ಪ್ರಾತಿನಿಧಿಕ ಚಿತ್ರ
ನೀವು ಪಿಸಿಓಎಸ್‌ನಿಂದ ಬಳಲುತ್ತಿದ್ದೀರಾ? ಹಾಗಾದರೆ ನೆನಪಿಡಿ, ನಿಮ್ಮ ರಕ್ತಪರೀಕ್ಷೆಯ ವರದಿಗಳು ‘ಸಾಮಾನ್ಯ’ ಎಂದು ತೋರಿಸಿದ ಮಾತ್ರಕ್ಕೆ ಎಲ್ಲವೂ ಸರಿಯಾಗಿದೆ ಎಂದು ಅರ್ಥವಲ್ಲ!.
ಹೌದು, ಪಿಸಿಓಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್)ನಿಂದ ಬಳಲುತ್ತಿರುವ ಅನೇಕ ಮಹಿಳೆಯರಿಗೆ, ರಕ್ತ ಪರೀಕ್ಷೆಯ ಫಲಿತಾಂಶಗಳು ಗೊಂದಲಮಯವಾಗಿರಬಹುದು. ಅವೆಲ್ಲವೂ ಆ ಸಮಸ್ಯೆಯ ಒಂದು ಭಾಗ ಮಾತ್ರ. ಸಾಮಾನ್ಯ ಗುಣಲಕ್ಷಣಗಳು, ಒಂದಕ್ಕೊಂದು ಇರುವ ಸಂಬಂಧ ಮತ್ತು ಸೂಕ್ಷ್ಮ ಅಸಮತೋಲನಗಳನ್ನೆಲ್ಲ ವಿಶ್ಲೇಷಿಸಿದರೆ ಸಮಸ್ಯೆಯ ಆಳ ಅರಿವಾಗುತ್ತದೆ.
ಪಿಸಿಓಎಸ್ ಇರುವವರಿಗೆ ರಕ್ತ ಪರೀಕ್ಷೆ ಪ್ರಯೋಜನಕಾರಿಯಲ್ಲ ಎಂದಲ್ಲ. ರಕ್ತ ಪರೀಕ್ಷೆಯ ವರದಿಗಳು ಈ ಕೆಳಗಿನ ಅಂಶಗಳನ್ನು ಬಹಿರಂಗಪಡಿಸಬಹುದು
ಇನ್ಸುಲಿನ್ ಪ್ರತಿರೋಧ: ಎಲ್ಲಾ ಸಮಯದಲ್ಲೂ ದಣಿವಾಗುತ್ತದೆಯೇ? ಸಿಹಿತಿಂಡಿಗಳನ್ನು ತಿನ್ನಬೇಕು ಅನ್ನಿಸುತ್ತಿದೆಯೇ? ಹೊಟ್ಟೆಯ ಕೊಬ್ಬಿನೊಂದಿಗೆ ಸಮಸ್ಯೆ ಅನುಭವಿಸುತ್ತಿದ್ದೀರಾ? ಇವು ನಿಮ್ಮ ದೇಹ ಸಕ್ಕರೆಯನ್ನು ಹೇಗೆ ಸಂಸ್ಕರಿಸುತ್ತಿದೆ ಎಂಬುದನ್ನು ಸೂಚಿಸುತ್ತವೆ.
ಮೂತ್ರಜನಕಾಂಗದ ಕ್ರಿಯೆ: ನೀವು ಆರೋಗ್ಯವಂತರಾಗಿದ್ದರೂ ದಣಿದಿದ್ದರೆ, ನಿದ್ರಿಸಲು ತೊಂದರೆ ಅನುಭವಿಸುತ್ತಿದ್ದರೆ ಅಥವಾ ನಿರಂತರವಾಗಿ ದೇಹ ಉಬ್ಬಿಕೊಂಡಂತೆ ಭಾಸವಾಗುತ್ತಿದ್ದರೆ, ನೀವು ಒತ್ತಡದ ಹಾರ್ಮೋನುಗಳ ಸಮಸ್ಯೆ ಎದುರಿಸುತ್ತಿರಬಹುದು. ಮೂತ್ರಜನಕಾಂಗದ ಕ್ರಿಯೆಯಲ್ಲಿ ದೋಷವಿರಬಹುದು.
