ಬಾಲ್ಯದಲ್ಲಿ ಪ್ರತಿಯೊಬ್ಬರು ಜಂತು ಹುಳುವಿನ ಸಮಸ್ಯೆಗೆ ಒಳಗಾಗಿರುತ್ತಾರೆ. ಈ ಸಮಸ್ಯೆಗೆ ಕಾರಣ, ಲಕ್ಷಣ, ಪರಿಹಾರ ಕ್ರಮಗಳ ಬಗ್ಗೆ ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞೆ ಮಾಹಿತಿ ನೀಡಿದ್ದಾರೆ.
ಜಂತು ಹುಳು ಎಂಬ ಪದವನ್ನು ದೇಹದೊಳಗೆ ವಾಸಿಸುವ ಪರೋಪಜೀವಿ ಹುಳುಗಳನ್ನು ಸೂಚಿಸಲು ಬಳಸುತ್ತಾರೆ. ವೈದ್ಯಕೀಯವಾಗಿ ಇವುಗಳನ್ನು ಹೆಲ್ಮಿಂಥ್‌ಗಳು ಎಂದು ಕರೆಯಲಾಗುತ್ತದೆ ಮತ್ತು ಇವುಗಳಿಂದ ಉಂಟಾಗುವ ಸೋಂಕನ್ನು ಹೆಲ್ಮಿಂಥಿಯಾಸಿಸ್ ಎಂದು ಹೇಳುತ್ತಾರೆ.
ಜಂತು ಹುಳು ಕೆಲವೊಮ್ಮೆ ಇದು ತೀವ್ರ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಸಮಸ್ಯೆಯು ನಿಧಾನವಾಗಿ ಮಕ್ಕಳ ಆರೋಗ್ಯವನ್ನು ಹಾನಿಯುಂಟು ಮಾಡುತ್ತಿರುತ್ತದೆ. ಸಣ್ಣ ಸಮಸ್ಯೆ ಎಂದು ನಿರ್ಲಕ್ಷಿಸುವುದರಿಂದ ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರು ಸಾಧ್ಯತೆ ಇರುತ್ತದೆ.
ಶಾಲಾ ವಯಸ್ಸಿನ ಮಕ್ಕಳಲ್ಲಿ ಜಂತುಹುಳು ಸಮಸ್ಯೆ ಹೆಚ್ಚು ಕಂಡುಬರುತ್ತದೆ. ಮಾನವರಲ್ಲಿ ಕಂಡುಬರುವ ಹೆಲ್ಮಿಂಥ್‌ಗಳು ಮುಖ್ಯವಾಗಿ ಮೂರು ವಿಧಗಳಾಗಿವೆ: ನೆಮಾಟೋಡ್ಸ್ (ಗುಂಡು ಹುಳುಗಳು), ಸೆಸ್ಟೋಡ್ಸ್ (ಪಟ್ಟೆ ಹುಳುಗಳು) ಮತ್ತು ಟ್ರೆಮಾಟೋಡ್ಸ್ (ಫ್ಲೂಕ್ಸ್). ಇವುಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ಭಿನ್ನವಾಗಿರುತ್ತವೆ.
ನೆಮಾಟೋಡ್ಸ್‌ಗಳಲ್ಲಿ ಅಸ್ಕ್ಯಾರಿಸ್ (roundworm), ಪಿನ್‌ವರ್ಮ್, ಹೂಕ್ವರ್ಮ್ ಮತ್ತು ಟ್ರೈಕ್ಯೂರಿಸ್ ಮುಂತಾದವುಗಳು ಸಾಮಾನ್ಯವಾಗಿ ಕಂಡುಬರುವ ಜಂತು ಹುಳುಗಳು.
ಅಸ್ಕ್ಯಾರಿಸ್, ಪಿನ್‌ವರ್ಮ್ ಮತ್ತು ಹೂಕ್ವರ್ಮ್ ಮಕ್ಕಳಲ್ಲಿ ಕಂಡುಬರುವ ಜಂತುಹುಳುಗಳಾಗಿವೆ. ಇವುಗಳು ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಹೀರಿಕೊಂಡು ಅಪೌಷ್ಟಿಕತೆ, ರಕ್ತಹೀನತೆ ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು.
