ADVERTISEMENT

Male Fertility: ಪುರುಷರಿಗೂ ಇದೆಯೇ ಸಂತಾನೋತ್ಪತ್ತಿಯ ವಯಸ್ಸು?

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 8:23 IST
Last Updated 30 ಅಕ್ಟೋಬರ್ 2025, 8:23 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ನಾವು ಫಲವತ್ತತೆ ಮತ್ತು ‘ಜೈವಿಕ ಗಡಿಯಾರ’ ದ ಬಗ್ಗೆ ಮಾತನಾಡುವಾಗ ನಮ್ಮ ಗಮನ ಯಾವಾಗಲೂ ಮಹಿಳೆಯರ ಮೇಲಿರುತ್ತದೆ. ಪುರುಷರು ಮಗುವಿನ ಅಥವಾ ಅವರ ಆರೋಗ್ಯದ ಮೇಲೆ ಯಾವುದೇ ಪರಿಣಾಮವಿಲ್ಲದೆ ಯಾವ ವಯಸ್ಸಿನಲ್ಲಾದರೂ ತಂದೆಯಾಗಬಹುದು ಎಂಬ ಕಲ್ಪನೆ ಸಮಾಜದಲ್ಲಿ ಇದೆ. ಆದರೆ ಈ ನಂಬಿಕೆ ಸಂಪೂರ್ಣ ನಿಖರವಲ್ಲ ಎಂದು ವಿಜ್ಞಾನ ಈಗ ತೋರಿಸುತ್ತಿದೆ. ಪುರುಷರ ಫಲವತ್ತತೆಯೂ ವಯಸ್ಸಿನೊಂದಿಗೆ ಕ್ರಮೇಣ ಕುಸಿಯುತ್ತದೆ. ಹಾಗಾಗಿ, ಫಲವತ್ತತೆ ಮತ್ತು ಸಂತಾನೋತ್ಪತ್ತಿಯ ಬಗ್ಗೆ ಮಾತನಾಡುವಾಗ ಪುರುಷರ ಬಗ್ಗೆಯೂ ಸಮಾನ ಗಮನ ನೀಡಬೇಕಾಗುತ್ತದೆ.

ವಯಸ್ಸಾದಂತೆ ಪುರುಷರ ಫಲವತ್ತತೆಗೆ ಏನಾಗುತ್ತದೆ?

ADVERTISEMENT

ಋತುಬಂಧದೊಂದಿಗೆ ಸ್ಪಷ್ಟ ಸಂತಾನೋತ್ಪತ್ತಿ ಅಂತ್ಯದ ಲಕ್ಷಣಗಳನ್ನು ಮಹಿಳೆಯರು ಕಂಡುಕೊಳ್ಳುತ್ತಾರೆ. ಇದಕ್ಕಿಂತ ಭಿನ್ನವಾಗಿ, ಪುರುಷರಿಗೆ ನಿಖರವಾದ ಕಟ್-ಆಫ್ ಇರುವುದಿಲ್ಲ. ಆದರೂ, 40 ನೇ ವಯಸ್ಸಿನ ನಂತರ, ಹಲವಾರು ಸೂಕ್ಷ್ಮ ಜೈವಿಕ ಬದಲಾವಣೆಗಳು ಪುರುಷ ಫಲವತ್ತತೆಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತವೆ. ‘ಟೆಸ್ಟೋಸ್ಟೆರಾನ್’ ಮಟ್ಟಗಳು ಪ್ರತಿ ವರ್ಷ ಸುಮಾರು ಶೇ 1ರಷ್ಟು ಕಡಿಮೆಯಾಗುತ್ತವೆ. ವೀರ್ಯದ ಎಣಿಕೆ ಕಡಿಮೆಯಾಗಬಹುದು. ವೀರ್ಯ ಚಲನಶೀಲತೆ (ವೀರ್ಯದ ಚಲಿಸುವ ಸಾಮರ್ಥ್ಯ) ಕಡಿಮೆಯಾಗಲು ಪ್ರಾರಂಭವಾಗುತ್ತದೆ. ವೀರ್ಯದ ‘ಡಿಎನ್ಎ’ ವಿಘಟನೆಯ ಸಂಭವನೀಯತೆಯೂ ಹೆಚ್ಚಾಗುತ್ತದೆ. ಇದು ಫಲವತ್ತತೆಯ ಪ್ರಮಾಣ ಮತ್ತು ಭವಿಷ್ಯದ ಸಂತಾನದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ವೈದ್ಯಕೀಯ ಸಂಶೋಧನೆ ಪ್ರಕಾರ, ಮಹಿಳೆ ಕಿರಿಯಳಾಗಿದ್ದರೂ, ಫಲವತ್ತತೆಯ ಸಮಸ್ಯೆಗಳಿಲ್ಲದಿದ್ದರೂ, ವಯಸ್ಸಾದ ಪುರುಷರೊಂದಿಗೆ ಗರ್ಭಧಾರಣೆಯನ್ನು ಸಫಲವಾಗಿಸಲು ಹೆಚ್ಚು ಸಮಯ ಬೇಕಾಗಬಹುದು. ಇದು ಪುರುಷರ ವಯಸ್ಸು ಯೋಚಿಸಿದಷ್ಟು ಅಪ್ರಸ್ತುತವಲ್ಲ ಎಂಬುದನ್ನು ತೋರಿಸುತ್ತದೆ.

