ADVERTISEMENT

Pathology: ‘ಪೆಥಾಲಜಿ’ ಎಂಬ ಮಾಯಾಲೋಕ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 0:30 IST
Last Updated 4 ನವೆಂಬರ್ 2025, 0:30 IST
   

‘ಡಾಕ್ಟ್ರೇ, ರಕ್ತಪರೀಕ್ಷೆ ರಿಪೋರ್ಟ್ ಬಂತಾ?’
‘ಬಂತಮ್ಮ, ಮಗೂಗೆ ಸೋಂಕು ಇರುವುದು ಖಚಿತವಾಯ್ತು. ಆದ್ರೆ ಚಿಂತಿಸಬೇಡ, ಮಾತ್ರೆ ಬರೆದು ಕೊಡ್ತೀನಿ ಗುಣವಾಗುತ್ತೆ’.

‘ಆಪರೇಷನಿಂದ ಚೇತರಿಸಿಕೊಂಡಿದ್ದೇನೆ ಡಾಕ್ಟ್ರೇ; ಗಡ್ಡೆಯ ಲ್ಯಾಬ್ ರಿಪೋರ್ಟ್ ಏನನ್ನುತ್ತೆ?’

‘ನಿಮ್ಮ ಗರ್ಭಾಶಯದ ಗಡ್ಡೆ ಕ್ಯಾನ್ಸರ್ ಅಲ್ಲ ಅಂತಾ ರಿಪೋರ್ಟ್ ಬಂದಿದೆ, ಮುಂದೇನೂ ತೊಂದರೆ ಇಲ್ಲ.’

ADVERTISEMENT

ಇಂಥ ಸಂಭಾಷಣೆಗಳನ್ನ ನಾವು ಅನೇಕ ಬಾರಿ ಕೇಳಿರುತ್ತೇವೆ; ಅಥವಾ ಇಂಥ ಅನುಭವ ನಮಗೇ ಆಗಿರುತ್ತದೆ. ಈ ರಿಪೋರ್ಟ್ ಎಂದರೇನು, ಚಿಕಿತ್ಸೆಯ ದಿಕ್ಕನ್ನು ನಿರ್ದೇಶಿಸುವ ಈ ರಿಪೋರ್ಟುಗಳ ಹಿಂದಿನ ಶಕ್ತಿಯೇನು?

ಜೀವನದಲ್ಲಿ ಒಂದಲ್ಲ ಒಂದು ದಿನ ಆಸ್ಪತ್ರೆಗೆ ಹೋಗಲೇಬೇಕಾದ ಪರಿಸ್ಥಿತಿಗಳು ಅನೇಕರಿಗೆ ಬಂದೇ ಬಂದಿರುತ್ತವೆ. ಹಾಗಾಗಿ ಎಷ್ಟೋ ಜನರು ಮೆಡಿಸಿನ್, ಸರ್ಜರಿ, ಸ್ತ್ರೀ-ರೋಗ ಅಥವಾ ಚಿಕ್ಕಮಕ್ಕಳ ವಿಭಾಗಗಳನ್ನು ಆಸ್ಪತ್ರೆಯಲ್ಲಿ ನೋಡಿರುತ್ತಾರೆ. ಮೆಡಿಕಲ್ ಕಾಲೇಜಿನ ಆಸ್ಪತ್ರೆಗಳಲ್ಲಂತೂ ಸುಮಾರು ಇಪ್ಪತ್ತರಿಂದ ಮೂವತ್ತು ವಿಭಾಗಗಳಿರುತ್ತವೆ. ಆಸ್ಪತ್ರೆಯ ಇನ್ನೂ ಕೆಲವು ವಿಭಾಗಗಳು ಸಾಮಾನ್ಯವಾಗಿ ಜನರ ಕಣ್ಣಿಗೆ ಬೀಳದಿದ್ದರೂ ಅವು ತೆರೆಮರೆಯಲ್ಲಿಯೇ ರೋಗಿಗಳ ಕಾಯಿಲೆಗಳನ್ನು ಕಂಡುಹಿಡಿಯಲು, ಸೂಕ್ತ ಚಿಕಿತ್ಸೆಯನ್ನು ನೀಡಲು ಶ್ರಮಿಸುತ್ತವೆ. ಉದಾಹರಣೆಗೆ ಬಯೋ-ಕೆಮಿಸ್ಟ್ರಿ, ಪೆಥಾಲಜಿ ಮತ್ತು ಮೈಕ್ರೋ ಬಯಾಲಜಿ ಎಂಬ ವಿಭಾಗಗಳು.

