ADVERTISEMENT

ಅತಿಯಾದ ಒತ್ತಡ, ಪಾರ್ಶ್ವವಾಯು: ಫಲವತ್ತತೆಯ ಮೇಲೆ ಇದರ ಪರಿಣಾಮವೇನು?

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 11:19 IST
Last Updated 27 ನವೆಂಬರ್ 2025, 11:19 IST
<div class="paragraphs"><p>ಚಿತ್ರ: ಗೆಟ್ಟಿ</p></div>
   

ಚಿತ್ರ: ಗೆಟ್ಟಿ

ಹೈಪರ್‌ ಟೆನ್ಷನ್‌ ಎಂಬ ಪದವನ್ನು ಕೇಳಿದಾಗ, ಹೆಚ್ಚಿನವರು ಇದನ್ನು ಮಾತ್ರೆಯಿಂದ ನಿಯಂತ್ರಿಸಬಹುದಾದ ಸಾಮಾನ್ಯ ಜೀವನಶೈಲಿಯ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ ಇದು ಸರಳ ಅನಿಸಿದರೂ, ದೇಹದ ಮೇಲೆ ಅದರಲ್ಲಿಯೂ ವಿಶೇಷವಾಗಿ ಮೆದುಳಿನ ಆರೋಗ್ಯ, ಸಂತಾನೋತ್ಪತ್ತಿಯ ಹಾರ್ಮೋನ್‌, ಮುಟ್ಟಿನ ಚಕ್ರ, ವೀರ್ಯದ ಗುಣಮಟ್ಟ ಹಾಗೂ ಗರ್ಭಾವಸ್ಥೆಯ ಫಲಿತಾಂಶಗಳ ಮೇಲೆ ಆಳವಾದ ಪರಿಣಾಮ ಬೀರುತ್ತದೆ.

ಭಾರತೀಯ ವಯಸ್ಕರಲ್ಲಿ ಹೈಪರ್‌ ಟೆನ್ಷನ್‌ ವೇಗವಾಗಿ ಹೆಚ್ಚುತ್ತಿದೆ. ಇದು ಸದ್ದಿಲ್ಲದೆ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತಿದೆ. ಅಲ್ಲದೆ ಇದು ದಂಪತಿಗಳ ಫಲವತ್ತತೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಿದೆ. ಗರ್ಭಿಣಿಯಾಗಿರುವ ಅಥವಾ ಗರ್ಭ ಧರಿಸಲು ಯೋಜಿಸುವ ಮಹಿಳೆಯರಿಗೆ ಇದರ ಅಪಾಯ  ಹೆಚ್ಚು ಎಂದು ಹೇಳಬಹುದು.

ADVERTISEMENT

ಇಂದು ಹೈಪರ್‌ ಟೆನ್ಷನ್‌ ಏಕೆ ಸಾಮಾನ್ಯವಾಗುತ್ತಿದೆ?

ಒತ್ತಡ ತುಂಬಿದ ನಗರ ಜೀವನ, ನಿದ್ರೆಯ ಕೊರತೆ, ಸಂಸ್ಕರಿಸಿದ ಆಹಾರ ಸೇವನೆ,  ಅಧಿಕ ಉಪ್ಪಿರುವ ಆಹಾರ, ಮಾಲಿನ್ಯ, ಹಾರ್ಮೋನುಗಳ ಅಸಮತೋಲನ ಮತ್ತು ಸ್ವಾಭಾವಿಕವಲ್ಲದ ಜೀವನ ಶೈಲಿಗಳು 20 ರಿಂದ 30ರ ಹರೆಯದವರನ್ನು ಹೆಚ್ಚಿನ ಅಪಾಯಕ್ಕೆ ತಳ್ಳಿವೆ. ಹೈಪರ್‌ ಟೆನ್ಷನ್‌ ರೋಗ ಲಕ್ಷಣಗಳು ಹೆಚ್ಚೇನೂ ಗಂಭೀರವಲ್ಲದ ಕಾರಣ, ಅನೇಕರಿಗೆ ಈ ರೋಗ ಇದೆ ಎಂಬುದು ತಿಳಿದಿರುವುದಿಲ್ಲ. ಹೀಗೆ ಸದ್ದಿಲ್ಲದೆ ಹೆಚ್ಚುವ ಸಮಸ್ಯೆಯು ಪಾರ್ಶ್ವವಾಯುವಿಗೆ ಕಾರಣವಾಗುವುದಲ್ಲದೆ, ಫಲವತ್ತತೆಯ ಮೇಲೂ ಪರಿಣಾಮ ಬೀರುತ್ತದೆ.