ವಯಸ್ಸಾಗುವಿಕೆ ವೀರ್ಯ ಮತ್ತು ಫಲವತ್ತತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಯಶಸ್ವಿ ಗರ್ಭಧಾರಣೆಯಲ್ಲಿ ವೀರ್ಯದ ಆರೋಗ್ಯ ಒಂದು ಪ್ರಮುಖ ಅಂಶವಾಗಿದೆ. ಪುರುಷರು ವಯಸ್ಸಾದಂತೆ ಅವರ ವೀರ್ಯದ ಗುಣಮಟ್ಟ ಹಲವಾರು ರೀತಿಯಲ್ಲಿ ಬದಲಾಗುತ್ತದೆ.

  • ಕಡಿಮೆ ಚಲನಶೀಲತೆ ಮತ್ತು ಸಂಖ್ಯೆ: ವಯಸ್ಸಾದ ವೀರ್ಯಗಳು ಸಾಮಾನ್ಯವಾಗಿ ನಿಧಾನವಾಗಿರುತ್ತವೆ ಮತ್ತು ಕಡಿಮೆ ಸಂಖ್ಯೆಯಲ್ಲಿರುತ್ತವೆ. ಇದರಿಂದಾಗಿ ಅವು ಅಂಡಾಣುವನ್ನು ತಲುಪಲು ಮತ್ತು ಗರ್ಭದಾರಣೆಗೆ ಕಷ್ಟವಾಗುತ್ತದೆ.

  • ಅನುವಂಶಿಕ ರೂಪಾಂತರ: ವಯಸ್ಸಾದಂತೆ, ವೀರ್ಯದಲ್ಲಿ ‘ಡಿಎನ್ಎ’ ಹಾನಿಯ ಅಪಾಯ ಹೆಚ್ಚಿರುತ್ತದೆ. ಇದು ಗರ್ಭಪಾತಕ್ಕೆ ಕಾರಣವಾಗಬಹುದು ಅಥವಾ ಮಕ್ಕಳಲ್ಲಿ ‘ಆಟಿಸಂ’, ‘ಸ್ಕಿಜೋಫ್ರೇನಿಯಾ’ ಅಥವಾ ಅನುವಂಶಿಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು.

  • ಹಾರ್ಮೋನ್‌ಗಳಲ್ಲಿ ಬದಲಾವಣೆಗಳು: ಕಡಿಮೆ ‘ಟೆಸ್ಟೋಸ್ಟೆರಾನ್’ ಮಟ್ಟಗಳು ಲೈಂಗಿಕ ಆಸಕ್ತಿಯನ್ನು ಕಡಿಮೆಯಾಗಿಸಬಹುದು, ನಿಮಿರುವಿಕೆ ಸಮಸ್ಯೆ ಉಂಟಾಗಬಹುದು, ಮತ್ತು ವೀರ್ಯದ ಉತ್ಪಾದನೆ ಕಡಿಮೆಯಾಗಬಹುದು.

  • ಒಟ್ಟಾರೆ ಆರೋಗ್ಯ: ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯದಂತಹ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳು, ಮಾಲಿನ್ಯ ಅಥವಾ ಧೂಮಪಾನಕ್ಕೆ ಒಡ್ಡಿಕೊಳ್ಳುವುದರಿಂದ ವೀರ್ಯದ ಗುಣಮಟ್ಟ ಮತ್ತಷ್ಟು ಕಡಿಮೆಯಾಗಬಹುದು.

ನಾವು ಪುರುಷರ ಜೈವಿಕ ವಯಸ್ಸಿನ ಬಗ್ಗೆ ಏಕೆ ಹೆಚ್ಚು ಮಾತನಾಡುವುದಿಲ್ಲ?

