ADVERTISEMENT

ಹಣ್ಣು ತಿನ್ನುವುದಷ್ಟೇ ಡಯಟ್ ಅಲ್ಲ

ಪೂರ್ಣಾ
Published 7 ಅಕ್ಟೋಬರ್ 2022, 19:30 IST
Last Updated 7 ಅಕ್ಟೋಬರ್ 2022, 19:30 IST
   

ಬಹಳಷ್ಟು ಮಂದಿ ಡಯಟ್‌ ಮಾಡೋದು ಎಂದರೆ, ಊಟದ ಬದಲಿಗೆ ಕೇವಲಹಣ್ಣನ್ನಷ್ಟೇ ತಿಂದುಕೊಂಡಿರೋದು ಎಂದುಕೊಂಡಿದ್ದಾರೆ. ಆದರೆ, ಡಯಟ್‌ನ ಪಟ್ಟಿಯಲ್ಲಿ ಹಣ್ಣು ಒಂದು ಆಹಾರವಷ್ಟೇ. ಕೇವಲ ಹಣ್ಣು ತಿನ್ನುವುದೇ ಡಯಟ್‌ ಅಲ್ಲ ಎನ್ನುತ್ತಾರೆ ಆಹಾರ ತಜ್ಞರು.

ಹಣ್ಣು ಆರೋಗ್ಯಕರ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಂತ ಬರೀ ಹಣ್ಣೇ ತಿಂದು ಜೀವಿಸಬಹುದೆ? ಖಂಡಿತ ಸಾಧ್ಯವಿಲ್ಲ. ಮನುಷ್ಯನ ದೇಹಕ್ಕೆ ಹಣ್ಣಿನಷ್ಟೇ ಇತರ ಆಹಾರಗಳೂ ಮುಖ್ಯ ಎನ್ನುವುದು ತಜ್ಞರ ಅಭಿಪ್ರಾಯ.

ಡಯಟ್‌ ಬಗ್ಗೆ ಮಾತಾಡುವಾಗ ಅನೇಕ ವೈದ್ಯರು, ‘ತೂಕವನ್ನು ಕಳೆದುಕೊಳ್ಳಬೇಕು, ಆರೋಗ್ಯವನ್ನಲ್ಲ’ ಎಂದು ಹೇಳುವುದಿದೆ. ಹಾಗಾದರೆ, ತೂಕವನ್ನು ಕಳೆದುಕೊಳ್ಳಬೇಕು, ಆರೋಗ್ಯವಾಗಿಯೂ ಇರಬೇಕೆಂದರೆ ಎಷ್ಟು ಪ್ರಮಾಣದಲ್ಲಿ ಹಣ್ಣುಗಳನ್ನು ತಿನ್ನಬೇಕು? ಮತ್ತು ಯಾವ ಹಣ್ಣುಗಳನ್ನು ತಿನ್ನಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ADVERTISEMENT

ಫ್ರೂಟ್‌ ಡಯಟ್‌

ಆಹಾರ ಕ್ರಮದಲ್ಲಿ ಪ್ರಧಾನವಾಗಿ ಹಣ್ಣುಗಳನ್ನು ತಿನ್ನುವುದನ್ನೇ ಪ್ರೂಟ್ ಡಯಟ್ ಎನ್ನುತ್ತಾರೆ. ಈ ಪದ್ಧತಿಯಲ್ಲಿ ಮಾಂಸಾಹಾರ, ಡೇರಿ ಪದಾರ್ಥ ಸೇರಿದಂತೆ, ಕೊಬ್ಬಿನ ಅಂಶ ಮತ್ತು ಕಾರ್ಬೊಹೈಡ್ರೇಟ್ ಹೆಚ್ಚಿರುವಂತಹ ಎಲ್ಲ ಉತ್ಪನ್ನಗಳನ್ನು ಹೊರಗಿಡಲಾಗುತ್ತದೆ.

ಫ್ರೂಡ್‌ ಡಯಟ್‌ನಲ್ಲಿಕೆಲವರು ಹಣ್ಣಿನ ಜೊತೆಗೆ ತರಕಾರಿ ಗಳು, ಒಣ ಹಣ್ಣುಗಳು ಮತ್ತು ತರಕಾರಿ / ಹಣ್ಣಿನ ಬೀಜಗಳನ್ನೂ (ಕುಂಬಳ, ಅಗಸೆ, ಸೌತೆಕಾಯಿ ಬೀಜ) ಮಿತವಾಗಿ ಸೇವಿಸುತ್ತಾರೆ. ಇನ್ನೂ ಕೆಲವರು, ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಗೆಡ್ಡೆಗಳಂತಹ ಆಹಾರಗಳನ್ನು ಮಿತವಾಗಿ ತಿನ್ನುವುದುಂಟು. ಆದರೆ, ಯಾವುದೇ ಪ್ರಕಾರದ ಬೇಯಿಸಿದ ಆಹಾರವನ್ನು ಸೇವಿಸುವುದಿಲ್ಲ.

ಹಣ್ಣುಗಳಲ್ಲಿ ಯಾವ ಅಂಶಗಳಿವೆ?