ಸೆಸ್ಟೋಡ್ಸ್‌ಗಳಾದ ಟೇನಿಯಾ ಪ್ರಭೇದಗಳು ಉದ್ದವಾದ ಪಟ್ಟೆಹುಳುಗಳಾಗಿದ್ದು ಅಂತ್ರದಲ್ಲಿ(ಕರುಳಿನ ಹತ್ತಿರದ ಭಾಗ) ಬೆಳೆಯುತ್ತವೆ. ಟ್ರೆಮಾಟೋಡ್ಸ್‌ಗಳಾದ ಫ್ಲೂಕ್ಸ್ ಯಕೃತ್ತ್, ರಕ್ತನಾಳಗಳಿಗೆ ಪರಿಣಾಮ ಬೀರಬಹುದು. ಈ ಎಲ್ಲಾ ಜಂತುಹುಳುಗಳು ದೇಹದ ಪೋಷಕಾಂಶಗಳನ್ನು ಹೀರಿಕೊಂಡು ಮಕ್ಕಳ ಆರೋಗ್ಯದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತವೆ.
ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಇಲ್ಲದಿರುವುದು. ಕೈ ತೊಳೆಯದೆ ಆಹಾರ ಸೇವನೆ , ಮಣ್ಣಿನಲ್ಲಿ ಆಟವಾಡುವುದು, ಸುರಕ್ಷಿತ ಕುಡಿಯುವ ನೀರಿನ ಅಭಾವ, ಸರಿಯಾಗಿ ಬೇಯಿಸದ ಆಹಾರ ಸೇವನೆ, ಅಪೌಷ್ಟಿಕತೆ ಆಹಾರ ಸೇವನೆಯಿಂದ ರೋಗನಿರೋಧಕ ಶಕ್ತಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ.
ಸಿಹಿ ತಿಂದರೆ ಜಂತು ಹುಳುಗಳು ಬರುತ್ತವೆ ಎಂಬುದು ಪೋಷಕರಲ್ಲಿ ಬಹಳವಾಗಿ ಕಂಡುಬರುವ ಒಂದು ತಪ್ಪು ಕಲ್ಪನೆ. ಸಿಹಿ, ಚಾಕೊಲೇಟ್ ಅಥವಾ ಬೆಲ್ಲ ತಿಂದರೆ ನೇರವಾಗಿ ಜಂತು ಹುಳುಗಳು ಉಂಟಾಗುವುದಿಲ್ಲ. ಅವುಗಳ ಮೊಟ್ಟೆಗಳು ಅಥವಾ ಲಾರ್ವಾವು ಆಹಾರ, ನೀರಿನಲ್ಲಿ ಸೇರುತ್ತವೆ. ಅದು ಮಕ್ಕಳ ಹೊಟ್ಟೆ ಒಳಗೆ ಪ್ರವೇಶಿ ಬಳಿಕ ಜಂತು ಹುಳುಗಳು ವೃದ್ಧಿಯಾಗುತ್ತವೆ.
ಮಕ್ಕಳು ಪದೇ ಪದೇ ಆಹಾರ ಸೇವನೆ ಮಾಡುವುದು. ಅತಿಯಾಗಿ ಹಿಟ್ಟು ಪದಾರ್ಥಗಳ ಸೇವನೆ, ಕಫ ಹೆಚ್ಚಳ ಮಾಡುವ ಆಹಾರ ಸೇವನೆ ಮಾಡುವುದರಿಂದ ಇವು ಜೀರ್ಣಾಗ್ನಿಯನ್ನು ದುರ್ಬಲಗೊಳಿಸಿ ಅಂತ್ರಗಳಲ್ಲಿ ಮಲ ಸಂಗ್ರಹವಾಗಲು ಕಾರಣವಾಗುತ್ತವೆ. ಅದೇ ರೀತಿ ಸ್ವಚ್ಛತೆ ಕೊರತೆ ಇದ್ದರೆ, ವ್ಯಾಯಾಮ ಮಾಡದೆ ಇರುವುದರಿಂದ ಕಫ ಹೆಚ್ಚಳಕ್ಕೆ ಕಾರಣವಾಗಿ ಕೃಮಿ ಉತ್ಪತ್ತಿಯನ್ನು ಉತ್ತೇಜಿಸಬಹುದು. ಹೀಗಾಗಿ ಸಿಹಿ ಆಹಾರವೇ ಮೂಲ ಕಾರಣವಲ್ಲ, ಹೊಟ್ಟೆಹುಳುವಿಗೆ ಕಲುಷಿತ ಪರಿಸರ ಕಾರಣವಾಗುತ್ತದೆ ಎಂಬುದನ್ನು ಪೋಷಕರ ಗಮನದಲ್ಲಿರಬೇಕು.
