ADVERTISEMENT

‘ಮ್ಯಾಂಡೂಸ್‌’ ಚಂಡಮಾರುತ | ಥಂಡಿಗೆ ವೈರಾಣು ಜ್ವರದ ಆತಂಕ - ವೈದ್ಯರ ಸಲಹೆ ಏನು?

‘ಮ್ಯಾಂಡೂಸ್‌’ ಚಂಡಮಾರುತದ ಪರಿಣಾಮ ಮಲೆನಾಡಾದ ಬಿಸಿಲೂರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 14 ಡಿಸೆಂಬರ್ 2022, 20:57 IST
Last Updated 14 ಡಿಸೆಂಬರ್ 2022, 20:57 IST
ಡಾ. ಸಲೀಂ
ಡಾ. ಸಲೀಂ   

ಹೊಸಪೇಟೆ (ವಿಜಯನಗರ): ಸತತ ಸುರಿಯುತ್ತಿರುವ ಜಡಿ ಮಳೆಯಿಂದ ವಾತಾವರಣ ಸಂಪೂರ್ಣ ತಂಪಾಗಿದ್ದು, ವೈರಾಣು ಜ್ವರದ ಆತಂಕ ಎದುರಾಗಿದೆ.

ಈ ವರ್ಷ ಜಿಲ್ಲೆಯಾದ್ಯಂತ ಮುಂಗಾರು ಮಳೆ ಅಧಿಕವಾಗಿದೆ. ಹಿಂಗಾರಿನಲ್ಲೂ ಆಗಾಗ ಮಳೆಯಾಗಿದೆ. ಇನ್ನೇನು ಮಳೆಗಾಲ ಮುಗಿದು ಚಳಿಗಾಲ ಆರಂಭವಾಯಿತು, ಮಳೆಯ ಕಿರಿಕಿರಿ ತಪ್ಪಿತು ಎನ್ನುವಷ್ಟರಲ್ಲಿ ‘ಮ್ಯಾಂಡೂಸ್‌’ ಚಂಡಮಾರುತ ಮತ್ತೆ ಮಳೆ ಹೊತ್ತು ತಂದಿದೆ. ದಟ್ಟ ಮಂಜು, ಜಡಿ ಮಳೆ ಹಾಗೂ ಮೈನಡುಗುವ ಚಳಿಯಿಂದ ವೈರಾಣು ಜ್ವರದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆಸ್ಪತ್ರೆಯತ್ತ ಮುಖ ಮಾಡುವಂತಾಗಿದೆ.

ಜಿಲ್ಲೆಯ ಗರಿಷ್ಠ ಉಷ್ಣಾಂಶ ಈಗಲೂ 25ರ ಆಸುಪಾಸಿನಲ್ಲಿದೆ. ಆದರೆ, ಕನಿಷ್ಠ ಉಷ್ಣಾಂಶ 16ರಿಂದ 18 ಡಿಗ್ರಿ ಸೆಲ್ಸಿಯಸ್‌ ನಡುವೆ ಇದೆ. ಉಷ್ಣಾಂಶ ನೋಡಿದರೆ ಅಂಥ ಆತಂಕ ಪಡುವ ವಿಷಯವೇನಲ್ಲ. ಆದರೆ, ಥಂಡಿ ಹೆಚ್ಚಿರುವುದರಿಂದ ವೈರಾಣು ಜ್ವರದೊಂದಿಗೆ ಕೆಮ್ಮು, ನೆಗಡಿ, ಸತತ ಸೀನುವ ಪ್ರಕರಣಗಳು ಹೆಚ್ಚಾಗಿವೆ. ಇದರಿಂದಲೇ ವೈರಾಣು ಜ್ವರ ವೇಗವಾಗಿ ಹರಡುತ್ತಿದೆ.

ADVERTISEMENT

ಅದರಲ್ಲೂ 14 ವರ್ಷದೊಳಗಿನ ಮಕ್ಕಳಿಗೆ ಬೇಗ ಆವರಿಸಿಕೊಳ್ಳುತ್ತಿದೆ. ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಬೇಗ ವೈರಾಣು ಹರಡುತ್ತದೆ. ಮದುವೆ, ಜಾತ್ರೆಗಳಲ್ಲಿ ಸಾರ್ವಜನಿಕರಿಂದ ಬಂದರೆ, ಶಾಲೆಯಲ್ಲಿ ಒಬ್ಬ ಮಗುವಿಗೆ ಬಂದರೆ ಇತರ ಮಕ್ಕಳಿಗೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿಯೇ ಹೆಚ್ಚಾಗಿ ವೈರಾಣು ಜ್ವರ ಕಾಣಿಸಿಕೊಳ್ಳುತ್ತಿದೆ.