ಅಧಿಕ ರಕ್ತದೊತ್ತಡ ಸ್ಟ್ರೋಕ್ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ?

ಮೆದುಳಿಗೆ ರಕ್ತ ಪೂರೈಕೆ ಸ್ಥಗಿತಗೊಂಡಾಗ ಅಥವಾ ಮೆದುಳಿನಲ್ಲಿನ ರಕ್ತನಾಳ ಒಡೆದಾಗ ಸ್ಟ್ರೋಕ್ ಸಂಭವಿಸುತ್ತದೆ. ದೀರ್ಘಕಾಲದ ಅಧಿಕ ರಕ್ತದೊತ್ತಡ ಅಪಧಮನಿಯ ಗೋಡೆಗಳಿಗೆ ಹಾನಿ ಮಾಡುತ್ತದೆ. ಇದರಿಂದಾಗಿ ರಕ್ತನಾಳಗಳು ಗಟ್ಟಿಯಾಗುತ್ತವೆ ಮತ್ತು ಕಿರಿದಾಗುತ್ತವೆ. ಇದರಿಂದ ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತನಾಳ ಒಡೆಯುವ ಸಾಧ್ಯತೆಯಿದೆ.

ಈ ಹಾನಿ ನಿಧಾನವಾಗಿ ಮತ್ತು ಸದ್ದಿಲ್ಲದೆ ನಡೆಯುವುದರಿಂದ, ಹೆಚ್ಚಿನವರಲ್ಲಿ ಹಠಾತ್ ಸುಸ್ತು, ದೃಷ್ಟಿ ಮಸುಕಾಗುವುದು, ತೀವ್ರ ತಲೆನೋವು ಅಥವಾ ಮಾತನಾಡಲು ಕಷ್ಟವಾಗುವಂತಹ ಸಮಸ್ಯೆ ಉಂಟಾಗುತ್ತವೆ.  ಇವು ಎಚ್ಚರಿಕೆಯ ಚಿಹ್ನೆಗಳೂ ಹೌದು. 

ಹೈಪರ್‌ ಟೆನ್ಷನ್‌ ಗರ್ಭ ಧರಿಸುವಿಕೆಯನ್ನು ಯೋಜಿಸುವ ಮಹಿಳೆಯರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಹೈಪರ್‌ ಟೆನ್ಷನ್‌ ನಿಯಮಿತ ಋತುಚಕ್ರಕ್ಕೆ ಅಗತ್ಯವಾದ ಸೂಕ್ಷ್ಮ ಹಾರ್ಮೋನುಗಳ ಲಯಕ್ಕೆ ಅಡ್ಡಿಯಾಗುತ್ತದೆ. ಇದರಿಂದ ಸಂತಾನೋತ್ಪತ್ತಿಯ ಅಂಗಗಳಿಗೆ ರಕ್ತದ ಹರಿವು ಕಡಿಮೆಯಾಗಿ ಈ ಕೆಳಗಿನ ಪರಿಣಾಮಗಳಾಗಬಹುದು. ಅವುಗಳೆಂದರೆ, 

