ADVERTISEMENT

ಮಧುಮೇಹಿಗಳು ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಗೊತ್ತಾ?

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 7:09 IST
Last Updated 31 ಜನವರಿ 2026, 7:09 IST
<div class="paragraphs"><p>ಮಧುಮೇಹಿಗಳಿಗೆ ಬಾಯಿಯ ಆರೋಗ್ಯ</p></div>

ಮಧುಮೇಹಿಗಳಿಗೆ ಬಾಯಿಯ ಆರೋಗ್ಯ

   

ಇತ್ತೀಚಿಗೆ ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ಮಧುಮೇಹದಿಂದ ಕೇವಲ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದಿಲ್ಲ, ದೇಹದ ಹಲವು ಭಾಗಗಳ ಮೇಲೂ ಪರಿಣಾಮ ಬೀರುತ್ತದೆ. ಅದರಲ್ಲೂ ಬಾಯಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. 

ಬಾಯಿ – ದೇಹದ ಆರೋಗ್ಯದ ಮೊದಲ ಸೂಚಕ
ನಮ್ಮ ಬಾಯಿ ಕೇವಲ ಆಹಾರ ಮತ್ತು ಪಾನೀಯಗಳಿಗಾಗಿ ಇರುವ ಮಾಧ್ಯಮವಲ್ಲ. ದೇಹದ ಒಟ್ಟು ಆರೋಗ್ಯವನ್ನು ಪ್ರತಿಬಿಂಬಿಸುವ ಪ್ರಮುಖ ಕಿಟಕಿಯಾಗಿದೆ. ಬಾಯಿಯಲ್ಲಿ ಇರುವ ಸೂಕ್ಷ್ಮಾಣುಗಳು, ಲಾಲಾರಸ, ಹಲ್ಲುಗಳು ಮತ್ತು ವಸಡುಗಳು ದೇಹದ ರೋಗನಿರೋಧಕ ಹಾಗೂ ಚಯಾಪಚಯ ವ್ಯವಸ್ಥೆಗಳೊಂದಿಗೆ ನೇರ ಸಂಬಂಧ ಹೊಂದಿವೆ. ರಕ್ತದಲ್ಲಿನ ಸಕ್ಕರೆ ಮಟ್ಟ ದೀರ್ಘಕಾಲ ಸಮತೋಲನದಲ್ಲಿ ಇರದಿದ್ದರೆ ಅದು ದೇಹದ ಇತರ ಅಂಗಾಂಗಗಳಂತೆ ಬಾಯಿಯ ಆರೋಗ್ಯವನ್ನೂ ಹಾನಿಗೊಳಿಸುತ್ತದೆ.

ADVERTISEMENT

ಈ ಕಾರಣದಿಂದಾಗಿ ದಂತವೈದ್ಯರು ಮಧುಮೇಹ ಹೊಂದಿರುವ ವ್ಯಕ್ತಿಗಳಲ್ಲಿ ನಿರಂತರ ಒಸಡುಗಳ ಉರಿಯೂತ, ಬಾಯಿಯ ಸೋಂಕುಗಳು, ನಿಧಾನವಾಗಿ ಗುಣಮುಖವಾಗುವ ಗಾಯಗಳು ಮತ್ತು ಬಾಯಿಯ ಒಣತನವನ್ನು ಸಾಮಾನ್ಯವಾಗಿ ಗಮನಿಸುತ್ತಾರೆ. ಇವು ಕೇವಲ ದಂತಸಮಸ್ಯೆಗಳಲ್ಲ,  ದೇಹದೊಳಗಿನ ಸಮಸ್ಯೆಗಳ ಸೂಚನೆಯಾಗಿರುತ್ತವೆ.

ಮಧುಮೇಹಿಗಳಲ್ಲಿ ಬಾಯಿಯ ಸಮಸ್ಯೆ

ಮಧುಮೇಹದಿಂದ ಉಂಟಾಗುವ ಬಾಯಿಯ ಸಮಸ್ಯೆಗಳು ನಿಧಾನವಾಗಿ ಆರಂಭವಾಗುತ್ತವೆ. ಹೀಗಾಗಿ ಅದನ್ನು ಹೆಚ್ಚಿನವರು ಗಮನಿಸುವುದಿಲ್ಲ. ಆದರೆ ಸಂಶೋಧನೆಗಳ ಪ್ರಕಾರ, ಈ ಬಾಯಿಯ ಲಕ್ಷಣಗಳು ಕೆಲವೊಮ್ಮೆ ಮಧುಮೇಹ ಗಂಭೀರವಾಗುತ್ತಿರುವ ಮೊದಲ ಸೂಚನೆಯಾಗಿರುತ್ತವೆ.

