ADVERTISEMENT

ಶ್ಶೀ... ಊಟದಲ್ಲಿ ಕೂದಲು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 23:59 IST
Last Updated 5 ಡಿಸೆಂಬರ್ 2025, 23:59 IST
<div class="paragraphs"><p>ಊಟದಲ್ಲಿ ಕೂದಲು</p></div>

ಊಟದಲ್ಲಿ ಕೂದಲು

   

– ಗೆಟ್ಟಿ ಚಿತ್ರ

ರೋಹಿತ್– ಪ್ರೀತಿಕಾಗೆ ಅಂದು ವಾರದ ರಜೆ. ತಡವಾಗಿ ಎದ್ದು ಹೋಟೆಲ್‌ನಿಂದ ತಿಂಡಿ ತರಿಸಿದರು. ಪಾರ್ಸೆಲ್‌ ತೆರೆಯುತ್ತಿದ್ದಂತೆಯೇ ಮಸಾಲೆದೋಸೆಯ ಘಮ ಮೂಗಿಗೆ ಅಡರಿತು. ಖುಷಿಯಿಂದ ಆಲೂಗಡ್ಡೆ ಪಲ್ಯ, ಚಟ್ನಿ ಸಮೇತ ದೋಸೆ ಮುರಿದು ಬಾಯಿಗಿಟ್ಟುಕೊಂಡ ರೋಹಿತ್‌, ಕೂಡಲೇ ಥೂ ಎನ್ನುತ್ತಾ ಬಾಯಿಂದ ತುತ್ತನ್ನು ತೆಗೆದು ತಟ್ಟೆಗೆ ಒಗೆದ. ವಾಕರಿಸಿ ಕೊಳ್ಳುತ್ತಾ ಸಿಂಕ್‌ನತ್ತ ಓಡಿ ಬಾಯಿ ತೊಳೆದುಕೊಂಡ. ಅವನಿಗೆ ಮತ್ತೆ ಆ ತಿಂಡಿಯನ್ನು ತಿನ್ನಲು ಮನಸ್ಸೇ ಬರಲಿಲ್ಲ. ಅದನ್ನು ನೋಡಿ ಪ್ರೀತಿಕಾಗೂ ಪಿಚ್ಚೆನಿಸಿತು. ಅವಳೂ ತಿಂಡಿ ತಿನ್ನದೆ ಎಲ್ಲವನ್ನೂ ಕವರ್‌ಗೆ ತುಂಬಿ ಕಸದಬುಟ್ಟಿಗೆ ಹಾಕಿ ಕೈತೊಳೆದುಕೊಂಡಳು.

ADVERTISEMENT

ಸಾರಿಕಾಗೆ ಹಬ್ಬದ ದಿನ ಎಷ್ಟೋ ದಿನಗಳಿಂದ ಕಾಯುತ್ತಿದ್ದ ಹೋಳಿಗೆ ಊಟ ಮಾಡುವ ಸಂಭ್ರಮ. ಎರಡು ಚೂರು ಹೋಳಿಗೆ ತಿಂದಿದ್ದಳಷ್ಟೆ. ಮೂರನೇ ಚೂರು ಬಾಯಿಗೆ ಇಡುತ್ತಿದ್ದಂತೆಯೇ ಹೋಳಿಗೆಯ ಮಧ್ಯೆ ಕೂದಲು ಸಿಕ್ಕಿ, ಊಟ ಮಾಡುವ ಮನಸ್ಸೇ ಹೋಯಿತು. ಇದು ಎಲ್ಲರ ಮನೆಯಲ್ಲೂ ಕಂಡುಬರುವ ಸಾಮಾನ್ಯ ಸಮಸ್ಯೆ.

