
ಸ್ವಾಸ್ಥ್ಯ ಎಂದರೆ ಅದು ದೈಹಿಕ ಆರೋಗ್ಯ ಮಾತ್ರವಲ್ಲ, ಅದು ಮಾನಸಿಕ, ಭಾವನಾತ್ಮಕ ಆರೋಗ್ಯವೂ ಹೌದು, ಸಾಮಾಜಿಕ ಆರೋಗ್ಯವೂ ಹೌದೂ. ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ - ಎಲ್ಲ ಸ್ತರಗಳಲ್ಲೂ ಸಾಮರಸ್ಯ ಸಾಧಿಸುವುದೇ ನಿಜವಾದ ಸ್ವಾಸ್ಥ್ಯದ ರಹಸ್ಯ.
ಸಮಾಜದಿಂದ ವ್ಯಕ್ತಿ, ವ್ಯಕ್ತಿಯಿಂದ ಸಮಾಜ ಎನ್ನುವುದೇ ಸತ್ಯವಾಗಿದ್ದರೂ, ಅನಾರೋಗ್ಯಕ್ಕೆ ಅದರಲ್ಲೂ ಮಾನಸಿಕ ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿಯನ್ನು ಸಮಾಜ ಹೇಗೆ ಕಾಣುತ್ತದೆ ಎನ್ನುವುದನ್ನು ಸೂಕ್ಮವಾಗಿ ಗಮನಿಸಿದಾಗ ಸಾಮಾಜಿಕ ಸ್ವಾಸ್ಥ್ಯಕ್ಕೂ ವೈಯಕ್ತಿಕ ಸ್ವಾಸ್ಥ್ಯಕ್ಕೂ ಇರುವ ನಂಟನ್ನು ನಾವು ಮರೆತುಬಿಟ್ಟಿರುವುದು ಕಣ್ಣಿಗೆ ರಾಚುತ್ತದೆ. ಮಾನಸಿಕ ಆರೋಗ್ಯದಲ್ಲಿ ಸಮಸ್ಯೆಗಳಿರುವವರನ್ನು ಸಹಾನುಭೂತಿಯಿಂದ ಕಾಣಬೇಕಾದ ಆತ್ಮೀಯರೇ ‘ನಿನ್ನ ತಪ್ಪಿನಿಂದಲೇ, ನೀನು ಮಾಡಿದ / ಮಾಡದ ಯಾವುದೋ ಕೆಲಸದಿಂದಲೇ, ರೂಢಿಸಿಕೊಂಡ ಜೀವನಶೈಲಿ / ಅಭ್ಯಾಸಗಳಿಂದಲೇ ನಿನಗೆ ಈ ಸಮಸ್ಯೆ ಉಂಟಾದದ್ದು’ ಎಂತಲೋ ಅಥವಾ ‘ಇದೆಲ್ಲಾ ನಿನ್ನ ಹಣೆಬರಹ, ವಿಧಿ, ಪಡೆದುಕೊಂಡು ಬಂದಿದ್ದು, ಯಾವುದೋ ಶಾಪ, ದುರದೃಷ್ಟ’ ಎಂಬಂತೆಯೋ ಮಾತನಾಡುತ್ತಾರೆ. ಅಂದರೆ ವ್ಯಕ್ತಿ ಅನುಭವಿಸುತ್ತಿರುವ ಮಾನಸಿಕ ಸಂಕಟಕ್ಕೆ ಆ ವ್ಯಕ್ತಿಯನ್ನೇ ದೂಷಿಸಿ ಮತ್ತಷ್ಟು ಸಂಕಟಕ್ಕೊಳಪಡಿಸುವುದು.
