
ಚಿತ್ರ: ಪ್ರಜಾವಾಣಿ
ಆಧುನಿಕ ಜೀವನಶೈಲಿಯ ಒತ್ತಡದಿಂದಾಗಿ ಯುವಕರಲ್ಲಿ ಕೂಡಾ ಕೀಲುಗಳ ಬಿಗಿತ ಹಾಗೂ ಮೂಳೆಗಳಲ್ಲಿ ಶಕ್ತಿ ಹೀನತೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರವಿದೆ ಎಂದು ಫಿಜಿಯೋಥೆರಪಿಸ್ಟ್ ವೈದ್ಯರಾದ ಡಾ. ಆರ್. ಶ್ರೀಜಿತ್ ಅವರು ತಿಳಿಸಿದ್ದಾರೆ.
ಕೀಲು ಮತ್ತು ಮೂಳೆಗಳ ಆರೋಗ್ಯವು ಪ್ರಮುಖವಾಗಿ 4 ಅಂಶಗಳನ್ನು ಒಳಗೊಂಡಿದೆ. ಅವುಗಳೆಂದರೆ, ಹೊಂದಿಕೊಳ್ಳುವಿಕೆ, ಸ್ಥಿರತೆ, ಶಕ್ತಿ ಮತ್ತು ಸಹಿಷ್ಣುತೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಈ ಕೆಳಗಿನ ವ್ಯಾಯಾಮಗಳನ್ನು ಮಾಡಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ನಿಧಾನಗತಿಯ ನಡಿಗೆ ಮಾಡುವುದರಿಂದ ಕೀಲು ಮತ್ತು ಸ್ನಾಯುಗಳಿಗೆ ರಕ್ತದ ಹರಿವು ಸುಗಮವಾಗುತ್ತದೆ. ಇದರ ಜೊತೆಗೆ ಗಾಯದ ಅಪಾಯ ಕಡಿಮೆಯಾಗುತ್ತದೆ. ಪ್ರತಿ ದಿನ 5 ರಿಂದ 10 ನಿಮಿಷ ಸೌಮ್ಯವಾಗಿ ನಡೆಯುವುದು ಸೂಕ್ತ.
ಇದರ ಜೊತೆ ಜೊತೆಗೆ ಭುಜಗಳ ವ್ಯಾಯಾಮ, ಕುತ್ತಿಗೆ ತಿರುಗಿಸುವುದು, ಹಿಮ್ಮಡಿ (ಕಣಕಾಲು) ವ್ಯಾಯಾಮ ಮತ್ತು ನಿಂತ ಸ್ಥಳದಲ್ಲೇ ಕಾಲುಗಳ ಕಸರತ್ತು ಮಾಡುವುದರಿಂದ ಕೀಲುಗಳೊಳಗಿನ ನೈಸರ್ಗಿಕ ‘ಲೂಬ್ರಿಕೆಂಟ್’ ಆಗಿರುವ ‘ಸೈನೋವಿಯಲ್’ ದ್ರವವನ್ನು ಸಕ್ರಿಯಗೊಳಿಸಬಹುದು.
ಮೂಳೆಯ ಸಾಂದ್ರತೆ ಕಾಪಾಡಿಕೊಳ್ಳಲು ತೂಕ ಎತ್ತುವ ವ್ಯಾಯಾಮಗಳು ಅತ್ಯಗತ್ಯ. ಚುರುಕಾದ ನಡಿಗೆ, ಮೆಟ್ಟಿಲು ಹತ್ತುವುದು, ಲಘು ನಡಿಗೆ ಅಥವಾ ನೃತ್ಯದಂತಹ ಚಟುವಟಿಕೆಗಳು ಮೂಳೆಗಳ ಆರೋಗ್ಯಕ್ಕೆ ಸಹಕಾರಿಯಾಗಿವೆ.
ನಡಿಗೆಯನ್ನು 20 ನಿಮಿಷಗಳಿಂದ ಪ್ರಾರಂಭಿಸಿ, ಕ್ರಮೇಣ 30 ನಿಮಿಷಗಳವರೆಗೆ ಹೆಚ್ಚಿಸಿ. ಇದು ಸೊಂಟ, ಕಾಲುಗಳು ಮತ್ತು ಬೆನ್ನುಮೂಳೆಯನ್ನು ಬಲಪಡಿಸುತ್ತದೆ.
ಯೋಗ ಅಥವಾ ಜಿಮ್‌ನಲ್ಲಿ ಮಾಡುವ ವ್ಯಾಯಾಮದ ಅಭ್ಯಾಸವು ಕೀಲುಗಳ ಜೋಡಣೆ ಮತ್ತು ಸ್ನಾಯು ಸಮತೋಲನವನ್ನು ಸುಧಾರಿಸಲು ಅತ್ಯುತ್ತಮವಾಗಿವೆ.
ಒಂಟಿ ಕಾಲಿನ ಮೇಲೆ ನಿಲ್ಲುವುದು, ಹಿಮ್ಮಡಿಗೆ ಭಾರ ಹಾಕಿ ನಡೆಯುವುದು ಅಥವಾ ಬ್ಯಾಲೆನ್ಸ್ ಬೋರ್ಡ್ ಮೇಲೆ ಕಸರತ್ತು ಮಾಡುವುದರಿಂದ ದೇಹದ ಸ್ಥಾನ ಮತ್ತು ಚಲನೆ(ಪ್ರೊಪ್ರಿಯೋಸೆಪ್ಷನ್)ಯನ್ನು ಸುಧಾರಿಸುತ್ತದೆ.
ನಿಧಾನವಾಗಿ ವ್ಯಾಯಾಮ ಪ್ರಾರಂಭಿಸಿ, ಕ್ರಮೇಣ ಪ್ರಗತಿ ಸಾಧಿಸಿ ಎಂಬ ತತ್ವವನ್ನು ಅನುಸರಿಸಿ ಎಂದು ವೈದ್ಯರು ಹೇಳುತ್ತಾರೆ.
ಕ್ಯಾಲ್ಸಿಯಂ ಸಮೃದ್ಧ ಆಹಾರ, ವಿಟಮಿನ್ ಡಿ ಹಾಗೂ ಸಾಕಷ್ಟು ನೀರು ಕುಡಿಯಿರಿ.
ಲೇಖಕರು: ಶ್ರೀ ಜಿತ್ ಆರ್, ಸಮಾಲೋಚಕರು, ಫಿಜಿಯೋಥೆರಪಿಸ್ಟ್, ಫೋರ್ಟಿಸ್ ಆಸ್ಪತ್ರೆ, ಬೆಂಗಳೂರು.