ಜಂತು ಹುಳುಗಳು ಕಣ್ಣಿಗೆ ಕಾಣುವ ದೊಡ್ಡ ರೂಪದಲ್ಲಿ ದೇಹಕ್ಕೆ ಪ್ರವೇಶಿಸುವುದಿಲ್ಲ. ಅವು ಅತ್ಯಂತ ಸೂಕ್ಷ್ಮವಾದ ಮೊಟ್ಟೆ (ova), ಲಾರ್ವಾ ಅಥವಾ ಸಿಸ್ಟ್ ರೂಪದಲ್ಲಿ ನಮ್ಮ ಸುತ್ತಲಿನ ಪರಿಸರದಲ್ಲೇ ಇರುತ್ತವೆ. ಮಣ್ಣು, ನೀರು, ಆಹಾರ, ಕೈಗಳು, ಆಟಿಕೆಗಳು ಅವುಗಳ ವಾಹನಗಳ ಧೂಳಿನಲ್ಲಿ ಇರುತ್ತವೆ. ಮಕ್ಕಳು ಸಹಜವಾಗಿ ಮಣ್ಣಿನಲ್ಲಿ ಆಟವಾಡುವಾಗ ಸೂಕ್ಷ್ಮ ಜೀವಿಗಳು ದೇಹ ಒಳಗೆ ಪ್ರವೇಶಿಸಸುತ್ತವೆ.
ಅಶುದ್ಧ ಆಹಾರ: ತರಕಾರಿ ಹಣ್ಣುಗಳನ್ನು ಮಣ್ಣಿನಲ್ಲಿ ಬೆಳೆಯಲಾಗುತ್ತದೆ. ಆ ಮಣ್ಣಿನಲ್ಲಿ ಪ್ರಾಣಿಗಳ ಮಲ, ಕಲುಷಿತ ನೀರು, ಪರಿಸರದಲ್ಲಿ ಜಂತು ಹುಳು ಮೊಟ್ಟೆಗಳು ಇರಬಹುದು. ಮಣ್ಣಿನಲ್ಲಿ ಇರುವ ಮೊಟ್ಟೆಗಳು ತರಕಾರಿಗಳ ಮೇಲ್ಮೈಗೆ ಅಂಟಿಕೊಳ್ಳಬಹುದು. ತರಕಾರಿ, ಹಣ್ಣುಗಳನ್ನು ಸರಿಯಾಗಿ ತೊಳೆಯದೆ ಕೇವಲ ನೀರಿನಲ್ಲಿ ಅದ್ದಿ ತೆಗೆಯುವುದರಿಂದ ಜಂತುಹುಳು ಮೊಟ್ಟೆಗಳು ಹಾಗೆ ಉಳಿದು ಮಕ್ಕಳು ಕ್ಯಾರೆಟ್, ಬೀಟ್ ರೂಟ್ ದ್ರಾಕ್ಷಿ, ಸ್ಟ್ರಾಬೆರಿ ಸೇರಿ ಅನೇಕ ಹಣ್ಣುಗಳನ್ನು ನೇರವಾಗಿ ತಿನ್ನುವಾಗ ಈ ಮೊಟ್ಟೆಗಳು ಹೊಟ್ಟೆಗೆ ಸೇರಿ ನಂತರ ಹುಳುಗಳಾಗಿ ಬೆಳೆಯುತ್ತವೆ.
