ಗರ್ಭಾವಸ್ಥೆಯೆಂಬುದು ಕೇವಲ ಹೆಣ್ಣಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದು ಗಂಡ–ಹೆಂಡತಿಯ ಸುಂದರವಾದ ಪಯಾಣ. ದೈಹಿಕ ಹಾಗೂ ಮಾನಸಿಕವಾಗಿ ಒತ್ತಡದಿಂದ ಬಳಲುತ್ತಿರುವ ಗರ್ಭಿಣಿ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ಒತ್ತಡ ನಿವಾರಣೆಗೆ ಪತಿಯಾದವನು ಸಹಕರಿಸಬೇಕು. ಆರೋಗ್ಯ ಜೀವನಶೈಲಿ ಅಳವಡಿಸಿಕೊಳ್ಳಲು ಸಹಾಯ ಮಾಡಬೇಕು. ಪ್ರತಿ ಕ್ಷಣವು ಗಂಡನ ಇರುವಿಕೆಯನ್ನು ಆಕೆ ಪ್ರೀತಿಸುವಂತಾದರೆ, ಇಬ್ಬರ ನಡುವಿನ ಭಾವನಾತ್ಮಕ ಸಂಬಂಧ ಗಟ್ಟಿಗೊಳ್ಳುತ್ತದೆ. ಆಕೆ ಗಟ್ಟಿಗೊಂಡಷ್ಟೂ ಆಕೆಗೂ, ಮಗುವಿಗೂ ಒಳ್ಳೆಯದಾಗುತ್ತದೆ.
ಗರ್ಭಾವಸ್ಥೆಯಲ್ಲಿ ಪತಿಯು ತನ್ನ ಪತ್ನಿಗೆ ನೀಡಬಹುದಾದ ದೊಡ್ಡ ಬೆಂಬಲವೆಂದರೆ ಅದು ಭಾವನಾತ್ಮಕ ಬೆಂಬಲ. ಗರ್ಭಾವಸ್ಥೆಯಲ್ಲಿ ದೈಹಿಕ ಅಸ್ವಸ್ಥತೆ ಮತ್ತು ಭಾವನಾತ್ಮಕ ಏರಿಳಿತಗಳು ಬಹಳ ಸಾಮಾನ್ಯ. ಈ ಸಂದರ್ಭದಲ್ಲಿ ಸಂಗಾತಿಯು ಶಾಂತವಾಗಿದ್ದುಕೊಂಡು ಬೆಂಬಲ ನೀಡುವುದರಿಂದ ಇಂಥ ಸಮಯದಲ್ಲಿ ಉಂಟಾಗುವ ಖಿನ್ನತೆ ಮತ್ತು ಆತಂಕ ದೂರಾಗುತ್ತದೆ. ಜತೆಗೆ ನಿದ್ರೆಯ ಗುಣಮಟ್ಟ ಮತ್ತು ಮನಸ್ಥಿತಿಯೂ ಉತ್ತಮಗೊಳ್ಳುತ್ತದೆ.
ಪ್ರಸವಪೂರ್ವ ತಪಾಸಣೆಗಳಿಗೆ ವೈದ್ಯರ ಬಳಿ ಹೋಗುವಾಗ ಪತ್ನಿಯ ಜೊತೆ ಪತಿಯೂ ಹೋಗಬೇಕು. ಅದರಿಂದ ಮಗುವಿನ ಬೆಳವಣಿಗೆಯ ಕುರಿತು ತಿಳಿಯಲು, ಗರ್ಭಿಣಿಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಹೆಂಡತಿಗೆ ಭದ್ರತಾಭಾವ ಬರುತ್ತದೆ. ಗರ್ಭಾವಸ್ಥೆಯ ಉದ್ದಕ್ಕೂ ಪತ್ನಿಯ ಜೊತೆಗೆ ಇರುವುದರಿಂದ ಬಾಂಧವ್ಯ ಹೆಚ್ಚುತ್ತದೆ. ಪರಸ್ಪರ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ.