‘ರೋಗಶಾಸ್ತ್ರ’ ಅಥವಾ ‘ರೋಗಲಕ್ಷಣಶಾಸ್ತ್ರ’ ಎಂದು ಕರೆಯಲ್ಪಡುವ ಪೆಥಾಲಜಿ ವಿಭಾಗವು ವೈದ್ಯಕೀಯರಂಗದಲ್ಲಿ ಒಂದು ಮುಖ್ಯ ಶಾಖೆಯಾಗಿದೆ. ಹೆಸರೇ ಹೇಳುವಂತೆ ಇದು ರೋಗವನ್ನು ಪತ್ತೆ ಮಾಡಲು ವೈದ್ಯರಿಗೆ ಸಹಾಯಮಾಡುವ ಒಂದು ಪ್ರಯೋಗಾಲಯ. ಫಿಸಿಷಿಯನ್, ಸರ್ಜನ್ ಎನ್ನುವಂತೆ ಈ ವಿಭಾಗದ ತಜ್ಞವೈದ್ಯರು ‘ಪೆಥಾಲಜಿಸ್ಟ್’ ಅಥವಾ ‘ರೋಗಶಾಸ್ತ್ರಜ್ಞ’ರು ಎಂದೇ ಹೆಸರುವಾಸಿಯಾಗಿದ್ದಾರೆ. ಈ ಪೆಥಾಲಜಿ ವಿಭಾಗವೇ ಈ ರಿಪೋರ್ಟುಗಳನ್ನು ತಯಾರು ಮಾಡುವುದು. ಇದು ರೋಗಿಯ ಕಾಯಿಲೆಯನ್ನು ಗುರುತಿಸಿ ಮುಂದಿನ ಚಿಕಿತ್ಸೆಗೆ ಸಹಾಯ ಮಾಡುತ್ತದೆ.

ವೈದ್ಯಕೀಯ ವಿದ್ಯಾಲಯಗಳು ಸೇರಿದಂತೆ ಅನೇಕ ದೊಡ್ಡ ಆಸ್ಪತ್ರೆಗಳಲ್ಲಿ ಪೆಥಾಲಜಿ ಪ್ರಯೋಗಾಲಯ ವಿಭಾಗವು ಒಂದು ಬಹುಮುಖ್ಯ ಅಂಗವಾಗಿರುತ್ತದೆ. ವೈದ್ಯರು ಅನೇಕ ಬಾರಿ ನಿಮ್ಮ ರಕ್ತದ ಪರೀಕ್ಷೆಯಾಗಬೇಕು, ಮಲ-ಮೂತ್ರಗಳ ಪರೀಕ್ಷೆಯಾಗಬೇಕು ಅಥವಾ ದೇಹದಲ್ಲಿರುವ ಗಡ್ಡೆಯ, ದುರ್ಮಾಂಸದ ಪರೀಕ್ಷೆಯಾಗಬೇಕು ಎಂದಾಗ ರೋಗಿಗಳು ಭೇಟಿ ನೀಡುವುದು ಈ ಪ್ರಯೋಗಾಲಯಕ್ಕೇ. ರೋಗಿಯ ರಕ್ತ-ಮಲ-ಮೂತ್ರಾದಿಗಳನ್ನು ಪರೀಕ್ಷಿಸಿ ಅವುಗಳಲ್ಲೇನಾದರೂ ನ್ಯೂನತೆಗಳಿವೆಯೇ, ಇದ್ದರೆ ಅವುಗಳನ್ನು ವಿಂಗಡಿಸಿ ರೋಗ ಯಾವ ಹಂತದಲ್ಲಿರಬಹುದು ಎಂಬ ರಿಪೋರ್ಟನ್ನು ಕೊಡುವುದೇ ಈ ವಿಭಾಗದ ಮುಖ್ಯ ಕೆಲಸ. ಈ ರಿಪೋರ್ಟುಗಳನ್ನು ಆಧರಿಸಿ ವೈದ್ಯರು ಮುಂದಿನ ಚಿಕಿತ್ಸೆಯನ್ನು ರೋಗಿಗೆ ಸೂಚಿಸುತ್ತಾರೆ. ತಜ್ಞವೈದ್ಯರ ಜೊತೆ ಲ್ಯಾಬ್ ತಂತ್ರಜ್ಞರೂ ಕೂಡ ಇಲ್ಲಿ ರೋಗಪತ್ತೆಗೆ ಸಹಾಯ ಮಾಡುತ್ತಾರೆ. ವೈದ್ಯಕೀಯ ತಂತ್ರಜ್ಞಾನ ಮುಂದುವರೆದಂತೆ ಪೆಥಾಲಜಿ ವಿಭಾಗವೂ ಕೂಡ ಅಭಿವೃದ್ಧಿ ಹೊಂದಿದ್ದು ಈಗ ಅತ್ಯಾಧುನಿಕ ಉಪಕರಣಗಳು ರೋಗಿಯ ರಕ್ತ-ಮಲ-ಮೂತ್ರಗಳ ಫಲಿತಾಂಶವನ್ನು ನಿಖರವಾಗಿ ಹೇಳುತ್ತವೆ.

