ಚರ್ಮ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ತುಂಬ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹೀಗಿದ್ದರೂ ನಾವು ಚರ್ಮದ ಆರೋಗ್ಯದ ಬಗ್ಗೆ ಗಮನವನ್ನು ಕೊಡುವುದು ಕಡಿಮೆಯೇ. ಚರ್ಮದ ಸಮಸ್ಯೆಗಳು ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಕಂಡು, ಸೂಕ್ತ ಸಲಹೆಯನ್ನು ಪಡೆದುಕೊಂಡರೆ ಪರಿಹಾರದ ದಾರಿ ಸುಲಭವಾಗುತ್ತದೆ. ಕಳೆದ ಸಂಚಿಕೆಯಲ್ಲಿ ಚರ್ಮದ ಕೆಲವು ಸಮಸ್ಯೆಗಳನ್ನು ನೋಡಿದ್ದೆವು. ಈಗ ಇನ್ನಷ್ಟು ಚರ್ಮದ ಸಮಸ್ಯೆಗಳನ್ನೂ ಅವುಗಳ ಪರಿಹಾರದ ಮಾರ್ಗಗಳನ್ನೂ ತಿಳಿಯೋಣ.
ಇಸುಬು
ಇಸುಬು ಅಥವಾ ‘ಎಗ್ಸೆಮ’ ತುರಿಕೆಯ ಒಂದು ಸಾಮಾನ್ಯ ಸಮಸ್ಯೆ. ಚರ್ಮದುರಿತವಾಗುವುದರಿಂದ ಈಗ ಇದನ್ನು ‘ಡರ್ಮಟೈಟಿಸ್’ ಎನ್ನುತ್ತಾರೆ. ಇದರಲ್ಲಿ ಹೊರಜನಿತ ಮತ್ತು ಒಳಜನಿತ ಎಂಬ ಎರಡು ವಿಧಗಳಿವೆ. ಹೊರಜನಿತ ಬಗೆ, ಕೆಲವು ವಸ್ತುಗಳ ಸ್ಪರ್ಶದಿಂದ ಆಗುವ ಅಲರ್ಜಿಯಿಂದ ಆಗುತ್ತದೆ. ಉದಾಹರಣೆಗೆ ಕುಂಕುಮದ ಅಲರ್ಜಿ, ಸರ, ಬಳೆ ಇತ್ಯಾದಿ ಆಭರಣಗಳ ಅಲರ್ಜಿ, ಬಟ್ಟೆ ಒಗೆಯುವ ಸಾಬೂನಿನ ಹಾಗೂ ಪಾತ್ರೆ ತೊಳೆಯುವ ಪುಡಿಯ ಅಲರ್ಜಿ ಮೊದಲಾದವು. ಇದನ್ನು ಸ್ಪರ್ಶದ ಅಲರ್ಜಿ ಅಥವಾ ‘ಕಾಂಟ್ಯಾಕ್ಟ್ ಡರ್ಮಟೈಟಿಸ್’ ಎನ್ನುತ್ತಾರೆ.
