
ಗೆಟ್ಟಿ ಚಿತ್ರ
ಇತ್ತೀಚಿನ ದಿನಗಳಲ್ಲಿ ಆರೋಗ್ಯ ಜಾಗೃತಿಯ ಮಹತ್ವ ಹೆಚ್ಚುತ್ತಿರುವ ಸಂದರ್ಭಗಳಲ್ಲಿ, ಸಸ್ಯ ಆಧಾರಿತ ಆಹಾರ ಪದ್ಧತಿ ಹೆಚ್ಚಾಗಿ ಚರ್ಚೆಗೆ ಬರುತ್ತಿದೆ. ಸಸ್ಯ ಮೂಲದ ಆಹಾರಗಳಿಗೆ ಹೆಚ್ಚಿನ ಸ್ಥಾನ ನೀಡುವ ಈ ಪದ್ಧತಿಯಲ್ಲಿ ಹಣ್ಣುಗಳು, ತರಕಾರಿಗಳು, ಬೇಳೆ ಕಾಳುಗಳು, ಸಂಪೂರ್ಣ ಧಾನ್ಯಗಳು ಸೇರಿದಂತೆ ಪ್ರಮುಖ ಪಾತ್ರವಹಿಸುತ್ತವೆ. ವೇಗನ್ ಆಹಾರ ಪದ್ಧತಿಯಂತೆ ಎಲ್ಲಾ ಪ್ರಾಣಿ ಉತ್ಪನ್ನಗಳನ್ನು ಸಂಪೂರ್ಣವಾಗಿ ಹೊರತುಪಡಿಸಬೇಕಿಲ್ಲ. ಆದರೆ ಮುಖ್ಯ ಒತ್ತು ಸಸ್ಯಹಾರಗಳ ಮೇಲೆಯೇ ಇರುತ್ತದೆ.
ಸಸ್ಯ ಆಧಾರಿತ ಆಹಾರ ಪದ್ಧತಿಯಲ್ಲಿ ಹಲವು ಆರೋಗ್ಯಕರ ಲಾಭಗಳಿವೆ. ಫೈಬರ್ ಹಾಗೂ ಆ್ಯಂಟಿ ಆಕ್ಸಿಡೆಂಟ್‌ರ್ಸ್ ಸಮೃದ್ಧತೆಯಿಂದ ಹೃದಯಾರೋಗ್ಯ ಸುಧಾರಿಸಲು ಇದು ಸಹಕಾರಿ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರಲು ನೆರವಾಗುವುದರಿಂದ ಮಧುಮೇಹ ಅಪಾಯ ತಗ್ಗುತ್ತದೆ. ಫೈಬರ್ ಯುಕ್ತ ಆಹಾರ ಜೀರ್ಣಕ್ರಿಯೆಯನ್ನು ಉತ್ತೇಜಿಸಿ ಗಟ್ ಹೆಲ್ತ್ (ಕರುಳಿನ ಆರೋಗ್ಯ) ಬಲಪಡಿಸುತ್ತದೆ. ಜೊತೆಗೆ, ಸಸ್ಯ ಆಹಾರದಲ್ಲಿರುವ ಫೈಟೊನ್ಯೂಟ್ರಿಯೆಂಟ್ಸ್ ದೇಹದಲ್ಲಿನ ಉರಿಯೂತ ಕಡಿಮೆ ಮಾಡಲು ನೆರವಾಗುತ್ತವೆ. ತೂಕ ನಿಯಂತ್ರಣಕ್ಕಾಗಿ ಸಹ ಇದು ಪರಿಣಾಮಕಾರಿ ಮಾರ್ಗವೆಂದು ಹಲವು ಅಧ್ಯಯನಗಳು ಸೂಚಿಸುತ್ತವೆ.