ಆಟೋ–ಅನಾಲೈಸರ್‌ನಂತಹ ಸ್ವಯಂಚಾಲಿತ ಯಂತ್ರಗಳನ್ನು ಬಳಸಿ ರಿಪೋರ್ಟುಗಳನ್ನು ನೀಡಬಹುದಾದರೂ ಪೆಥಾಲಜಿ ಪ್ರಯೋಗಾಲಯದಲ್ಲಿರುವ ಸೂಕ್ಷ್ಮದರ್ಶಕ ಯಂತ್ರ ರೋಗಶಾಸ್ತ್ರಜ್ಞರ ಬಹುಮುಖ್ಯ ಅಸ್ತ್ರವೆನ್ನಬಹುದು. ರೋಗಗ್ರಸ್ತ ಅಂಗಾಂಶವನ್ನು ಈ ಸೂಕ್ಷ್ಮದರ್ಶಕ ಯಂತ್ರದಲ್ಲಿ ನೋಡಿದರೆ ಒಂದು ಅದ್ಭುತ ಮಾಯಾಲೋಕವೇ ತೆರೆದುಕೊಳ್ಳುತ್ತದೆ. ವಿವಿಧ ಜೀವಕಣಗಳ ಚಿತ್ತಾರ ನಮ್ಮ ಊಹೆಗೂ ನಿಲುಕದ ರಂಗೋಲಿಯಂತೆ ಇಲ್ಲಿ ಕಾಣುತ್ತದೆ. ಬರಿಗಣ್ಣಿಗೆ ಕಾಣಿಸದ ಅನೇಕ ಮಿಣಿಜೀವಿಗಳು, ಸತ್ತ ಮತ್ತು ರೋಗಗ್ರಸ್ತ ಜೀವಕಣಗಳು ಇಲ್ಲಿ ಸ್ಫುಟವಾಗಿ ಕಾಣುತ್ತವೆ. ಈ ಜೀವಕಣಗಳ ರಚನೆ, ವೈವಿಧ್ಯ ಹಾಗೂ ಸಂಖ್ಯೆಗಳನ್ನು ಆಧರಿಸಿ ರೋಗಶಾಸ್ತ್ರಜ್ಞರು ಕಾಯಿಲೆಯನ್ನು ನಿರ್ಧರಿಸುತ್ತಾರೆ.

ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಿದ ತರಹೇವಾರಿ ಗಡ್ಡೆ-ಗ್ರಂಥಿಗಳನ್ನು ರೋಗಶಾಸ್ತ್ರಜ್ಞರು ಸೂಕ್ಷ್ಮದರ್ಶಕದಡಿ ಯಲ್ಲಿ ನೋಡಿ ಅವು ಕ್ಯಾನ್ಸರ್ ಇರಬಹುದೇ, ಇದ್ದರೆ ಯಾವ ಥರದ ಕ್ಯಾನ್ಸರ್ ಎಂದು ನಿಖರವಾಗಿ ಹೇಳಬಲ್ಲರು. ಮುಂದಿನ ಹಂತದ ಚಿಕಿತ್ಸೆಗೆ ಇಂಥ ರಿಪೋರ್ಟ್ ತುಂಬ ಅವಶ್ಯ. ಕೆಲವು ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯು ನಡೆಯುತ್ತಿರುವಾಗಲೇ ಗಡ್ಡೆಯ ತುಣುಕೊಂದನ್ನು ಫ್ರೋಜನ್ ಸೆಕ್ಷನ್ ತಂತ್ರಜ್ಞಾನದಿಂದ ಪರೀಕ್ಷಿಸಿ ಕೆಲವೇ ನಿಮಿಷಗಳಲ್ಲಿ ರಿಪೋರ್ಟ್ ನೀಡುವುದರಿಂದ ಶಸ್ತ್ರಚಿಕಿತ್ಸೆ ಯಾವ ಹಂತದವರೆಗೆ ಮುಂದುವರಿಸಬಹುದು ಎಂದು ಶಸ್ತ್ರಚಿಕಿತ್ಸಕರು ನಿರ್ಧರಿಸಲು ಅನುಕೂಲವಾಗುತ್ತದೆ. ಇದೇ ರೀತಿ ರಕ್ತದ ಕಾಯಿಲೆಗಳು, ರಕ್ತದ ಕ್ಯಾನ್ಸರ್ ಇತ್ಯಾದಿಗಳ ಪತ್ತೆಗೂ ಈ ಸೂಕ್ಷ್ಮದರ್ಶಕವೇ ಬೇಕು.

