
ಪಪ್ಪಾಯಿ ಮೂಲತಃ ದಕ್ಷಿಣ ಅಮೆರಿಕದ ಉಷ್ಣವಲಯದ ಸಸ್ಯವಾಗಿದ್ದು, ಕರ್ನಾಟಕದಾದ್ಯಂತ (ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ) ಬೆಳೆಯಲಾಗುತ್ತದೆ. ಇದು ಮರದ ರೀತಿಯ ಗಿಡವಾಗಿದ್ದು, ಕಾಡಿನ ಅಂಚುಗಳು, ಉಷ್ಣವಲಯದ ಪ್ರದೇಶಗಳು, ಮರಳು ಮಿಶ್ರಿತ ನೀರು ಬಸಿಯುವ ಮಣ್ಣುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.
ಪಪ್ಪಾಯಿಗೆ ಪರಂಗಿ ಗಿಡ, ಪರಂಗಿ ಹಣ್ಣು ಎಂದೆಲ್ಲಾ ಕರೆಯಲಾಗುತ್ತದೆ. ಈ ಗಿಡದ ಎಲೆಗಳು ಕಾಯಿ ಹಾಗೂ ಹಣ್ಣು ಪ್ರಯೊಜನಕಾರಿ. ಪೌಷ್ಟಿಕಾಂಶದ ಗುಣಗಳಿಂದಾಗಿ ‘ದೇವತೆಗಳ ಹಣ್ಣು’ ಎಂದು ಕರೆಯಲ್ಪಡುವ ಇದನ್ನು ಪೋಷಕಾಂಶವಾಗಿ ಬಳಸಲು ಪ್ರಮುಖ ಕಾರಣಗಳು ಮತ್ತು ಪ್ರಯೋಜನಗಳು ಇಲ್ಲಿವೆ.
ಪಪ್ಪಾಯ
ಇದರಲ್ಲಿ ವಿಟಮಿನ್ ಸಿ (ರೋಗನಿರೋಧಕ ಶಕ್ತಿಗೆ), ವಿಟಮಿನ್ ಎ (ಕಣ್ಣಿನ ಆರೋಗ್ಯಕ್ಕೆ) ಮತ್ತು ವಿಟಮಿನ್ ಇ ಅಂತಹ ಜೀವಸತ್ವಗಳು ಸಮೃದ್ಧವಾಗಿದೆ. ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ತಾಮ್ರದಂತಹ ಅಗತ್ಯ ಖನಿಜಗಳನ್ನು ಹೊಂದಿದೆ. ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸಾಮಾನ್ಯವಾಗಿ, ಪಪ್ಪಾಯಿ ಬೀಜಗಳನ್ನು ಒಣಗಿಸಿ ಪುಡಿಮಾಡಿ ನಿಂಬೆ ರಸದೊಂದಿಗೆ ಅಥವಾ ನೀರಿನೊಂದಿಗೆ ನಿಯಮಿತವಾಗಿ ಸೇವಿಸುವದರಿಂದ ಮೂತ್ರಪಿಂಡಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ ಮತ್ತು ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಹೊರಹಾಕಲು ಸಹಕಾರಿ. ಪಪ್ಪಾಯಿ ಬೀಜಗಳಲ್ಲಿ ಪ್ರೋಟಿಯೋಲೈಟಿಕ್ ಕಿಣ್ವಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫ್ಲೇವನಾಯ್ಡ್‌ಗಳು ಇರುತ್ತವೆ.
ಈ ಅಂಶಗಳು ಕಲ್ಲುಗಳನ್ನು ಕರಗಿಸಲು ಅಥವಾ ಅವುಗಳ ಬೆಳವಣಿಗೆಯನ್ನು ತಡೆಯುತ್ತದೆ. ಪಪ್ಪಾಯದಲ್ಲಿ ಲೈಕೋಪೀನ್, ಬೀಟಾ-ಕ್ಯಾರೋಟಿನ್, ಮತ್ತು ವಿಟಮಿನ್ ಸಿ ನಂತಹ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಈ ಸಂಯುಕ್ತಗಳು ದೇಹದಲ್ಲಿನ ಹಾನಿಕಾರಕ ಮುಕ್ತ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ.