ಬಿಸಿಲಿನ ಅಲರ್ಜಿಯೂ ಈ ಬಗೆಯದ್ದೇ ಆಗಿದೆ. ಬಿಸಿಲಿನಲ್ಲಿರುವ ಅತಿನೇರಳೆ ಕಿರಣಗಳಿಂದ ಈ ಅಲರ್ಜಿ ಆಗುತ್ತದೆ. ಇದನ್ನು ‘ಫೋಟೋಡರ್ಮಟೈಟಿಸ್’ ಎನ್ನುತ್ತಾರೆ. ಅಂತೆಯೇ ಬ್ಯಾಕ್ಟೀರಿಯಾ ಮುಂತಾದ ರೋಗಾಣುಗಳಿಂದ ಸೋಂಕಾಗಿ ಇಸುಬಾಗಬಹುದು. ಒಳಜನಿತ ಬಗೆಯಲ್ಲಿ ಇಸುಬಿಗೆ ಕಾರಣವಾಗುವ ದೋಷಗಳು ವ್ಯಕ್ತಿಯಲ್ಲೇ ಇರುತ್ತವೆ. ಒಣಚರ್ಮ ಅಂಥ ಒಂದು ದೋಷ. ಒಣಚರ್ಮದಿಂದ ನವೆಯಾಗಿ ಕೆರೆದು ಇಸುಬಾಗಬಹುದು. ‘ವೇರಿಕೋಸ್ ವೇಯ್ನ್ಸ್’ ಸಮಸ್ಯೆಯಲ್ಲಿ ಕಾಲಿನ ಅಪಧಮನಿಗಳು ಉಬ್ಬಿ, ರಕ್ತಸಂಚಾರ ನಿಧಾನವಾಗಿ ಚರ್ಮಕ್ಕೆ ಪೋಷಣೆ ಸಿಗದೇ ಇಸುಬಾಗಬಹುದು. ಬಹಳ ಹೊತ್ತು ನಿಂತು ಕೆಲಸ ಮಾಡುವುದರಿಂದ ಈ ಸಮಸ್ಯೆಯಾಗುತ್ತದೆ. ಕೆಲವೊಮ್ಮೆ ಸಣ್ಣ ಕಾರಣಗಳಿಂದ ನವೆಯು ಆರಂಭವಾಗಿ ಮಾನಸಿಕ ಒತ್ತಡದಿಂದ ಹೆಚ್ಚು ಕೆರೆಯುತ್ತಾ ಗಟ್ಟಿಯಾದ ಗುಳ್ಳೆಗಳು ಇಲ್ಲವೇ ಮಚ್ಚೆಗಳಾಗಿ ಇನ್ನಷ್ಟು ನವೆಯಾಗುತ್ತದೆ. ನವೆ-ಕೆರೆತ-ನವೆ – ಹೀಗೊಂದು ವಿಷವರ್ತುಲದಂತಾಗುತ್ತದೆ.
ಸೋರಿಯಾಸಿಸ್
ರೋಗನಿರೋಧಕ ಶಕ್ತಿಯು ಚರ್ಮವನ್ನು ಉದ್ರೇಕಿಸಿ ಅದು ಉರಿತಕ್ಕೊಳಗಾಗುವ ಹಾಗೂ ಹೆಚ್ಚಾಗಿ ಬೆಳೆಯುವ ಒಂದು ಚರ್ಮರೋಗ ಸೋರಿಯಾಸಿಸ್. ಇದರಲ್ಲಿ ಬಿಳಿಯ ಪದರಗಳಿರುವ ಕೆಂಪಾದ ಮಚ್ಚೆಗಳು ಆಗುತ್ತವೆ. ಇವು ಸಾಮಾನ್ಯವಾಗಿ ತುರಿಸದಿದ್ದರೂ ಮಚ್ಚೆಗಳನ್ನು ಕಿತ್ತುವುದು, ಒಣಚರ್ಮ, ಕೆಲವರಲ್ಲಿ ತುರಿಕೆಯುಂಟುಮಾಡುತ್ತವೆ. ಚಳಿ, ಒಣಚರ್ಮ, ದೈಹಿಕ ಹಾಗೂ ಮಾನಸಿಕ ಒತ್ತಡಗಳು, ಧೂಮಪಾನ ಮತ್ತು ಮದ್ಯಪಾನಗಳು ಈ ರೋಗವನ್ನು ಹೆಚ್ಚಿಸುತ್ತವೆ. ಇದನ್ನು ಸಂಪೂರ್ಣ ಗುಣಪಡಿಸಲಾಗದಿದ್ದರೂ ನಿಯಂತ್ರಿಸಬಹುದು.