• ಹಲ್ಲು ಉಜ್ಜುವಾಗ ಅಥವಾ ಬಾಯಿ ಮುಕ್ಕಳಿಸುವಾಗ ರಕ್ತಸ್ರಾವ
• ಬಾಯಿಯಿಂದ ನಿರಂತರ ದುರ್ವಾಸನೆ
• ಬಾಯಿ ಆಗಾಗ ಒಣಗುವುದು ಮತ್ತು ಪದೇ ಪದೇ ದಾಹ ಉಂಟಾಗುವುದು
• ಹಲ್ಲುಗಳಲ್ಲಿ ನೋವು
• ಬಾಯಿಯೊಳಗೆ ಸಣ್ಣ ಗಾಯಗಳು ಅಥವಾ ಹುಣ್ಣುಗಳು
• ಶಿಲೀಂಧ್ರ ಸೋಂಕುಗಳು
• ನಾಲಿಗೆ ಅಥವಾ ಕನ್ನೆಯ ಒಳಭಾಗದಲ್ಲಿ ಬಿಳಿ ಚುಕ್ಕೆಗಳು
ಈ ಲಕ್ಷಣಗಳನ್ನು ಕೇವಲ ಹಲ್ಲಿನ ಸಮಸ್ಯೆ ಎಂದು ಕಡೆಗಣಿಸುವುದು ಅಪಾಯಕಾರಿ. ಇವು ಮಧುಮೇಹ ಸರಿಯಾಗಿ ನಿಯಂತ್ರಣದಲ್ಲಿಲ್ಲ ಎಂಬುದನ್ನೂ ಸೂಚಿಸುತ್ತದೆ.

ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಹೆಚ್ಚಾದಾಗ

• ದೇಹದ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ
• ಒಸಡುಗಳಿಗೆ ರಕ್ತಸಂಚಾರ ಕಡಿಮೆಯಾಗುತ್ತದೆ
• ಲಾಲಾರಸ ಉತ್ಪಾದನೆ ಇಳಿಮುಖವಾಗುತ್ತದೆ
• ಲಾಲಾರಸದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚುತ್ತದೆ. ಇದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೇಗ ಬೆಳೆಯುತ್ತವೆ. ಸೋಂಕುಗಳು ಸುಲಭವಾಗಿ ಉಂಟಾಗುತ್ತವೆ. ಗಾಯಗಳು ಬೇಗ ಗುಣಮುಖವಾಗುವುದಿಲ್ಲ ಮತ್ತು ಒಸಡುಗಳ ಉರಿಯೂತ ಗಂಭೀರವಾಗುತ್ತದೆ.

ಬಾಯಿಯ ಆರೋಗ್ಯ ಕಾಪಾಡಿಕೊಳ್ಳಿ

ಮಧುಮೇಹ ಇದ್ದವರು ಬಾಯಿಯ ಆರೋಗ್ಯವನ್ನು ಕಾಪಾಡಲು ವೈದ್ಯರ ಸಲಹೆ ಮತ್ತು ದಿನನಿತ್ಯ ದಂತವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಅಗತ್ಯ
• ವೈದ್ಯರು ಸೂಚಿಸಿದಂತೆ ಔಷಧಗಳನ್ನು ನಿಯಮಿತವಾಗಿ ಸೇವಿಸುವುದು
• ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು
• ಬೆಳಿಗ್ಗೆ ಮತ್ತು ರಾತ್ರಿ ಹಲ್ಲುಜ್ಜಲು ಮರೆಯದಿರಿ
• ಹಲ್ಲು ಅಥವಾ ಒಸಡುಗಳ ಯಾವುದೇ ತೊಂದರೆ ಕಂಡರೆ ತಕ್ಷಣ ದಂತವೈದ್ಯರನ್ನು ಸಂಪರ್ಕಿಸುವುದು
• ತಂಬಾಕು ಮತ್ತು ಧೂಮಪಾನದಿಂದ ದೂರವಿರುವುದು
• ಹೆಚ್ಚು ಸಿಹಿ ಮತ್ತು ಆಮ್ಲೀಯ ಆಹಾರಗಳನ್ನು ಕಡಿಮೆ ಮಾಡುವುದು

ಲೇಖಕರು: ಬೆಂಗಳೂರಿನ ರಾಜರಾಜೇಶ್ವರಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.