* ಹಣ್ಣುಗಳಲ್ಲಿ ನಾರಿನ(ಫೈಬರ್‌) ಅಂಶ ಯಥೇಚ್ಛವಾ ಗಿರುತ್ತದೆ. ಇದು ದೇಹದಲ್ಲಿರುವ ಕೊಲೆಸ್ಟ್ರಾಲ್‌ (ಕೊಬ್ಬು) ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಕರುಳಿನ ಆರೋಗ್ಯಕ್ಕೆ ಉತ್ತಮ.

* ಸೇಬು, ಪೇರಳೆ, ಪಪ್ಪಾಯ, ಬಾಳೆಹಣ್ಣುಗಳಲ್ಲಿ ಫೈಬರ್‌ ಅಂಶ ಹೆಚ್ಚಿರುತ್ತದೆ.

* ಕಿತ್ತಳೆ ಮತ್ತು ಸ್ಟ್ರಾಬೆರಿಗಳಲ್ಲಿ ಸಾಕಷ್ಟು ವಿಟಮಿನ್ ಸಿ ಸಿಗುತ್ತದೆ. ಇದು ಹಲ್ಲು ಮತ್ತು ಒಸಡಿನ ಆರೋಗ್ಯಕ್ಕೆ ಪೂರಕ.

* ಬಾಳೆಹಣ್ಣು, ಹಲಸಿನಹಣ್ಣು ಮತ್ತು ಮಾವಿನ ಹಣ್ಣುಗಳಲ್ಲಿ ಪೊಟ್ಯಾಸಿಯಂ ಅಧಿಕವಾಗಿ ರುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.

* ಕಿತ್ತಳೆ ಮತ್ತು ಮಾವಿನ ಹಣ್ಣುಗಳಲ್ಲಿ ಪೊಲೇಟ್ ಅಧಿಕವಾಗಿರುತ್ತದೆ. ಇದು ದೇಹದಲ್ಲಿ ಕೆಂಪು ರಕ್ತ ಕಣಗಳ ವೃದ್ಧಿಗೆ ಸಹಾಯ ಮಾಡುತ್ತದೆ. ಫೋಲೇಟ್ ಆರೋಗ್ಯಕರ ಭ್ರೂಣದ ಬೆಳವಣಿಗೆಗೂ ಒಳ್ಳೆಯದು.

* ಪ್ಲಮ್ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಅಂಶವಿದೆ. ಉತ್ಕರ್ಷಣ ನಿರೋಧಕಗಳು ಚರ್ಮದ ರಕ್ಷಣೆಗೆ ಅತ್ಯುತ್ತಮ ಆಯ್ಕೆ.

ಅತಿಯಾದರೆ ಹಣ್ಣೂ ಹಾನಿಕಾರಕ!

‘ಹಣ್ಣುಗಳು ಆರೋಗ್ಯಕರ. ಆದರೆ, ಅತಿ ಹೆಚ್ಚಾದರೆ ಹಾನಿಕಾರಕವಾ ಗಬಹುದು. ಹಾಗಾಗಿ, ಯಾರಿಗೂ ವಾರ–ತಿಂಗಳುಗಟ್ಟಲೆ ಬರೀ ಹಣ್ಣು ಸೇವಿಸುತ್ತಿರಿ ಎಂದು ಸೂಚಿಸುವುದಿಲ್ಲ‘ ಎನ್ನುತ್ತಾರೆ ಫೋರ್ಟಿಸ್‌ ಆಸ್ಪತ್ರೆಯ ಆಹಾರ ತಜ್ಞೆ ಶಾಲಿನಿ ಅರವಿಂದ್‌.

‘ನಾವು ತೂಕವನ್ನು ಕಳೆದುಕೊಳ್ಳಬೇಕೆ ಹೊರತು ಆರೋಗ್ಯವ ನ್ನಲ್ಲ. ಈ ಎಚ್ಚರಿಕೆಯಿಂದ ವಾರದಲ್ಲಿ ಒಂದು ದಿನ, ಅಥವಾ ದಿನದಲ್ಲಿ ಒಂದು ಹೊತ್ತು ಹಣ್ಣು ಸೇವಿಸುವುದು ಉತ್ತಮ’ ಎನ್ನುತ್ತಾರೆ ಅವರು.

‘ಹಣ್ಣುಗಳಲ್ಲಿ ಒಮೆಗಾ–3, ಪ್ರೊಟೀನ್ ಮತ್ತು ಕೊಬ್ಬಿನಾಂಶ,ಡಿ ಜೀವಸತ್ವ, ಕೊಬ್ಬಿನಾಮ್ಲ ಗಳಂತಹ(ಫ್ಯಾಟಿ ಆಸಿಡ್‌) ಕೆಲ ಅಂಶಗಳು ಹೇರಳವಾಗಿರುವುದಿಲ್ಲ. ಆದರೆ, ಇವೆಲ್ಲ ಅಂಶಗಳು ದೇಹಕ್ಕೆ ಅತ್ಯಗತ್ಯವಾಗಿ ಬೇಕು. ಕೇವಲ ಹಣ್ಣನ್ನಷ್ಟೇ ಸೇವಿಸುತ್ತಾ, ಬೇರೆ ಆಹಾರ ತ್ಯಜಿಸುವುದರಿಂದ ದೇಹದಲ್ಲಿ ಚೈತನ್ಯ ಕಡಿಮೆಯಾಗುತ್ತದೆ. ಸುಸ್ತು ಆವರಿಸಿಕೊಳ್ಳುತ್ತದೆ’ ಎನ್ನುತ್ತಾರೆ ಶಾಲಿನಿ.