ಹೆಚ್ಚುವರಿ ಆಂಡ್ರೊಜೆನ್: ಮೊಡವೆ, ಕೂದಲು ಉದುರುವಿಕೆ, ಮತ್ತು ಅನಿಯಮಿತ ಋತುಚಕ್ರಗಳು ಟೆಸ್ಟೋಸ್ಟಿರಾನ್‌ನಂತಹ ಪುರುಷ ಹಾರ್ಮೋನುಗಳು ಹೆಚ್ಚು ಚಟುವಟಿಕೆಯಲ್ಲಿವೆ ಎಂಬುದರ ಲಕ್ಷಣಗಳಾಗಿವೆ.
ಪಿಸಿಓಎಸ್ ಹೊಂದಿರುವ ಅನೇಕ ಮಹಿಳೆಯರು, ರೋಗಲಕ್ಷಣಗಳನ್ನು ಹೊಂದಿದ್ದರೂ ‘ರಕ್ತ ಪರೀಕ್ಷೆಯ ವರದಿ ನಾರ್ಮಲ್ ಇದೆ’ ಎಂದು ಆಗಾಗ್ಗೆ ಕೇಳುತ್ತಾರೆ. ಏಕೆಂದರೆ ಸಾಂಪ್ರದಾಯಿಕ ಲ್ಯಾಬ್‌ಗಳು ಜನಸಾಮಾನ್ಯರ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಮೇಲಷ್ಟೇ ಬೆಳಕು ಚೆಲ್ಲಬಲ್ಲವು. ಹಾಗಾಗಿ ವರದಿಯಲ್ಲೂ ‘ಸಾಮಾನ್ಯ’ ಎಂದು ತೋರಿಸಬಹುದು. ಆದರೆ ಈ ವರದಿಯ ಎಲ್ಲ ಅಂಶಗಳನ್ನೂ ತಜ್ಞರಷ್ಟೇ ಪರಿಶೀಲಿಸಿ ಮಾಹಿತಿ ನೀಡಬಲ್ಲರು.
ಪಿಸಿಓಎಸ್ ಲ್ಯಾಬ್‌ಗಳ ನಿರ್ದಿಷ್ಟ ವರದಿಯಲ್ಲಿ ಮಾತ್ರ ಗಮನಕ್ಕೆ ಬರಬಹುದು. ಸೂಕ್ಷ್ಮ ಹಾರ್ಮೋನುಗಳು ಮತ್ತು ಚಯಾಪಚಯ ಅಸಮತೋಲನಗಳನ್ನು ಸಾಮಾನ್ಯ ರಕ್ತ ಪರೀಕ್ಷೆ ಗುರುತಿಸುವುದಿಲ್ಲ. ಉದಾಹರಣೆಗೆ, ಖಾಲಿ ಹೊಟ್ಟೆಯ ಇನ್ಸುಲಿನ್ ಮತ್ತು ಗ್ಲೂಕೋಸ್ ಮಟ್ಟಗಳು ಆರಂಭಿಕ ಇನ್ಸುಲಿನ್ ಪ್ರತಿರೋಧವನ್ನು ಸೂಚಿಸಬಹುದು, ಇದು ಪಿಸಿಓಎಸ್‌ನ ಮೂಲ ಕಾರಣ. ಅಂತೆಯೇ, ಹೆಚ್ಚಿನ ಟೆಸ್ಟೋಸ್ಟಿರಾನ್ ಅಥವಾ ಡಿಹೆಚ್ಇಎ-ಎಸ್ ಮಟ್ಟಗಳು, ಮೊಡವೆ, ಮುಖದ ಕೂದಲು, ಅಥವಾ ಅನಿಯಮಿತ ಮುಟ್ಟುಗಳಿಗೆ ಕಾರಣವಾಗಬಹುದು, ಬದಲಾದ ಎಲ್‌ಹೆಚ್:ಎಫ್ಎಸ್‌ಹೆಚ್ (LH:FSH) ಅನುಪಾತ ಹಾರ್ಮೋನುಗಳ ಅಡಚಣೆಯನ್ನು ಸೂಚಿಸುತ್ತದೆ. ಕಡಿಮೆ ವಿಟಮಿನ್ ಡಿ ಇರುವುದನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ, ಆದರೆ ಇದು ಹಾರ್ಮೋನ್ ಸಮತೋಲನವನ್ನು ಕಾಪಾಡಿಕೊಳ್ಳಲು ಅತ್ಯಗತ್ಯ.