ಆಕ್ಸಿಡೇಟಿವ್ ಒತ್ತಡವು ಹೃದ್ರೋಗ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಪಪ್ಪಾಯದಲ್ಲಿರುವ ಪೋಷಕಾಂಶಗಳು ಈ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಇದರಿಂದಾಗಿ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ತಗ್ಗಿಸುತ್ತವೆ.ಪಪ್ಪಾಯಿ ಸೇವನೆಯು ಮಧುಮೇಹಿಗಳಿಗೂ ಉಪಯುಕ್ತ. ಈ ಹಣ್ಣಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ (GI) ಕಡಿಮೆ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹಠಾತ್ತನೆ ಹೆಚ್ಚಿಸುವುದಿಲ್ಲ. ಮಧುಮೇಹಿಗಳಿಗೆ ಅಗತ್ಯವಿರುವ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೋಲೇಟ್‌ನಂತಹ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ.
ಪಪ್ಪಾಯ
ಪಪ್ಪಾಯ ಕಾಯಿಯನ್ನು ಮಿತವಾಗಿ ಸೇವಿಸುವುದು ಅತಿ ಮುಖ್ಯ. ಹಸಿ ಪಪ್ಪಾಯಿಯು ಹೆಚ್ಚಿನ ಪ್ರಮಾಣದಲ್ಲಿ 'ಲೇಟೆಕ್ಸ್' ಎಂಬ ಹಾಲಿನಂತಹ ರಸವನ್ನು ಮತ್ತು 'ಪಪೈನ್' ಎಂಬ ಕಿಣ್ವವನ್ನು ಹೊಂದಿರುತ್ತದೆ. ಇದು ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತದೆ. ಉದಾಹರಣೆಗೆ ಊತ, ತುರಿಕೆ, ಅಥವಾ ಉಸಿರಾಟದ ತೊಂದರೆಗಳು. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರು ಹಾಗೂ ಅಲರ್ಜಿ ಇದ್ದವರು ಇದನ್ನು ಸೇವಿಸಬಾರದು. ಈ ಲೇಟೆಕ್ಸ್ ಮತ್ತು ಪಪೈನ್ ದೇಹದಲ್ಲಿ ಪ್ರೊಸ್ಟಗ್ಲಾಂಡಿನ್‌ಗಳು ಮತ್ತು ಆಕ್ಸಿಟೋಸಿನ್ ಹಾರ್ಮೋನುಗಳನ್ನು ಉತ್ತೇಜಿಸುತ್ತದೆ.
ಈ ಹಾರ್ಮೋನುಗಳು ಗರ್ಭಾಶಯದ ಸ್ನಾಯುಗಳನ್ನು ಸಂಕುಚಿಸುವಂತೆ ಮಾಡುತ್ತವೆ. ಗರ್ಭಿಣಿಯರು ಈ ಹಣ್ಣನ್ನು ಸೇವಿಸಬಾರದು. ಪಪೇನ್ ಎಂಬ ವಿಶೇಷ ಕಿಣ್ವವ ಜೇರ್ಣ ಕ್ರಿಯೆಯಲ್ಲಿ ಪ್ರೋಟೀನ್‌ಗಳನ್ನು ಸುಲಭವಾಗಿ ಒಡೆಯಲು ಸಹಾಯ ಮಾಡುತ್ತದೆ. ಇದರಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ನಿವಾರಿಸಲು ಇದು ಅತ್ಯುತ್ತಮ. ವರ್ಷವಿಡೀ ಲಭ್ಯವಿರುವ ಪಪ್ಪಾಯ ಹಣ್ಣು ಎಲ್ಲಾ ವಯಸ್ಸಿನವರೂ ಉಪಯೊಗಿಸಬಹುದಾದಂತ ಬಹು ಪ್ರಯೊಹನಕಾರಿ ಫಲವಾಗಿದೆ.
(ಲೇಖಕರು: ಡಾ. ಕೆ.ಎನ್. ಅನುರಾಧ ಅಸೋಸಿಯೆಟ್ ಫ್ರೊಫ಼ೆಸರ್, ದ್ರವ್ಯಗುಣ ವಿಭಾಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಹಾಸನ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.