ಸಸ್ಯ ಆಧಾರಿತ ಪದ್ಧತಿಯನ್ನು ಅನುಸರಿಸುವುದು ಕೂಡ ಸೌಕರ್ಯಭರಿತ. ದಿನನಿತ್ಯದ ಪ್ಲೇಟ್‌ನ ಅರ್ಧ ಭಾಗವನ್ನು ತರಕಾರಿ ಮತ್ತು ಹಣ್ಣುಗಳಿಗೆ ಮೀಸಲಿಡುವುದು ಒಂದು ಸರಳ ಶುರು. ಪ್ರೋಟೀನ್‌ಗಾಗಿ ಬೇಳೆ, ಹೆಸರು, ಕಡಲೆ, ರಾಜಮಾ, ಸೋಯಾ ಉತ್ಪನ್ನಗಳನ್ನು ಆಯ್ಕೆ ಮಾಡಬಹುದು. ಬಿಳಿ ಅಕ್ಕಿ ಮತ್ತು ಮಾರುಕಟ್ಟೆ ಸಂಸ್ಕರಿತ ಆಹಾರಗಳ ಬದಲು ಮಿಲ್ಲೆಟ್ಸ್, ಬ್ರೌನ್ ರೈಸ್ ಮತ್ತು ಸಂಪೂರ್ಣ ಧಾನ್ಯಗಳನ್ನು ಬಳಸುವುದು ಉತ್ತಮ. ಕೊಡಗಾಯಿ, ಅವಕಾಡೋ, ಅಗಸೆ ಹಾಗೂ ಚಿಯಾ ಬೀಜಗಳಂತಹ ಆರೋಗ್ಯಕರ ಕೊಬ್ಬುಗಳನ್ನು ಸೇರಿಸುವುದರಿಂದ ಪೌಷ್ಟಿಕತೆ ಹೆಚ್ಚುತ್ತದೆ.
ಈ ಪದ್ಧತಿಯನ್ನು ಆರಂಭಿಸಲು ದೊಡ್ಡ ಬದಲಾವಣೆಗಳ ಅಗತ್ಯವಿಲ್ಲ. ಮನೆಯಲ್ಲೇ ಸಾಮಾನ್ಯವಾಗಿ ತಯಾರಿಸುವ ತರಕಾರಿ ಸಾರು, ಸಲಾಡ್ ರೆಸಿಪಿಗಳನ್ನು ಹೆಚ್ಚು ಬಳಸುವುದರಿಂದಲೇ ಶುರು ಮಾಡಬಹುದು. ಬೀನ್ಸ್, ಮಸೂರ, ಅಕ್ಕಿ, ತರಕಾರಿ ಬಳಸಿ ಬುರಿಟೋ, ಟಾಕೋ ತಯಾರಿಸುವುದು ಸುಲಭ. ಪ್ರತಿ ದಿನ ಒಂದು ಊಟವನ್ನು ಮಾಂಸರಹಿತವಾಗಿ ಬದಲಾಯಿಸುವ ಮೂಲಕ ನಿಧಾನವಾಗಿ ಸಂಪೂರ್ಣ ಸಸ್ಯ ಆಧಾರಿತ ಆಹಾರಕ್ಕೆ ಹೊಂದಿಕೊಳ್ಳಬಹುದು. ಎಲ್ಲವನ್ನೂ ಒಂದೇ ಹೊತ್ತಿನಲ್ಲಿ ಬದಲಾಯಿಸುವ ಅಗತ್ಯವಿಲ್ಲ. ದಿನಕ್ಕೆ ಒಂದು ಅಥವಾ ಎರಡು ಊಟಗಳನ್ನು ಸಸ್ಯ ಆಧಾರಿತವಾಗಿ ಮಾಡುವುದು ಉತ್ತಮ ಆರಂಭ. ನಿಧಾನವಾದರೂ ನಿರಂತರವಾದ ಬದಲಾವಣೆ ದೀರ್ಘಕಾಲೀನ ಆರೋಗ್ಯ ಸುಧಾರಣೆಗೆ ದಾರಿ ಮಾಡಿಕೊಡುತ್ತದೆ. ಪರಿಸರ ಸ್ನೇಹಿ, ದೇಹಕ್ಕೆ ಸಹಕಾರಿ ಮತ್ತು ದೀರ್ಘಕಾಲಕ್ಕೆ ಸ್ಥಿರವಾದ ಜೀವನಶೈಲಿಯನ್ನು ಸಸ್ಯ ಆಧಾರಿತ ಪದ್ಧತಿ ಒದಗಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
(ಡಾ. ನರೇಂದ್ರ ಕೆ. ಶೆಟ್ಟಿ, ಚೀಫ್ ವೆಲ್‌ನೆಸ್ ಆಫೀಸರ್, ಕ್ಷೇಮವನ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.