
ಕಿಡ್ನಿ
ಬೆಂಗಳೂರು: ಬೆಂಗಳೂರಿನ ಯಶವಂತಪುರ ಸ್ಪರ್ಶ್ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ರೊಬೊಟಿಕ್ ತಂತ್ರಜ್ಞಾನ ಬಳಸಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು 75 ವರ್ಷದ ತಾಯಿ ಮಗನಿಗೆ ಮರು ಜೀವ ಮತ್ತು ಜೀವನವನ್ನು ಒದಗಿಸಿಕೊಟ್ಟಿದ್ದಾರೆ.
ತಾಯಿ ವಯೋವೃದ್ಧರಾಗಿದ್ದರೂ ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ ಅವರ ಮೂತ್ರಪಿಂಡವನ್ನು ತೆಗೆದು ಮಗನಿಗೆ ಕಸಿ ಮಾಡುವಲ್ಲಿ ತಜ್ಞ ವೈದ್ಯರು ಯಶಸ್ವಿಯಾಗಿದ್ದು ನಗರದ ವೈದ್ಯ ವಿಜ್ಞಾನ ಸಾಧನೆಯಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ.
38 ವರ್ಷದ ಯುವಕ ಕಳೆದೆರಡು ವರ್ಷದ ಹಿಂದೆ ದೀರ್ಘ ಕಾಲದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಕಿಡ್ನಿ ಚಿಕ್ಕದಾಗಿದ್ದು ಬಯಾಪ್ಸಿ ಮಾಡುವುದು ಕಾರ್ಯಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಜೊತೆಗೆ ದೀರ್ಘ ಕಾಲದ ಡಯಾಲಿಸಿಸ್ ತಪ್ಪಿಸುವ ಸಲುವಾಗಿ ಅವರು ಕಿಡ್ನಿ ಕಸಿಗೆ ನಿರ್ಧರಿಸಿದ್ದರು.
ಸ್ಪರ್ಶ್‌ಗೆ ಬರುವುದಕ್ಕೂ ಮುನ್ನ ಹಲವಾರು ತಜ್ಞರ ಸಲಹೆ ಪಡೆದಿದ್ದ ಅವರು ಯಶವಂತಪುರ ಆಸ್ಪತ್ರೆಯಲ್ಲಿ ಹಿರಿಯ ಸಮಾಲೋಚಕ ಮೂತ್ರಪಿಂಡ ರೋಗಗಳ ತಜ್ಞ ವೈದ್ಯ ಮತ್ತು ಕಸಿ ವೈದ್ಯ ಡಾ.ಅರುಣ್ ಕುಮಾರ್ ಅವರಲ್ಲಿ ವಿವರವಾದ ಪರೀಕ್ಷೆಗೊಳಪಟ್ಟಾಗ ಕಿಡ್ನಿ ಕಸಿ ಮಾಡಿಸಿಕೊಳ್ಳುವುದು ಉತ್ತಮ ಎಂಬ ನಿರ್ಧಾರಕ್ಕೆ ಬರಲಾಯಿತು.
ಆದರೆ ಕಿಡ್ನಿ ದಾನ ಮಾಡಲು ಮುಂದೆ ಬಂದಿದ್ದ ಅವರ ತಾಯಿಯ ವಯಸ್ಸು 75 ಆಗಿದ್ದರಿಂದ ಅವರ ಮೂತ್ರಪಿಂಡವನ್ನು ತೆಗೆಯುವುದು ವೈದ್ಯರಿಗೆ ಬಹುದೊಡ್ಡ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ದಾನಿ ಕೂಡ ಸುರಕ್ಷಿತವಾಗಿರುವ ಜೊತೆಗೆ ಶಸ್ತ್ರಕ್ರಿಯೆಯು ಹೆಚ್ಚು ಘಾಸಿ ಮಾಡದ ರೊಬೊಟಿಕ್ ತಂತ್ರಜ್ಞಾನ ಬಳಕೆ ಮಾಡಲು ನಿರ್ಧರಿಸಲಾಯಿತು ಎಂದು ಮೂತ್ರಪಿಂಡ ರೋಗಗಳ ಹಿರಿಯ ಸಮಾಲೋಚಕ ಮತ್ತು ಕಸಿ ವೈದ್ಯ ಡಾ,ಪ್ರಶಾಂತ್ ಗಣೇಶ್ ತಿಳಿಸಿದರು.