ಮಾನಸಿಕ ಆರೋಗ್ಯ ಸಾಮಾಜಿಕ ಆರೋಗ್ಯಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು. ನಿಜ, ನಮ್ಮ ಸಮಾಜದಲ್ಲಿ ಈ ನಡುವೆ ನಿಧಾನವಾಗಿ ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡುತ್ತಿದೆಯಾದರೂ ಅದು ಸಮಗ್ರವಾಗಿ ಆಗಬೇಕಾದರೆ ನಾವು ಯಾವ ರೀತಿ ಇನ್ನೊಂದು ಜೀವಿಗೆ ಸ್ಪಂದಿಸುತ್ತಿದ್ದೇವೆ ಎನ್ನುವುದನ್ನು ಆಮೂಲಾಗ್ರವಾಗಿ ಒಮ್ಮೆ ಪರೀಕ್ಷಿಸಿಕೊಳ್ಳಬೇಕು. ವ್ಯಕ್ತಿ ತನ್ನೆಲ್ಲಾ ಸಮಸ್ಯೆಗಳಿಗೆ, ನೋವುಗಳಿಗೆ ಸಮಾಜದ ಕಡೆಗೇ ಬೆರಳು ಮಾಡಿ ತೋರಿಸಿ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಹುದು ಎನ್ನುವುದು ಇಲ್ಲಿನ ತಾತ್ಪರ್ಯವಲ್ಲ. ಖಂಡಿತವಾಗಿಯೂ ವ್ಯಕ್ತಿ ತನ್ನ ಪ್ರಯತ್ನದಿಂದ ತನ್ನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಸಾಧ್ಯವಿದೆಯಾದರೂ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕೇವಲ ವ್ಯಕ್ತಿಯೇ ಕಾರಣ ಎನ್ನುವುದು ಅರ್ಧಸತ್ಯ ಮಾತ್ರ. ಮಾನಸಿಕ ಆರೋಗ್ಯ ಎನ್ನುವುದು ದೈಹಿಕ, ಕೌಟುಂಬಿಕ, ಪಾರಿಸರಿಕ, ಸಾಂದರ್ಭಿಕ -ಎಲ್ಲ ಅಂಶಗಳ ಒಟ್ಟು ಉತ್ಪನ್ನ.
ಸೋಲು, ಅವಮಾನ, ನಿರಾಸೆ ಎಲ್ಲರ ಜೀವನದಲ್ಲೂ ಇದೆಯಾದರೂ ಅದನ್ನು ಕೆಲವರು ಮಾತ್ರ ಆತ್ಮಹತ್ಯೆಯ ಮಟ್ಟಕ್ಕೆ ತೆಗೆದುಕೊಂಡುಹೋಗುವುದು ಯಾಕೆ? – ಎಂದು ಯೋಚಿಸುವ ಮೊದಲು ವೈಯಕ್ತಿಕವಾಗಿ ಮಾಡಿಕೊಂಡ ತಪ್ಪುಗಳ ಬಗೆಗೆ, ಅನಿರೀಕ್ಷಿತವಾಗಿ ಬಂದೊದಗಿದೆ ಕಷ್ಟಗಳ ಬಗೆಗೆ, ವಿಫಲತೆಯ ಬಗೆಗೆ ಆ ವ್ಯಕ್ತಿಯ ಸುತ್ತಲಿನ ಸಮಾಜ ಯಾವ ಬಗೆಯ ಕಥನವನ್ನು ಕಟ್ಟಿಕೊಂಡಿದೆ, ಆ ವ್ಯಕ್ತಿ ಅದರಿಂದ ಎಷ್ಟು ಪ್ರಭಾವಿತನಾಗಿದ್ದಾನೆ ಎನ್ನುವುದನ್ನು ಯೋಚಿಸಬೇಕು. ಆದರೆ ಅದಕ್ಕೂ ಮೊದಲು ವ್ಯಕ್ತಿಯ ಸಣ್ಣಪುಟ್ಟ ಸಾಧನೆಗಳನ್ನು, ಎಷ್ಟೇ ಸಾಮಾನ್ಯದ್ದಾದರೂ ತೆಗೆದುಕೊಂಡ ದಿಟ್ಟ ಸಾತ್ವಿಕ ನಿರ್ಧಾರಗಳನ್ನು ಕಂಡು ಮೆಚ್ಚುಗೆಯಿಂದ, ಅಭಿಮಾನದಿಂದ ಮಾತನಾಡುವ ಕುಟುಂಬ, ಆತ್ಮೀಯರು ಆತನಿಗಿದ್ದಾರೆಯೇ, ಸಂಕಟಗಳಿಗೆ ಸ್ಪಂದಿಸುವ ಬಂಧುಗಳು, ಸ್ನೇಹಿತರು, ನೆರೆಹೊರೆ, ಸಹೋದ್ಯೋಗಿಗಳು ಇದ್ದಾರೆಯೇ ಎನ್ನುವುದನ್ನು ಗಮನಿಸಬೇಕು.
