ADVERTISEMENT

ಅಬ್ಬಬ್ಬಾ ಧಗೆ..! ಚರ್ಮ ಕಾಳಜಿಯ ಬಗೆ– ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಹೇಗೆ?

ಬೇಸಿಗೆಯ ಬಿಸಿಲಿನಲ್ಲಿಯೂ ಚರ್ಮದ ಹೊಳಪು ಮಾಸದಂತಿರಲು ಈ ಕೆಳಗಿನ ದಶಸೂತ್ರಗಳನ್ನು ಅನುಸರಿಸಿ.

ಪ್ರಜಾವಾಣಿ ವಿಶೇಷ
Published 26 ಏಪ್ರಿಲ್ 2024, 22:06 IST
Last Updated 26 ಏಪ್ರಿಲ್ 2024, 22:06 IST
<div class="paragraphs"><p>ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಹೇಗೆ?</p></div>

ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಹೇಗೆ?

   

ಬಿರುಬೇಸಿಗೆಯ ಬಿಸಿಲು ನಿಮ್ಮ ಚರ್ಮ ಚುರುಗುಟ್ಟುವಂತೆ ಮಾಡುತ್ತಿದ್ದರೆ ಚರ್ಮದತ್ತ ನಿಷ್ಕಾಳಜಿ ತೋರುತ್ತಿದ್ದೀರಿ ಎಂದರ್ಥ. ಬೇಸಿಗೆಯಲ್ಲಿ ಚರ್ಮಕ್ಕೆ ಅತಿ ಹೆಚ್ಚಿನ ಕಾಳಜಿ ಮಾಡಬೇಕಾಗುತ್ತದೆ. ಚರ್ಮದ ಮೂಲ ಬಣ್ಣವನ್ನು ಕಂದಿಸುವುದರಲ್ಲಿ ಸೂರ್ಯನ ಕಿರಣಗಳು ಇದೀಗ ಅತಿ ಹೆಚ್ಚು ಚಟುವಟಿಕೆಯಿಂದಿರುತ್ತವೆ.

ಬೇಸಿಗೆಯ ಬಿಸಿಲಿನಲ್ಲಿಯೂ ಚರ್ಮದ ಹೊಳಪು ಮಾಸದಂತಿರಲು ಈ ಕೆಳಗಿನ ದಶಸೂತ್ರಗಳನ್ನು ಅನುಸರಿಸಿ.

ADVERTISEMENT

lಆಗಾಗ ಮುಖ ತೊಳೆಯುತ್ತಿರಿ: ಬೆವರಿನಿಂದಾಗಿ ಚರ್ಮದ ರಂಧ್ರಗಳು ಕೆಲವು ಸಲ ಮುಚ್ಚಿಕೊಂಡಿರುತ್ತವೆ. ಆಗಾಗ ಮುಖ ತೊಳೆಯುವುದರಿಂದ ಚರ್ಮದ ಉಸಿರಾಟಕ್ಕೆ ತೊಂದರೆ ಆಗುವುದಿಲ್ಲ.

lತಣ್ಣೀರಿನ ಸ್ನಾನ: ಈ ಬಿರುಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಆಹ್ಲಾದಕರ ಅನುಭವ ಕೊಡುವುದಷ್ಟೇ ಅಲ್ಲ, ಚರ್ಮದ ಕಾಳಜಿಯನ್ನೂ ಮಾಡುತ್ತದೆ. ಸ್ನಾನ ಮಾಡುವಾಗ ಒಂದೆರಡು ಹನಿ ಕೊಬ್ಬರಿ ಎಣ್ಣೆಯನ್ನು ಸ್ನಾನದ ಬಕೆಟ್ಟಿಗೆ ಹಾಕುವುದು ಒಳಿತು. ಚರ್ಮ ಶುಷ್ಕವಾಗುವುದು ತಡೆಯುತ್ತದೆ.