ಒಣಚರ್ಮ
ಕೆಲವೊಮ್ಮೆ ಯಾವುದೇ ಚರ್ಮರೋಗವಿರದಿದ್ದರೂ ಕೇವಲ ಒಣಚರ್ಮದಿಂದಲೇ ತುರಿಕೆಯಾಗುತ್ತದೆ. ಒಣಚರ್ಮದಿಂದ ಚರ್ಮದ ಸಮಗ್ರತೆಗೆ ತೊಂದರೆಯಾಗಿ ಕಿರಿಕಿರಿಯಾಗುತ್ತಾ ನವೆಯಾಗುತ್ತದೆ. ವಯಸ್ಸು ಹೆಚ್ಚಾದಂತೆ ಚರ್ಮದಲ್ಲಿ ‘ಕೊಲ್ಯಾಜೆನ್’ ಅಂಶ ಕಡಿಮೆಯಾಗಿ ಒಣಗುತ್ತಾ ತುರಿಕೆಯಾಗುತ್ತದೆ. ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ‘ಇಕ್ಥಿಯೋಸಿಸ್’ ಎಂಬ ಕಾಯಿಲೆಯಿದ್ದು, ಇದರಲ್ಲಿ ಸತ್ತ ಚರ್ಮ ಕಳಚಿಹೋಗದೇ ಗಟ್ಟಿಯಾಗಿ ಮೀನಿನ ಚರ್ಮದಂತೆ ಕಾಣುತ್ತದೆ. ಇದೂ ತುರಿಸುತ್ತದೆ. ವಯಸ್ಕರಾದಂತೆ ಇದು ಕಡಿಮೆಯಾಗುತ್ತದೆ. ಕೆಲವರಿಗೆ ಇದು ವೃದ್ಧಾಪ್ಯದಲ್ಲಿ ಬರುತ್ತದೆ; ಕೆಲವು ಔಷಧಗಳ ಸೇವನೆಯ ದುಷ್ಪರಿಣಾಮದಿಂದಲೂ ಈ ಸಮಸ್ಯೆ ಉಂಟಾಗಬಹುದು. ಚಳಿ ಹಾಗೂ ಗಾಳಿ ಒಣಚರ್ಮವನ್ನು ಹೆಚ್ಚಿಸಿ ತುರಿಕೆಯನ್ನು ಹೆಚ್ಚಿಸುತ್ತದೆ. ವಿಟಮಿನ್ ‘ಎ’ ಕಡಿಮೆಯಾದರೂ ಒಣಚರ್ಮ ಉಂಟಾಗಿ, ಚರ್ಮ ತುರಿಸುತ್ತದೆ.
ಗರ್ಭಿಣಿಯರಲ್ಲಿ ತುರಿಕೆ:
ಗರ್ಭಿಣಿಯರಲ್ಲಿ ಪಿತ್ತದ ಅಂಶ ಹೆಚ್ಚಾಗಿ ಕಾಮಾಲೆ ಹಾಗೂ ನವೆ ಉಂಟಾಗಬಹುದು. ಹಾರ್ಮೋನ್‌ಗಳ ವ್ಯತ್ಯಾಸದಿಂದಲೂ ತುರಿಕೆಯಾಗಬಹುದು. ಕೆಲವರಿಗೆ ಗರ್ಭಧಾರಣೆಯ ಕೊನೆಯ ಮೂರು ತಿಂಗಳುಗಳಲ್ಲಿ ಹೊಟ್ಟೆಯಲ್ಲಿ ಗಂಧೆಗಳಂಥ ಕೆಂಪು ತುರಿಸುವ ಗುಳ್ಳೆಗಳಾಗಿ ಇತರ ಭಾಗಗಳಿಗೆ ಹರಡುತ್ತವೆ. ಕಾರಣ ಸ್ಪಷ್ಟವಿಲ್ಲದ ಇದನ್ನು ‘Pruritic Urticarial Papules and Plaques of Pregnancy’ ( Puppp) ಎಂದು ಕರೆಯುತ್ತಾರೆ. ಇದು ಪ್ರಸವದ ನಂತರ ನಿಧಾನವಾಗಿ ಕಡಿಮೆಯಾಗುತ್ತದೆ. ಅಪರೂಪವಾಗಿ 'ಪೆಂಫಿಗಾಯ್ಡ್ ಗೆಸ್ಟೇಷನಿಸ್" ಎಂಬ ರೋಗನಿರೋಧಕ ಶಕ್ತಿ ತಿರುಗಿ ಬೀಳುವ ಕಾಯಿಲೆಯಾಗಿ, ಚರ್ಮವನ್ನು ತುರಿಸುವ ನೀರ್ಗುಳ್ಳೆಗಳಾಗಿ ಕಾಡುತ್ತವೆ.