ಪೂರಕ ಪೋಷಕಾಂಶಗಳು ದೇಹಕ್ಕೆ ಸಿಗದಿದ್ದರೆ, ಅಪೌಷ್ಟಿಕತೆ ಉಂಟಾಗುವ ಸಾಧ್ಯತೆ ಇರುತ್ತದೆ. ಮಾತ್ರವಲ್ಲ, ದೇಹದಲ್ಲಿ ಚಯಾಪಚಯ ಕ್ರಿಯೆಯೂ(ಆಹಾರ ಜೀರ್ಣಕ್ರಿಯೆ) ನಿಧಾನವಾಗುತ್ತದೆ. ರಕ್ತಹೀನತೆ, ಆಯಾಸ ಅನುಭವಕ್ಕೆ ಬರಬಹುದು. ಕಾಲಾನಂತರದಲ್ಲಿ, ಕ್ಯಾಲ್ಸಿಯಂ ಕೊರತೆಯು ಆಸ್ಟಿಯೊಪೊರೋಸಿಸ್‌ಗೆ ಕಾರಣವಾಗಬಹುದು.

* ಎಲ್ಲ ಹಣ್ಣಗಳಲ್ಲೂ ಸಕ್ಕರೆ ಅಂಶವಿರುತ್ತದೆ. ಕೆಲವು ಹಣ್ಣುಗಳಲ್ಲಿ ಅದು ಹೆಚ್ಚಾಗಿರುತ್ತದೆ. ಹೀಗಾಗಿ, ಫ್ರೂಟ್‌ ಡಯಟ್‌ ಹೆಸರಿನಲ್ಲಿ ಅಂಥ ಹಣ್ಣುಗಳನ್ನು ಹೆಚ್ಚು ಸೇವಿಸುವುದರಿಂದ ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅದು ಮಧುಮೇಹ, ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ ಅಥವಾ ಇನ್ಸುಲಿನ್ ಪ್ರತಿರೋಧವಿರುವಂತಹವರಲ್ಲಿ ಹೆಚ್ಚು ಸಮಸ್ಯೆಯನ್ನುಂಟು ಮಾಡಬಹುದು ಎನ್ನುತ್ತಾರೆ ತಜ್ಞರು.

ಹಾಗಾಗಿ, ವೈದ್ಯರ / ಆಹಾರ ತಜ್ಞರ ಸಲಹೆ ಮೇರೆಗೆ, ನಿಮ್ಮ ದೇಹಾರೋಗ್ಯಕ್ಕೆ ಯಾವ ಹಣ್ಣುಗಳು ಹೊಂದುತ್ತವೆ ಎಂಬುದನ್ನು ತಿಳಿದು ಡಯಟ್‌ನಲ್ಲಿ ಅಳವಡಿಸಿಕೊಳ್ಳಬೇಕು. ಹಾಗೆಯೇ, ಹಣ್ಣುಗಳ ಜೊತೆಗೆ ತರಕಾರಿಗಳು, ಮೊಳಕೆಕಾಳು ಮತ್ತು ಪೋಷಕಾಂಶಗಳಿರುವ ಆಹಾರಗಳನ್ನು ಸೇರಿಸಿಕೊಳ್ಳಬೇಕು ಎಂಬುದು ಅವರ ಸಲಹೆ.

ಡಯಟ್‌ ಹೀಗಿರಲಿ
ತಿನ್ನುವುದನ್ನು ಬಿಡುವುದೇ ಡಯಟ್‌ ಅಲ್ಲ. ಎಲ್ಲಾ ತರಹದ ಆಹಾರವನ್ನೂ ಮಿತವಾಗಿ ಸೇವಿಸುವುದು ಮತ್ತು ಸೇವಿಸಿದ್ದನ್ನು ಕರಗಿಸುವ ಕಸರತ್ತು ಮಾಡುವುದೇ ಡಯಟ್‌. ನಿಮ್ಮ ಆರೋಗ್ಯ, ವಯೋಮಾನ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನಿರ್ದಿಷ್ಟ ಪ್ರಮಾಣದ ಆಹಾರ ಹೊಂದಿಸಿಕೊಳ್ಳುವುದೇ ಡಯಟ್‌. ಅದರಲ್ಲಿ ಹಣ್ಣು, ತರಕಾರಿ, ಡೇರಿ ಉತ್ಪನ್ನ, ಕಾಳು–ಬೇಳೆ‌ ಎಲ್ಲವೂ ಮಿತವಾಗಿರಬೇಕು ಎನ್ನುವುದು ಆಹಾರ ತಜ್ಞರ ಸಲಹೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.