
ಕಲುಷಿತ ಗಾಳಿ, ಧೂಳಿನ ವಾತಾವರಣದಲ್ಲಿ ಓಡಾಡುವುದರಿಂದ ಶ್ವಾಸಕೋಶಗಳಿಗೆ ಸೋಂಕು ತಗುಲುವುದು ಹೆಚ್ಚು. ಇದು ನ್ಯುಮೋನಿಯಾಕ್ಕೆ ಕಾರಣವಾಗಬಹುದು. ಈಗಲೂ ಪ್ರತಿ ವರ್ಷ 25 ಲಕ್ಷಕ್ಕಿಂತಲೂ ಹೆಚ್ಚು ಜೀವಗಳು ನ್ಯುಮೋನಿಯಾದಿಂದ ಮೃತಪಡುತ್ತಿದ್ದಾರೆ. ಇದರಲ್ಲಿ ಐದು ವರ್ಷದೊಳಗಿನ 7 ಲಕ್ಷಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ ಎನ್ನುವುದು ಕಳವಳಕಾರಿ ಸಂಗತಿಯಾಗಿದೆ.
ನ್ಯುಮೋನಿಯಾ ಶ್ವಾಸಕೋಶದ ಸೋಂಕು. ಅಲ್ವಿಯೋಲಿ ಎಂಬ ಸಣ್ಣ ಗಾಳಿಯ ಚೀಲಗಳಲ್ಲಿ ಉರಿಯೂತ ಉಂಟಾಗುತ್ತದೆ. ಈ ರೋಗಕ್ಕೆ ತುತ್ತಾದಾಗ ಗಾಳಿಯ ಚೀಲಗಳು ಕೀವು ಅಥವಾ ದ್ರವದಿಂದ ತುಂಬಿ, ಆಮ್ಲಜನಕ ಪೂರೈಕೆ ಕಡಿಮೆಯಾಗುತ್ತದೆ. ಇದರಿಂದಾಗಿ ಉಸಿರಾಟದ ತೊಂದರೆ, ಕೆಮ್ಮು, ಜ್ವರ ಮತ್ತು ಎದೆ ನೋವು ಕಾಣಿಸಬಹುದು. ಈ ರೋಗ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಶಿಲೀಂಧ್ರಗಳಿಂದ ಬರಬಹುದು,
ಸೂಕ್ತ ಚಿಕಿತ್ಸೆಯಿಂದ ನ್ಯುಮೋನಿಯಾವನ್ನು ಗುಣಪಡಿಸಬಹುದು. ಆದರೆ ಶಿಶುಗಳು, ವೃದ್ಧರು, ಗರ್ಭಿಣಿಯರು, ದೀರ್ಘಕಾಲದ ಕಾಯಿಲೆ ಇರುವವರು, ಅಸ್ತಮಾ, ಅಥವಾ ರೋಗ ನಿರೋಧಕ ಶಕ್ತಿ ಕುಂಠಿತವಾಗಿರುವವರಿಗೆ ನ್ಯುಮೋನಿಯಾ ಬಂದರೆ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು.
ಉಸಿರಾಡಲು ಕಷ್ಟವಾಗುವುದು, ಪದೆ ಪದೆ ವಿಪರೀತ ಜ್ವರ ಅಥವಾ ಶೀತ, ಎದೆಯೊಳಗೆ ಸೆಳೆತದ ಅನುಭವ ಅಥವಾ ಉಸಿರಾಡುವಾಗ ನೋವು, ಗೊಂದಲ ಅಥವಾ ಅರೆನಿದ್ರಾವಸ್ಥೆ, ಆಮ್ಲಜನಕದ ಕೊರತೆಯಿಂದ ತುಟಿ ಅಥವಾ ಬೆರಳ ತುದಿಗಳು ನೀಲಿಯಾಗುವುದು ನ್ಯುಮೋನಿಯಾದ ಪ್ರಮುಖ ಲಕ್ಷಣಗಳಾಗಿವೆ.
ಈ ಲಕ್ಷಣಗಳು ಕಾಣಿಸಿಕೊಂಡಾಗ, ಆಮ್ಲಜನಕ ಮಾಸ್ಕ್ ಬಳಕೆ, ತೀವ್ರ ನಿಗಾ ಮತ್ತು ಉಸಿರಾಟದ ಬೆಂಬಲವನ್ನು ಹೊಂದಿರುವ ಆರೋಗ್ಯ ಕೇಂದ್ರದಲ್ಲಿ ಆರೈಕೆ ಪಡೆಯುವುದು ಮುಖ್ಯವಾಗುತ್ತದೆ. ಚಿಕಿತ್ಸೆ ವಿಳಂಬವಾದರೆ ಶ್ವಾಸಕೋಶದ ಗಾಯ ಮತ್ತು ಕೀವಿಗೆ ಕಾರಣವಾಗಬಹುದು.
ನ್ಯುಮೋನಿಯಾಗೆ ಚಿಕಿತ್ಸೆಯಿದೆ
ಲಸಿಕೆ: ನ್ಯುಮೋಕೊಕಲ್, ಇನ್ಫ್ಲುಯೆನ್ಸ, ಕೋವಿಡ್–19, ಮತ್ತು ದಡಾರ ಲಸಿಕೆಗಳು ನ್ಯುಮೋನಿಯಾ ಅಪಾಯವನ್ನು ಕಡಿಮೆ ಮಾಡುತ್ತವೆ.
ಆರೈಕೆ: ಆರೋಗ್ಯಯುತವಾಗಿರಲು ಸರಿಯಾದ ಆರೈಕೆ ಅಗತ್ಯವಾಗಿರುತ್ತದೆ. ವಿಶೇಷವಾಗಿ ಶಿಶುಗಳಿಗೆ ಹಾಲುಣಿಸುವಿಕೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನೈರ್ಮಲ್ಯ: ಆಗಾಗ್ಗೆ ಕೈ ತೊಳೆಯುವುದು, ಕಲುಷಿತ ಕೈಗಳಿಂದ ಮುಖ, ಮೂಗನ್ನು ಮುಟ್ಟಿಕೊಳ್ಳುವುದನ್ನು ತಪ್ಪಿಸಿ.
ಮಾಸ್ಕ್ ಬಳಕೆ: ಮನೆಯಿಂದ ಹೊರಹೋಗುವಾಗ ವಾಯು ಮಾಲಿನ್ಯದಿಂದ ರಕ್ಷಣೆ ಪಡೆಯಲು ಮಾಸ್ಕ್ ಬಳಕೆ, ಧೂಮಪಾನದಿಂದ ದೂರವಿರುವುದು ಒಳ್ಳೆಯದು
ಲೇಖಕರು: ಡಾ. ಹಿಮಾಲ್ ದೇವ್ ಜಿ. ಜೆ, ಮುಖ್ಯ ಸಲಹೆಗಾರರು ಕ್ರಿಟಿಕಲ್ ಕೇರ್, ಅಪೋಲೋ ಆಸ್ಪತ್ರೆ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.