ನೇರವಾಗಿ ಔಷಧಿ ಸೇವಿಸುವ ಬದಲು, ಅನೇಕ ಮಹಿಳೆಯರು ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡು ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಾರೆ. ವೈದ್ಯರ ಮಾರ್ಗದರ್ಶನದೊಂದಿಗೆ ವಿಟಮಿನ್ ಡಿ ಮಟ್ಟವನ್ನು ಪರೀಕ್ಷಿಸುವುದು ಮತ್ತು ಸರಿಹೊಂದಿಸುವುದು ಉತ್ತಮ. ಅದರ ನಂತರ, ಉತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ಫೈಬರ್ ಹೊಂದಿರುವ ಊಟದ ಕಡೆಗೆ ಗಮನಹರಿಸುವುದು, ಇದು ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸಲು ಮತ್ತು ಸಿಹಿ ತಿನ್ನುವ ಅತಿಯಾದ ಬಯಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಕೆಲವು ಮಹಿಳೆಯರು ಸ್ಪಿಯರ್‌ಮಿಂಟ್ ಟೀ ನಂತಹ ನೈಸರ್ಗಿಕ ಆಯ್ಕೆಗಳ ಕಡೆಗೆ ಗಮನಹರಿಸುತ್ತಾರೆ. ಇದು ಹೆಚ್ಚುವರಿ ಆಂಡ್ರೋಜೆನ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ವೈದ್ಯರೊಂದಿಗೆ ಇದರ ಬಗ್ಗೆ ಮಾತನಾಡುವುದು ಉತ್ತಮ. ನಿಯಮಿತ ಸಮಯದಲ್ಲಿ ನಿದ್ರೆ ಮಾಡುವುದು ಮತ್ತು ಏಳುವುದು ಹಾಗೂ 7 ರಿಂದ 8 ಗಂಟೆಗಳ ಆರಾಮದಾಯಕ ನಿದ್ರೆಯನ್ನು ಗುರಿಯಾಗಿಸುವ ಮೂಲಕ ನಿದ್ರೆಯನ್ನು ಸುಧಾರಿಸಿದರೆ ಹಾರ್ಮೋನ್ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
ನಿಮ್ಮ ದಿನಚರಿಯಲ್ಲಿ ನಡಿಗೆಯನ್ನು ಸೇರಿಸುವುದು, ವಿಶೇಷವಾಗಿ ಯೋಗ, ಪೈಲೇಟ್ಸ್ ಅಥವಾ ಪ್ರತಿರೋಧ ತರಬೇತಿಯಂತಹ ಶ್ರಮ ಆಧಾರಿತ ವ್ಯಾಯಾಮಗಳನ್ನು ವಾರಕ್ಕೆ ಒಂದೆರಡು ಬಾರಿ ಮಾಡುವುದರಿಂದ, ಇನ್ಸುಲಿನ್ ಸಂವೇದನೆ, ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಪಿಸಿಓಎಸ್ ಚಿಕಿತ್ಸೆಯಲ್ಲಿ ಪ್ರಗತಿ ಸಾಧಿಸಲು ಬೇಕಾಗಿರುವುದು ತಾಳ್ಮೆ ಮತ್ತು ಸ್ಥಿರತೆ. ಎಲ್ಲವನ್ನೂ ಒಂದೇ ಬಾರಿಗೆ ಬದಲಾಯಿಸಲು ಪ್ರಯತ್ನಿಸುವ ಬದಲು, ಒಂದು ಅಥವಾ ಎರಡು ಅಭ್ಯಾಸಗಳ ಮೇಲೆ ಕೇಂದ್ರೀಕರಿಸುವುದು ಮತ್ತು ನಿಮ್ಮ ದೇಹಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯವನ್ನು ನೀಡುವುದು ಉತ್ತಮ. ಇದು ಪರಿಣಾಮ ಬೀರಲು ಸಾಮಾನ್ಯವಾಗಿ ಸುಮಾರು 8 ರಿಂದ 12 ವಾರಗಳವರೆಗಿನಷ್ಟು ಸಮಯ ತೆಗೆದುಕೊಳ್ಳುತ್ತದೆ.