ಆತ್ಮಹತ್ಯೆಯನ್ನು ತಡೆಗಟ್ಟುವುದರಲ್ಲಿ ವ್ಯಕ್ತಿಯ ಸುತ್ತಲಿನ ಸಮುದಾಯದ ಪ್ರೀತಿ, ಸಹಾನುಭೂತಿ, ಬೆಂಬಲದ ಪಾತ್ರ ಹಿರಿದು. ಆದರೆ ನಮ್ಮ ಸಮಾಜದಲ್ಲಿ ಆತ್ಮಹತ್ಯೆಯ ಕುರಿತು ಮನಸುಬಿಚ್ಚಿ ಮಾತನಾಡಲೂ ಜನ ಹಿಂಜರಿಯುತ್ತಾರೆ. ಆತ್ಮಹತ್ಯೆ ಮಹಾಪಾಪ ಎಂದು ಕೆಲವರು ಜರಿದರೆ, ಮತ್ತೆ ಕೆಲವರು ಪ್ರಾಣ ಕಳೆದುಕೊಂಡವರನ್ನು ಹೇಡಿ ಎಂದು ಚುಚ್ಚುತ್ತಾರೆ; ಮತ್ತೆ ಕೆಲವರಂತೂ ಪ್ರಾಣದ ಮೇಲೆ ಆಸೆಯನ್ನೇ ತೊರೆಯುವಷ್ಟು ದುಃಖವನ್ನು ಒಂದು ಜೀವಿ ಅನುಭವಿಸಿತಲ್ಲಾ ಎನ್ನುವ ಖೇದಕ್ಕಿಂತ ಹೆಚ್ಚಾಗಿ ಆ ವ್ಯಕ್ತಿಯ ವ್ಯಕ್ತಿತ್ವದ ವಿಶ್ಲೇಷಣೆ, ಕುಟುಂಬ ವಿಶ್ಲೇಷಣೆ, ಆ ವ್ಯಕ್ತಿಯ ಸಮಸ್ಯೆಗಳಿಗೆ ಕೊಡಬಹುದಾದ ಪರಿಹಾರಗಳು ಮುಂತಾದವುಗಳ ಚರ್ಚೆಯಲ್ಲಿ ತೊಡಗುತ್ತಾರೆ.
ಇನ್ನು ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಆತ್ಮಹತ್ಯೆಯ ಬಗೆಗೆ ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದು ಎಷ್ಟು ಕುಟುಂಬಗಳಲ್ಲಿ ಸಾಧ್ಯ? ಆತ್ಮಹತ್ಯಾ ಪ್ರವೃತ್ತಿಯ ಬಗೆಗೆ ಎಷ್ಟು ಪೋಷಕರು ತಮ್ಮ ಮಕ್ಕಳೊಂದಿಗೆ ಭಯವಿಲ್ಲದೇ ಮಾತನಾಡಬಲ್ಲರು? ಆತ್ಮಹತ್ಯೆಗೆ ಪ್ರಯತ್ನಪಟ್ಟು ವಿಫಲರಾದವರೊಂದಿಗೆ ಮುಜುಗರ ಉಂಟುಮಾಡದ ಶುದ್ಧ ಅಂತಃಕರಣದ ಸಹಾನುಭೂತಿಯ ಸ್ಪಂದನ ಎಷ್ಟು ಜನರಿಗೆ ಸಾಧ್ಯ?