ಸರಿಯಾಗಿ ಬೇಯಿಸದ ಆಹಾರ: ಮಾಂಸ ಮತ್ತು ಮೀನುಗಳಲ್ಲಿ ಹಾಗೂ ಬೀದಿಬದಿ ಸಿಗುವ ಆಹಾರಗಳನ್ನು ಸರಿಯಾಗಿ ಬೇಯಿಸದೆ ಇರುವುದರಿಂದ ಅದರಲ್ಲಿ ಲಾರ್ವಾ ಜೀವಂತವಾಗಿರುತ್ತವೆ. ಆ ಲಾರ್ವಾವು ದೇಹಕ್ಕೆ ಹೋಗಿ ಅಂತರದಲ್ಲಿ ಬೆಳೆಯುತ್ತವೆ. ಬಿಸಿ ಪದಾರ್ಥಗಳ ಉಷ್ಣತೆಯಿಂದ ಸಾಮಾನ್ಯವಾಗಿ ಈ ಸೂಕ್ಷ್ಮ ಜೀವಿಗಳು ನಾಶವಾಗುತ್ತವೆ. ಆದ್ದರಿಂದ ಪೂರ್ಣವಾಗಿ ಬೇಯಿಸಿದ ಆಹಾರ ಸೇವನೆ ಮಾಡುವುದು ಒಳಿತು.
ಮಣ್ಣಿನಲ್ಲಿ ಆಡುವುದು: ಮಕ್ಕಳು ಮಣ್ಣಿನಲ್ಲಿ ಆಟವಾಡುವುದು, ಆಟಿಕೆಗಳನ್ನು ನೆಲದಲ್ಲಿ ಎಸೆಯುವುದು, ಧೂಳು ಅಥವಾ ಮರಳನ್ನು ಮುಟ್ಟುವುದು ಸಹಜ. ಈ ಪರಿಸರದಲ್ಲಿ ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾದ ಜಂತು ಹುಳುಗಳ ಮೊಟ್ಟೆಗಳು ಇರುವ ಸಾಧ್ಯತೆ ಇದೆ. ಆಟದ ನಂತರ ಕೈಗಳನ್ನು ಸರಿಯಾಗಿ ತೊಳೆಯದೆ ಅದೇ ಕೈಯಿಂದ ಆಹಾರ ತಿನ್ನುವಾಗ, ಈ ಮೊಟ್ಟೆಗಳು ನೇರವಾಗಿ ಬಾಯಿಗೆ ಪ್ರವೇಶಿಸುತ್ತವೆ.
ಉಗುರು ಕಚ್ಚುವ ಅಭ್ಯಾಸ: ಮಕ್ಕಳು ಮಣ್ಣಿನಲ್ಲಿ ಆಟವಾಡುವುದರಿಂದ ಆಗಾಗ ಉಗುರು ಕಚ್ಚುತ್ತಿರುತ್ತಾರೆ. ಉಗುರುಗಳ ಸಂಧಿಯಲ್ಲಿ ಮಣ್ಣು, ಧೂಳು ಮತ್ತು ಜಂತು ಹುಳುಗಳ ಮೊಟ್ಟೆಗಳು ಅಂಟಿಕೊಂಡಿರುತ್ತವೆ. ಮಕ್ಕಳು ಉಗುರು ಕಚ್ಚುವಾಗ ಅಥವಾ ಬೆರಳುಗಳನ್ನು ಬಾಯಿಗೆ ಹಾಕುವಾಗ, ಆ ಸೂಕ್ಷ್ಮ ಜೀವಿಗಳು ಜೀರ್ಣಾಂಗದೊಳಗೆ ಹೋಗಿ ಅಂತರದಲ್ಲಿ ಬೆಳೆಯುತ್ತವೆ.