lಮಾಯಿಶ್ಚರೈಸರ್‌ ಬಳಸಿ: ಚಳಿಗಾಲದಲ್ಲಿ ಬಳಸುವಂತೆಯೇ ಬೇಸಿಗೆಯಲ್ಲಿಯೂ ತ್ವಚೆಯಲ್ಲಿ ತೇವಾಂಶ ಕಾಪಾಡುವಂತೆ ಮಾಯಿಶ್ಚರೈಸರ್‌ ಬಳಸಿ. ಬಿಸಿಲಿನಲ್ಲಿ ಓಡಾಟ ತಪ್ಪಿಸಲಾಗದಿದ್ದರೆ ಸನ್‌ಸ್ಕ್ರೀನ್‌ ಲೋಷನ್‌ ಬಳಸಿ. ಉತ್ತಮ ಗುಣಮಟ್ಟದ ಸನ್‌ಸ್ಕ್ರೀನ್‌ ಲೋಷನ್‌ ಬಳಸುವುದು ಒಳಿತು.

lತುರಿಕೆ, ಕೆರೆತಕ್ಕೆ: ಸ್ನಾನಕ್ಕೆ ಮುನ್ನ ಕೊಬ್ಬರಿ ಎಣ್ಣೆ ಲೇಪಿಸಿಕೊಂಡು, ಉಗುರು ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮ ಒಣಗಿ ಕೆರೆದಂತಾಗುವುದನ್ನು ತಡೆಯಬಹುದಾಗಿದೆ.

lಸರಳವಿರಲಿ ಮೇಕಪ್‌: ಬೆವರಿನ ಕಾರಣದಿಂದ ಮೇಕಪ್‌ ಆದಷ್ಟೂ ಸರಳವಾಗಿರಲಿ. ಅತಿಯಾದ ಮೇಕಪ್‌ ಅಗತ್ಯವಿದ್ದರೆ, ಮನೆಗೆ ಮರಳಿದ ಕೂಡಲೇ ಮೇಕಪ್‌ ತೆಗೆದು, ಸ್ವಚ್ಛವಾಗಿ ಮುಖ ತೊಳೆದುಕೊಂಡು, ಮಾಯಿಶ್ಚರೈಸರ್‌ ಲೇಪಿಸಿಕೊಳ್ಳಿ.

lಚರ್ಮಕ್ಕಿರಲಿ ಛತ್ರಿ: ಬಿರುಬೇಸಿಗೆಯಲ್ಲಿ ತಲೆ ಬಿಸಿಯಾಗದಿರಲಿ ಎಂದು ಟೋಪಿ ಧರಿಸುವಂತೆ, ಸ್ಕಾರ್ಫ್‌ ಕಟ್ಟಿಕೊಳ್ಳುವಂತೆಯೇ ಛತ್ರಿ ಹಿಡಿದರೆ ಒಳಿತು. ಮುಖ, ಕಣ್ಣು, ಕತ್ತು ಮತ್ತು ಕೈಗಳಿಗೆ ಬಿರುಬಿಸಿಲು ತಾಕದಂತೆ ಸಂರಕ್ಷಣೆ ನೀಡಬಹುದಾಗಿದೆ.

lಸೋಪಿನ ಬದಲು ಅಕ್ಕಿ, ಕಡಲೆ ಹಿಟ್ಟು: ಸೋಪಿನ ಬದಲು ಎಣ್ಣೆ ಚರ್ಮದವರು ಕಡಲೆ ಹಿಟ್ಟು ಮತ್ತು ಮೊಸರಿನ ಮಿಶ್ರಣವನ್ನು ಹಚ್ಚಿಕೊಳ್ಳುವುದು ಚರ್ಮಕ್ಕೆ ಆರೋಗ್ಯಕರ ಆಯ್ಕೆಯಾಗಿದೆ. ಒಣ ಚರ್ಮದವರು ಕಡಲೆ ಹಿಟ್ಟಿನ ಬದಲಿಗೆ ಅಕ್ಕಿ ಹಿಟ್ಟನ್ನು ಬಳಸುವುದು ಒಳಿತು. ಮನೆಯಲ್ಲಿ ಲೊಳೆಸರವಿದ್ದಲ್ಲಿ ಈ ಮಿಶ್ರಣದೊಂದಿಗೆ ಬೆರೆಸಿ ಬಳಸಿಕೊಳ್ಳಬೇಕು.

