
ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ; ಗೆಟ್ಟಿ ಚಿತ್ರ
ಪ್ರಸುತ ದಿನಗಳಲ್ಲಿ ನಾನಾ ಕಾರಣಗಳಿಂದ ಬಂಜೆತನದ ಸಮಸ್ಯೆ ಹೆಚ್ಚುತ್ತಿದೆ. ಇಂದು ಎಲ್ಲರ ಕೈಯಲ್ಲಿ ಮೊಬೈಲ್ ಫೋನ್ ಇರುವುದರಿಂದ ಗೂಗಲ್ ಮಾಡಿ, ರೀಲ್ಸ್‌ನಲ್ಲಿ ಬರುವ ಮಾಹಿತಿಯನ್ನು ನೋಡಿ ನಿಜಾ ಎಂದು ನಂಬುತ್ತಾರೆ. ಆದರೆ ಅಲ್ಲಿ ಸಿಗುವ ಮಾಹಿತಿ ಎಷ್ಟು ಸರಿ ಎಂಬುದು ಮುಖ್ಯ.
ಇಂದು ಸಾಮಾಜಿಕ ಮಾಧ್ಯಮದಲ್ಲಿ ನಕಲಿ ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಆರೋಗ್ಯ ಕುರಿತ ಸುಳ್ಳು ಸುದ್ದಿಗಳು ಯಥೇಚ್ಛವಾಗಿ ಹರಿದಾಡುತ್ತಿವೆ. ಇವು ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಸುವುದಲ್ಲದೆ, ಆತಂಕ ಹೆಚ್ಚು ಮಾಡುತ್ತಿವೆ. ಸಾಮಾಜಿಕ ಮಾಧ್ಯಮದಲ್ಲಿ ಬಂಜೆತನ ಹಾಗೂ ಫಲವತ್ತತೆಗೆ ಸಂಬಂಧಿಸಿದಂತೆ ಹಾರಿದಾಡುತ್ತಿರುವ ಸುಳ್ಳು ಮಾಹಿತಿ ಕುರಿತು ತಿಳಿಯೋಣ.
ಬಂಜೆತನಕ್ಕೆ ಮಹಿಳೆಯದೇ ಕಾರಣ ಎಂಬ ತಪ್ಪು ಕಲ್ಪನೆ
ಮದುವೆಯಾಗಿ ವರ್ಷಗಳು ಕಳೆದರೂ ಗರ್ಭಧರಿಸಲು ಸಾಧ್ಯವಾಗದಿದ್ದರೆ ಅದು ಮಹಿಳೆಯ ಸಮಸ್ಯೆಯೇ ಇರಬೇಕು ಎಂಬ ನಂಬಿಕೆ ಇದೆ. ಅಧ್ಯಾಯನದ ಪ್ರಕಾರ ಶೇ 40 ರಿಂದ 50ರಷ್ಟು ಬಂಜೆತನಕ್ಕೆ ಪುರುಷರಲ್ಲಿನ ಸಮಸ್ಯೆಗಳೂ ಕಾರಣವಾಗಿರುತ್ತವೆ. ಪ್ರಮುಖವಾಗಿ ಪುರುಷರಲ್ಲಿ ಕಡಿಮೆ ವೀರ್ಯದ ಸಂಖ್ಯೆ, ಹಾರ್ಮೋನುಗಳ ಅಸಮತೋಲನ, ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳೂ ಬಂಜೆತನಕ್ಕೆ ಕಾರಣವಾಗಬಹುದು. ಜತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡವೂ ಕಾರಣವಾಗಬಹುದು. ಆದ್ದರಿಂದ ಸೂಕ್ತ ಪರೀಕ್ಷೆ ಅಗತ್ಯ.
ನೀವು ಈಗಾಗಲೇ ಒಂದು ಮಗು ಹೊಂದಿದ್ದರೆ, ನಿಮಗೆ ಬಂಜೆತನ ಬರುವುದಿಲ್ಲ
ಇದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಸುಳ್ಳು ಸುದ್ದಿಯಾಗಿದೆ. ಮೊದಲು ಗರ್ಭಧರಿಸಿದ ನಂತರ ದಂಪತಿಗಳ ವಯಸ್ಸು, ಹಾರ್ಮೋನುಗಳ ಬದಲಾವಣೆ, ತೂಕದಲ್ಲಿನ ಏರುಪೇರು, ಸೋಂಕುಗಳು ಅಥವಾ ವೀರ್ಯದ ಗುಣಮಟ್ಟ ಕುಸಿಯುವುದ ಸಾಮಾನ್ಯವಾಗಿದ್ದು, ಇದು ಎರಡನೇ ಮಗುವಿನ ಮೇಲು ಪರಿಣಾಮ ಬೀರಬಹುದು.