ಆರೋಗ್ಯಕರ ಜೀವನ ಶೈಲಿ ಪಾಲಿಸುವ ವಿಚಾರದಲ್ಲಿ ಗಂಡನ ಪಾತ್ರ ಮಹತ್ವದ್ದು. ಈ ಅವಧಿಯಲ್ಲಿ ಇಬ್ಬರೂ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಧೂಮಪಾನ ಅಥವಾ ಮದ್ಯಪಾನವನ್ನು ತಪ್ಪಿಸಬೇಕು. ಆಗ ಉತ್ತಮ ವಾತಾವರಣ ಏರ್ಪಡುತ್ತದೆ. ಗಂಡನು ಮಾದರಿಯಾಗಿ ನಡೆದುಕೊಂಡರೆ, ಗರ್ಭಿಣಿಯೂ ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುತ್ತಾಳೆ.
ಮಗು ಗರ್ಭದಲ್ಲಿ ಇರುವಾಗಲೇ ತಂದೆ ತನ್ನ ಮಗುವಿನ ಜೊತೆ ಬಾಂಧವ್ಯವನ್ನು ಹೊಂದಬಹುದು. ಸಂಶೋಧನೆಯ ಪ್ರಕಾರ ಗರ್ಭದೊಳಗೆ ಇರುವ ಮಗು ಹೊರಗಿನ ಧ್ವನಿ ಮತ್ತು ಶಬ್ದಗಳಿಗೆ ಪ್ರತಿಕ್ರಿಯಿಸುತ್ತದೆ. ಮಗುವಿನ ಜೊತೆಗೆ ಮಾತನಾಡುವ ಮೂಲಕ, ಓದುವ ಮೂಲಕ ಅಥವಾ ಹಾಡುವ ಮೂಲಕ ಭಾವನಾತ್ಮಕವಾಗಿಯೂ ಗಟ್ಟಿಯಾಗಬಹುದು.
ಪತ್ನಿಗೆ ದೈನಂದಿನ ಕೆಲಸಗಳಲ್ಲಿ ಸಹಾಯ ಮಾಡುವುದರಿಂದ ದೊಡ್ಡ ವ್ಯತ್ಯಾಸವನ್ನು ಉಂಟು ಮಾಡಬಹುದು. ಮನೆಯ ಕೆಲಸ, ಊಟದ ಸಿದ್ಧತೆಯಲ್ಲಿ ಸಹಾಯ ಮಾಡಬಹುದು. ಪದೇ ಪದೇ ವಿಶ್ರಾಂತಿ ತೆಗೆದುಕೊಳ್ಳಲು ಪ್ರೋತ್ಸಾಹಿಸಬಹುದು. ಇದರಿಂದ ಯಾವುದೇ ಅಸಮಾಧಾನವಿಲ್ಲದೆ ವೈದ್ಯಕೀಯ ಸಲಹೆಯನ್ನು ಪಾಲಿಸುವುದು ಗರ್ಭಿಣಿಗೆ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಗಂಡನ ಜವಾಬ್ದಾರಿ ಬಹಳ ದೊಡ್ಡದಿದೆ. ಪ್ರತಿ ಹಂತದಲ್ಲಿಯೂ ಪತ್ನಿಯ ಜೊತೆಗೇ ಇದ್ದಾಗ ತಾಯಿ ಮತ್ತು ಮಗುವಿಗೆ ಹೆಚ್ಚು ಬೆಂಬಲ ದೊರೆಯುತ್ತದೆ. ಮುಂದಿನ ಹಂತಕ್ಕೆ ತಾಯಿ ಮತ್ತು ಮಗು ಸಿದ್ಧರಾಗಲು ನೆರವಾಗುತ್ತದೆ. ಗರ್ಭಾವಸ್ಥೆಯೆಂಬುದು ಎಂದಿಗೂ ಹೊರೆಯಲ್ಲ. ಅದು ಬದುಕಿನಲ್ಲಿ ಬರುವ ಚಂದದ ಅನುಭವ. ಆ ಅನುಭವವನ್ನು ಇನ್ನಷ್ಟು ಚಂದವಾಗಿ ಸವಿಯಲು ಸದಾ ಪ್ರೀತಿ ಕೊಡುವ ಗಂಡ ಜತೆಗಿರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.