ದಶಕಗಳಿಂದ ಫಲವತ್ತತೆಯನ್ನು ವೈದ್ಯಕೀಯವಾಗಿ ಮತ್ತು ಸಾಮಾಜಿಕವಾಗಿ ಮಹಿಳೆಯರ ಸಮಸ್ಯೆಯೆಂದು ಪರಿಗಣಿಸಲಾಗಿದೆ. ಫಲವತ್ತತೆಯನ್ನು ಪರೀಕ್ಷೆ ಮಾಡಿಸಿಕೊಳ್ಳಲು ಪುರುಷರನ್ನು ಪ್ರೋತ್ಸಾಹಿಸುವುದು ತೀರಾ ವಿರಳ. ಅವರ ವಯಸ್ಸು ಅಥವಾ ಜೀವನಶೈಲಿಯೂ ಪರಿಣಾಮ ಬೀರುವ ಅಂಶಗಳಾಗಿರಬಹುದು ಎಂದು ಅನೇಕರಿಗೆ ತಿಳಿದಿರುವುದಿಲ್ಲ. ಪುರುಷರ ಫಲವತ್ತತೆಯನ್ನು ಸುತ್ತುವರೆದಿರುವ ನಂಬಿಕೆ ಮೌನವನ್ನು ಹೆಚ್ಚಿಸುತ್ತದೆ. ಅನೇಕ ಪುರುಷರು ಇದನ್ನು ಆರೋಗ್ಯಕ್ಕಿಂತ ಹೆಚ್ಚಾಗಿ ಪುರುಷತ್ವದ ವಿಷಯವಾಗಿ ನೋಡುತ್ತಾರೆ.

ಈ ಬಗ್ಗೆ ಜಾಗೃತಿ ಹೆಚ್ಚಿಸುವುದು ಬಹಳ ಮುಖ್ಯ ಏಕೆಂದರೆ, ತಂದೆಯ ವಯಸ್ಸು ಫಲವತ್ತತೆಯ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ, ಫಲವತ್ತತೆಯ ಫಲಿತಾಂಶ ಮತ್ತು ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಪುರುಷರೂ ‘ಜೈವಿಕ ಗಡಿಯಾರ’ವನ್ನು ಹೊಂದಿರುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ದಂಪತಿಗಳು ಹೆಚ್ಚು ತಿಳುವಳಿಕೆಯಿಂದ ಸಂತಾನೋತ್ಪತ್ತಿಯ ಆಯ್ಕೆಗಳನ್ನು ಮಾಡಿಕೊಳ್ಳಲು ಪ್ರೋತ್ಸಾಹಿಸಿದಂತಾಗುತ್ತದೆ.

ಫಲವತ್ತತೆಯನ್ನು ಕಾಪಾಡಿಕೊಳ್ಳಲು ಪುರುಷರು ಏನು ಮಾಡಬಹುದು?

ವಯಸ್ಸಾಗುವುದು ಅನಿವಾರ್ಯವಾಗಿದ್ದರೂ ಆರೋಗ್ಯಕರ ಜೀವನಶೈಲಿಯ ಸೂಕ್ತ ಆಯ್ಕೆಗಳು ವೀರ್ಯದ ಗುಣಮಟ್ಟ ಮತ್ತು ಒಟ್ಟಾರೆ ಸಂತಾನೋತ್ಪತ್ತಿ ಆರೋಗ್ಯದ ಕುಸಿತವನ್ನು ಗಮನಾರ್ಹವಾಗಿ ನಿಧಾನಗೊಳಿಸಬಹುದು. ಕೆಲವು ಪ್ರಮುಖ ಹಂತಗಳು ಹೀಗಿವೆ:

  • ಆರೋಗ್ಯಕರ ತೂಕ ಕಾಪಾಡಿಕೊಳ್ಳಿ: ಸ್ಥೂಲಕಾಯತೆ ‘ಟೆಸ್ಟೋಸ್ಟೆರಾನ್’ ಮತ್ತು ವೀರ್ಯ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.

  • ಧೂಮಪಾನ, ಮದ್ಯಪಾನ ಮಿತಿಯಲ್ಲಿರಲಿ: ಇವೆರಡೂ ವೀರ್ಯದ ‘ಡಿಎನ್ಎ’ಗೆ ಹಾನಿಯನ್ನುಂಟುಮಾಡಬಹುದು ಮತ್ತು ಚಲನಶೀಲತೆಯ ಮೇಲೆ ಪರಿಣಾಮ ಬೀರಬಹುದು.

  • ಪೋಷಕಾಂಶಗಳಿರುವ ಆಹಾರ ಸೇವಿಸಿ: ‘ಆಂಟಿ ಆಕ್ಸಿಡೆಂಟ್‌ಗಳು’, ‘ಸತು’, ‘ವಿಟಮಿನ್ ಸಿ’ ಮತ್ತು ‘ಫೋಲೇಟ್’ ಅಧಿಕವಾಗಿರುವ ಆಹಾರ ವೀರ್ಯದ ಆರೋಗ್ಯಕ್ಕೆ ಸಹಕಾರಿ.