ಒತ್ತಡವೇ ಮುಖ್ಯ ಕಾರಣ
ವಿಪರೀತ ಒತ್ತಡ ಹಾರ್ಮೋನುಗಳ ಮೇಲೆ ಪ್ರಭಾವ ಬೀರಬಹುದಾದರೂ, ಇದು ಬಂಜೆತನಕ್ಕೆ ಕಾರಣವಾಗುವುದು ತೀರಾ ಅಪರೂಪವಾಗಿದೆ. ಪಿಸಿಓಎಸ್, ಎಂಡೊಮೆಟ್ರಿಯೊಸಿಸ್ ಅಥವಾ ಥೈರಾಯ್ಡ್ ಸಮಸ್ಯೆಗಳು ಬಂಜೆತನಕ್ಕೆ ಕಾರಣವಾಗಬಹುದು. ಒತ್ತಡವೇ ಪ್ರಮುಖ ಕಾರಣ ಎಂಬುದು ಸರಿ ಅಲ್ಲ.
ಕೆಲವು ಆಹಾರಗಳು ಅಥವಾ ಮನೆಮದ್ದುಗಳು
ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಗಿಡಮೂಲಿಕೆ ಅಥವಾ ಆಹಾರಗಳು 30 ದಿನಗಳಲ್ಲಿ ಗರ್ಭಧಾರಣೆಯನ್ನು ಖಾತರಿಪಡಿಸುತ್ತವೆ ಎಂಬ ಸಂದೇಶಗಳು ದಾರಿ ತಪ್ಪಿಸುತ್ತವೆ. ಸಮತೋಲಿತ ಆಹಾರ ಒಟ್ಟಾರೆ ಆರೋಗ್ಯವನ್ನು ಬೆಂಬಲಿಸುತ್ತದೆ. ಆದರೆ ಬಂಜೆತನಕ್ಕೆ ನಿರ್ದೇಶಿತ ಚಿಕಿತ್ಸೆಯ ಅಗತ್ಯವಿರುತ್ತದೆ. ಮನೆ ಮದ್ದುಗಳನ್ನು ತೆಗೆದುಕೊಳ್ಳುವ ಮುನ್ನ ವೈಜ್ಞಾನಿಕವಾಗಿ ಸಮಸ್ಯೆ ಗುರುತಿಸುವುದು ಮುಖ್ಯ. 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಅಂಡಾಣುಗಳ ಕುಸಿತ ವಯೋಸಹಜವಾಗಿರಲಿದೆ. ಆದ್ದರಿಂದ ಸರಿಯಾದ ಪರೀಕ್ಷೆ ಅಗತ್ಯ.
ಗರ್ಭನಿರೋಧಕ ಮಾತ್ರೆಗಳು ಶಾಶ್ವತ ಬಂಜೆತನಕ್ಕೆ ಕಾರಣವಾಗುತ್ತವೆ
ಗರ್ಭನಿರೋಧಕ ಮಾತ್ರೆಗಳ ಬಳಕೆ ಬಂಜೆತನಕ್ಕೆ ಕಾರಣವಾಗುತ್ತವೆ ಎಂಬುದು ವ್ಯಾಪಕವಾಗಿ ಹರಡಿರುವ ಮಿಥ್ಯೆಯಾಗಿದೆ. ವಾಸ್ತವದಲ್ಲಿ ಮಾತ್ರೆಗಳನ್ನು ನಿಲ್ಲಿಸಿದ ನಂತರ ಮಹಿಳೆಯರ ಫಲವತ್ತತೆ ಯಥಸ್ಥಿತಿಗೆ ಮರಳುತ್ತದೆ. ಹಾಗಾಗಿ ಇದರಿಂದಲೇ ಬಂಜೆತನ ಉಂಟಾಯಿತು ಎಂದು ಹೇಳುವುದು ಸರಿಯಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.