ಆಂತರಿಕ ಕಾರಣಗಳು
ಪಿತ್ತಜನಕಾಂಗದ ಕಾಯಿಲೆ, ಮೂತ್ರಪಿಂಡಗಳ ಕಾಯಿಲೆ, ಮಧುಮೇಹ, ರಕ್ತಹೀನತೆ, ಥೈರಾಯ್ಡ್ ಗ್ರಂಥಿಯ ಸಮಸ್ಯೆಗಳು, ಮೊದಲಾದ ಆಂತರಿಕ ಕಾಯಿಲೆಗಳಿಂದಲೂ ಚರ್ಮದ ತುರಿಕೆಯಾಗುತ್ತದೆ.
ಪರಿಹಾರ ಮತ್ತು ನಿವಾರಣೋಪಾಯಗಳು
ತುರಿಕೆಯಿರುವವರು ಬೇಗನೆ ಚರ್ಮರೋಗ ತಜ್ಞರನ್ನು ಭೇಟಿಯಾಗಬೇಕು. ತುರಿಕೆಗೆ ಮೂಲ ಕಾರಣ ಏನೆಂಬುದನ್ನು ಪರಿಶೀಲಿಸಿ ಅದಕ್ಕೆ ತಕ್ಕ ಚಿಕಿತ್ಸೆಯನ್ನು ಮಾಡಿದರೆ ತುರಿಕೆ ಕಡಿಮೆಯಾಗುತ್ತದೆ. ಕೆಲವೊಮ್ಮೆ ಸಮಸ್ಯೆಯ ಕಾರಣವನ್ನು ತಿಳಿಯಲು ರಕ್ತಪರೀಕ್ಷೆಯನ್ನು ಬೇಕಾಗಬಹುದು. ಕಜ್ಜಿ ಮತ್ತು ಫಂಗಸ್ ಕಾಯಿಲೆಗಳಿಗೆ ಒಳ್ಳೆಯ ಚಿಕಿತ್ಸೆಗಳು ಲಭ್ಯವಿವೆ.
ನಿತ್ಯವೂ ಸ್ನಾನವನ್ನು ಮಾಡುವುದು, ಚೆನ್ನಾಗಿ ಒರೆಸಿಕೊಳ್ಳುವುದು, ನಿತ್ಯವೂ ಬೇರೆ ಬಟ್ಟೆಗಳನ್ನು ಧರಿಸುವುದು, ಬೆವರುವುದನ್ನು ಪ್ರೋತ್ಸಾಹಿಸುವ ಬಿಗಿ ಬಟ್ಟೆಗಳನ್ನು ಬೇಸಿಗೆಯಲ್ಲಿ ಧರಿಸದಿರುವುದು, ಮೊದಲಾದ ಕ್ರಿಯೆಗಳಿಂದ ಫಂಗಸ್ ರೋಗಗಳಾಗದಂತೆ ತಡೆಯಬಹುದು. ಕೀಟಗಳ ಕಚ್ಚುವಿಕೆಯನ್ನು ತಪ್ಪಿಸಲು ಸಂಜೆಯ ಬಳಿಕ ಕೈಕಾಲುಗಳನ್ನು ಪೂರ್ತಿ ಮುಚ್ಚುವ ಬಟ್ಟೆಗಳನ್ನು ಧರಿಸಬೇಕು.
ಅರ್ಟಿಕೇರಿಯಗೆ ಕಾರಣವಾಗುವ ಅಲರ್ಜಿಯ ಅಂಶವನ್ನು ಗುರುತಿಸಿ ದೂರ ಮಾಡಿದರೆ ಅದು ಗುಣವಾಗುತ್ತದೆ. ದೀರ್ಘಾವಧಿಯ ಅರ್ಟಿಕೇರಿಯದಲ್ಲಿ ಕೆಲವೊಮ್ಮೆ ಅದು ತಿಳಿಯದಿದ್ದಾಗ ದೀರ್ಘಕಾಲ ‘ಆ್ಯಂಟಿಹಿಸ್ಟಮೀನ್’ ಮಾತ್ರೆಗಳನ್ನು ವೈದ್ಯರ ನಿರ್ದೇಶನದಲ್ಲಿ ಸೇವಿಸಿದರೆ ಇದು ಗುಣವಾಗುತ್ತದೆ.