ತಲೆಕೂದಲಿನ ಆರೈಕೆಗೆ ಕಾಳಜಿ ವಹಿಸುವ ಜನ, ಅದೇ ಕೂದಲು ಊಟದಲ್ಲಿ ಸಿಕ್ಕಾಗ ಅಸಹ್ಯಿಸಿಕೊಳ್ಳುತ್ತಾರೆ, ವಾಕರಿಕೆಯ ಮನಃಸ್ಥಿತಿ ಅನುಭವಿಸುತ್ತಾರೆ. ಇದು ಹೋಟೆಲ್ ಊಟದ ಸಮಸ್ಯೆ ಮಾತ್ರವಲ್ಲ, ಗೃಹಿಣಿಯರು ಅಷ್ಟು ಅಕ್ಕರಾಸ್ಥೆಯಿಂದ ಸಿದ್ಧಪಡಿಸುವ ಅಡುಗೆಯಲ್ಲೂ ಇದ್ದದ್ದೇ. ಹಾಗೆ ಸಿಕ್ಕ ಕೂದಲನ್ನು ಮುಟ್ಟಲು ಗಲೀಜು ಎನಿಸುತ್ತದೆ. ಕೆಲವರಿಗಂತೂ ಆ ಆಹಾರವನ್ನು ಮತ್ತೆ ತಿನ್ನಲು ಮನಸ್ಸೇ ಬರುವುದಿಲ್ಲ. ಮೊನ್ನೆ ನನಗೆ ಈ ಅನುಭವವಾಗಿದ್ದು, ಶೇಂಗಾ ಡಬ್ಬಿಯಲ್ಲಿ ಕೂದಲು ಕಂಡಾಗ. ಥೂ ಎಲ್ಲೆಂದರಲ್ಲಿ ಕೂದಲು ಎಂದು ಸಿಡಿಮಿಡಿಗುಟ್ಟುವಂತೆ ಆಯಿತು. ಅಡುಗೆಮನೆ, ದೇವರಮನೆ, ರೂಮ್ ಎಲ್ಲೆಂದರಲ್ಲಿ ಕೂದಲಿನ ಗುಪ್ಪೆ ಕಾಣಸಿಗುತ್ತದೆ. ನೆಮ್ಮದಿಯಿಂದ ದೇವರ ಪೂಜೆ ಮಾಡಿ, ಕಣ್ಣು ತೆರೆದಾಗ ದೇವರ ಫೋಟೊದ ಬದಿಯಲ್ಲೇ ಕೂದಲಿನ ಎಳೆ ಕಣ್ಣಿಗೆ ರಾಚಿ, ಮೂಗಿನ ಮೇಲೆ ಸಿಟ್ಟು ತರಿಸುತ್ತದೆ.

ಹಾಗಿದ್ದರೆ ಈ ಕೂದಲಿನಿಂದ ಮುಕ್ತಿ ಪಡೆಯುವುದು ಹೇಗೆ? ಗಾಳಿಯೊಂದಿಗೆ ಹಾರಿಬಂದು, ಕೈ ತಪ್ಪು, ಕಣ್ತಪ್ಪಿನಿಂದಾಗಿ ಆಹಾರ ಪದಾರ್ಥ ಸೇರುವುದನ್ನು ತಪ್ಪಿಸುವುದು ಹೇಗೆ? ಇದೋ ಇಲ್ಲಿವೆ ಕೆಲವು ಸರಳೋಪಾಯಗಳು:

  • ಆದಷ್ಟೂ ಉತ್ತಮ ಹೋಟೆಲ್‌ನಿಂದ ಆಹಾರ ತನ್ನಿ.ಅನಿವಾರ್ಯ ಎಂದಾಗ ಮಾತ್ರ ಹೋಟೆಲ್ ಆಹಾರವನ್ನು ಅವಲಂಬಿಸಿ.

  • ಮನೆಯಲ್ಲಿ ಸ್ವಚ್ಛತೆಗೆ ಪ್ರಾಮುಖ್ಯ ನೀಡಿ.

  • ಮನೆಯಲ್ಲಿ ಎಲ್ಲಾದರೂ ಕೂದಲು ಬಿದ್ದಿದ್ದರೆ ಅದನ್ನು ಎತ್ತಿ ಗಾಳಿಗೆ ತೂರಬೇಡಿ. ಅದರ ಬದಲು, ಮುಚ್ಚಳ ಇರುವ ಕಸದಬುಟ್ಟಿಗೆ ಹಾಕಿ. ಇದರಿಂದ ಗಾಳಿಗೆ ಅದು ಪುನಃ ಹಾರಿ ಬಂದು ಮನೆ ಅಥವಾ ತಿನ್ನುವ ಪದಾರ್ಥವನ್ನು ಸೇರುವುದಕ್ಕೆ ಬ್ರೇಕ್ ಬೀಳುತ್ತದೆ.

