
ಚಿತ್ರ: ಗೆಟ್ಟಿ
ಕಣ್ಣು ಕೆಂಪಾಗುವುದು ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಇದು ದಣಿವಿನ ಸಂಕೇತವಾಗಿದೆ. ಇದರ ಹೊರತಾಗಿ ಕಣ್ಣುಗಳು ಕೆಂಪಾಗಲು ಕಾರಣಗಳೇನು? ಕಣ್ಣಿನ ಆರೈಕೆ ಹೇಗಿರಬೇಕು ಎಂಬುದನ್ನು ತಿಳಿಯೋಣ
ಕಣ್ಣು ಕೆಂಪಾಗಲು ಕಾರಣವೇನು?
ಅತ್ಯಂತ ಸರಳ ಕಾರಣವೆಂದರೆ ತೇವಾಂಶದ ಕೊರತೆ. ಕಣ್ಣುಗಳಿಗೆ ಅಗತ್ಯವಾದ ತೇವಾಂಶ ಸಿಗದ ಪರಿಸ್ಥಿತಿಯಲ್ಲಿ ಕಣ್ಣು ಕೆಂಪಾಗುತ್ತವೆ. ದೀರ್ಘಕಾಲ ಕಂಪ್ಯೂಟರ್ ಅಥವಾ ಮೊಬೈಲ್ ನೋಡುವುದು, ತಡವಾಗಿ ಮಲಗುವುದು ಹಾಗೂ ಹೆಚ್ಚು ಸಮಯ ಹವಾ ನಿಯಂತ್ರಿತ ಕೋಣೆಯಲ್ಲಿ ಇರುವುದರಿಂದ ಕಣ್ಣಿನ ಮೇಲಿನ ರಕ್ತನಾಳಗಳು ಊದಿಕೊಳ್ಳುತ್ತವೆ. ಇವು ಕಣ್ಣುಗಳು ಕೆಂಪಾಗಿ ಕಾಣುವಂತೆ ಮಾಡುತ್ತವೆ.
ಕಣ್ಣು ಕೆಂಪಾಗಲು ಅಲರ್ಜಿ, ಧೂಳು, ಹೊಗೆ, ಸುಗಂಧ ದ್ರವ್ಯಗಳು ಅಥವಾ ಋತುಗಳ ಬದಲಾವಣೆ ಕೂಡ ಕಾರಣವಾಗಬಹುದು. ಇದು ಕಣ್ಣಿನ ತುರಿಕೆ ಅಥವಾ ಕಣ್ಣಿನಲ್ಲಿ ನೀರು ಸುರಿಯುವುದಕ್ಕೆ ಕಾರಣವಾಗಬಹುದು. ಕಣ್ಣಿನಲ್ಲಿ ತುರಿಕೆ ಉಂಟಾದಾಗ ಅದನ್ನು ನಿವಾರಿಸಲು ಕಣ್ಣನ್ನು ಉಜ್ಜುತ್ತೇವೆ. ಇದೂ ಕೂಡಾ ಕಣ್ಣು ಕೆಂಪಾಗಲು ಕಾರಣವಾಗಬಹುದು. ಆದ್ದರಿಂದ ಕಣ್ಣು ಉಜ್ಜುವುದನ್ನು ತಪ್ಪಿಸಬೇಕು.
ಕೆಲ ಸಂದರ್ಭಗಳಲ್ಲಿ ಕೆಂಪು ಕಣ್ಣುಗಳು ಕಾಂಜಂಕ್ಟಿವಿಟಿಸ್ (ಪಿಂಕ್ ಐ) ನಂತಹ ಸೋಂಕಿಗೆ ಕಾರಣವಾಗಬಹುದು. ಇದು ಬ್ಯಾಕ್ಟೀರಿಯಾ ಅಥವಾ ವೈರಲ್‌ನಿಂದ ಬರಬಹುದಾಗಿದೆ. ಈ ಸಂದರ್ಭದಲ್ಲಿ ಕಣ್ಣನ್ನು ಪದೇ ಪದೇ ಮುಟ್ಟುವುದು, ಟವೆಲ್‌ನಿಂದ ಸ್ವಚ್ಛಗೊಳಿಸುವುದು ಸೋಂಕನ್ನು ಹೆಚ್ಚು ಮಾಡಬಹುದಾಗಿದೆ.