ಈ ಬದುಕು ಅನೇಕ ಸಾಧ್ಯತೆಗಳನ್ನೂ, ಅಚ್ಚರಿಯ ತಿರುವುಗಳನ್ನೂ ಒಳಗೊಂಡಿದೆ, ಬದುಕಿದ್ದರೆ ಇಂದಲ್ಲಾ ನಾಳೆ ಬದುಕು ಬದಲಾಗುವುದು, ಸತ್ತರೆ ನಮ್ಮೊಟ್ಟಿಗೆ ಬದುಕಿನ ಎಲ್ಲಾ ಸಾಧ್ಯತೆಗಳೂ ಸತ್ತುಹೋಗುತ್ತವೆ. ಬದುಕಿನ ಬದಲಾವಣೆಯ ಗುಣದ ಬಗೆಗೆ ನಂಬಿಕೆಯಿರಲಿ.
ಬದುಕಿದ್ದಾಗ ಸಿಗದ ಪ್ರೀತಿ, ಸಹಾನುಭೂತಿ, ಮೆಚ್ಚುಗೆ, ಗೆಲುವು ಯಾವುದೂ ಸತ್ತ ನಂತರವೂ ಸಿಗದು. ಸತ್ತ ನಂತರ ನಮ್ಮ ಅಸ್ತಿತ್ವವೇನಿದ್ದರೂ ಇತರರ ನೆನಪಿನಲ್ಲಿ ಅದೂ ಅವರು ಮರೆಯುವವರೆಗೆ ಮಾತ್ರ. ಯಾರ ಬದುಕಿಗೂ ನಾವು ಅನಿವಾರ್ಯವಲ್ಲ, ಯಾರ ಬದುಕೂ ನಾವಿಲ್ಲದೇ ನಿಂತುಹೋಗುವುದಿಲ್ಲ. ಅದರ ಅರ್ಥ ನಮ್ಮ ಬದುಕಿನಲ್ಲಿ ಅತಿ ಪ್ರಮುಖ ವ್ಯಕ್ತಿ ನಾವೇ.
ಆತ್ಮಹತ್ಯೆಯನ್ನು ಬೆದರಿಕೆಯ ಅಸ್ತ್ರವಾಗಿ ಎಂದೂ ಉಪಯೋಗಿಸದಿರಿ. ‘ಅವರು ಆತ್ಮಹತ್ಯೆಯನ್ನು ಮಾಡಿಕೊಂಡುಬಿಟ್ಟರೆ’ ಎಂಬ ಹೆದರಿಕೆಯ ನೆರಳಲ್ಲಿ ಎಲ್ಲಾ ಬಾಂಧವ್ಯಗಳೂ ಬಾಡಿಹೋಗುತ್ತವೆ.
ಪರೀಕ್ಷೆಯಲ್ಲಿ ಫೇಲಾಗುವುದು, ಆರ್ಥಿಕ ನಷ್ಟಗಳು, ನಿರುದ್ಯೋಗ, ಒಂಟಿತನ, ಅವಮಾನ, ಪಾಪಪ್ರಜ್ಞೆ, ಬದುಕಿನಲ್ಲಿ ನಿರರ್ಥಕತೆಯ ಭಾವ ಎಲ್ಲವೂ ಸಮಸ್ಯೆಗಳು ಮಾತ್ರ; ಅವುಗಳಿಗೆ ಪರಿಹಾರವಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ಸಂದರ್ಭಕ್ಕೆ ತಕ್ಕಂತೆ ವಿವೇಕದ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೌಶಲಗಳನ್ನು ಬೆಳೆಸಿಕೊಂಡರೆ ಸಾಕು, ಸಮಸ್ಯೆಗಳಿಗೆ ಅತಿ ಭಾವುಕಗೊಂಡು ಸತ್ತೇ ಹೋಗುವ ಅವಶ್ಯಕತೆಯಿಲ್ಲ.
ಬದುಕಿಗೆ ಯಾವ ಆತ್ಯಂತಿಕ ಅರ್ಥ, ಉದ್ದೇಶ ಇದೆಯೋ ಇಲ್ಲವೋ ಯಾರಿಗೂ ಗೊತ್ತಿಲ್ಲ; ಅದೊಂದು ಪಕ್ಕಕ್ಕಿರಲಿ; ಆ ಮಂಥನ ನಿರಂತರವಾಗಿರಲಿ. ಆದರೆ ಪ್ರತಿದಿನವನ್ನೂ ಅರ್ಥಪೂರ್ಣವಾಗಿ ಕಳೆಯುವುದಂತೂ ಖಂಡಿತ ಸಾಧ್ಯವಿದೆ. ಈ ದಿನವನ್ನು ಪ್ರೀತಿ ಮತ್ತು ಸಂತಸ ತುಂಬಿರುವಂತೆ ಹೇಗೆ ಕಳೆಯುವುದು ಎನ್ನುವುದರ ಕಡೆಗಷ್ಟೇ ನಿಮ್ಮ ಲಕ್ಷ್ಯವಿರಲಿ.