  • ತರಕಾರಿ, ಸೊಪ್ಪು, ಈರುಳ್ಳಿ ಸಿಪ್ಪೆಯಲ್ಲಿಯೂ ಕೂದಲ ಸುರುಳಿ ಸುತ್ತಿಕೊಂಡಿರುತ್ತದೆ. ತರಕಾರಿ, ಸೊಪ್ಪನ್ನು ಸರಿಯಾಗಿ ತೊಳೆದು ಗಮನವಿಟ್ಟು ಹೆಚ್ಚಿ. ಎಚ್ಚರ ತಪ್ಪಿದರೆ ಅವುಗಳೊಟ್ಟಿಗೆ ಕೂದಲೂ ಹೆಚ್ಚಿಸಿಕೊಂಡು ಅಡುಗೆ ಸೇರೀತು ಜೋಕೆ!

  • ಅಡುಗೆ ತಯಾರಿಸಿದ ನಂತರ, ಒಮ್ಮೆ ಸೌಟು ಅಥವಾ ದೊಡ್ಡ ಸ್ಪೂನ್‌ ಬಳಸಿ, ಅಡುಗೆಯಲ್ಲಿ ಕೂದಲೇನಾದರೂ ಸೇರಿದೆಯೇ ಪರಿಶೀಲಿಸಿ.

  • ಕೋಣೆಯಲ್ಲಿ ಒಂದೇ ಕೂದಲು ಬಿದ್ದಿದೆ ಎಂದು ನಿರ್ಲಕ್ಷ್ಯ ಮಾಡಬೇಡಿ. ಆಹಾರದಲ್ಲಿ ಸೇರಬಹುದಾದ ಆ ಒಂದೇ ಕೂದಲು ಊಟದ ಸವಿಯನ್ನೇ ಕೆಡಿಸಬಲ್ಲದು.

  • ಹೊರಗೆ ಕೂತು ತಲೆ ಬಾಚುವುದು ಒಳ್ಳೆಯದು. ಅಲ್ಲಿ ಬೀಳುವ ಕೂದಲನ್ನು ಗುಡಿಸಿ ಹೊರಹಾಕಲು ಸುಲಭವಾಗುತ್ತದೆ.

  • ನಿಂತು ತಲೆ ಬಾಚಿಕೊಂಡಾಗ ಉದುರುವ ಕೂದಲು ಗಾಳಿಯಿಂದ ಮನೆಯನ್ನು ಪ್ರವೇಶಿಸುತ್ತದೆ.

  • ಅಡುಗೆ ಮಾಡುವಾಗ ತುರುಬು ಕಟ್ಟುವುದೇ ಲೇಸು. ಹೀಗೆ ಮಾಡಿದರೆ ಅಡುಗೆ ಮಾತ್ರವಲ್ಲ ಬೇರೆ ಯಾವುದೇ ಕೆಲಸ ಮಾಡುವಾಗಲೂ ಕೂದಲು ಅಡ್ಡಿ ಬರುವುದಿಲ್ಲ. ಪದೇ ಪದೇ ಕೂದಲು ಸರಿ ಮಾಡಿಕೊಳ್ಳುವ ಗೋಜು ಇರುವುದಿಲ್ಲ.

  • ತಲೆಸ್ನಾನ ಮಾಡಿದಾಗ ಸಾಧ್ಯವಾದಷ್ಟೂ ಹೊರಗೆ ಕೂದಲು ಆರಿಸಿಕೊಳ್ಳಿ. ಶೇ 80ರಷ್ಟು ಹಸಿ ಇದ್ದಾಗ ಬಾಚಿಕೊಂಡರೆ ಕೂದಲು ಉದುರುವಿಕೆ ಕಡಿಮೆ ಆಗುತ್ತದೆ. ಉತ್ತಮ ಬಾಚಣಿಗೆ ಇದ್ದರೆ ಸಿಕ್ಕು ಬಿಡಿಸುವಾಗ ಹೆಚ್ಚು ಕೂದಲು ಉದುರುವುದನ್ನು ತಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.