  • ಮಿತವಾಗಿ ವ್ಯಾಯಾಮ ಮಾಡಿ: ದೈಹಿಕ ಚಟುವಟಿಕೆ ‘ಟೆಸ್ಟೋಸ್ಟೆರಾನ್’ ಅನ್ನು ಹೆಚ್ಚಿಸುತ್ತದೆ. ಆದರೆ ಅತಿಯಾದ ವ್ಯಾಯಾಮ ಅಥವಾ ‘ಸ್ಟೆರಾಯ್ಡ್’ ಬಳಕೆ ಇದಕ್ಕೆ ವಿರುದ್ಧವಾಗಿ ಕೆಲಸ ಮಾಡಬಹುದು.

  • ಒತ್ತಡ ಮತ್ತು ನಿದ್ರೆಯ ನಿರ್ವಹಣೆ: ದೀರ್ಘಕಾಲದ ಒತ್ತಡ ಮತ್ತು ನಿದ್ರಾಹೀನತೆ ‘ಫಲವತ್ತತೆ’ಯನ್ನು ನಿಯಂತ್ರಿಸುವ ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡುತ್ತದೆ.

  • ನಿಯಮಿತ ಆರೋಗ್ಯ ತಪಾಸಣೆ: 35 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ವೀರ್ಯ ವಿಶ್ಲೇಷಣೆ ಮತ್ತು ಹಾರ್ಮೋನ್ ಪರೀಕ್ಷೆ ಸೇರಿದಂತೆ ಫಲವತ್ತತೆಯ ಮೌಲ್ಯಮಾಪನ ಮಾಡಿಸಿಕೊಳ್ಳುವುದನ್ನು ಪರಿಗಣಿಸಬೇಕು.

ಜಾಗೃತಿ ಏಕೆ ಮುಖ್ಯ?

ಫಲವತ್ತತೆ ಕೇವಲ ಮಹಿಳೆಗೆ ಸಂಬಂಧಪಟ್ಟಿಲ್ಲ, ಬದಲಾಗಿ ಇಬ್ಬರಿಗೂ ಜವಾಬ್ದಾರಿಯಿದೆ. ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯ ವಯಸ್ಸಿನೊಂದಿಗೆ ಬದಲಾಗುತ್ತದೆ ಎಂಬುದನ್ನು ಗುರುತಿಸುವ ಮೂಲಕ, ನಾವು  ಜಾಗೃತಿ, ಸಮಯೋಚಿತ ಕ್ರಮಗಳು ಮತ್ತು ಆರೋಗ್ಯಕರ ಫಲವತ್ತತೆಯನ್ನು ಉತ್ತೇಜಿಸಬಹುದು. ಪುರುಷರ ಫಲವತ್ತತೆಯ ಬಗ್ಗೆ ಮಾತನಾಡುವುದನ್ನು ಸಾಮಾನ್ಯಗೊಳಿಸುವ ಸಮಯವಿದು. ಇದು ಪುರುಷತ್ವದ ಸಂಕೇತವಾಗಿ ಅಲ್ಲ, ಆರೋಗ್ಯ ಮತ್ತು ಕುಟುಂಬ ಯೋಜನೆಯ ಪ್ರಮುಖ ಅಂಶವಾಗಿ.

ಪುರುಷ ಫಲವತ್ತತೆ ಇದ್ದಕ್ಕಿದ್ದಂತೆ ಕೊನೆಗೊಳ್ಳದಿರಬಹುದು, ಆದರೆ ಇದು ಸಮಯದೊಂದಿಗೆ ಬದಲಾಗುತ್ತದೆ. ಜೈವಿಕ ವಾಸ್ತವತೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಗೌರವಿಸುವುದು ದಂಪತಿಗಳಿಗೆ ಹೆಚ್ಚಿನ ಸ್ಪಷ್ಟತೆ, ಸನ್ನದ್ಧತೆ ಮತ್ತು ಸಹಾನುಭೂತಿಯೊಂದಿಗೆ ಪೋಷಕರಾಗಲು ಸಹಾಯ ಮಾಡುತ್ತದೆ. ಪೋಷಕರ ಮತ್ತು ಅವರ ಮಕ್ಕಳ ಆರೋಗ್ಯದ ದೃಷ್ಟಿಯಿಂದಲೂ ಇದು ನಿರ್ಣಾಯಕವಾಗಿದೆ.

(ಡಾ. ಮಹೇಶ್ ಕೋರೆಗೋಲ್, ನ್ಯಾಷನಲ್ ಸ್ಟ್ರಾಟಜಿ ಗ್ರೂಪ್ ನಿರ್ದೇಶಕ ಮತ್ತು ಹಿರಿಯ ಕ್ಲಿನಿಕಲ್ ಡೈರೆಕ್ಟರ್ (ಫರ್ಟಿಲಿಟಿ ವಿಶೇಷಜ್ಞ), ನೋವಾ ಐವಿಎಫ್ ಫರ್ಟಿಲಿಟಿ, ಕೋರಮಂಗಲ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.