  • ಅನಿಯಮಿತ ಅಥವಾ ವಿಳಂಬವಾಗುವ ಋತುಚಕ್ರ

  • ಕಳಪೆ ಅಂಡೋತ್ಪತ್ತಿ

  • ಕಡಿಮೆ ಅಂಡಾಣು ಗುಣಮಟ್ಟ

  • ಆರಂಭಿಕ ಗರ್ಭಧಾರಣೆ ನಷ್ಟವಾಗುವ ಸಾಧ್ಯತೆ ಹೆಚ್ಚು

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್), ಥೈರಾಯ್ಡ್ ಸಮಸ್ಯೆಗಳಿರುವ ಮಹಿಳೆಯರು, ಅಥವಾ ಈಗಾಗಲೇ ಬಂಜೆತನಕ್ಕೆ ಸಂಬಂಧಿಸಿರುವ ಸ್ಥೂಲಕಾಯತೆ ಇದ್ದರೆ, ಇದರರ ಜೊತೆಗೆ ಹೈಪರ್‌ ಟೆನ್ಷನ್‌ ಹಾರ್ಮೋನುಗಳ ಒತ್ತಡವೂ ಸೇರಿಸುವುದರಿಂದ ಗರ್ಭಧಾರಣೆ ಸಾಧ್ಯತೆ ಇನ್ನಷ್ಟು ದುರ್ಬಲವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಪರಿಣಾಮ: 

  • ಪ್ರಿಕ್ಲಾಂಪ್ಸಿಯಾ – ಅಧಿಕ ರಕ್ತದೊತ್ತಡ, ಅಂಗಾಂಗ ಹಾನಿ ಮತ್ತು ಊತ ಉಂಟುಮಾಡುವ ಅಪಾಯಕಾರಿ ಸ್ಥಿತಿ

  • ಹೊಕ್ಕುಳಬಳ್ಳಿಗೆ ರಕ್ತದ ಹರಿವನ್ನು ನಿರ್ಬಂಧಿಸಿ, ಮಗುವಿನ ಬೆಳವಣಿಗೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ

  • ಅಕಾಲಿಕ ಜನನ

  • ಗರ್ಭಾವಸ್ಥೆಯಲ್ಲಿ ಅಥವಾ ನಂತರ ಹೆಚ್ಚಿನ ಪಾರ್ಶ್ವವಾಯು ಸಾಧ್ಯತೆ

  • ಹೆರಿಗೆಯ ನಂತರದ ಆರೋಗ್ಯದ ಸರಿಯಾದ ಮೇಲ್ವಿಚಾರಣೆ ಮಾಡದಿದ್ದರೆ, ಕೆಲವು ವಾರಗಳವರೆಗೆ ಪಾರ್ಶ್ವವಾಯುವಿನ ಅಪಾಯ ಇದ್ದೇ ಇರುತ್ತದೆ.

ಮುಟ್ಟಿನ ಆರೋಗ್ಯದ ಮೇಲೆ ಹೈಪರ್‌ ಟೆನ್ಷನ್‌ನ ಪರಿಣಾಮ: 

ದೀರ್ಘಕಾಲದ ಅಧಿಕ ರಕ್ತದೊತ್ತಡ, ಗರ್ಭಾಶಯ ಮತ್ತು ಅಂಡಾಶಯಗಳಿಗೆ ರಕ್ತವನ್ನು ಪೂರೈಸುವ ಅಪಧಮನಿಗಳ ಮೇಲೆ ಪರಿಣಾಮ ಬೀರುತ್ತದೆ. ಕಾಲಾನಂತರದಲ್ಲಿ, ಇದರಿಂದ ಈ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅವುಗಳೆಂದರೆ, 

  • ಸಣ್ಣ ಅಥವಾ ದೀರ್ಘ ಋತು ಚಕ್ರಗಳು

  • ಭಾರೀ ಅಥವಾ ಅನಿರೀಕ್ಷಿತ ರಕ್ತಸ್ರಾವ

  • ಹೆಚ್ಚುವ ಪಿಎಂಎಸ್ ಲಕ್ಷಣಗಳು

  • ಅಂಡಾಶಯದ ಕಿರುಚೀಲಗಳ ಕಳಪೆ ಗುಣಮಟ್ಟ

  • ಭ್ರೂಣ ಧಾರಣೆಯ ಸಾಧ್ಯತೆಗಳು ಕಡಿಮೆ

ಮಹಿಳೆಯರು ತಮ್ಮ ಋತುಚಕ್ರದ ಬದಲಾವಣೆಗಳಿಗೆ ಹೆಚ್ಚಾಗಿ ಒತ್ತಡ ಅಥವಾ ಹಾರ್ಮೋನುಗಳನ್ನು ದೂರುತ್ತಾರೆ. ಆದರೆ ಹೈಪರ್‌ ಟೆನ್ಷನ್‌ ಮೌನವಾಗಿ ಈ ಕೆಲಸ ಮಾಡುತ್ತಿರಬಹುದು.

ಹೈಪರ್‌ ಟೆನ್ಷನ್‌ ಪುರುಷರ ಫಲವತ್ತತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಹೈಪರ್‌ ಟೆನ್ಷನ್‌ ಪುರುಷರು ತಿಳಿದಿರುವುದಕ್ಕಿಂತ ಹೆಚ್ಚಾಗಿ ಅವರ ಮೇಲೆ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡ ವೃಷಣಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಇದು ವೀರ್ಯ ಉತ್ಪಾದನೆ ಮತ್ತು ಗುಣಮಟ್ಟಕ್ಕೆ ನೇರವಾಗಿ ಸಮಸ್ಯೆ ಉಂಟುಮಾಡುತ್ತದೆ. ಅನಿಯಂತ್ರಿತ ಹೈಪರ್‌ ಟೆನ್ಷನ್‌ ಹೊಂದಿರುವ ಪುರುಷರು ಸಾಮಾನ್ಯವಾಗಿ ಈ ಕೆಳಗಿನವುಗಳನ್ನು ಅನುಭವಿಸುತ್ತಾರೆ.

  • ಕಡಿಮೆ ವೀರ್ಯ ಸಂಖ್ಯೆ

  • ಕಳಪೆ ವೀರ್ಯ ಚಲನೆ (ನಿಧಾನ ಚಲನೆ)

  • ವೀರ್ಯದ ಅಸಹಜ ಆಕಾರ

  • ಆಕ್ಸಿಡೇಟಿವ್ ಒತ್ತಡದಿಂದಾಗಿ ವೀರ್ಯದ ಡಿಎನ್ಎಗೆ ಹೆಚ್ಚಿನ ಹಾನಿ

  • ಕಡಿಮೆ ಲೈಂಗಿಕಾಸಕ್ತಿ ಅಥವಾ ನಿಮಿರುವಿಕೆಯ ಸಮಸ್ಯೆಗಳು (ಕೆಲವೊಮ್ಮೆ ಬಿಪಿ ಔಷಧಿಗಳಿಂದ ಮತ್ತಷ್ಟು ಹದಗೆಡುತ್ತದೆ)

ಈ ಅಂಶಗಳು ಗರ್ಭಧಾರಣೆಯನ್ನು ಕಠಿಣವಾಗಿಸುತ್ತವೆ ಮತ್ತು ಭ್ರೂಣದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.

ಯುವ ಜನರಲ್ಲಿ ಹೈಪರ್‌ ಟೆನ್ಷನ್‌ ಏಕೆ ಹೆಚ್ಚಾಗಿ ಕಾಣಿಸುವುದಿಲ್ಲ?

ಹೆಚ್ಚಿನ ಜನರಿಗೆ ದಣಿವು, ಕಿರಿಕಿರಿ, ತಲೆನೋವು, ನಿದ್ದೆಯ ಸಮಸ್ಯೆ ಹಾಗೂ ರಕ್ತದೊತ್ತಡಕ್ಕೂ ಇರುವ ಸಂಬಂಧವನ್ನು ಗಮನಿಸುವುದಿಲ್ಲ. ಪುರುಷರು ಇದನ್ನು ಕೆಲಸದ ಒತ್ತಡ ಎಂದು ಭಾವಿಸುತ್ತಾರೆ.