ನಿಮ್ಮ ರಕ್ತ ಪರೀಕ್ಷೆ ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ. ಸರಿಯಾಗಿ ಅರ್ಥೈಸಿಕೊಂಡಾಗ, ಅವು ಪಿಸಿಓಎಸ್ ಅನ್ನು ನಿರ್ವಹಿಸಲು ಹೆಚ್ಚು ವೈಯಕ್ತಿಕಗೊಳಿಸಿದ ಮತ್ತು ಪರಿಣಾಮಕಾರಿ ತಂತ್ರವನ್ನು ರೂಪಿಸಲು ಸಹಾಯ ಮಾಡಬಹುದು.
ಹಾರ್ಮೋನ್ ಸಮತೋಲನ - ಆಂಡ್ರೋಜೆನ್‌ಗಳನ್ನು ಕಡಿಮೆ ಮಾಡಿ, ಋತುಚಕ್ರವನ್ನು ಸರಿಹೊಂದಿಸಿ
ಚಯಾಪಚಯ ಆರೋಗ್ಯ – ಕಡಿಮೆ ಇನ್ಫ್ಲಮೇಷನ್, ಸಕ್ಕರೆಯ ಸಮತೋಲನವನ್ನು ಸುಧಾರಿಸುತ್ತದೆ
ಪೋಷಕಾಂಶಗಳ ಬೆಂಬಲ - ರೋಗಲಕ್ಷಣಗಳನ್ನು ಸದ್ದಿಲ್ಲದಂತೆ ಮಾಡುವ ಪೋಷಕಾಂಶಭರಿತ ಆಹಾರ ಸೇವಿಸಿ
ಜೀವನಶೈಲಿ - ನಿದ್ರೆ, ಒತ್ತಡ ಮತ್ತು ವ್ಯಾಯಾಮ ಜೀವನದ ಅಡಿಪಾಯವಿದ್ದಂತೆ
ಎಲ್ಲವನ್ನೂ ಒಂದೇ ಬಾರಿಗೆ ನಿಭಾಯಿಸಲು ಹೋಗಿ ನಿಮ್ಮನ್ನು ಒತ್ತಡಕ್ಕೆ ಒಳಪಡಿಸಿಕೊಳ್ಳಬೇಡಿ. ಮೊದಲು ಗಮನಹರಿಸಲು ಒಂದು ಅಥವಾ ಎರಡು ಅಂಶಗಳನ್ನು ಆರಿಸಿ. ಪಿಸಿಓಎಸ್ ನಿಯಂತ್ರಣಕ್ಕೆ ಬರಲು ಸಮಯ ತೆಗೆದುಕೊಳ್ಳುತ್ತದೆ, ನಿಮ್ಮ ದೇಹ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ತೋರಿಸಲು 8 ರಿಂದ 12 ವಾರಗಳ ಕಾಲಾವಕಾಶ ನೀಡಿ. ನಿಮ್ಮ ಲ್ಯಾಬ್ ಫಲಿತಾಂಶಗಳು ಎಲ್ಲವನ್ನೂ ಬಹಿರಂಗಪಡಿಸದಿರಬಹುದು, ಆದರೆ ನೀವು ಅವುಗಳನ್ನು ಸರಿಯಾಗಿ ಅರ್ಥೈಸಿಕೊಂಡರೆ ಅವು ಸಹಾಯಕವಾಗಬಹುದು.
ಲೇಖಕರು: ಸಲಹೆಗಾರರು - ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಮದರ್‌ಹುಡ್ ಆಸ್ಪತ್ರೆಗಳು, ಕೊತ್ತನೂರು, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.