ಬದುಕಿನ ಬಗೆಗೆ ಭರವಸೆ ಕಳೆದುಹೋಗುತ್ತಿದೆ ಎನಿಸುತ್ತಿದ್ದರೆ, ನಾಳೆ ಎನ್ನುವುದು ಉತ್ಸಾಹ ಕುತೂಹಲಗಳನ್ನು ಉಂಟುಮಾಡದಿದ್ದರೆ ತಡಮಾಡದೆ ಆತ್ಮೀಯರೊಂದಿಗೆ ಹಂಚಿಕೊಳ್ಳಿ. ಬದುಕಿನ ಪಯಣದಲ್ಲಿ ನಾನು ಒಂಟಿಯಲ್ಲ ಎನ್ನುವ ಭಾವ ಬದುಕಿಗೆ ಅತ್ಯಗತ್ಯ. ಭೂತಾಕಾರವಾಗಿ ಕಾಡುತ್ತಿರುವ ಸಮಸ್ಯೆ ಆತ್ಮೀಯರೊಟ್ಟಿಗೆ ಹಂಚಿಕೊಂಡ ಕೂಡಲೇ ಕ್ಷುಲ್ಲಕವಾಗಿ ತೋರುವ ಸೋಜಿಗವನ್ನನುಭವಿಸಿ.
ಮಾನಸಿಕ ಕ್ಷೋಭೆ ನಮ್ಮ ನೈತಿಕ ಧೈರ್ಯವನ್ನೂ ನಿಲುವನ್ನೂ ಟೊಳ್ಳಾಗಿಸುತ್ತದೆ. ನಾವು ನೋಡುವ ನೋಟವನ್ನೇ ಬದಲಾಯಿಸಿಬಿಡುತ್ತದೆ. ಮಾನಸಿಕ ಅನಾರೋಗ್ಯ ವ್ಯಕ್ತಿತ್ವದ ದೋಷವಲ್ಲ, ಅದು ಮನುಷ್ಯ ಸಹಜ; ಅದಕ್ಕೆ ಅವಮಾನ ಪಡಬೇಕಾದ್ದು ಇಲ್ಲ. ಯಾವ ಹಿಂಜರಿಕೆ, ಅಳುಕೂ ಇಲ್ಲದೆ ಧೈರ್ಯವಾಗಿ ನುರಿತ ಮನೋವೈದ್ಯರನ್ನು, ಮನೋಚಿಕಿತ್ಸಕರನ್ನು ಕಂಡು ಅವರ ಸಲಹೆಯಂತೆ ನಡೆದುಕೊಂಡರೆ ಕೆಲವೇ ತಿಂಗಳುಗಳಲ್ಲಿ ಬದುಕಿನ ಸಂತಸ ಮರಳಿ ಬರುವುದು ಖಂಡಿತ.
ನಮ್ಮ ಬಾಳಿನ ಮಿತಿಗಳನ್ನು ಹರ್ಷದಿಂದ ಸ್ವೀಕರಿಸೋಣ. ಬದುಕು ಕೊಟ್ಟ ನಮ್ಮ ಪಾಲಿನ ಸಿಹಿಯನ್ನು ಬೇರೆಯವರೊಂದಿಗೆ ಹೋಲಿಸದೆ ತೃಪ್ತಿಯಿಂದ ಸವಿಯೋಣ. ಅದೇ ನಮ್ಮನ್ನು ಎಲ್ಲ ಬಗೆಯ ಸಾವಿನಿಂದ ಮುಕ್ತಗೊಳಿಸುವ ಸಂಜೀವಿನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.