ಮಹಿಳೆಯರು ಹಾರ್ಮೋನುಗಳು ಅಥವಾ ಜೀವನ ಶೈಲಿಯನ್ನು ದೂರುತ್ತಾರೆ. ಬಿಪಿ ಪರೀಕ್ಷಿಸಲು ಯುವ ವಯಸ್ಕರು ‘ತುಂಬಾ ಚಿಕ್ಕವರು’ ಅಂದುಕೊಳ್ಳುತ್ತಾರೆ. ಈ ನಿರಾಕರಣೆಯಿಂದ ಹೃದಯ, ಮೆದುಳು ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿ, ಹಾನಿಯನ್ನು ವರ್ಷಗಳವರೆಗೆ ಮುಂದುವರಿಸಲು ಅನುವು ಮಾಡಿಕೊಡುತ್ತದೆ.

ಮುಂಚಿತವಾಗಿ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?

ಮೊದಲೇ ಪತ್ತೆಯಾದರೆ ಹೈಪರ್‌ ಟೆನ್ಷನ್‌ ಅನ್ನು ನಿಯಂತ್ರಿಸಬಹುದು. ನಿಯಮಿತವಾಗಿ ಬಿಪಿಯ ತಪಾಸಣೆ, ಉಪ್ಪು ಸೇವನೆ ಕಡಿಮೆ ಮಾಡುವುದು, ಪ್ರತಿದಿನ ನಡೆಯುವುದು, ಉತ್ತಮ ನಿದ್ರೆ, ಒತ್ತಡವನ್ನು ನಿರ್ವಹಿಸುವುದು ಮತ್ತು ಅಗತ್ಯವಿದ್ದಾಗ ಔಷಧಿಗಳನ್ನು ಬಳಸುವುದು ಭವಿಷ್ಯದ ಫಲವತ್ತತೆಯನ್ನು ರಕ್ಷಿಸುತ್ತದೆ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ಜಾಗೃತಿ ಏಕೆ ಮುಖ್ಯ?

ಹೈಪರ್‌ ಟೆನ್ಷನ್‌ ಕೇವಲ ಹೃದಯದ ಸಮಸ್ಯೆಯಲ್ಲ, ಇದು ಸಂತಾನೋತ್ಪತ್ತಿಯ ಪ್ರಮುಖ ಆರೋಗ್ಯ ಸಮಸ್ಯೆಯೂ ಆಗಿದೆ. ಇದು ಮುಟ್ಟಿನ ಆರೋಗ್ಯ, ಅಂಡಾಣುವಿನ ಗುಣಮಟ್ಟ, ವೀರ್ಯದ ಆರೋಗ್ಯ, ಗರ್ಭಾವಸ್ಥೆಯ ಫಲಿತಾಂಶ ಮತ್ತು ತಾಯಿ ಮಗುವಿನ ದೀರ್ಘಕಾಲೀನ ಯೋಗ ಕ್ಷೇಮದ ಮೇಲೂ ಪ್ರಭಾವ ಬೀರುತ್ತದೆ. ಇದರ ವ್ಯಾಪಕ ಪರಿಣಾಮವನ್ನು ಗುರುತಿಸುವುದರಿಂದ ಜನರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲು, ಆರಂಭದಲ್ಲೇ ಪತ್ತೆಹಚ್ಚಲು ಹಾಗೂ ಸಮಸ್ಯೆ ಕಾಣಿಸಿಕೊಳ್ಳುವ ಮುನ್ನ ತಡೆಯಲು ಸಹಾಯವಾಗುತ್ತದೆ.

(ಡಾ. ಮಹೇಶ್ ಕೊರೆಗೋಲ್, ನಿರ್ದೇಶಕರು (ಫಲವತ್ತತೆ ತಜ್ಞ) ನೋವಾ ಐವಿಎಫ್ ಫಲವತ್ತತೆ, ಕೋರಮಂಗಲ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.