lನೀರು ಕುಡಿಯುತ್ತಲಿರಿ: ಬೇಸಿಗೆಯಲ್ಲಿ ಚರ್ಮ ರಕ್ಷಣೆಗೆ ನೀರು ಪರಮ ಔಷಧಿಯಾಗಿದೆ. ತಂಪುಪಾನೀಯಗಳ ಸೇವನೆಯನ್ನು ಕಡಿಮೆ ಮಾಡಿ. ವಾತಾನುಕೂಲಿತ ಪ್ರದೇಶದಲ್ಲಿರುತ್ತಿದ್ದರೆ ನೀರಡಿಕೆಯಾಗದಿದ್ದರೂ ಆಗಾಗ ನೀರು ಸೇವಿಸುತ್ತಿರಿ. ಪ್ರತಿದಿನ ಕನಿಷ್ಠ ಮೂರು ಲೀಟರ್‌ ನೀರಾದರೂ ಕುಡಿಯಬೇಕು. ತಂಪು ಪಾನೀಯಗಳ ಬದಲಿಗೆ ನೀರು ಮಜ್ಜಿಗೆ, ಬೆಲ್ಲದ ಪಾನಕ, ನಿಂಬೆ ಪಾನಕಗಳನ್ನು, ತಾಜಾ ಹಣ್ಣಿನ ಜ್ಯೂಸುಗಳನ್ನು ಸೇವಿಸುವುದು ಹಿತಕರವಾಗಿದೆ.

lಹಿತಕರ ವಸ್ತ್ರ: ಬೇಸಿಗೆಯಲ್ಲಿ ಮೈಗೆ ಅಂಟುವಂಥ, ದಪ್ಪ ವಸ್ತ್ರಗಳನ್ನು ತೊಡಬೇಡಿರಿ. ಹತ್ತಿ ಉಡುಗೆಗಳು, ಲೆನಿನ್‌ ಉಡುಗೆಗಳು ನಿಮ್ಮ ಆಯ್ಕೆ ಆಗಿರಲಿ. ಆದಷ್ಟು ಸಡಿಲ ಉಡುಪುಗಳಿದ್ದರೆ ಬೆವರಿನಿಂದಾಗಿ ಕಿರಿಕಿರಿಯಾಗುವುದಿಲ್ಲ.

lಮಿತ ಆಹಾರ, ಹಿತವಾದ ನಿದ್ದೆ: ಮದುವೆಯಂಥ ಸಮಾರಂಭಗಳು ಹೆಚ್ಚಾಗಿರುವ ಈ ಋತುಮಾನದಲ್ಲಿ ಕರಿದ ಪದಾರ್ಥಗಳ ಸೇವನೆಯ ಮೇಲೆ ಹಿಡಿತವಿರಲಿ. ಸಿಹಿ ಔತಣಗಳಲ್ಲಿಯೂ ನಿಮ್ಮ ಆಸೆಯನ್ನು ಮಿತವಾಗಿರಿಸಿಕೊಂಡು, ಹಿತವಾಗಿ ಆಹಾರ ಸೇವಿಸಿ. ಬೇಸಿಗೆಯಲ್ಲಿ ದಣಿದು ಬಂದವರು ಆಗಾಗ ವಿರಮಿಸುವುದು, ಚರ್ಮದ ಆರೋಗ್ಯಕ್ಕೂ, ದೇಹದ ಆರೋಗ್ಯಕ್ಕೂ ಅತ್ಯವಶ್ಯವಾಗಿದೆ.

ನಿಮ್ಮ ಚೇತನ ಮತ್ತು ಉತ್ಸಾಹವನ್ನು ಸೂರ್ಯನ ಪ್ರಖರ ಕಿರಣಗಳು ಕಸಿಯದಂತಿರಲು ಈ ದಶಸೂತ್ರಗಳನ್ನು ತಪ್ಪದೆ ಪಾಲಿಸಿ.

⇒ಲೇಖಕಿ ಮೇಕಪ್‌ ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.