ಕಣ್ಣು ಕೆಂಪಾಗುವುದು ಒತ್ತಡ ಅಥವಾ ಆಯಾಸವನ್ನು ತೋರಿಸುತ್ತದೆ. ಸಾಕಷ್ಟು ನಿದ್ದೆಯಾಗದಿರುವುದು, ದೀರ್ಘಕಾಲದವರೆಗೆ ಕೆಲಸ ಮಾಡುವುದು ಅಥವಾ ಅಳುವುದರಿಂದ ಕಣ್ಣುಗಳು ಊದಿಕೊಳ್ಳಲು ಅಥವಾ ಕೆಂಪಾಗುತ್ತವೆ. ಹಾರ್ಮೋನಿನ ಏರಿಳಿತ ಅಥವಾ ನಿರ್ಜಲೀಕರಣವೂ ಕಣ್ಣು ಕೆಂಪಾಗಲು ಕಾರಣವಾಗಬಹುದು.
ಚಿಕಿತ್ಸೆ ಹೇಗೆ?
ಮೊದಲನೇಯದಾಗಿ ಕಣ್ಣುಗಳಿಗೆ ವಿರಾಮ ನೀಡಬೇಕು. ಪರದೆ ನೋಡುವ ಸಮಯವನ್ನು ಕಡಿಮೆಗೊಳಿಸಿ. ಶುದ್ಧವಾದ ಟವೆಲ್‌ನಿಂದ ಮುಖವನ್ನು ಸ್ವಚ್ಛಗೊಳಿಸಿರಿ. ಐಸ್ ಕ್ಯೂಬ್ ಅನ್ನು ಕೆಂಪಾದ ಕಣ್ಣುಗಳ ಮೇಲೆ ಇಟ್ಟುವುದರಿಂದ ನೋವು ಹಾಗೂ ಕೆಂಪು ಬಣ್ಣ ಕಡಿಮೆಯಾಗುತ್ತದೆ.
ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು, ಸರಿಯಾಗಿ ಅದನ್ನು ಶುಚಿಗೊಳಿಸಬೇಕು. ಕಣ್ಣು ಕೆಂಪಾಗುವುದು ಧೀರ್ಘಕಾಲದವರೆಗೆ ಮುಂದುವರೆದರೆ, ಕಣ್ಣಿನ ತಜ್ಞರನ್ನು ಸಂಪರ್ಕಿಸುವುದು ಉತ್ತಮ.
ಕಣ್ಣು ಕೆಂಪಾಗುವುದು ಚಿಂತೆಪಡುವ ವಿಷಯವಲ್ಲ. ಆದರೆ ಅದರ ಕಾರಣವನ್ನು ತಿಳಿದುಕೊಳ್ಳುವುದರಿಂದ ಸರಿಯಾದ ಚಿಕಿತ್ಸೆ ಸಾಧ್ಯವಾಗುತ್ತದೆ. ಸ್ವಲ್ಪ ಜಾಗರೂಕತೆ, ವಿಶ್ರಾಂತಿ ಮತ್ತು ಸ್ವಚ್ಛತೆ ಪಾಲಿಸಿದರೆ ನಿಮ್ಮ ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಬಹುದು.
(ಡಾ. ಆನಂದ್ ಬಾಲಸುಬ್ರಮಣಿಯಂ, ಕ್ಯಾಟರಾಕ್ಟ್, ಕಾರ್ನಿಯಾ ಮತ್ತು ರೆಫ್ರಾಕ್ಟಿವ್ ಸರ್ವೀಸ್, ಶಂಕರ ಐ ಆಸ್ಪತ್ರೆ, ಬೆಂಗಳೂರು.)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.