ಅಶುದ್ಧ ನೀರು: ಮಲಮೂತ್ರ ನೀರಿಗೆ ಸೇರಿದ್ದರೆ ಅದು ಜಂತು ಹುಳುಗಳ ಮೊಟ್ಟೆಗೆ ಕಾರಣವಾಗಿವೆ. ಇಂತಹ ಕಲುಷಿತ ನೀರು ಸೇವನೆ ಮಾಡುವುದರಿಂದ ಕುಡಿಯುವುದರಿಂದ ಈ ಮೊಟ್ಟೆಗಳು ದೇಹದೊಳಗೆ ಪ್ರವೇಶಿಸಸುತ್ತವೆ.
ಚರ್ಮದ ಮೂಲಕ ಪ್ರವೇಶ: ಕೊಕ್ಕೆ ಹುಳು, ಮಣ್ಣಿನಲ್ಲಿ ಲಾರ್ವಾ ರೂಪದಲ್ಲಿ ಇರುತ್ತವೆ. ಮಕ್ಕಳು ಪಾದರಕ್ಷೆ ಧರಿಸದೆ, ಮಲಮೂತ್ರದಿಂದ ಕಲುಷಿತವಾದ ಮಣ್ಣಿನಲ್ಲಿ ನಡೆಯುವಾಗ ಈ ಲಾರ್ವಾಗಳು ಚರ್ಮದ ಮೂಲಕ ದೇಹಕ್ಕೆ ಪ್ರವೇಶಿಸಬಹುದು.
ಜಂತುಹುಳುವಿನ ಮೊಟ್ಟೆಗಳು ದೇಹಕ್ಕೆ ಪ್ರವೇಶಿಸಿ ಇವು ಅಂತ್ರಗಳಲ್ಲಿ ಬೆಳೆಯುವುದರ ಜೊತೆಗೆ ದೀರ್ಘಕಾಲ ಜೀವಂತವಾಗಿರುತ್ತವೆ.
ಅಂತ್ರಗಳಲ್ಲಿ ವಾಸಿಸುವ ಹುಳುಗಳನ್ನು ಪೂರೀಷಜ ಕೃಮಿ ಎಂದು ಕರೆಯಲಾಗಿದೆ.
ಮಕ್ಕಳ ಹೊಟ್ಟೆಯಲ್ಲಿ ಹುಳುಗಳು (intestinal worms) ಇದ್ದರೆ, ಅವು ನಿಧಾನವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
ಮಗು ತಿನ್ನುವ ಆಹಾರದ ಪೋಷಕಾಂಶಗಳನ್ನು ಹೀರಿಕೊಂಡು, ದೌರ್ಬಲ್ಯ, ರಕ್ತಹೀನತೆ, ತೂಕ ಹೆಚ್ಚಳವಾಗದಿರುವುದು. ಏಕಾಗ್ರತೆಯ ಮೇಲೆ ಅಡ್ಡಿ ಉಂಟಾಗಬಹುದು.
ಜೀರ್ಣಕ್ರಿಯೆಗೆ ಸಂಬಂಧಿತ ಲಕ್ಷಣಗಳು
ಸಡಿಲ ಮಲ / ಅತಿಸಾರ ಬೇಧಿ
ಪದೇಪದೇ ಮಲವಿಸರ್ಜನೆ
ಕೆಲವೊಮ್ಮೆ ಮಲಬದ್ಧತೆ
ಮಲದಲ್ಲಿ ಬಿಳಿ ಪಟ್ಟೆಯಂತಿರುವ ತುಂಡುಗಳು ಕಾಣಿಸಿಕೊಳ್ಳುವುದು
ಶೌಚಾಲಯಕ್ಕೆ ಪದೇಪದೇ ಹೋಗುವುದು ಅಥವಾ ಹಲವು ದಿನ ಮಲವಿಸರ್ಜನೆ ಆಗದಿರುವುದು
ಹೊಟ್ಟೆಗೆ ಸಂಬಂಧಿತ ಲಕ್ಷಣಗಳು
ಊಟದ ನಂತರ ಹೊಟ್ಟೆ ನೋವು