ಇದು ಶಸ್ತ್ರ ಚಿಕಿತ್ಸೆ ಬಳಿಕವೂ ವಯೋವೃದ್ಧ ತಾಯಿಗೆ ಹೆಚ್ಚು ಅನಾನುಕೂಲವಾಗದೇ ಶೀಘ್ರ ಸಾಮಾನ್ಯ ಸ್ಥಿತಿಗೆ ಮರಳಲು ಸಹಾಯವಾಯಿತು ಎಂದು ಅಭಿಪ್ರಾಯಪಟ್ಟ ಅವರು ಸ್ಪರ್ಶ್‌ನ ವಿವಿಧ ವಿಭಾಗಗಳ ವಿಶೇಷ ತಜ್ಞರ ಸಮನ್ವಯದಿಂದ ಅತ್ಯಂತ ಅಪರೂಪವೆನಿಸುವ ಈ ಕಸಿ ಮಾಡುವಲ್ಲಿ ಯಶಸ್ಸು ಸಾಧಿಸಲು ಕಾರಣವಾಯಿತು ಎಂದು ವಿವರಿಸಿದರು.
ಡಾ.ಅಶ್ವಿನ್ ವೈದ್ಯ ಹಾಗೂ ಅರಿವಳಿಕೆ ತಜ್ಞರಾದ ಡಾ. ಜ್ಯೋತಿ,ಡಾ.ಜಾನ್‌ಪಾಲ್ ಮೊದಲಾದವರು ಈ ಕಿಡ್ನಿ ಕಸಿ ತಂಡದಲ್ಲಿದ್ದರು. ಎಸ್‌ಎಸ್ ಸ್ಪರ್ಶ್ ಆರ್‌ಆರ್‌ನಗರ ಶಾಖೆಯ ಡಾ.ರವೀಂದ್ರ ಅವರು ಕಸಿ ಸಂದರ್ಭ ವಿಶೇಷ ನೆರವು ನೀಡಿದ್ದು, ಇದೀಗ ತಾಯಿ ಮತ್ತು ಮಗ ಇಬ್ಬರೂ ಆರೋಗ್ಯದಿಂದಿದ್ದು ಕಿಡ್ನಿ ಕಸಿ ಮಾಡಿಕೊಂಡ ರೋಗಿ ಡಯಾಲಿಸಿಸ್‌ನಿಂದ ದೂರ ಉಳಿಯುವಂತಾಗಿದೆ.
ಅಂಗಾಂಗ ಕಸಿಯಲ್ಲಿ ರೊಬೊಟಿಕ್ ತಂತ್ರಜ್ಞಾನದ ಬೆಳವಣಿಗೆಗೆ ಈ ಶಸ್ತ್ರಚಿಕಿತ್ಸೆ ಉದಾಹರಣೆಯಾಗಿದೆ. ಮೂತ್ರಪಿಂಡ, ಮೂತ್ರಕೋಶ, ಅರಿವಳಿಕೆ ಹಾಗೂ ಇನ್ನಿತರ ವಿಭಾಗಗಳ ವೈದ್ಯರು ಹಾಗೂ ಇತರರ ಸಮನ್ವಯದೊಂದಿಗೆ ವಯೋವೃದ್ಧ ದಾನಿಗಳಿಂದ ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ ಅಂಗಾಂಗ ಪಡೆದು ಅತ್ಯಂತ ಸವಾಲಿನ ಕಸಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಬಹುದೆಂಬುದನ್ನು ಸಾಬೀತು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.