ADVERTISEMENT

ಭಾರತದಲ್ಲಿ ಕಡಿಮೆಯಾಗುತ್ತಿದೆ ಮಲೇರಿಯಾ ಪ್ರಕರಣ: ವಿಶ್ವ ಆರೋಗ್ಯ ಸಂಸ್ಥೆ

ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಅತಿ ಕಡಿಮೆ ಪ್ರಕರಣ ಹೊಂದಿದ ರಾಷ್ಟ್ರ

ಪಿಟಿಐ
Published 1 ಡಿಸೆಂಬರ್ 2020, 5:08 IST
Last Updated 1 ಡಿಸೆಂಬರ್ 2020, 5:08 IST
ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟೆಡ್ರೊಸ್‌ ಅಧಾನೊಮ್‌ ಗೆಬ್ರೆಯೆಸುಸ್‌
ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟೆಡ್ರೊಸ್‌ ಅಧಾನೊಮ್‌ ಗೆಬ್ರೆಯೆಸುಸ್‌   

ವಿಶ್ವಸಂಸ್ಥೆ: ಮಲೇರಿಯಾ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಉತ್ತಮ ಪ್ರಗತಿ ಸಾಧಿಸಿದ್ದು, ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲೇ ಅತಿ ಕಡಿಮೆ ಪ್ರಕರಣಗಳನ್ನು ಹೊಂದಿದ ರಾಷ್ಟ್ರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‌ ಒ) ತಿಳಿಸಿದೆ.

2000ನೇ ಇಸವಿಯಲ್ಲಿ ಭಾರತದಲ್ಲಿ 2 ಕೋಟಿಯಷ್ಟಿದ್ದ ಮಲೇರಿಯಾ ಪ್ರಕರಣಗಳು, ಕಳೆದ ವರ್ಷ 5.6 ಲಕ್ಷಕ್ಕೆ ಇಳಿದಿದೆ. ಸೋಮವಾರ ಬಿಡುಗಡೆಯಾದ ‘ವಿಶ್ವ ಮಲೇರಿಯಾ ವರದಿ–2020‘ರ ವರದಿಯಲ್ಲಿ ಈ ಅಂಕಿ ಅಂಶಗಳು ಉಲ್ಲೇಖವಾಗಿವೆ.

ಈ ವರದಿ ಪ್ರಕಾರ 2019ರಲ್ಲಿ ವಿಶ್ವದಾದ್ಯಂತ ಸುಮಾರು 22 ಕೋಟಿ ಮಲೇರಿಯಾ ಪ್ರಕರಣಗಳಿದ್ದವು. ಕಳೆದ ನಾಲ್ಕು ವರ್ಷಗಳಲ್ಲಿ ವಾರ್ಷಿಕವಾಗಿ ಈ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಕಳೆದ ವರ್ಷ, ಈ ರೋಗದಿಂದ 4.09 ಲಕ್ಷ ಹಾಗೂ 2018ರಲ್ಲಿ 4.11 ಲಕ್ಷ ಮಂದಿ ಸಾವನ್ನಪ್ಪಿದ್ದರು ಎಂದು ವರದಿ ಹೇಳಿದೆ.

ADVERTISEMENT

‘ಆಗ್ನೇಯ ಏಷ್ಯಾದ ರಾಷ್ಟ್ರಗಳು ಮಲೇರಿಯಾ ರೋಗ ನಿಯಂತ್ರಣದಲ್ಲಿ ಉತ್ತಮ ಪ್ರಗತಿ ಸಾಧಿಸಿವೆ. ಸಾವಿನ ಪ್ರಕರಣಗಳು ಶೇ 73 ರಿಂದ ಶೇ 74ರಷ್ಟು ಕಡಿಮೆಯಾಗಿವೆ‘ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಾಗತಿಕ ಮಟ್ಟದಲ್ಲಿ ಯೋಚಿಸುವುದಾದರೆ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಶೇ 3ರಷ್ಟು ಮಲೇರಿಯಾ ಪ್ರಕರಣಗಳಿವೆ ಎಂದು ವರದಿ ಹೇಳಿದೆ. ಕಳೆದ 2 ವರ್ಷಗಳಲ್ಲಿ ಮಲೇರಿಯಾ ವಿರುದ್ಧದ ಹೋರಾಟದಲ್ಲಿ ಭಾರತವು ಸಾಧಿಸಿರುವ ಪ್ರಗತಿಯನ್ನು ಡಬ್ಲ್ಯುಎಚ್‌ಒ ಗಮನಿಸಿದೆ. ಭಾರತದಲ್ಲಿ 2000– 2019 ರ ನಡುವೆ ಮಲೇರಿಯಾದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. 2000 ರಲ್ಲಿ ಮಲೇರಿಯಾದಿಂದ ಸುಮಾರು 29,500 ಮೃತಪಟ್ಟಿದ್ದರು. ಕಳೆದ ವರ್ಷ ಸುಮಾರು 7700 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.