ಪದೇಪದೇ ನೋವು ಕಾಣಿಸುವುದು
ಹೊಟ್ಟೆ ಉಬ್ಬಿರುವಂತೆ ಕಾಣುವುದು
ದೇಹ ಸಣ್ಣಗಿದ್ದರೂ ಹೊಟ್ಟೆ ದೊಡ್ಡದಾಗಿ ಕಾಣುವುದು
ಹಸಿವು ಸಂಬಂಧಿತ ಬದಲಾವಣೆಗಳು
ಹಸಿವು ಕಡಿಮೆ
ಇಷ್ಟವಾದ ಆಹಾರಕ್ಕೂ ಆಸಕ್ತಿ ತೋರಿಸದಿರುವುದು
ಕಡಿಮೆ ಆಹಾರ ಸೇವನೆ
ಗುದದ್ವಾರ ಸಂಬಂಧಿತ ಲಕ್ಷಣಗಳು (ಸೂಜಿ ಹುಳುಗಳಲ್ಲಿ ಸಾಮಾನ್ಯ)
ಗುದದ್ವಾರದ ಸುತ್ತ ಕಚ್ಚುವುದು / ಚುಚ್ಚುವ ಭಾವನೆ
ರಾತ್ರಿ ಸಮಯದಲ್ಲಿ ಮಗು ಗುದದ್ವಾರದ ಸುತ್ತ ಕೈ ಹಾಕುವುದು ಅಥವಾ ಕೆರೆದುಕೊಳ್ಳುವುದು
ನಿದ್ದೆಯಲ್ಲಿ ಒದ್ದಾಡುವುದು
ನಿದ್ರೆ ಸಂಬಂಧಿತ ಬದಲಾವಣೆಗಳು
ನಿದ್ರೆಯಲ್ಲಿ ಒದ್ದಾಡುವುದು
ಹಲ್ಲು ಕಚ್ಚುವುದು
ಅಳುವುದು ಅಥವಾ ಏಕಾಏಕಿ ಎಚ್ಚರಗೊಳ್ಳುವುದು
ರಕ್ತಹೀನತೆ ಮತ್ತು ದೌರ್ಬಲ್ಯದ ಲಕ್ಷಣಗಳು
(ಕೊಕ್ಕೆ ಹುಳು ಸೋಂಕಿನಲ್ಲಿ ಹೆಚ್ಚು ಕಂಡುಬರುತ್ತವೆ)
ಮುಖ, ತುಟಿ ಮತ್ತು ಕಣ್ಣುಗಳ ಒಳಭಾಗ ಬಿಳಿಯಾಗುವುದು
ಬೇಗ ದಣಿವು
ಆಟ ಆಡಲು ಆಸಕ್ತಿ ಕಡಿಮೆ
ಸ್ವಲ್ಪ ನಡೆದರೂ ಆಯಾಸ
ಬೆಳವಣಿಗೆಯಲ್ಲಿ ಮಂದಗತಿ
ತೂಕ ಹೆಚ್ಚಳವಾಗದಿರುವುದು
ದೇಹ ಸಣ್ಣಗಾಗುವುದು
ವಯಸ್ಸಿಗೆ ತಕ್ಕ ಬೆಳವಣಿಗೆ ಕಾಣಿಸದಿರುವುದು
ವರ್ತನೆ ಬದಲಾವಣೆಗಳು
ಕಿರಿಕಿರಿ
ಏಕಾಗ್ರತೆ ಕೊರತೆ
ಓದಿನಲ್ಲಿ ಆಸಕ್ತಿ ಕಡಿಮೆ
ಚರ್ಮ ಮತ್ತು ದೇಹದ ಲಕ್ಷಣಗಳು
ದೇಹದಲ್ಲಿ ತುರಿಕೆ
ಚರ್ಮ ಒಣಗುವುದು
ಕಾಂತಿ ಕಡಿಮೆಯಾಗುವುದು
ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವೈದ್ಯರ ಸಲಹೆಯಿಲ್ಲದೆ ಜಂತು ಹುಳು ಔಷಧಿ ನೀಡಬಾರದು.
