ಹಲವು ಅಧ್ಯಯನಗಳು ಹೇಳಿವೆ ಕೂಡ. ಮನೆಯಲ್ಲಿ ಪುದೀನವನ್ನು ಬೆಳೆಸುವುದು ಸುಲಭ. ಇದರ ಚಹಾವನ್ನು ತಯಾರಿಸುವುದು ಕೂಡ ಸುಲಭವೇ. ಬಿಸಿ ಬಿಸಿ ನೀರಿಗೆ ಕೆಲವು ಪುದೀನಾ ಎಲೆಗಳನ್ನು ಹಾಕಿದರೆ ಆಯಿತು; ಚಹಾ ತಯಾರಾಗುತ್ತದೆ.

ನಿಂಬೆ ನೀರು
ಬೆಳಿಗ್ಗೆ ಎದ್ದ ಕೂಡಲೇ ಇದನ್ನು ಸೇವಿಸುವುದು ಉತ್ತಮ ಉಪಾಯ. ಇದರಲ್ಲಿ ವಿಟಮಿನ್‌ ಸಿ ಹೇರಳವಾಗಿ ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಚರ್ಮದ ಆರೋಗ್ಯಕ್ಕೂ ಇದು ಮದ್ದಾಗಿದೆ.

ಶುಂಠಿ ಚಹಾ
ಇದನ್ನು ಎಲ್ಲರೂ ಬಹಳವಾಗಿ ಇಷ್ಟಪಡುತ್ತಾರೆ. ರಕ್ತ ಪರಿಚಲನೆ, ಸುಸ್ತು, ಒತ್ತಡದಿಂದ ಈ ಚಹಾ ನಮ್ಮನ್ನು ದೂರ ಮಾಡುತ್ತದೆ.

ಕ್ಯಾಮೊಮೈಲ್ ಚಹಾ
ಕ್ಯಾಮೊಮೈಲ್ ಚಹಾ ಸೇವನೆಯಿಂದ ನೆಮ್ಮದಿಯಾಗಿ ವಿಶ್ರಾಂತಿ ಪಡೆಯಲು, ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತದೆ. ಈ ಟೀ ಸೇವನೆಯಿಂದ ಋತುಸ್ರಾವದ ಸಮಯದಲ್ಲಿ ಕಿಬ್ಬೊಟ್ಟೆಯ ನೋವು ಕಡಿಮೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಿ, ಮಧುಮೇಹ ನಿಯಂತ್ರಣಕ್ಕೆ ಈ ಟೀ ನೆರವಾಗುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.