ವೈರಾಣು ಜ್ವರ ವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಏಕಾಏಕಿ ಹೆಚ್ಚಳವಾಗಿದೆ. ಮಕ್ಕಳು ಜ್ವರ, ಕೆಮ್ಮು, ನೆಗಡು, ತಲೆನೋವಿನಿಂದ ಬಳಲುತ್ತಿದ್ದಾರೆ. ಜಿಲ್ಲೆಯಾದ್ಯಂತ ಕಾರ್ತಿಕೋತ್ಸವ, ಜಾತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ವೇಗವಾಗಿ ವೈರಾಣು ಜ್ವರ ಹರಡುತ್ತಿದೆ.

ಹಸುಳೆ, ಹಿರಿಯರ ಕಾಳಜಿ ಇರಲಿ:

ತಂಪಾದ ವಾತಾವರಣದಲ್ಲಿ ಹಸುಳೆ ಹಾಗೂ ಹಿರಿಯರ ಆರೈಕೆ ಬಹಳ ಮುಖ್ಯ. ಅವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎನ್ನುತ್ತಾರೆ ವೈದ್ಯರು. ತಿಂಗಳ ಮಗುವಿನಿಂದ ಹಿಡಿದು ಎರಡು ವರ್ಷದೊಳಗಿನ ಮಕ್ಕಳಿಗೆ ಬೇಗ ಸೋಂಕು ಹರಡುತ್ತದೆ. ಹಾಗಾಗಿ ಅವುಗಳಿಗೆ ಬೆಚ್ಚನೆಯ ಉಡುಪು ಹಾಕಿ ಇರಿಸಬೇಕು. ಮಕ್ಕಳು ಓಡಾಡುವ ಸ್ಥಳದಲ್ಲಿ ಸ್ವಚ್ಛತೆಗೆ ಒತ್ತು ಕೊಡಬೇಕು.

ಇನ್ನು, ಅಸ್ತಮಾದಿಂದ ಬಳಲುತ್ತಿರುವ ಹಿರಿಯ ನಾಗರಿಕರು ಹೊರಗೆ ಹೋಗದಿದ್ದರೆ ಉತ್ತಮ. ಮನೆಯಲ್ಲೇ ಬೆಚ್ಚಗೆ ಇರಬೇಕು. ವಾಯು ವಿಹಾರ ಮಾಡುವ ಅಭ್ಯಾಸ ಇದ್ದವರು ಮನೆಯ ಮಹಡಿ ಮೇಲೆ ಅಥವಾ ಮನೆಯ ಮುಂದಿನ ರಸ್ತೆಯಲ್ಲಿ ಅಲ್ಪಸಮಯ ಮಾಡಿದರೆ ಉತ್ತಮ ಎನ್ನುವುದು ವೈದ್ಯರ ಸಲಹೆ.

****

ವೈದ್ಯರ ಸಲಹೆ ಏನು?

‘ವಾತಾವರಣ ಬಹಳ ತಂಪಾಗಿರುವುದರಿಂದ ಕೆಮ್ಮು, ನೆಗಡಿ, ದಮ್ಮು, ಅಸ್ತಮಾ, ಅದರಲ್ಲೂ ವೈರಾಣು ಜ್ವರದ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಅಸ್ತಮಾ, ಉಸಿರಾಟದ ತೊಂದರೆ ಇರುವವರು ಬಿಸಿ ನೀರು ಕುಡಿಯಬೇಕು. ಹೆಚ್ಚು ಬಿಸಿಯಾದ ದ್ರವ ಪದಾರ್ಥ ತೆಗೆದುಕೊಳ್ಳಬೇಕು. ಪ್ರತಿ ಸಲ ಆಹಾರ ಸೇವಿಸಿದಾಗ ಅದು ಬಿಸಿಯಾಗಿರಬೇಕು. ಮಕ್ಕಳ ಆರೈಕೆಯೂ ಬಹಳ ಮುಖ್ಯ. ಅವರಿಗೆ ಬೆಚ್ಚನೆಯ ಉಡುಪು ತೊಡಿಸಬೇಕು. ಕೆಮ್ಮು, ಸೀನು ಇದ್ದವರಿಂದ ಮಕ್ಕಳನ್ನು ದೂರ ಇರಿಸಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಲೀಂ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.