ಆದರೆ ಸೋಂಕು ಸಾಮಾನ್ಯವಾಗಿರುವ ಪ್ರದೇಶಗಳಲ್ಲಿ ದೊಡ್ಡ ಮಕ್ಕಳಿಗೆ ನಿಯಮಿತ ಡೀವರ್ಮಿಂಗ್ (ಜಂತು ಹುಳು ಔಷಧಿ) ಉಪಯುಕ್ತವಾಗಿದೆ.
ಮಕ್ಕಳು ಪದೇ ಪದೇ ಗುದದ್ವಾರ ಭಾಗವನ್ನು ಕೆರೆಯುವಾಗ ಜಂತು ಹುಳುವಿನ ಮೊಟ್ಟೆಗಳು ಕೈಗಳಿಗೆ ಅಂಟುತ್ತವೆ. ಅವು ಆಟಿಕೆಗಳು, ಹಾಸಿಗೆ, ಬಟ್ಟೆಗಳು ಮತ್ತು ಆಹಾರ ವಸ್ತುಗಳ ಮೂಲಕ ಕುಟುಂಬದ ಇತರರಿಗೆ ಹರಡಬಹುದು. ಆದ್ದರಿಂದ ಕುಟುಂಬದ ಎಲ್ಲರೂ ಸ್ವಚ್ಛತೆ ಪಾಲಿಸುವುದು ಅತ್ಯಗತ್ಯ.
ಮಕ್ಕಳ ಊಟಕ್ಕೂ ಮುನ್ನ ಮತ್ತು ಶೌಚಾಲಯದ ನಂತರ ಕೈ ಚೆನ್ನಾಗಿ ತೊಳೆಸಬೇಕು
ಉಗುರುಗಳನ್ನು ಚಿಕ್ಕದಾಗಿ ಕತ್ತರಿಸುವುದು
ಮನೆಯಿಂದ ಹೊರ ಹೋಗುವಾಗ ಪಾದರಕ್ಷೆ ಹಾಕುವಂತೆ ಸಲಹೆ ನೀಡುವುದು
ಶುದ್ಧ ನೀರು ಕುಡಿಸುವುದು
ಹಣ್ಣು-ತರಕಾರಿಗಳನ್ನು ತೊಳೆದು ಸೇವನೆ ಮಾಡಬೇಕು
ಬಯಲು ಪ್ರದೇಶಗಳಲ್ಲಿ, ರಸ್ತೆ ಬದಿ, ಮಲ, ಮೂತ್ರ ವಿಸರ್ಜಿಸಬಾರದು
ಮಕ್ಕಳು ಬಾಯಿಗೆ ಕೈ ಹಾಕದಂತೆ ನೋಡಿಕೊಳ್ಳಬೇಕು.
ಮನೆಯ ಸುತ್ತಮುತ್ತ ಸುಚಿಯಾಗಿ ಇಟ್ಟುಕೊಳ್ಳುವುದು.
ಪೌಷ್ಠಿಕ ಆಹಾರ ಸೇವನೆ
ಮಕ್ಕಳ ಮಲದಲ್ಲಿ ಹುಳುಗಳು ಕಾಣಿಸಿಕೊಳ್ಳುವುದು, ಹೊಟ್ಟೆ ನೋವು, ಮಕ್ಕಳಲ್ಲಿ ಅತಿಸಾರ ಭೇದಿ, ರಕ್ತಹೀನತೆಯ ಲಕ್ಷಣಗಳು (ಮುಖ ಬಿಳಿಯಾಗುವುದು, ಬೇಗ ದಣಿವು), ತೂಕ ಕಡಿಮೆಯಾಗುವುದು ಹಾಗೂ ಗುದದ ಸುತ್ತ ನಿರಂತರ ತುರಿಕೆ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
ಮಾಹಿತಿ: ಡಾ. ಪೂರ್ಣಿಮಾ ಎನ್, ಸಹ ಪ್ರಾಧ್ಯಾಪಕಿ, ಕೌಮಾರನೃತ್ಯ ವಿಭಾಗ (ಆಯುರ್ವೇದ ಮಕ್ಕಳ ರೋಗ ತಜ್ಞರು) ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹೆಗ್ಗೇರಿ ಬಡಾವಣೆ ಹುಬ್ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.