ಔಷಧಗಳ ಅಲರ್ಜಿಯಿದ್ದಲ್ಲಿ ಆ ಔಷಧಗಳನ್ನು ನಿಲ್ಲಿಸಬೇಕು. ಇಸುಬಿಗೆ ಕಾರಣವಾಗುವ ವಸ್ತುಗಳನ್ನು ದೂರ ಮಾಡಬೇಕು. ಇವು ಬಟ್ಟೆ ಸಾಬೂನು ಮತ್ತು ಪಾತ್ರೆ ಪುಡಿಯಾಗಿದ್ದರೆ ಕೈಗವುಸು ಹಾಕಿಕೊಂಡು ಅವನ್ನು ಬಳಸಬೇಕು. ಎಟೋಪಿಕ್ ಡರ್ಮಟೈಟಿಸ್, ಸೋರಿಯಾಸಿಸ್, ಒಣ ಇಸುಬುಗಳಲ್ಲಿ ತೇವಾಂಶ ಹೆಚ್ಚಿಸುವ ದ್ರಾವಣಗಳನ್ನು ಔಷಧಯ ಲೇಪನಗಳೊಂದಿಗೆ ಬಳಸಬೇಕು.
ಒಣಚರ್ಮಕ್ಕೂ ತೇವಾಂಶ ಹೆಚ್ಚಿಸುವ ದ್ರಾವಣಗಳನ್ನು ಸವರುತ್ತಿರಬೇಕು. ಪೇಟೆಯಲ್ಲಿ ಸಿಗುವ ದ್ರಾವಣಗಳಲ್ಲದೇ ಸುಲಭವಾಗಿ ದೊರೆಯುವ ಕೊಬ್ಬರಿ ಎಣ್ಣೆಯಂಥ ದ್ರಾವಣಗಳನ್ನೂ ಬಳಸಬಹುದು. ನಿತ್ಯ ಸ್ನಾನ ಹಾಗೂ ಸ್ನಾನಕ್ಕೂ ತೇವಾಂಶ ಹೆಚ್ಚಿಸುವ ಸಾಬೂನನ್ನು ಬಳಸುವುದು ಒಣಚರ್ಮವನ್ನು ನಿವಾರಿಸುತ್ತದೆ. ಬಿಸಿಲಿನ ಅಲರ್ಜಿಯನ್ನು ತಪ್ಪಿಸಲು ಒಳ್ಳೆಯ ‘ಸನ್ ಸ್ಕ್ರೀನ್’ ಅಥವಾ ಬಿಸಿಲುನಿವಾರಕಗಳನ್ನು ಬಳಸಬೇಕು. ಸಾಮಾನ್ಯವಾಗಿ ಯಾವುದೇ ಕಾರಣದ ತುರಿಕೆಗೆ ‘ಆ್ಯಂಟಿಹಿಸ್ಟಮಿನ್’ ಮಾತ್ರೆಗಳನ್ನು ನೀಡಲಾಗುತ್ತದೆ. ಆದರೆ ಇಷ್ಟು ಸಾಲದೇ ಮೂಲ ಕಾರಣವನ್ನು ನಿವಾರಿಸಬೇಕು. ಜೊತೆಗೆ ಕೆರೆದಷ್ಟೂ ನವೆ ಹೆಚ್ಚುವುದರಿಂದ ಕೆರೆಯುವುದನ್ನು ತಪ್ಪಿಸಿ ಮನಸ್ಸನ್ನು ಬೇರೆ ಕಡೆ ಹರಿಸಿ, ತುರಿಕೆಯನ್ನು ಮರೆಯುವ ಪ್ರಯತ್ನವನ್ನು ಮಾಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.