ರೋಗಶಾಸ್ತ್ರಜ್ಞರು ಅಲ್ಟ್ರಾಸೌಂಡ್ ತಂತ್ರಜ್ಞಾನವನ್ನು ಕೂಡ ಬಳಸಿ ಚಿಕ್ಕ ಸೂಜಿಯ ಮೂಲಕ ದೇಹದ ತೀರ ಒಳಭಾಗದಲ್ಲಿರುವ ಗಡ್ಡೆಗಳ ಮಾದರಿಯನ್ನು ಕೂಡ ಸಂಗ್ರಹಿಸುತ್ತಾರೆ. ಇದನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿ ಗಡ್ಡೆಯ ಪ್ರವರಗಳನ್ನೆಲ್ಲ ತಿಳಿಸುವುದರಿಂದ ಶಸ್ತ್ರಚಿಕಿತ್ಸೆಗೂ ಮುನ್ನವೇ ರೋಗ ಪತ್ತೆಯಾಗುತ್ತದೆ. ಅಲ್ಲದೇ ಸೂಕ್ತ ಶಸ್ತ್ರಚಿಕಿತ್ಸಾ ವಿಧಾನವನ್ನು ನಿರ್ಧರಿಸಲು ಅನುಕೂಲವಾಗುತ್ತದೆ.

ಅಸ್ವಾಭಾವಿಕ ಸಾವು ಸಂಭವಿಸಿದಾಗ ಮರಣೋತ್ತರ ಪರೀಕ್ಷೆಯಲ್ಲಿ ಸಂಗ್ರಹಿಸಿದ ಮಾದರಿಗಳನ್ನು ರೋಗಶಾಸ್ತ್ರಜ್ಞರು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಮರಣದ ಸಂಭಾವ್ಯ ಕಾರಣಗಳನ್ನು ಹೇಳಬಲ್ಲರು. ದೊಡ್ಡ ದೊಡ್ಡ ಊರುಗಳಲ್ಲಿ ‘ಬ್ಲಡ್ ಬ್ಯಾಂಕ್’ ಎಂಬ ರಕ್ತಸಂಗ್ರಹಾಲಯ ಇರುವುದು ಎಲ್ಲರಿಗೂ ಗೊತ್ತೇ ಇದೆ. ಇಲ್ಲಿ ವಿವಿಧ ಗುಂಪಿನ ರಕ್ತದ ಶೇಖರಣೆ ಹಾಗೂ ರಕ್ತದಲ್ಲಿರುವ ವಿವಿಧ ರಕ್ತಕಣಗಳ ವಿಂಗಡಣೆಯನ್ನು ಮಾಡಲಾಗುತ್ತದೆ. ಇದರ ಮೇಲ್ವಿಚಾರಣೆಯನ್ನು ಕೂಡ ರೋಗಶಾಸ್ತ್ರಜ್ಞರೇ ನಿಭಾಯಿಸುತ್ತಾರೆ.

ಹೀಗೆ ರೋಗಪತ್ತೆಯ ಹಿಂದೆ ರೋಗಶಾಸ್ತ್ರಜ್ಞರ ಕೊಡುಗೆ ಮಹತ್ತರವಾಗಿದೆ. ಡಯಾಗ್ನೋಸಿಸ್ ನಿಖರವಾಗಿದ್ದರೆ ಮಾತ್ರ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಲ್ಲವೇ!

ಪ್ರತಿವರ್ಷ ನವೆಂಬರಿನಲ್ಲಿ ‘ಅಂತರರಾಷ್ಟ್ರೀಯ ಪೆಥಾಲಜಿಸ್ಟ್ ದಿನ’ ವನ್ನು ಆಚರಿಸಲಾಗುತ್ತದೆ. ಬೆಳಗಾವಿಯ ಕೆ.ಎಲ್‌.ಇ. ವೈದ್ಯಕೀಯ ಕಾಲೇಜಿನ ಪೆಥಾಲಜಿ ಸಂಗ್ರಹಾಲಯಕ್ಕೆ ನಮ್ಮ ನಾಡು ಕಂಡ ಶ್ರೇಷ್ಠ ರೋಗಶಾಸ್ತ್ರಜ್ಞರಾದ ಡಾ ಸ. ಜ. ನಾಗಲೋಟಿಮಠ ಅವರ ಹೆಸರನ್ನೇ ಇಟ್ಟು ಗೌರವಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.